ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜವಳಿ ವಲಯದ ಅಭಿವೃದ್ಧಿಗೆ ಬದ್ಧ: ಪ್ರಧಾನಿ ಮೋದಿ

Published 26 ಫೆಬ್ರುವರಿ 2024, 16:00 IST
Last Updated 26 ಫೆಬ್ರುವರಿ 2024, 16:00 IST
ಅಕ್ಷರ ಗಾತ್ರ

ನವದೆಹಲಿ: ‘2014ರಲ್ಲಿ ದೇಶದ ಜವಳಿ ವಲಯದ ಮಾರುಕಟ್ಟೆ ಮೌಲ್ಯವು ₹7 ಲಕ್ಷ ಕೋಟಿಗಿಂತಲೂ ಕಡಿಮೆ ಇತ್ತು. ಈಗ ₹12 ಲಕ್ಷ ಕೋಟಿ ದಾಟಿದೆ. ಕಳೆದ ಹತ್ತು ವರ್ಷಗಳಲ್ಲಿ ನೂಲು, ಬಟ್ಟೆ, ಸಿದ್ಧಉಡುಪು ಉತ್ಪಾದನೆಯು ಶೇ 25ರಷ್ಟು ಹೆಚ್ಚಳವಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. 

ಇಲ್ಲಿನ ಭಾರತ ಮಂಟಪಂನಲ್ಲಿ ಸೋಮವಾರ ಆರಂಭವಾದ ‘ಭಾರತ್‌ ಟೆಕ್ಸ್‌ 2024’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಸರ್ಕಾರವು ಜವಳಿ ವಲಯದ ಅಭಿವೃದ್ಧಿಗೆ ಬದ್ಧವಾಗಿದೆ. 2047ನೇ ವೇಳೆಗೆ ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಹೊರಹೊಮ್ಮಲು, ಈ ಕ್ಷೇತ್ರದ ಕೊಡುಗೆ ಹೆಚ್ಚಿಸುವತ್ತ ಕೆಲಸ ಮಾಡುತ್ತಿದೆ’ ಎಂದರು.

ಮುಂದಿನ ಇಪ್ಪತ್ತೈದು ವರ್ಷಗಳಲ್ಲಿ ಭಾರತವನ್ನು ‘ವಿಕಸಿತ ಭಾರತ’ವಾಗಿ ರೂಪಿಸುವುದು ಸರ್ಕಾರದ ಗುರಿ. ಬಡವರು, ಯುವಜನರು, ರೈತರು ಹಾಗೂ ಮಹಿಳೆಯರೇ ಈ ವಿಕಸಿತ ಭಾರತದ ಪ್ರಮುಖ ಆಧಾರಸ್ತಂಭಗಳಾಗಿದ್ದಾರೆ. ಜವಳಿ ವಲಯವು ಈ ನಾಲ್ಕು ವರ್ಗಗಳೊಟ್ಟಿಗೆ ಸಂಪರ್ಕ ಬೆಸೆದುಕೊಂಡಿದೆ. ಹಾಗಾಗಿ, ಭಾರತ್‌ ಟೆಕ್ಸ್‌ ಕಾರ್ಯಕ್ರಮವು ನಮಗೆ ಬಹುಮುಖ್ಯವಾಗಿದೆ ಎಂದು ತಿಳಿಸಿದರು.

ಹತ್ತು ಮಂದಿ ಸಿದ್ಧಉಡುಪು ತಯಾರಕರಲ್ಲಿ ಏಳು ಮಹಿಳೆಯರು ಇದ್ದಾರೆ. ಕೈಮಗ್ಗ ಉತ್ಪನ್ನಗಳ ತಯಾರಿಕೆಯಲ್ಲಿ ಈ ಸಂಖ್ಯೆ ಹೆಚ್ಚಿದೆ ಎಂದರು.

ದೇಶದಲ್ಲಿ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಜಿಗಳ ಸಂಖ್ಯೆಯನ್ನು 19ಕ್ಕೆ ಹೆಚ್ಚಿಸಲಾಗಿದೆ. ಸ್ಥಳೀಯ ನೇಕಾರರು ಮತ್ತು ಕುಶಲಕರ್ಮಿಗಳಿಗೆ ಇವುಗಳ ಮೂಲಕ ಕೌಶಲ ತರಬೇತಿ ನೀಡಲಾಗುತ್ತಿದೆ ಎಂದು ವಿವರಿಸಿದರು.

40 ಸಾವಿರ ಮಂದಿ ಭಾಗಿ

ಜವಳಿ ವಲಯದಲ್ಲಿ ವ್ಯಾಪಾರ ಮತ್ತು ಹೂಡಿಕೆಗೆ ಉತ್ತೇಜನ ನೀಡಲು ಭಾರತ್‌ ಟೆಕ್ಸ್‌ ಆಯೋಜಿಸಲಾಗಿದೆ. ನಾಲ್ಕು ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮದಲ್ಲಿ 65 ಗೋಷ್ಠಿಗಳನ್ನು ಏರ್ಪಡಿಸಲಾಗಿದ್ದು ಜಾಗತಿಕ ಮಟ್ಟದ 100ಕ್ಕೂ ಹೆಚ್ಚು ತಜ್ಞರು ವಿವಿಧ ವಿಷಯಗಳ ಬಗ್ಗೆ ಮಾತನಾಡಲಿದ್ದಾರೆ. 3500 ಹೆಚ್ಚು ಪ್ರದರ್ಶಕರು 100ಕ್ಕೂ ಹೆಚ್ಚು ದೇಶಗಳ ಮೂರು ಸಾವಿರ ಖರೀದಿದಾರರು ಸೇರಿದಂತೆ 40 ಸಾವಿರ ವ್ಯಾಪಾರ ಸಂದರ್ಶಕರು ಪಾಲ್ಗೊಂಡಿದ್ದಾರೆ. ಜವಳಿ ವಿಷಯ ಅಧ್ಯಯನದ ವಿದ್ಯಾರ್ಥಿಗಳು ನೇಕಾರರು ಕುಶಲಕರ್ಮಿಗಳು ಜವಳಿ ಕಾರ್ಮಿಕರು ಭಾಗವಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT