ವರ್ಷದ ಮೊದಲ ಮಳೆಗೆ ಸಿಡಿಲು– ಗುಡುಗಿನ ಅಬ್ಬರ, 8 ಕಡೆ ಮರ ಬಿದ್ದು ಕಾರು, ಬೈಕ್ ಜಖಂ

7
ಹತ್ತು ವರ್ಷದಲ್ಲೇ ಅತ್ಯಧಿಕ ಮಳೆ: ಹೊಳೆಯಂತಾದ ರಸ್ತೆಗಳು, ವಾಹನ ದಟ್ಟಣೆ

ವರ್ಷದ ಮೊದಲ ಮಳೆಗೆ ಸಿಡಿಲು– ಗುಡುಗಿನ ಅಬ್ಬರ, 8 ಕಡೆ ಮರ ಬಿದ್ದು ಕಾರು, ಬೈಕ್ ಜಖಂ

Published:
Updated:
Prajavani

ಬೆಂಗಳೂರು: ನಗರದಲ್ಲಿ ಶನಿವಾರ ಸಂಜೆ ಗಾಳಿ ಸಿಡಿಲು– ಗುಡುಗಿನ ಅಬ್ಬರದೊಂದಿಗೆ ಜೋರಾಗಿ ಮಳೆ ಸುರಿಯಿತು. ಹಲವು ರಸ್ತೆಗಳು ನೀರಿನಿಂದ ತುಂಬಿ ಹೊಳೆಯಂತಾದವು. ಕೆಲವೆಡೆ ಮರಗಳು ಉರುಳಿಬಿದ್ದವು. ಸಿಡಿಲು ಗುಡುಗಿನ ಸದ್ದಿಗೆ ಜನ ಬೆಚ್ಚಿಬಿದ್ದರು.  

ಶನಿವಾರ ಬೆಳಿಗ್ಗೆಯಿಂದ ನಗರದಲ್ಲಿ ಬಿಸಿಲಿನ ತಾಪ ಹೆಚ್ಚಿತ್ತು. ಮಧ್ಯಾಹ್ನದ ನಂತರ ಅಲ್ಲಲ್ಲಿ ಮೋಡ ಕವಿದ ವಾತಾವರಣ ಕಂಡುಬಂತು. ಸಂಜೆ 5.30 ಗಂಟೆಯಿಂದ 6.45ರವರೆಗೆ ನಿರಂತರವಾಗಿ ಸುರಿದ ಮಳೆ ನಗರದೆಲ್ಲೆಡೆ ತಂಪಿನ ಅನುಭವವನ್ನೂ ನೀಡಿತು.  

ಕೋರಮಂಗಲ, ಮಡಿವಾಳ, ಎಂ.ಜಿ.ರಸ್ತೆ, ಶಿವಾಜಿನಗರ, ಗಾಂಧಿನಗರ, ಚಿಕ್ಕಪೇಟೆ, ಹಲಸೂರು, ಮಲ್ಲೇಶ್ವರ, ಯಶವಂತಪುರ, ರಾಜಾಜಿನಗರ, ಬಸವೇಶ್ವರನಗರ, ವಿಜಯನಗರ, ದೀಪಾಂಜಲಿನಗರ, ರಾಜರಾಜೇಶ್ವರಿನಗರ, ಮೈಸೂರು ರಸ್ತೆ, ಹೊಸೂರು ರಸ್ತೆ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಮಳೆ ಆಯಿತು.


ಕಬ್ಬನ್‌ ಪಾರ್ಕ್‌ ಮೆಟ್ರೊ ನಿಲ್ದಾಣದ ಎದುರಿನ ರಸ್ತೆ ಜಲಾವೃತವಾಗಿತ್ತು.

ಕೋರಮಂಗಲದ 5ನೇ ಅಡ್ಡರಸ್ತೆಯ ಚರಂಡಿಯ ನೀರು ರಸ್ತೆ ಮೇಲೆ ಹರಿಯಿತು. 2 ಅಡಿಯಷ್ಟಿದ್ದ ನೀರಿನಲ್ಲೇ ಚಾಲಕರು ವಾಹನಗಳನ್ನು ಚಲಾಯಿಸಿಕೊಂಡು ಹೋದರು. ಕೆಲವು ವಾಹನಗಳ ಎಂಜಿನ್‌ನಲ್ಲಿ ನೀರು ಹೋಗಿದ್ದರಿಂದ ರಸ್ತೆ ಮಧ್ಯೆ ಕೆಟ್ಟು ನಿಂತವು. ಅಂಥ ವಾಹನಗಳನ್ನು ತಳ್ಳಲು ಸ್ಥಳೀಯರು ನೆರವಾದರು.

ನಗರದ ಪ್ರಮುಖ ಪ್ರದೇಶಗಳ ಕಾಲುವೆಗಳು ಸಹ ನೀರಿನಿಂದ ತುಂಬಿ ಹರಿದವು. ಹೆಚ್ಚಾದ ನೀರು ತ್ಯಾಜ್ಯದೊಂದಿಗೆ ರಸ್ತೆಯಲ್ಲಿ ಹರಿಯಿತು. ಆ ಗಲೀಜು ನೀರು ಪಾದಚಾರಿಗಳ ಸಂಚಾರಕ್ಕೆ ತೊಂದರೆ ಉಂಟು ಮಾಡಿತು. ಕಬ್ಬನ್ ಪಾರ್ಕ್‌ ರಸ್ತೆ ಮೆಟ್ರೊ ನಿಲ್ದಾಣ ಎದುರು ರಸ್ತೆಯಲ್ಲಿ ಭಾರಿ ನೀರು ಹರಿದಿದ್ದರಿಂದ ಪ್ರಯಾಣಿಕರು ಸಮಸ್ಯೆ ಎದುರಿಸಿದರು.

ಮಳೆಯಿಂದಾಗಿ ವಾಹನಗಳ ಸಂಚಾರ ನಿಧಾನಗತಿಯಲ್ಲಿತ್ತು. ಪ್ರಮುಖ ರಸ್ತೆಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದು ಕಂಡುಬಂತು. ಮೆಜೆಸ್ಟಿಕ್, ಯಶವಂತಪುರ, ಎಂ.ಜಿ.ರಸ್ತೆ, ಚಾಲುಕ್ಯ ವೃತ್ತ, ಬಳ್ಳಾರಿ ರಸ್ತೆ, ಮೈಸೂರು ರಸ್ತೆ, ತುಮಕೂರು ರಸ್ತೆ ಹಾಗೂ ಸುತ್ತಮುತ್ತ ವಾಹನಗಳ ದಟ್ಟಣೆ ಉಂಟಾಯಿತು.


ಮ್ಯೂಸಿಯಂ ರಸ್ತೆಯಲ್ಲಿ ಕಾರಿನ ಮೇಲೆ ಬಿದ್ದಿದ್ದ ಮರ

8 ಕಡೆ ಉರುಳಿಬಿದ್ದ ಮರಗಳು: ಗಾಳಿಯೂ ಜೋರಾಗಿ ಬೀಸಿದ್ದರಿಂದಾಗಿ ನಗರದ 8 ಕಡೆಗಳಲ್ಲಿ ಮರಗಳು ಉರುಳಿಬಿದ್ದವು.

ಕೋರಮಂಗಲ, ಬಸವನಗುಡಿ, ಮಹಾರಾಣಿ ಕಾಲೇಜು, ಕೆ.ಆರ್‌.ರಸ್ತೆ, ಎಂ.ಜಿ.ರಸ್ತೆ, ಮ್ಯೂಸಿಯಂ ರಸ್ತೆಯಲ್ಲಿ ತಲಾ ಒಂದು ಹಾಗೂ ರಾಜಾಜಿನಗರದಲ್ಲಿ ಎರಡು ಮರಗಳು ಬಿದ್ದವು. ಅದರಿಂದಾಗಿ ಆ ರಸ್ತೆಗಳಲ್ಲಿ ವಾಹನಗಳ ಸಂಚಾರ ನಿಧಾನಗತಿಯಲ್ಲಿತ್ತು. ಆ ಬಗ್ಗೆ ಸ್ಥಳೀಯರು ಬಿಬಿಎಂಪಿ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಬಿಬಿಎಂಪಿಯ ಅರಣ್ಯ ವಿಭಾಗದ ಸಿಬ್ಬಂದಿ ರಾತ್ರಿಯಿಡಿ ಕಾರ್ಯಾಚರಣೆ ನಡೆಸಿ ಮರಗಳನ್ನು ತೆರವುಗೊಳಿಸಿದರು. 

ಮ್ಯೂಸಿಯಂ ರಸ್ತೆಯಲ್ಲಿ ಮರವು ಕಾರಿನ ಮೇಲೆ ಬಿದ್ದಿದ್ದರಿಂದ, ಆ ಕಾರು ಭಾಗಶಃ ಜಖಂಗೊಂಡಿತು. ಮಹಾರಾಣಿ ಕಾಲೇಜು ಎದುರು ಕಾರು ಹಾಗೂ 4 ಬೈಕ್‌ಗಳ ಮೇಲೆ ಮರ ಬಿದ್ದಿತ್ತು.

‘ಕೆಲವು ಮರ ಉರುಳಿಬಿದ್ದ ಬಗ್ಗೆ ದೂರುಗಳು ಬಂದಿವೆ. ಎಲ್ಲೂ ಪ್ರಾಣಹಾನಿ ಸಂಭವಿಸಿಲ್ಲ’ ಎಂದು ಬಿಬಿಎಂಪಿ ಸಹಾಯವಾಣಿ ಸಿಬ್ಬಂದಿ ತಿಳಿಸಿದರು.

ಸೋರಿದ ನಿಲ್ದಾಣ: ಮಳೆ ಸುರಿಯುತ್ತಿದ್ದ ವೇಳೆ ಇಂದಿರಾನಗರದ ಮೆಟ್ರೊ ನಿಲ್ದಾಣದಲ್ಲಿ ಟಿಕೆಟ್ ಕೌಂಟರ್‌ ಬಳಿ ಇರುವ ಎಸ್‌ಬಿಐ ಎಟಿಎಂ ಯಂತ್ರದ ಪಕ್ಕವೇ ನೀರು ಸೋರುತ್ತಿತ್ತು.


ಇಂದಿರಾನಗರ ಮೆಟ್ರೊ ನಿಲ್ದಾಣದ ಬಳಿ ಮಳೆಯಲ್ಲೇ ಸಾಗಿದ ಯುವತಿ ಚಿತ್ರ: ರಂಜು ಪಿ.

ಹತ್ತು ವರ್ಷದಲ್ಲೇ ಅತ್ಯಧಿಕ ಮಳೆ
ಫೆಬ್ರುವರಿ ತಿಂಗಳಲ್ಲಿ ಒಂದೇ ದಿನ ಇಷ್ಟೊಂದು ಮಳೆಯಾಗಿರುವುದು ಹತ್ತು ವರ್ಷಗಳಲ್ಲೇ ಇದೇ ಮೊದಲು.

’1901ರ ಫೆಬ್ರುವರಿಯಲ್ಲಿ ಒಂದೇ ದಿನದಲ್ಲಿ ಸರಾಸರಿ 6.73 ಸೆಂ.ಮೀ ಮಳೆಯಾಗಿದ್ದು ದಾಖಲೆಯಾಗಿತ್ತು. 2011ರ ಫೆಬ್ರುವರಿಯಲ್ಲಿ ಒಂದು ದಿನ ಸರಾಸರಿ 4.41 ಸೆಂ.ಮೀ ಮಳೆ ಸುರಿದಿತ್ತು. ಅದಾದ ನಂತರ ಇದೇ ಮೊದಲ ಬಾರಿ 5.8 ಸೆಂ.ಮೀ ಮಳೆಯಾಗಿದೆ’ ಹವಾಮಾನ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

‘ಶನಿವಾರ ಸಂಜೆ 8.30 ಗಂಟೆಯವರೆಗೆ ನಗರದಲ್ಲಿ ಸರಾಸರಿ 5.8 ಸೆಂ.ಮೀ ಮಳೆ ಆಗಿದೆ. ಸಂಪಂಗಿರಾಮನಗರದಲ್ಲಿ 6.75 ಸೆಂ.ಮೀ ಹಾಗೂ ಬಸವನಗುಡಿಯಲ್ಲಿ 6.55 ಸೆಂ.ಮೀ ಮಳೆ ಸುರಿದಿದೆ’ ಎಂದರು.


ಬಳ್ಳಾರಿ ರಸ್ತೆಯಲ್ಲಿರುವ ಲೀ ಮೆರಿಡಿಯನ್ ಹೋಟೆಲ್‌ ಬಳಿಯ ಕೆಳಸೇತುವೆಯಲ್ಲಿ ಹರಿಯುತ್ತಿದ್ದ ನೀರಿನಲ್ಲೇ ಚಾಲಕರೊಬ್ಬರು ಕಾರು ಚಲಾಯಿಸಿಕೊಂಡು ಹೋದರು 

ಸೋರಿದ ಮೆಟ್ರೊ ನಿಲ್ದಾಣ
ಮಳೆ ಸುರಿಯುತ್ತಿದ್ದ ವೇಳೆ ಇಂದಿರಾನಗರದ ಮೆಟ್ರೊ ನಿಲ್ದಾಣದಲ್ಲಿ ಟಿಕೆಟ್ ಕೌಂಟರ್‌ ಬಳಿ ಇರುವ ಎಸ್‌ಬಿಐ ಎಟಿಎಂ ಯಂತ್ರದ ಪಕ್ಕವೇ ನೀರು ಸೋರುತ್ತಿತ್ತು.

ಪ್ರಯಾಣಿಕರು, ಸುರಕ್ಷಿತ ಸ್ಥಳಕ್ಕೆ ಹೋಗಿ ನಿಂತುಕೊಂಡರು. ಈ ದೃಶ್ಯವನ್ನು ಚಿತ್ರೀಕರಿಸಿರುವ ರಮಣ್ ಎಂಬುವರು, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 5

  Happy
 • 3

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !