ಶನಿವಾರ, ಅಕ್ಟೋಬರ್ 1, 2022
23 °C

ಕೃಷಿ ಸಾಲ: ಬಡ್ಡಿ ಸಹಾಯಧನಕ್ಕೆ ₹ 34 ಸಾವಿರ ಕೋಟಿ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಭಾರತೀಯ ರಿಸರ್ವ್‌ ಬ್ಯಾಂಕ್‌ ರೆಪೊ ದರವನ್ನು ಹೆಚ್ಚಳ ಮಾಡುತ್ತಿರುವ ಕಾರಣ, ₹ 3 ಲಕ್ಷದವರೆಗಿನ ಅಲ್ಪಾವಧಿ ಕೃಷಿ ಸಾಲಕ್ಕೆ ಶೇಕಡ 1.5ರಷ್ಟು ಬಡ್ಡಿ ವಿನಾಯಿತಿ ನೀಡಲು ಕೇಂದ್ರ ಸಚಿವ ಸಂಪುಟವು ₹ 34,856 ಕೋಟಿಯನ್ನು ಮೀಸಲಿರಿಸಿದೆ.

ಕೇಂದ್ರ ಸರ್ಕಾರದ ನೆರವಿನೊಂದಿಗೆ ಹಣಕಾಸು ಸಂಸ್ಥೆಗಳು ಶೇ 7ರ ಬಡ್ಡಿ ದರದಲ್ಲಿ ಅಲ್ಪಾವಧಿ ಕೃಷಿ ಸಾಲ ನೀಡುತ್ತವೆ. ಸಂಪುಟದ ತೀರ್ಮಾನವನ್ನು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಸಿಂಗ್ ಠಾಕೂರ್ ತಿಳಿಸಿದರು.

ಹಣಕಾಸು ಸಂಸ್ಥೆಗಳು ಹೊರಗಿನ ನೆರವು ಇಲ್ಲದೆಯೇ ಶೇ 7ರ ಬಡ್ಡಿ ದರದಲ್ಲಿ ಅಲ್ಪಾವಧಿ ಕೃಷಿ ಸಾಲ ನೀಡುವ ಸ್ಥಿತಿಯಲ್ಲಿದ್ದ ಕಾರಣ ಕೇಂದ್ರವು 2020ರ ಮೇ ತಿಂಗಳಲ್ಲಿ ಬಡ್ಡಿ ವಿನಾಯಿತಿಯ ಈ ಯೋಜನೆಯನ್ನು ಸ್ಥಗಿತಗೊಳಿಸಿತ್ತು ಎಂದು ಠಾಕೂರ್ ಹೇಳಿದರು.

ಆದರೆ ಆರ್‌ಬಿಐ ರೆಪೊ ದರವನ್ನು ಹೆಚ್ಚಿಸುತ್ತಿರುವ ಕಾರಣ, ಬ್ಯಾಂಕ್‌ಗಳು ಶೇ 7ರ ಬಡ್ಡಿ ದರದಲ್ಲಿ ಕೃಷಿ ಸಾಲ ಒದಗಿಸಬೇಕು ಎಂದಾದರೆ ಅವುಗಳಿಗೆ ನೆರವು ಒದಗಿಸಬೇಕು ಎಂಬ ಸ್ಥಿತಿ ಎದುರಾಗಿದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ರಸಗೊಬ್ಬರಗಳಿಗೆ ನೀಡುವ ಸಬ್ಸಿಡಿ ಮೊತ್ತವು ₹ 2 ಲಕ್ಷ ಕೋಟಿಯನ್ನು ಮೀರುವ ಸಾಧ್ಯತೆ ಇದೆ ಎಂದು ಠಾಕೂರ್ ಅವರು ತಿಳಿಸಿದರು. ಜಾಗತಿಕ ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಳವಾಗಿದ್ದರೂ ದೇಶಿ ಮಾರುಕಟ್ಟೆಯಲ್ಲಿ ರಸಗೊಬ್ಬರ ಬೆಲೆ ಏರಿಕೆಗೆ ಕೇಂದ್ರವು ಅವಕಾಶ ಕೊಟ್ಟಿಲ್ಲ ಎಂದರು.

ರೆಪೊ ದರದಲ್ಲಿನ ಏರಿಕೆಯಿಂದ ಆಗುವ ವೆಚ್ಚ ಹೆಚ್ಚಳವನ್ನು ನಿಭಾಯಿಸಲು ಹಣಕಾಸು ಸಂಸ್ಥೆಗಳಿಗೆ ಕೇಂದ್ರ ಸರ್ಕಾರ ನೀಡುವ ನೆರವಿನಿಂದ ಸಾಧ್ಯವಾಗುತ್ತದೆ ಎಂದು ಕೇಂದ್ರದ ಪ್ರಕಟಣೆ ತಿಳಿಸಿದೆ.

=

ಯಾವೆಲ್ಲ ಹಣಕಾಸು ಸಂಸ್ಥೆಗಳಿಗೆ ಕೇಂದ್ರದ ನೆರವು?

* ಸರ್ಕಾರಿ ಹಾಗೂ ಖಾಸಗಿ ಬ್ಯಾಂಕ್‌ಗಳಿಗೆ

* ಕಿರು ಹಣಕಾಸು ಬ್ಯಾಂಕ್‌ಗಳಿಗೆ

* ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳಿಗೆ

* ಸಹಕಾರ ಬ್ಯಾಂಕ್‌ಗಳಿಗೆ

* ಕಂಪ್ಯೂಟರೀಕೃತ ಪ್ರಾಥಮಿಕ ಕೃಷಿ ಪತ್ತಿನ ಸಂಘಗಳಿಗೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.