ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೋಕ್ಷ ಕುಶಾಲ್ ಸಂದರ್ಶನ: ಭಿನ್ನ ಪಾತ್ರಗಳ ಹಂಬಲದಲ್ಲಿ ಕೊಡಗಿನ ಕುವರಿ

Published 30 ಮೇ 2024, 23:30 IST
Last Updated 30 ಮೇ 2024, 23:30 IST
ಅಕ್ಷರ ಗಾತ್ರ
ಕನ್ನಡ ಚಿತ್ರರಂಗಕ್ಕೆ ಕೊಡಗಿನ ಮತ್ತೋರ್ವ ಕುವರಿ ಕಾಲಿಟ್ಟಿದ್ದಾರೆ. ಧನಂಜಯ ನಟನೆಯ ‘ಕೋಟಿ’ ಸಿನಿಮಾ ಮೂಲಕ ಮೋಕ್ಷ ಕುಶಾಲ್‌ ಚಂದನವನಕ್ಕೆ ಪ್ರವೇಶ ಮಾಡಿದ್ದಾರೆ. ಈ ಸಿನಿಮಾ ಜೂನ್‌ 14ರಂದು ತೆರೆಕಾಣುತ್ತಿದ್ದು, ಅವರೊಂದಿಗೆ ಮಾತಿಗಿಳಿದಾಗ ತಮ್ಮ ಕನಸು ಹಂಚಿಕೊಂಡರು.
ಪ್ರ

ನಿಮ್ಮ ಹಿನ್ನೆಲೆ...

ನಾನು ಕೊಡಗಿನ ಹುಡುಗಿ. ವಿರಾಜಪೇಟೆಯಲ್ಲಿ ಹುಟ್ಟಿ ಬೆಂಗಳೂರಿನಲ್ಲಿ ಬೆಳೆದವಳು. ಜೆಎಸ್‌ಎಸ್‌ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್‌ ಎಂಜಿನಿಯರಿಂಗ್‌ ಓದಿದೆ. ಎಂಜಿನಿಯರಿಂಗ್‌ ಡಿಗ್ರಿ ಪಡೆದು ಐಟಿ ಕ್ಷೇತ್ರಕ್ಕೆ ಕಾಲಿಡಲು ಇಷ್ಟವಿರಲಿಲ್ಲ. ನಮ್ಮದು ಮಧ್ಯಮ ವರ್ಗದ ಕುಟುಂಬ. ಹೀಗಾಗಿ ಮಗಳೊಂದು ಒಳ್ಳೆಯ ಡಿಗ್ರಿ ಪಡೆದಿರಬೇಕೆಂಬ ಹಂಬಲ ಅಪ್ಪನಿಗೆ ಇತ್ತು. ಹೀಗಾಗಿ ಎಂಜಿನಿಯರಿಂಗ್‌ ಪೂರ್ಣಗೊಳಿಸಿದೆ. ಓದುತ್ತಿರುವಾಗಲೇ ಮಾಡೆಲಿಂಗ್‌ ಕ್ಷೇತ್ರಕ್ಕೆ ಕಾಲಿಟ್ಟಿದ್ದೆ. ಪ್ರಸಾದ್‌ ಬಿದ್ದಪ್ಪ ಅವರ ಜೊತೆ ಸುಮಾರು ಎರಡು ವರ್ಷ ಪ್ರೊಫೆಷನಲ್‌ ಮಾಡೆಲಿಂಗ್‌ ಮಾಡಿದ್ದೇನೆ. ಈ ಕ್ಷೇತ್ರದಲ್ಲಿ ನಾನಂದುಕೊಂಡಂತೆ ಹೆಚ್ಚಿನ ಪ್ರಯೋಗ ಮತ್ತು ಬೆಳವಣಿಗೆಗೆ ಅವಕಾಶ ಸಿಗಲಿಲ್ಲ. ಈ ಸಂದರ್ಭದಲ್ಲಿ ನಟನೆಯತ್ತ ಗಮನಹರಿಸಿದೆ. ಮೊದಲಿಗೆ ‘ಇನ್‌ಸೈಡ್‌ ಎ ಗರ್ಲ್‌’ ಎನ್ನುವ ಹಿಂದಿ ಕಿರುಚಿತ್ರದಲ್ಲಿ ನಟಿಸಿದೆ. 

ಪ್ರ

‘ಕೋಟಿ’ ಪ್ರಾಜೆಕ್ಟ್‌ ಸಿಕ್ಕಿದ್ದು ಹೇಗೆ? 

‘ಕೋಟಿ’ ಸಿನಿಮಾಗೂ ಮುನ್ನ ಸಿಂಪಲ್‌ ಸುನಿ ಅವರು ನಿರ್ದೇಶಿಸಿರುವ ‘ಮೋಡ ಕವಿದ ವಾತಾವರಣ’ ಸಿನಿಮಾದಲ್ಲಿ ನಟಿಸಿದ್ದೆ. ಅದು ಇನ್ನಷ್ಟೇ ಬಿಡುಗಡೆಯಾಗಬೇಕಿದೆ. ಈ ಸಿನಿಮಾದ ಮಾತಿನ ಭಾಗ ಶೂಟಿಂಗ್‌ ಪೂರ್ಣಗೊಂಡ ಸಂದರ್ಭದಲ್ಲಿ ‘ಕೋಟಿ’ ಸಿನಿಮಾದ ಅವಕಾಶ ಬಂದಿತು. ಸುನಿ ಅವರೇ ನನ್ನನ್ನು ಶಿಫಾರಸು ಮಾಡಿದರೆಂದು ನನಗೆ ಆ ಮೇಲೆ ತಿಳಿಯಿತು. ಆಡಿಷನ್‌ ನೀಡಿಯೇ ನಾನು ‘ಕೋಟಿ’ಗೆ ಆಯ್ಕೆಯಾಗಿದೆ. ‘ಮೋಡ ಕವಿದ ವಾತಾವರಣ’ ಸಿನಿಮಾಗೂ ಆಡಿಷನ್‌ ಮೂಲಕವೇ ಆಯ್ಕೆಯಾಗಿದ್ದೆ. ನನಗೆ ಸಿನಿಮಾ ಕ್ಷೇತ್ರದ ಹಿನ್ನೆಲೆ, ಸಂಬಂಧ ಸ್ವಲ್ಪವೂ ಇಲ್ಲ.    

ಪ್ರ

ನಟನೆ ಮೇಲೆ ಆಸಕ್ತಿ ಹುಟ್ಟಿದ್ದು...

ಚಿಕ್ಕವಯಸ್ಸಿನಿಂದಲೂ ಓದಿನ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚು ಭಾಗವಹಿಸುತ್ತಿದ್ದೆ. ಕ್ರೀಡೆ ಮೇಲೆ ಹೆಚ್ಚಿನ ಆಸಕ್ತಿ ಇತ್ತು. ಹಲವು ಸ್ಪರ್ಧೆಗಳಲ್ಲೂ ಭಾಗವಹಿಸಿ ಗೆದ್ದಿದ್ದೇನೆ. ನಾಟಕ, ನೃತ್ಯ ಮುಂತಾದ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡು ಬಂದಿದ್ದೇನೆ. ನನ್ನ ಒಲವಿನ ಬಗ್ಗೆ ಮನೆಯಲ್ಲಿ ಹೇಳಿಕೊಂಡಿದ್ದೆ. ಆರಂಭದಲ್ಲಿ ಹೆಚ್ಚಿನ ಪ್ರೋತ್ಸಾಹ ಸಿಗಲಿಲ್ಲ. ಆದರೂ ನನಗೇನು ಇಷ್ಟವೋ ಆ ದಾರಿಯಲ್ಲಿ ಹೆಜ್ಜೆ ಹಾಕುವ ಅಪಾಯ ಎದುರು ಹಾಕಿಕೊಂಡೆ. ಮಾಡೆಲಿಂಗ್‌ ನಂತರ ನಟನೆಯತ್ತ ಮುಖ ಮಾಡಿದೆ.   

ಮೋಕ್ಷ ಕುಶಾಲ್
ಮೋಕ್ಷ ಕುಶಾಲ್
ಪ್ರ

ಧನಂಜಯ ಜೊತೆಗೆ ನಟನೆಯ ಅನುಭವ ಹೇಗಿತ್ತು?

ಧನಂಜಯ ಅವರು ನಟಿಸಿರುವ ಕೆಲವು ಸಿನಿಮಾಗಳನ್ನು ನೋಡಿದ್ದೇನೆ. ಅವರ ಕೆಲಸದ ಶೈಲಿ, ಲೀಲಾಜಾಲವಾಗಿ ನಟಿಸುವ ಸಾಮರ್ಥ್ಯ ನೋಡಿ ಬೆರಗಾಗಿದ್ದೇನೆ. ‘ಕೋಟಿ’ ಸಿನಿಮಾ ಆರಂಭಕ್ಕೂ ಮುನ್ನ ಕಾರ್ಯಾಗಾರ ಮಾಡಿದ್ದರು. ಅದಕ್ಕೆ ‘ಡಾಲಿ’ ಎನ್ನುವ ವ್ಯಕ್ತಿಯ ವ್ಯಕ್ತಿತ್ವ ತಲೆಯಲ್ಲಿಟ್ಟುಕೊಂಡು ಹೋಗಿದ್ದೆ. ಆದರೆ ಅವರೊಂದಿಗೆ ಒಡನಾಡಿದ ಬಳಿಕ ಅವರು ‘ಧನಂಜಯ’ ಆಗಿ ನನ್ನ ಮನಸ್ಸಿನಲ್ಲಿ ಉಳಿದರು. ‘ಡಾಲಿ’ ಎನ್ನುವ ವ್ಯಕ್ತಿತ್ವದ ತದ್ವಿರುದ್ಧ ಅವರು. ನನ್ನೊಳಗಿದ್ದ ಭಯವೂ ಅಂದೇ ಮಾಯವಾಯಿತು. ಅವರ ಆ ನಗು, ಸೆಲೆಬ್ರಿಟಿ ಎನ್ನುವ ಅಹಂ ಇಲ್ಲದ ವ್ಯಕ್ತಿತ್ವ, ನಟನೆ ವೇಳೆ ಎಡವಿದರೆ ಸಹಾಯ ಮಾಡುವ ಗುಣ ಹಿಡಿಸಿತು. ತೆರೆಹಂಚಿಕೊಳ್ಳಲು ಅವರೊಬ್ಬ ಅತ್ಯುತ್ತಮ ಕಲಾವಿದ.

ಜೊತೆಗೆ ನಿರ್ದೇಶಕ ಪರಮ್‌ ಅವರೂ ಹೋಂವರ್ಕ್‌ ಮಾಡಿಕೊಂಡೇ ಸಿನಿಮಾ ಕ್ಷೇತ್ರಕ್ಕೆ ಇಳಿದವರಂತೆ ಕಂಡುಬಂದರು. ಅವರಿಗೆ ಸಿನಿಮಾ ಮೇಲೆ ಇರುವ ಆಸಕ್ತಿ ಶೂಟಿಂಗ್‌ ವೇಳೆ ಸ್ಪಷ್ಟವಾಗಿ ಗೋಚರಿಸುತ್ತಿತ್ತು.   

ಪ್ರ

‘ಕೋಟಿ’ ಸಿನಿಮಾದಲ್ಲಿನ ನಿಮ್ಮ ಪಾತ್ರ...

‘ಸಾಧಾರಣ ಹುಡುಗಿ, ಬಲುಚೂಟಿ, ಕೊಂಚ ತುಂಟತನ ಉಳ್ಳವಳು. ಚಾರ್ಟೆಡ್‌ ಅಕೌಂಟೆಂಟ್‌ ಆಗಿ ಕಾರ್ಯನಿರ್ವಹಿಸುವ ಪಾತ್ರ. ಚಿತ್ರದಲ್ಲಿ ಗ್ಲ್ಯಾಮರ್‌ಗಾಗಿ ನನ್ನನ್ನು ಬಳಸಿಕೊಂಡಿಲ್ಲ. ನಟನೆಯ ಸಾಮರ್ಥ್ಯವನ್ನು ಪ್ರದರ್ಶಿಸಲು ಹೆಚ್ಚು ಅವಕಾಶವಿರುವ ಪಾತ್ರ ದೊರೆತಿದೆ.

ಪ್ರ

ಮೋಕ್ಷ ಮುಂದಿನ ಹೆಜ್ಜೆ...

ಒಳ್ಳೆಯ ಸಿನಿಮಾಗಳನ್ನು, ಭಿನ್ನಪಾತ್ರಗಳನ್ನು ಮಾಡಬೇಕು ಎನ್ನುವ ಹಂಬಲವಿದೆ. ‘ಕೋಟಿ’ ಸಿನಿಮಾದಿಂದ ಒಳ್ಳೆಯ ಅವಕಾಶಗಳು ತೆರೆದುಕೊಳ್ಳಬಹುದು ಎನ್ನುವ ವಿಶ್ವಾಸವಿದೆ. ಹೊಸ ಸಿನಿಮಾಗಳಿಗೆ ಆಡಿಷನ್‌ಗಳನ್ನೂ ನೀಡುತ್ತಿದ್ದೇನೆ. ಕೆಲವು ಕಥೆಗಳನ್ನು ಕೇಳುತ್ತಿದ್ದೇನೆ. ಆದರೆ ಆಸಕ್ತಿ ಹುಟ್ಟಿಸುವ ಕಥೆಗಳು ಸಿಕ್ಕಿಲ್ಲ. ಕಾಯುತ್ತಿದ್ದೇನೆ. 

ಮೋಕ್ಷ ಕುಶಾಲ್
ಮೋಕ್ಷ ಕುಶಾಲ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT