ಸ್ವಾತಂತ್ರ್ಯ ಹೋರಾಟಗಾರರೂ ಸೈನಿಕರೇ..

7
ಭಾರತೀಯ ಸೇನೆಯ ನಿವೃತ್ತ ಯೋಧ ಮಂಜುನಾಥ್ ಮನದಾಳದ ಮಾತು

ಸ್ವಾತಂತ್ರ್ಯ ಹೋರಾಟಗಾರರೂ ಸೈನಿಕರೇ..

Published:
Updated:
Deccan Herald

ಚಾಮರಾಜನಗರ: ‘ಇಂದು (ಆಗಸ್ಟ್‌ 15) ದೇಶವೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿದೆ. 72 ವರ್ಷಗಳಿಗೂ ಹಿಂದೆ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಶ್ರಮಿಸಿದ ಹೋರಾಟಗಾರರೂ ಅಂದು ಸೈನಿಕರೇ. ಅವರ ಶ್ರಮದ ಫಲವಾಗಿಯೇ ಈ ಕ್ಷಣ ಎಲ್ಲ ಸುಖಗಳನ್ನು ಅನುಭವಿಸುತ್ತಿದ್ದೇವೆ. ಅಂದಿನ ಹೋರಾಟಗಾರರನ್ನು ನೆನೆದು ಅವರಿಗೆ ಗೌರವ ಸಲ್ಲಿಸಿದರೆ, ರಾಷ್ಟ್ರಕ್ಕೇ ಗೌರವ ಸಲ್ಲಿಸಿದಂತೆ...’

–ಭಾರತೀಯ ಸೇನೆಯಲ್ಲಿ 22 ವರ್ಷಗಳ ಕಾಲ ಸೇವೆ ಸಲ್ಲಿಸಿ ಇತ್ತೀಚೆಗಷ್ಟೇ ನಿವೃತ್ತಿ ಹೊಂದಿ ತವರಿಗೆ ಬಂದಿರುವ ಯೋಧ ಆರ್‌.ಮಂಜುನಾಥ್‌ ಅವರ ನುಡಿಗಳಿವು.

ದೇಶವು 72ನೇ ಸ್ವಾತಂತ್ರೋತ್ಸವ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಅವರು ‘ಪ್ರಜಾವಾಣಿ’ಯೊಂದಿಗೆ ಮನಬಿಚ್ಚಿ ಮಾತನಾಡಿದರು. 

ಪಟ್ಟಣದ ದೇವಾಂಗ ಬೀದಿಯಲ್ಲಿರುವ ಅವರಿಗೆ, ತಂದೆ ರಂಗಸ್ವಾಮಿ, ತಾಯಿ ಮಂಗಳಮ್ಮ ಹಾಗೂ ಸ್ನೇಹಿತರು ಸೇನೆ ಸೇರಲು ಸ್ಫೂರ್ತಿ. ಸೇನೆಗೆ ಸೇರಿದ 10 ವರ್ಷಗಳ ನಂತರ ವಿವಾಹವಾಯಿತು. ಆ ಬಳಿಕ, ಪತ್ನಿ ಕೆ.ವಿ.ರಜನಿ ಕೂಡ ಅವರ ಸೈನ್ಯದ ಕನಸಿಗೆ ನೀರೆರೆದರು.

‘ಚಿಕ್ಕ ವಯಸ್ಸಿನಿಂದಲೂ ನನಗೆ ದೇಶದ ಬಗ್ಗೆ ಅಪಾರ ಒಲವು. ಸೇನೆಗೆ ಸೇರಬೇಕು ಎಂಬ ಅದಮ್ಯ ಬಯಕೆ ನನ್ನಲ್ಲಿ ಇತ್ತು. ಹಿಂದಿ ಕಲಿತರೆ ಸೈನ್ಯಕ್ಕೆ ಸೇರುವುದು ಸುಲಭ ಎಂಬುದು ನನಗೆ ಗೊತ್ತಿತ್ತು. ಹಾಗಾಗಿ, ಪ್ರಾಥಮಿಕ ಶಿಕ್ಷಣದ ಹಂತದಿಂದಲೇ ಹಿಂದಿ ಭಾಷೆಯ ಕಲಿಕೆಗಾಗಿ ಜಿಲ್ಲಾ ಕೇಂದ್ರದ ‘ಹಿಂದಿ ಪ್ರಚಾರ ಸಭೆ’ ಸೇರಿದೆ. ದೈಹಿಕ ಸ್ಥಿತಿ ಉತ್ತಮವಾಗಿರಲು ನಿತ್ಯ ವ್ಯಾಯಾಮ ಮಾಡುತ್ತಿದೆ’ ಎಂದು ಮಂಜುನಾಥ್‌ ಹೇಳಿದರು.

ದೊಡ್ಡ ಅಂಗಡಿ ಬೀದಿಯಲ್ಲಿದ್ದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹಾಗೂ ಸರ್ಕಾರಿ ಬಾಲಕರ ಶಾಲೆಯಲ್ಲಿ ಪ್ರಾಥಮಿಕ ಹಂತದ ವಿದ್ಯಾಭ್ಯಾಸ, ಜೆಎಸ್‌ಎಸ್‌ ಬಾಲಕರ ಶಾಲೆಯಲ್ಲಿ ಪ್ರೌಢಶಿಕ್ಷಣ ಹಾಗೂ ಪಿಯುಸಿ ಮುಗಿಸಿದರು.

‘1996ರಲ್ಲಿ ಮೈಸೂರಿನ ಮಹಾರಾಜ ಆಟದ ಮೈದಾನದಲ್ಲಿ ಭಾರತೀಯ ಸೇನೆಗೆ ಆಯ್ಕೆ ನಡೆಯುತ್ತಿತ್ತು. ಅಲ್ಲಿಗೆ ಹೋಗಿ ಪರೀಕ್ಷೆಯಲ್ಲಿ ಭಾಗವಹಿಸಿ ಆಯ್ಕೆಯಾದೆ. ಅದೇ ವರ್ಷ ಬೆಳಗಾವಿಯ ಮರಾಠ ಲೈಟ್‌ ಇನ್ಫೆಂಟ್ರಿ ರೆಜಿಮೆಂಟ್‌ನಲ್ಲಿ ಒಂದು ವರ್ಷ ತರಬೇತಿ ಪಡೆದೆ’ ಎಂದು ಮಾಹಿತಿ ನೀಡಿದರು.

‘ಸೈನಿಕರು ಯುದ್ಧಭೂಮಿಯಲ್ಲಿ ಭಾರತ ಮಾತೆಯನ್ನು ನೆನೆದು ಯುದ್ಧಕ್ಕೆ ಸಜ್ಜಾಗುತ್ತಾರೆ. ಆದರೆ, ಈ ಸಮಯದಲ್ಲಿ ಕುಟುಂಬ ವರ್ಗ, ಸ್ನೇಹಿತರು ನೆನಪಿಗೆ ಬರುವುದೇ ಇಲ್ಲ. ರಾಷ್ಟ್ರ ರಕ್ಷಣೆಯ ಜವಾಬ್ದಾರಿ ಎಲ್ಲ ಸೈನಿಕರ ಮನದಲ್ಲಿ ಇಮ್ಮಡಿಗೊಂಡಿರುತ್ತದೆ’ ಎಂದು ಹೇಳುವ ಅವರು, ‘ಸತತ 22 ವರ್ಷ ದೇಶ ಕಾಯುವ ಕೆಲಸ ಮಾಡಿರುವುದು ಸಂತಸ ತಂದಿದೆ’ ಎಂದು ಹೆಮ್ಮೆಯಿಂದ ಬೀಗುತ್ತಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !