ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

36,065 ರೈತರಿಂದ ತೊಗರಿ ಖರೀದಿ

ವಿಜಯಪುರ ಜಿಲ್ಲೆಯಲ್ಲಿ 3,30,007 ಕ್ವಿಂಟಲ್‌ ತೊಗರಿ ಖರೀದಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ
Last Updated 21 ಮಾರ್ಚ್ 2019, 10:38 IST
ಅಕ್ಷರ ಗಾತ್ರ

ವಿಜಯಪುರ: ಮುಕ್ತ ಮಾರುಕಟ್ಟೆಯಲ್ಲಿ ತೊಗರಿ ದರ ಮತ್ತೆ ಪಾತಾಳಮುಖಿಯಾಗಿದೆ. ಕೆಲ ದಿನಗಳ ಹಿಂದಷ್ಟೇ ₹ 5500ರ ಧಾರಣೆಯಲ್ಲಿ ವಹಿವಾಟು ನಡೆದಿತ್ತು. ಇದೀಗ ಕ್ವಿಂಟಲ್‌ಗೆ ₹ 4800–₹ 5000ದ ಆಸುಪಾಸಿನ ಬೆಲೆಯಿದೆ.

ಏಕಾಏಕಿ ಧಾರಣೆ ಕುಸಿತಗೊಂಡ ಬೆನ್ನಿಗೆ, ತೊಗರಿ ಮುಕ್ತ ಮಾರುಕಟ್ಟೆಗೆ ಬಾರದಾಗಿದೆ. ಇನ್ನೊಂದೆಡೆ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯ 83 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು, ಎರಡು ತಾಲ್ಲೂಕು ವ್ಯವಸಾಯೋತ್ಪನ್ನ ಸಹಕಾರ ಸಂಘಗಳಲ್ಲಿ ತೊಗರಿ ಖರೀದಿ ಮುಂದುವರೆದಿದ್ದು, ಪ್ರಕ್ರಿಯೆ ಮಂದಗತಿಯಲ್ಲಿ ಸಾಗಿದೆ ಎಂದು ವಿಜಯಪುರ ಎಪಿಎಂಸಿ ಮೂಲಗಳು ತಿಳಿಸಿವೆ.

‘ಸರ್ಕಾರದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ತೊಗರಿ ಮಾರಲು ಜಿಲ್ಲೆಯ 59,426 ರೈತರು ನೋಂದಣಿ ಮಾಡಿಸಿಕೊಂಡಿದ್ದರು. ಇದರಲ್ಲಿ 53,409 ರೈತರ ನೋಂದಣಿಯಷ್ಟೇ ಯಶಸ್ವಿಯಾಗಿತ್ತು. ಸಾಫ್ಟ್‌ವೇರ್‌ನಲ್ಲಿ ಹೆಸರು, ಬೆಳೆ ಹೊಂದಾಣಿಕೆಯಾಗದಿರುವುದರಿಂದ ಇಂದಿಗೂ 6017 ರೈತರ ನೋಂದಣಿ ಪ್ರಕ್ರಿಯೆ ಪೂರ್ಣಗೊಂಡಿಲ್ಲ’ ಎಂದು ವಿಜಯಪುರ ಎಪಿಎಂಸಿ ಕಾರ್ಯದರ್ಶಿ ವಿ.ರಮೇಶ ತಿಳಿಸಿದರು.

‘ಮುಂಬರುವ ಏಪ್ರಿಲ್‌ 10ರವರೆಗೂ ತೊಗರಿ ಖರೀದಿ ನಡೆಯಲಿದೆ. ಇದೂವರೆಗೂ 36,065 ರೈತರಿಂದ 3,30,007 ಕ್ವಿಂಟಲ್‌ ತೊಗರಿ ಖರೀದಿಸಲಾಗಿದೆ. ಇನ್ನೂ 20 ದಿನ ಸಮಯವಿದೆ. 17,344 ನೋಂದಾಯಿತ ರೈತರು ತೊಗರಿಯನ್ನು ಖರೀದಿ ಕೇಂದ್ರಗಳಿಗೆ ಮಾರಬೇಕಿದೆ’ ಎಂದು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಪ್ರಸ್ತುತ ಖರೀದಿ ಕೇಂದ್ರಗಳಿಗೆ ಮಾರಾಟಕ್ಕಾಗಿ ತೊಗರಿ ತರುತ್ತಿರುವ ರೈತರ ಸಂಖ್ಯೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಖರೀದಿ ಪ್ರಕ್ರಿಯೆ ಮಂದಗತಿಯಲ್ಲಿ ಸಾಗಿದೆ. ಬಹುತೇಕ ಖರೀದಿ ಕೇಂದ್ರಗಳಲ್ಲಿ ವಹಿವಾಟು ನಡೆದಿಲ್ಲ. ಆದರೂ ನಿಗದಿತ ಅವಧಿಯವರೆಗೂ ಈ ಕೇಂದ್ರಗಳನ್ನು ತೆರೆದಿರಲಾಗುವುದು’ ಎಂದು ಅವರು ಹೇಳಿದರು.

‘ಸಾಫ್ಟ್‌ವೇರ್‌ನಲ್ಲಿ ಹೆಸರು, ಬೆಳೆ ಹೊಂದಾಣಿಕೆಯಾಗದ ರೈತರ ಸಂಖ್ಯೆಯೂ ದೊಡ್ಡದಿದೆ. ಆಯಾ ವ್ಯಾಪ್ತಿಯ ತಹಶೀಲ್ದಾರ್‌ಗಳು ಈ ಸಮಸ್ಯೆ ಪರಿಹರಿಸಿದರೆ ಮಾತ್ರ 6017 ರೈತರ ಸಮಸ್ಯೆ ಪರಿಹಾರವಾಗಲಿದೆ. ಇಲ್ಲದಿದ್ದರೆ ಅನಗತ್ಯ ಕಿರಿಕಿರಿ ಉಂಟಾಗಲಿವೆ’ ಎಂದು ರಮೇಶ ತಿಳಿಸಿದರು.

‘ಹಿಂದಿನ ವರ್ಷ ಜಿಲ್ಲೆಯಲ್ಲಿ 8.83 ಲಕ್ಷ ಕ್ವಿಂಟಲ್‌ ತೊಗರಿ ಖರೀದಿ ನಡೆದಿತ್ತು. ಜಿಲ್ಲೆ ಸೇರಿದಂತೆ ನೆರೆಹೊರೆ ಜಿಲ್ಲೆಯ ಗೋದಾಮುಗಳಲ್ಲಿ ಇದನ್ನು ಸಂಗ್ರಹಿಸಿಡಲಾಗಿದೆ. ಇದೂವರೆಗೂ ಕೇವಲ 30%ನಷ್ಟು ಮಾತ್ರ ಮಾರಾಟವಾಗಿದೆ. 70% ಉಳಿದಿದೆ.

ಪ್ರಸಕ್ತ ವರ್ಷ ಮಳೆಯ ಅಭಾವದಿಂದ ನಿರೀಕ್ಷೆಯಷ್ಟು ಉತ್ಪನ್ನ ಸಿಗದಿದ್ದರೂ; ಧಾರಣೆ ಮಾತ್ರ ಹೆಚ್ಚಾಗಿಲ್ಲ. ಸರ್ಕಾರದ ಕನಿಷ್ಠ ಬೆಂಬಲ ಬೆಲೆ ಕ್ವಿಂಟಲ್‌ಗೆ ₹ 6100 ಇದ್ದು, ಇದರ ಆಸುಪಾಸು ಸಹ ಮುಕ್ತ ಮಾರುಕಟ್ಟೆಯ ಧಾರಣೆ ಬಾರದಿದ್ದುದು ಆಶ್ಚರ್ಯಕರ ಸಂಗತಿಯಾಗಿದೆ’ ಎಂದು ರಮೇಶ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT