ವೈದ್ಯ ಹುದ್ದೆಗೆ ಸಲ್ಲಿಕೆಯಾಗದ ಅರ್ಜಿ

7

ವೈದ್ಯ ಹುದ್ದೆಗೆ ಸಲ್ಲಿಕೆಯಾಗದ ಅರ್ಜಿ

Published:
Updated:

ಚಿತ್ರದುರ್ಗ: ತಾಲ್ಲೂಕಿನ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಖಾಲಿ ಇರುವ 8 ವೈದ್ಯ ಹುದ್ದೆಗಳಿಗೆ ಯಾವೊಬ್ಬ ವೈದ್ಯಕೀಯ ಪದವೀಧರರೂ ಅರ್ಜಿ ಸಲ್ಲಿಸದಿರುವುದು ಆರೋಗ್ಯ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ.

ತಾಲ್ಲೂಕಿನ ಸಿರಿಗೆರೆ, ಭರಮಸಾಗರ ಹಾಗೂ ತುರುವನೂರು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಈ ಹುದ್ದೆಗಳು ಖಾಲಿ ಇವೆ. ವೈದ್ಯರ ನೇಮಕಾತಿಗೆ ಸರ್ಕಾರ ನಿರ್ದೇಶನ ನೀಡಿದ್ದು, ತಿಂಗಳಿಂದ ಪ್ರಕ್ರಿಯೆ ನಡೆಯುತ್ತಿದೆ. ಆದರೆ, ಸರ್ಕಾರಿ ವೈದ್ಯರಾಗಲು ಯಾರೊಬ್ಬರೂ ಆಸಕ್ತಿ ತೋರಿಲ್ಲ.

ವೈದ್ಯರ ನೇಮಕಾತಿಗೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ಎಂಬಿಬಿಎಸ್‌ ಪದವಿ ಪೂರೈಸಿದವರು ಅರ್ಜಿ ಸಲ್ಲಿಸಲು ಅರ್ಹರು. ಮಾಸಿಕ ₹ 47 ಸಾವಿರ ವೇತನ ನಿಗದಿಪಡಿಸಲಾಗಿದೆ. ಮೂರು ವರ್ಷಗಳ ಬಳಿಕ ಇವರ ಸೇವೆಯನ್ನು ಕಾಯಂಗೊಳಿಸಲಾಗುತ್ತದೆ.

ಅರ್ಜಿ ಸಲ್ಲಿಸಿದ ಆಸಕ್ತ ವೈದ್ಯಕೀಯ ಪದವೀಧರರಿಗೆ ವಾಕ್‌–ಇನ್‌–ಇಂಟರ್‌ವ್ಯೂವ್‌ ಇರುತ್ತದೆ. ಅರ್ಹರಿಗೆ ಎರಡು ದಿನಗಳ ಒಳಗೆ ನೇಮಕಾತಿ ಆದೇಶ ನೀಡಲಾಗುತ್ತದೆ. ಶಸ್ತ್ರಚಿಕಿತ್ಸೆ, ಮರಣೋತ್ತರ ಪರೀಕ್ಷೆ ಸೇರಿ ಎಲ್ಲ ಸೇವೆಗಳನ್ನು ಒದಗಿಸುವ ಅವಕಾಶವನ್ನು ಇವರಿಗೆ ಕಲ್ಪಿಸಲಾಗಿದೆ.

‘ತಾಲ್ಲೂಕಿನ ಹಲವು ಆಸ್ಪತ್ರೆಗಳಲ್ಲಿ ಫಿಜಿಷಿಯನ್‌, ಮಕ್ಕಳ ತಜ್ಞರು ಹಾಗೂ ಸ್ತ್ರೀ ರೋಗ ತಜ್ಞರ ಹುದ್ದೆಗಳೇ ಹೆಚ್ಚಾಗಿ ಖಾಲಿ ಇವೆ. ಸರ್ಕಾರಿ ವೈದ್ಯ ವೃತ್ತಿಗೆ ವೈದ್ಯಕೀಯ ಪದವೀಧರರು ಆಸಕ್ತಿ ತೋರುತ್ತಿಲ್ಲ. ಆಯುರ್ವೇದ ವೈದ್ಯರ ಸೇವೆಯನ್ನು ಪಡೆಯುತ್ತಿದ್ದೇವೆ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸಿ.ಎಲ್‌.ಪಾಲಾಕ್ಷಪ್ಪ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !