ಎತ್ತರದ ಪ್ರೀತಿ–ನಗರ ತಳಪಾಯಕ್ಕೆ ಪೆಟ್ಟು

7

ಎತ್ತರದ ಪ್ರೀತಿ–ನಗರ ತಳಪಾಯಕ್ಕೆ ಪೆಟ್ಟು

Published:
Updated:
ವಿ.ರವಿಚಂದರ್‌

ಇದು ‘ಸಮ್ಮಿಶ್ರ’ ಒತ್ತಡದಿಂದ ಮಂಡಿಸಲಾದ ಬಜೆಟ್‌. ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳು ಇಲ್ಲಿ ಗರಿಷ್ಠ ಕಾರ್ಯಕ್ರಮಗಳಾಗಿ ಕಾಣಿಸುತ್ತಿವೆ. ಇಲ್ಲಿ ಎರಡು ಆತಂಕಕಾರಿ ಅಂಶಗಳು ಗೋಚರಿಸುತ್ತವೆ. ಒಂದು, ಬೃಹತ್‌ ಪ್ರಮಾಣದ ಸಾಲ ಮನ್ನಾದ ಆರ್ಥಿಕ ಹೊರೆಯನ್ನು ನಾವು ಹೊರಬೇಕಾಗಬಹುದು. ಇನ್ನೊಂದು, ಹಣಕಾಸಿನ ಕೊರತೆ ನಗರ ಪ್ರದೇಶಗಳ ಮೇಲೆ ಪರಿಣಾಮ ಬೀರಬಹುದು. 

ಕೊನೆಗೂ ನಾವು ನಿರೀಕ್ಷಿಸಿದ್ದಕ್ಕಿಂತ ಕಡಿಮೆಯೇ ಲಭಿಸಿದೆ. ಅದೇನೇ ಇರಲಿ ಬೆಂಗಳೂರಿನ ಮಟ್ಟಿಗೆ ಬಜೆಟ್‌ ಮಿಶ್ರ ಕೊಡುಗೆ ನೀಡಿದೆ. ಕೆಲವು ಕ್ಷೇತ್ರಗಳ ಪಾಲಿಗೆ ಬಜೆಟ್‌ ಒಳ್ಳೆಯ ಅಂಶಗಳನ್ನೇ ಹೊಂದಿದೆ.

ಸ್ವಾಗತಾರ್ಹ ಅಂಶಗಳನ್ನು ನೋಡೋಣ

ಏಕೀಕೃತ ರಸ್ತೆ ಸಾರಿಗೆ ಪ್ರಾಧಿಕಾರ ಸ್ಥಾಪನೆ ಬಹಳ ಕಾಲದ ಹಿಂದಿನ ಬೇಡಿಕೆ. ಸಂಚಾರ ಸಮಸ್ಯೆಗಳನ್ನು ಹೇಳಿಕೊಳ್ಳಲು, ನಿರ್ದಿಷ್ಟ ನಿಲುವು ತಳೆಯಲು ಒಂದು ಸ್ವತಂತ್ರ ಸಂಸ್ಥೆಯ ಅಗತ್ಯವಿದೆ. ಇದುವರೆಗಿನ ಸಾರಿಗೆ ಸಂಬಂಧಿತ ಸಾಂಸ್ಥಿಕ ವ್ಯವಸ್ಥೆಗಳು ತಮಗೆ ಬೇಕಾದಂತೆ ವರ್ತಿಸುತ್ತಿದ್ದವು. ಇನ್ನಾದರೂ ಸ್ಪಷ್ಟ, ಕಠಿಣ ನಿರ್ಧಾರ ತಳೆಯುವ ಏಕೀಕೃತ ವ್ಯವಸ್ಥೆಯೊಂದು ಕಾರ್ಯಾರಂಭ ಮಾಡಬೇಕು. ಈ ಪ್ರಾಧಿಕಾರವು ಪಾದಚಾರಿಗಳು, ಸೈಕಲ್‌ ಸವಾರರನ್ನೂ ಗಮನದಲ್ಲಿಟ್ಟುಕೊಳ್ಳಬೇಕು. 

ಕ್ಯಾಬ್‌ ಬುಕ್ಕಿಂಗ್‌ ಏಜೆನ್ಸಿಗಳು ದಟ್ಟಣೆಯ ಸಮಯದಲ್ಲಿ ವಿಧಿಸುವ ದರ, ಕಾರ್‌ ಪೂಲಿಂಗ್‌ ವ್ಯವಸ್ಥೆ, ಪಾರ್ಕಿಂಗ್‌ ದರ ಇತ್ಯಾದಿ ಅಂಶಗಳತ್ತಲೂ ಪ್ರಾಧಿಕಾರ ಗಮನಹರಿಸಬೇಕು. 

ಬಿಎಂಟಿಸಿಗೆ ₹ 100 ಕೋಟಿ ಸಹಾಯಧನ ನೀಡಿರುವುದು, ಮೆಟ್ರೊ ಮೂರನೇ ಹಂತದ ಅಧ್ಯಯನಕ್ಕೆ ಮುಂದಾಗಿರುವುದು ಸ್ವಾಗತಾರ್ಹ ಅಂಶಗಳು. ವಿದ್ಯುತ್‌ ತಂತಿಗಳನ್ನು ಭೂಗತವಾಗಿ ಅಳವಡಿಸಲು ಮುಂದಾಗಿರುವುದು ಒಂದು ಉತ್ತಮ ಕ್ರಮ. ವಿದ್ಯುತ್‌ ವಾಹನಗಳ ಬಳಕೆಗೆ ಉತ್ತೇಜನ ನೀಡಿರುವುದೂ ಅಪೇಕ್ಷಣೀಯ. ರಾಜ್ಯ ಸರ್ಕಾರ ಸಮ್ಮತಿಸಿದರೆ ಖಾಸಗಿಯವರೂ ಚಾರ್ಜಿಂಗ್‌ ಸೌಲಭ್ಯವನ್ನು ಒದಗಿಸಲು ಸಾಧ್ಯ.

ಟ್ರಾಫಿಕ್‌ ಸಮಸ್ಯೆ ನಿಭಾಯಿಸಲು ಎತ್ತರಿಸಿದ ಫ್ಲೈಓವರ್‌ಗಳನ್ನು ನಿರ್ಮಿಸಲು ಸರ್ಕಾರ ಮುಂದಾಗಿದೆ. ನಗರದಲ್ಲಿ ಈಗಾಗಲೇ 70 ಲಕ್ಷ ಖಾಸಗಿ ವಾಹನಗಳಿವೆ. ನಾವು ಈ ಸಂಖ್ಯೆಯನ್ನು ಕಡಿಮೆಗೊಳಿಸಲೇಬೇಕು.

ಈ ಮೂಲಸೌಲಭ್ಯ ಖಾಸಗಿ ವಾಹನ ಸಂಖ್ಯೆಯನ್ನು ಹೆಚ್ಚಿಸಲಿದೆ. ಮಾತ್ರವಲ್ಲ, ಈ ದಟ್ಟಣೆಗೆ ಸ್ಥಳಾವಕಾಶ ಕಲ್ಪಿಸಲು ಮರಗಳಿಗೆ ಕೊಡಲಿಯೇಟು ಹಾಕಬೇಕಾಗುತ್ತದೆ. ನಗರದಲ್ಲಿ ಈಗಾಗಲೇ ನೂರಾರು ಕಿಲೋಮೀಟರ್‌ಗಳಷ್ಟು ಉದ್ದದ ಎತ್ತರಿಸಲ್ಪಟ್ಟ ರಸ್ತೆಗಳು ಇವೆ.

ಆಯ್ದ ಸ್ಥಳಗಳಲ್ಲಿ ಫ್ಲೈಓವರ್‌ಗಳು ಬೇಕು. ಆದರೆ, ಫ್ಲೈಓವರ್‌ಗಳ ಕಾರ್ಯಜಾಲ ನಿರ್ಮಿಸುವುದು ಅನಪೇಕ್ಷಿತ. ಈ ಯೋಜನೆ ನಗರದ ಸಂಚಾರ ವ್ಯವಸ್ಥೆಗೆ ಎಷ್ಟು ಸೂಕ್ತ ಎಂಬುದನ್ನು ತಜ್ಞರ ಸಮಿತಿ ಪುನರ್‌ವಿಮರ್ಶಿಸಬೇಕು. ಇಂಥ ಬೃಹತ್‌ ನಿರ್ಮಾಣಗಳು ಆದಲ್ಲಿ ನಗರದಲ್ಲಿ ಜೀವಿಸಲಾರದ ಪರಿಸ್ಥಿತಿ ನಿರ್ಮಾಣವಾಗುವ ಆತಂಕವಿದೆ. 

ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಮೌನ

ಕಸದ ಸಮಸ್ಯೆ, ನೊರೆಯುಗುಳುವ ಕೆರೆಗಳು, ಮಾಲಿನ್ಯ, ಆರೋಗ್ಯ, ಸುರಕ್ಷತೆ ಸಂಬಂಧಿಸಿದಂತೆ ಬಜೆಟ್‌ ಯಾವುದೇ ಚಿಂತನೆಯನ್ನು ವ್ಯಕ್ತಪಡಿಸದೇ ಮೌನವಾಗಿದೆ.

ಕೆರೆಗಳ ಸಮೀಪ ತ್ಯಾಜ್ಯ ನೀರು ಸಂಸ್ಕರಣಾ ಘಟಕ ನಿರ್ಮಾಣದ ಸಂಖ್ಯೆಯನ್ನು ಹೆಚ್ಚಿಸಬೇಕಿತ್ತು. ಬೆಳ್ಳಂದೂರು ಕೆರೆ ಪುನಶ್ಚೇತನಕ್ಕಾಗಿ ₹ 50 ಕೋಟಿ ಮೀಸಲಿಟ್ಟಿರುವುದು ಒಳ್ಳೆಯದು.

ರಾಸಾಯನಿಕ ತ್ಯಾಜ್ಯ ಸಂಸ್ಕರಣಾ ಘಟಕಗಳಿಗೆ ಬಜೆಟ್‌ನಲ್ಲೇ ನಿಧಿ ಮೀಸಲಿಡುವ ಬದಲು ಅಂಥ ತ್ಯಾಜ್ಯ ಹೊರಸೂಸುವ ಘಟಕಗಳು ಈ ಘಟಕದ ಮೂಲ ವೆಚ್ಚವನ್ನು ಭರಿಸಬೇಕು. ಖಾಸಗಿ ಸಹಭಾಗಿತ್ವದಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತದೆ ಎಂದು ಸರ್ಕಾರ ಹೇಳಿದೆ.

ಆದರೆ, ಅಂಥ ಯೋಜನೆಗಳು ಯಶಸ್ವಿಯಾಗುವುದಿಲ್ಲ. ಈ ಮಾರ್ಗದಲ್ಲಿ ಆ ಪ್ರದೇಶದ ಅಭಿವೃದ್ಧಿಯ ರೀತಿ, ಆಯಾ ಪ್ರದೇಶದ ಕಟ್ಟಡಗಳ, ಭೂ ಮಾಲೀಕರ ಸಹಭಾಗಿತ್ವ ಬೇಕಾಗುತ್ತದೆ.

ಪ್ಲಾಸ್ಟಿಕ್‌ ಅಪಾಯವನ್ನು ಬಜೆಟ್‌ ಗಂಭೀರವಾಗಿ ಪರಿಗಣಿಸಿದೆ. ಆದರೆ, ಬೇರುಮಟ್ಟದಿಂದಲೇ ಪ್ಲಾಸ್ಟಿಕ್‌ ನಿಷೇಧ ಕ್ರಮಗಳನ್ನು ಅನುಸರಿಸಬೇಕಾಗಿದೆ. ಪ್ಲಾಸ್ಟಿಕ್‌ ಬಳಸಿದರೆ ದಂಡ ವಿಧಿಸುವುದು ಅಥವಾ ಅದಕ್ಕೆ ಪರ್ಯಾಯ ವಸ್ತುಗಳನ್ನು ನೀಡಿ ಪ್ರೋತ್ಸಾಹಿಸುವ ಕ್ರಮಗಳ ಅಗತ್ಯವಿದೆ.

ಹೊಸ ಸರ್ಕಾರ ಅಳವಡಿಸಿಕೊಳ್ಳುವ ಅಥವಾ ಬೆಂಗಳೂರು ನಿರ್ವಹಣೆಗೆ ಆಡಳಿತಾತ್ಮಕ ಚೌಕಟ್ಟು ಹಾಕುವ ಉದ್ದೇಶ ಈ ಬಜೆಟ್‌ನಲ್ಲಿ ಇಲ್ಲ. ಏಕೀಕೃತ ಸಾರಿಗೆ ವ್ಯವಸ್ಥೆ ಪ್ರಸ್ತಾವ ಹೊರತುಪಡಿಸಿದರೆ ಉಳಿದಂತೆ ಈಗಿನ ವ್ಯವಸ್ಥೆಯೇ ಚೆನ್ನಾಗಿ ಕಾರ್ಯನಿರ್ವಹಿಸುತ್ತಿದೆ.

ದ್ವಿಗುಣಗೊಳ್ಳುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಸಾರ್ವಜನಿಕ ವ್ಯವಸ್ಥೆಗಳಲ್ಲಿ ಹೊಸತನ ತರದಿದ್ದರೆ ನಗರ ವ್ಯವಸ್ಥೆ ಎಲ್ಲದರಲ್ಲೂ ವಿಫಲವಾಗುತ್ತದೆ. ಅದನ್ನು ಸರಿಪಡಿಸಲು ಮತ್ತೊಂದು ದಿನಕ್ಕೆ ನಾವು ಕಾಯಬೇಕಾಗುತ್ತದೆ.

(ನಗರ ಯೋಜನಾ ತಜ್ಞ)

ಬರಹ ಇಷ್ಟವಾಯಿತೆ?

 • 9

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !