ಬದುಕು ಬದಲಿಸಿದ ಗಾರ್ಡನಿಂಗ್‌

ಬುಧವಾರ, ಜೂನ್ 19, 2019
22 °C

ಬದುಕು ಬದಲಿಸಿದ ಗಾರ್ಡನಿಂಗ್‌

Published:
Updated:
Prajavani

ಮನೆ ಅಂಗಳದಲ್ಲಿ ಬೊನ್ಸಾಯ್‌ ಸಸಿಗಳನ್ನು ನೆಟ್ಟು, ಗಾರ್ಡನಿಂಗ್‌ ಮಾಡುವ ಮೂಲಕ ಖುಷಿ ಪಡುತ್ತಿದ್ದ ವೀಣಾನಂದ ಅವರು ಇದೇ ಉದ್ಯಮದಲ್ಲಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವುದು ಸಾಧ್ಯ ಎಂದು ನಿರೂಪಿಸಿದ್ದಾರೆ.

‘ಅಮ್ಮನಿಗೆ ಗಿಡಗಳ ಮೇಲೆ ತುಂಬಾ ಪ್ರೀತಿ. ಯಾವಾಗಲೂ ಅಂಗಳದಲ್ಲೇ ಇರುತ್ತಿದ್ದರು. ನನಗೂ ಇದೇ ಹವ್ಯಾಸ ಮುಂದುವರಿಯಿತು. ಮದುವೆ, ಮಕ್ಕಳು ಆದ ಮೇಲೆ 35 ವರ್ಷ ಮುಂಬೈನಲ್ಲಿ ಉಳಿದುಕೊಂಡೆ. ಆರಂಭದಲ್ಲಿ ಇದಕ್ಕೆಲ್ಲಾ ಸಮಯ ಸಿಗುತ್ತಿರಲಿಲ್ಲ. ಬೊನ್ಸಾಯ್‌ ತಜ್ಞರು ಎಂದೇ ಖ್ಯಾತರಾಗಿರುವ ಜ್ಯೋತಿ ಪಾರಿಕ್‌ ಅವರ ಬಳಿ ನಾನು ಈ ಉದ್ಯಮದ ಆಳ ಅಗಲಗಳನ್ನು ಕಲಿತುಕೊಂಡೆ’ ಎಂದು ನೆನೆಯುತ್ತಾರೆ ವೀಣಾನಂದ. 

ಕುಬ್ಜ ಮರಗಳನ್ನು ಬೆಳೆಸುವ ಬೊನ್ಸಾಯ್‌ ಮೂಲತಃ ಜಪಾನಿನ ಗಾರ್ಡನಿಂಗ್‌ ಕಲೆ. ಭಾರತದಲ್ಲಿಯೂ ಸಾಕಷ್ಟು ಜನರು ಇದನ್ನು ಇಷ್ಟಪಡುತ್ತಾರೆ. ತಮ್ಮ ಮನೆಯಂಗಳದ ಗಾರ್ಡನ್‌ಗೆ ಈ ಸಸಿಗಳು ಹೆಚ್ಚು ಅಂದ ನೀಡುತ್ತವೆ ಎಂದು ನಂಬುತ್ತಾರೆ. ವೀಣಾನಂದ ಅವರು ಈ ಉದ್ಯಮಕ್ಕೆ ಕಾಲಿಡುವ ಬಗ್ಗೆ ಆರಂಭದಲ್ಲಿ ಯೋಚಿಸಿರಲಿಲ್ಲ. ಬೆಂಗಳೂರಿಗೆ ಬಂದ ಮೇಲೆ, ಇಂದಿರಾನಗರದಲ್ಲಿರುವ ತಮ್ಮ ಮನೆಯಲ್ಲಿಯೇ ಹಲವು ವಿದ್ಯಾರ್ಥಿಗಳಿಗೆ ಬೊನ್ಸಾಯ್‌ ಗಿಡಗಳ ಕುರಿತು ತರಗತಿ ತೆಗೆದುಕೊಳ್ಳುತ್ತಿದ್ದರು. ಮನೆಯಂಗಳದಲ್ಲಿ ಗಿಡ ನೆಡಲು ಆಸಕ್ತಿ ಇರುವವರು ಇಲ್ಲಿಗೆ ಬಂದು ಕಲಿತುಕೊಂಡು ಹೋಗಿ ಪ್ರಯೋಗ ಮಾಡುತ್ತಿದ್ದರು. 

‘ವಿದ್ಯಾರ್ಥಿಗಳು ಹಾಗೂ ಸ್ನೇಹಿತರ ಕಡೆಯಿಂದ ಸಾಕಷ್ಟು ಜನರು ಪರಿಚಯ ಆದರು. ಮನೆಗೆ ಬಂದು ಗಿಡಗಳನ್ನು ಹಾಕಿಕೊಡುವಂತೆ ಒತ್ತಾಯ ಹೆಚ್ಚಿತು. ಅಲ್ಲಿಂದ ನಿಧಾನವಾಗಿ, ಬೇರೆಯವರ ಮನೆಯ ಅಂಗಳದಲ್ಲಿ ಗಾರ್ಡನಿಂಗ್ ಮಾಡಿಕೊಡಲು ಆರಂಭಿಸಿದೆ. ಟೆರೇಸ್‌, ಒಳಾಂಗಣ ಹಾಗೂ ಹೊರಾಂಗಣಗಳಲ್ಲೂ ಗಿಡಗಳನ್ನು ಹಾಕಿದೆ. ‘ಸನ್‌ಸೈನ್‌ ಗಾರ್ಡನಿಂಗ್ ಬೋಟಿಕ್‌’ ಅಂಗಡಿ ಆರಂಭಿಸಿದೆ. ವೃತ್ತಿಬದುಕಿಗೆ ಕಾಲಿಟ್ಟೆ. ಒಳ್ಳೆಯ ಪ್ರತಿಕ್ರಿಯೆ ಕೂಡ ಸಿಕ್ಕಿತು’ ಎಂದು ತಮ್ಮ ಉದ್ಯಮದ ಆರಂಭಿಕ ದಿನಗಳ ಕುರಿತು ಹೇಳಿದರು.

‘ನಾವು ಗಿಡ ಹಾಕಿಕೊಟ್ಟ ನಂತರ ಬೇರೆಯವರಿಂದ ಫರ್ನೀಚರಿಂಗ್‌ ಮಾಡಿಸಿಕೊಳ್ಳುತ್ತಿದ್ದರು. ಅವರಲ್ಲಿ ಕೆಲವರು ಗಿಡಗಳಿಗೆ ಹಾನಿಮಾಡುತ್ತಿದ್ದರು. ನೀವೇ ಫರ್ನೀಚರಿಂಗ್‌ ಮಾಡಿಕೊಡಿ ಎಂದು ಕೇಳಲು ಆರಂಭಿಸಿದರು. ಟೆರೇಸ್‌ ಮೇಲೆ ಹಾಗೂ ಮನೆಯ ಒಳಗೆ ಗಾರ್ಡನ್‌ಗೆ ತಕ್ಕಂತೆ ಲೈಟಿಂಗ್‌, ಪೀಠೋಪಕರಣ, ವಾಟರ್‌ ಫಾಲ್ಸ್‌, ಶೋ ಪೀಸ್‌ಗಳನ್ನು ನಾವೇ ಪ್ರಪಂಚದ ಬೇರೆ ಬೇರೆ ಭಾಗಗಳಿಂದ ತರಿಸಿ ಹಾಕಿಕೊಡಲು ಆರಂಭಿಸಿದೆವು. ಇದರಿಂದ ಅವಕಾಶಗಳು ಹೆಚ್ಚಾಗಲು ಶುರುವಾದವು’ ಎಂದು ವಿವರಿಸಿದರು.

ಬೊನ್ಸಾಯ್‌ ಉದ್ಯಮದ ಸವಾಲುಗಳು
‘ಬೊನ್ಸಾಯ್‌ ಗಿಡಗಳಿಂದ ನಾನು ಲ್ಯಾಂಡ್‌ಸ್ಕೇಪಿಂಗ್‌ ಉದ್ಯಮಕ್ಕೆ ನೇರವಾಗಿ ಕಾಲಿಟ್ಟೆ. ಇಲ್ಲಿ ಅವರವರ ಅಭಿರುಚಿಗೆ ತಕ್ಕಂತೆ ಒಳಾಂಗಣ ಅಥವಾ ಹೊರಾಂಗಣ ವಿನ್ಯಾಸ ಮಾಡಬೇಕಿತ್ತು. ಕೆಲವು ಮನೆಗಳಲ್ಲಿ ನಾಯಿ ಸಾಕಿರುತ್ತಿದ್ದರು, ಇನ್ನು ಕೆಲವರ ಮನೆಯಲ್ಲಿ ತುಂಟ ಮಕ್ಕಳು, ಈ ಎಲ್ಲಾ ಸವಾಲುಗಳಿಗೆ ತಕ್ಕಂತೆ ವಿನ್ಯಾಸ ಮಾಡಬೇಕಾಗುತ್ತದೆ ಎಂಬುದನ್ನು ಕ್ರಮೇಣ ಕರಗತ ಮಾಡಿಕೊಂಡೆವು. ಕೆಲವರಿಗೆ ಟೆರೇಸ್‌ ಮೇಲೆ ಕೂರಲು ಜಾಗ ಬೇಕು, ಇನ್ನು ಕೆಲವರಿಗೆ ಕೆಫೆ ಮಾದರಿಯಲ್ಲಿ ಇರಬೇಕು, ಚಳಿ, ಮಳೆಯಿಂದ ರಕ್ಷಣೆ ಬೇಕು ಎಂದು ಕೆಲವರು ಕೇಳುತ್ತಾರೆ. ಮನೆಯ ಎಲ್ಲರ ಆಯ್ಕೆಯನ್ನೂ ಪರಿಗಣಿಸಿ ಅಚ್ಚುಕಟ್ಟಾಗಿ ವಿನ್ಯಾಸ ಮಾಡಿ, ಗಿಡ ನೆಟ್ಟು ಒಂದು ತಿಂಗಳ ನಿರ್ವಹಣೆಯನ್ನೂ ನಾವೇ ಮಾಡುತ್ತೇವೆ’ ಎಂದು ತಮ್ಮ ಉದ್ಯಮದ ಚೌಕಟ್ಟನ್ನು ಬಿಚ್ಚಿಟ್ಟರು.

‘ಪೆಂಟಾ ಹೌಸ್‌, ವಿಲ್ಲಾ, ಟೆರೇಸ್‌, ಬಾಲ್ಕನಿ, ಅಂಗಳದಲ್ಲಿಯೂ ಈಗ ನಾವು ವಿನ್ಯಾಸ ಮಾಡುತ್ತೇವೆ. ಅದಲ್ಲದೇ ರೆಸಾರ್ಟ್‌, ರೆಸ್ಟೋರೆಂಟ್‌ಗಳಲ್ಲೂ ಮಾಡಿದ್ದೇವೆ. ಬಾರ್‌ ಕೌಂಟರ್‌, ರೂಫ್‌ಗಳ ಅಲಂಕಾರವನ್ನೂ ಮಾಡಿದ್ದೇವೆ. 500 ಚದರ ಅಡಿ ಇರುವ ಜಾಗದಲ್ಲಿ ಗಿಡಗಳನ್ನು ನೆಟ್ಟು ನಿರ್ವಹಣೆ ಮಾಡುವುದಾದರೆ ₹2 ಲಕ್ಷದಿಂದ  ₹3ಲಕ್ಷ ಖರ್ಚಾಗುತ್ತದೆ.ಲ್ಯಾಂಡ್‌ಸ್ಕೇಪಿಂಗ್‌ ಇದ್ದರೆ ₹8 ರಿಂದ ₹10 ಲಕ್ಷದವರೆಗೂ ಬೇಕಾಗುತ್ತದೆ. ಅವರ ಅಗತ್ಯಕ್ಕೆ ತಕ್ಕಂತೆ ಚಾರ್ಜ್‌ ಮಾಡುತ್ತೇವೆ. ಫ್ಲೋರಿಂಗ್‌, ರೂಫ್‌ನಲ್ಲಿ ಬದಲಾವಣೆ ಕೇಳಿದರೆ ಖರ್ಚು ಹೆಚ್ಚಾಗುತ್ತದೆ’ ಎಂದು ವ್ಯವಹಾರದ ಗುಟ್ಟು ಬಿಟ್ಟುಕೊಟ್ಟರು. 

‘ನನ್ನೊಂದಿಗೆ 10ರಿಂದ 12 ಕೆಲಸಗಾರರು ಇದ್ದಾರೆ. ಮನೆ ಅಂಗಳದ ಸೌಂದರ್ಯ ಹೆಚ್ಚಿಸುವಲ್ಲಿ ನಾನು ಖುಷಿ ಪಡುತ್ತೇನೆ. ಅಲಂಕಾರಿಕ ಗಿಡಗಳು ಮನಸ್ಸಿಗೆ ಆಹ್ಲಾದ ನೀಡುತ್ತವೆ. ಮನೆ ಕಟ್ಟುವಾಗಲೇ ಗಾರ್ಡನಿಂಗ್‌ ಜಾಗದ ವಿನ್ಯಾಸದ ಕುರಿತು ಮಾಹಿತಿ ನೀಡುತ್ತೇನೆ. ಮೆಕ್ಸಿಕನ್‌ ಜಾತಿಯ ಹುಲ್ಲು ಹಾಸು, ಶಿಲ್ಪಕಲೆ, ಕಾಲು ಹಾದಿ, ಬಳ್ಳಿ ಸಸಿಗಳು, ಚಪ್ಪರದ ವಿನ್ಯಾಸಗಳನ್ನು ಸಾಕಷ್ಟು ಜನರು ಇಷ್ಟಪಡುತ್ತಾರೆ’ ಎಂದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !