ಮಂಡ್ಯದಲ್ಲಿ ಕುಣಿಯುತ್ತಿದೆ ಕುರುಡು ಕಾಂಚಾಣ? ಹಣದ ಜತೆ ಮಂಜುನಾಥಸ್ವಾಮಿ ಚಿತ್ರ

ಭಾನುವಾರ, ಏಪ್ರಿಲ್ 21, 2019
26 °C
ಚಿತ್ರ ಜಾಲ ತಾಣಗಳಲ್ಲಿ ಚಿತ್ರಗಳು ವೈರಲ್‌

ಮಂಡ್ಯದಲ್ಲಿ ಕುಣಿಯುತ್ತಿದೆ ಕುರುಡು ಕಾಂಚಾಣ? ಹಣದ ಜತೆ ಮಂಜುನಾಥಸ್ವಾಮಿ ಚಿತ್ರ

Published:
Updated:
Prajavani

ಮಂಡ್ಯ: ಮತದಾನಕ್ಕೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆ ಜಿಲ್ಲೆಯಾದ್ಯಂತ ಕುರುಡು ಕಾಂಚಾಣ ಕುಣಿದಾಡುತ್ತಿದೆ. ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿ ಅಭ್ಯರ್ಥಿ ಕೆ.ನಿಖಿಲ್‌ ಹಾಗೂ ಪಕ್ಷೇತರ ಅಭ್ಯರ್ಥಿ ಎ.ಸುಮಲತಾ ಬೆಂಬಲಿಗರು ಮತದಾರರಿಗೆ ಹಣ ಹಂಚಿಕೆ ಮಾಡುತ್ತಿರುವ ಛಾಯಾಚಿತ್ರ, ವಿಡಿಯೊ, ಆಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಬಹಿರಂಗ ಪ್ರಚಾರ ಅಂತ್ಯಗೊಂಡ ನಂತರ ಬುಧವಾರವಿಡೀ ಅಭ್ಯರ್ಥಿಗಳು ಮನೆಮನೆಗೆ ಭೇಟಿ ನೀಡಿ ಮತಯಾಚನೆಯಲ್ಲಿ ತೊಡಗಿದ್ದರು. ಮಾದರಿ ಮತಯಂತ್ರವನ್ನು ಜನರಿಗೆ ತೋರಿಸಿ ಮತದಾನದ ಪ್ರತ್ಯಾಕ್ಷಿಕೆ ನೀಡಿದರು. ಕ್ಷೇತ್ರದ ಮತದಾರರಲ್ಲದ ಮುಖಂಡರು, ಕಾರ್ಯಕರ್ತರು ಕ್ಷೇತ್ರ ತೊರೆದಿದ್ದಾರೆ. ಹೋಟೆಲ್‌ಗಳ ನಿಗಾ ಇಟ್ಟಿರುವ ಚುನಾವಣಾಧಿಕಾರಿಗಳು ಹೊರಗಿನ ಅಭ್ಯರ್ಥಿಗಳು ಇರುವ ಬಗ್ಗೆ ತಪಾಸಣೆ ನಡೆಸಿದ್ದಾರೆ. ಮಂಗಳವಾರ ರಾತ್ರಿ ಶಾಸಕ ಎಂ.ಶ್ರೀನಿವಾಸ್‌ ಮನೆಗೆ ಭೇಟಿ ನೀಡಿದ್ದ ಚುನಾವಣಾಧಿಕಾರಿಗಳು ಪರಿಶೀಲನೆ ನಡೆಸಿದರು.

ಹಣ, ಪ್ರಮಾಣ

ಜೆಡಿಎಸ್‌ ಅಭ್ಯರ್ಥಿ ಕೆ.ನಿಖಿಲ್‌ ಬೆಂಬಲಿಗರು ಮತದಾರರಿಗೆ ₹ 2 ಸಾವಿರ ಹಣದ ಜೊತೆಗೆ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವರ ಚಿತ್ರ ವಿತರಣೆ ಮಾಡುತ್ತಿರುವ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಜೆಡಿಎಸ್‌ಗೆ ಮತ ಹಾಕುವಂತೆ ಮಂಜುನಾಥನ ಮೇಲೆ ಆಣೆ, ಪ್ರಮಾಣ ಮಾಡಿಸಿಕೊಳ್ಳುತ್ತಿದ್ದಾರೆ. ಚುನಾವಣಾಧಿಕಾರಿಗಳ ಹದ್ದಿನ ಕಣ್ಣಿನ ನಡುವೆಯೂ ಬೂತ್‌ ಮಟ್ಟದಲ್ಲಿ ಹಣ ಹಂಚಿಕೆ ಮಾಡಲಾಗಿದೆ ಎಂಬ ಸುದ್ದಿ ಕುತೂಹಲಕ್ಕೆ ಕಾರಣವಾಗಿದೆ.

ರಾಕ್‌ಲೈನ್‌ ಕೊಟ್ಟರು 

ಪಕ್ಷೇತರ ಅಭ್ಯರ್ಥಿ ಸುಮಲತಾ ಪರವಾಗಿ ಚಿತ್ರ ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಹಣ ಹಂಚಿಕೆ ಮಾಡುತ್ತಿದ್ದಾರೆ ಎಂಬ ಆಡಿಯೊ ಬಹಿರಂಗಗೊಂಡಿದೆ. ಜೆಡಿಎಸ್‌ ಪಕ್ಷದ ಫೇಸ್‌ಬುಕ್‌ ಪುಟದಲ್ಲಿ ಈ ವಿಡಿಯೊ ಬಹಿರಂಗವಾಗಿದ್ದು ನಂತರ ವಿವಿಧೆಡೆ ಹರಿದಾಡಿದೆ.

ಆಡಿಯೊದಲ್ಲಿ ಮಾಜಿ ನಗರಸಭೆ ಸದಸ್ಯ ಶಿವಪ್ರಕಾಶ್‌ ಬಾಬು ಹಾಗೂ ಸುಮಲತಾ ಬೆಂಬಲಿಗ ಸೋಮಣ್ಣ ಅವರ ನಡುವೆ ಸಂಭಾಷಣೆ ನಡೆದಿದೆ.

ಸೋಮಣ್ಣ ಮಾತನಾಡುತ್ತಾ, ರಾಕ್‌ಲೈನ್‌ ವೆಂಕಟೇಶ್‌ ಕೆ.ಆರ್‌.ಪೇಟೆ ತಾಲ್ಲೂಕಿಗೆ ಈಗತಾನೇ ‘ಒಂದು ಕೊಟ್ಟರು’ ಎಂದು ಹೇಳುತ್ತಾರೆ. ಆದರೆ ₹ 1 ಲಕ್ಷ ಕೊಟ್ಟರೋ, ₹ 1 ಕೋಟಿ ಕೊಟ್ಟರೋ ಎಂಬ ಬಗ್ಗೆ ಸ್ಪಷ್ಟವಿಲ್ಲ.

ಸುಮಲತಾ ತಮ್ಮ ಫೇಸ್‌ಬುಕ್ ಪುಟದಲ್ಲಿ ‘ಮತಚಲಾವಣೆ ಮಾಡಲು ಮುಂಬೈನಿಂದ ಜಿಲ್ಲೆಯ 4,500 ಜನರು ಬರುತ್ತಿದ್ದಾರೆ. ಅವರಿಗೆ ನನ್ನ ವಿಶೇಷ ವಂದನೆಗಳು’ ಎಂಬ ಸಂದೇಶ ಹಾಕಿದ್ದಾರೆ.

ಮದ್ದೂರು ತಾಲ್ಲೂಕು ದೊಡ್ಡರಸಿನಕೆರೆ ಮತಗಟ್ಟೆ ವ್ಯಾಪ್ತಿಯ ಮತದಾರರ ಪಟ್ಟಿಯಲ್ಲಿ ಸುಮಲತಾ ಹೆಸರು ಇದೆ. ನಿಖಿಲ್‌ ಹೆಸರು ರಾಮನಗರ ಜಿಲ್ಲೆ, ಮಾಗಡಿ ಕ್ಷೇತ್ರದಲ್ಲಿದೆ.

2,046 ಮತಗಟ್ಟೆ

ಕೆ.ಆರ್‌.ನಗರ ತಾಲ್ಲೂಕು ಸೇರಿ ಕ್ಷೇತ್ರದಾದ್ಯಂತ 2,046 ಮತಗಟ್ಟೆ ಸ್ಥಾಪಿಸಲಾಗಿದೆ. ಆಯಾ ತಾಲ್ಲೂಕು ಕೇಂದ್ರಗಳಲ್ಲಿ 8 ಮಸ್ಟರಿಂಗ್‌ ಕೇಂದ್ರ ತೆರೆಯಲಾಗಿದ್ದು ಚುನಾವಣಾ ಕರ್ತವ್ಯ ಸಿಬ್ಬಂದಿ ಅಗತ್ಯ ಪರಿಕರಗಳೊಂದಿಗೆ ತಂತಮ್ಮ ಮತಗಟ್ಟೆಗಳಿಗೆ ತೆರಳಿದರು. ಕುತೂಹಲದ ಕಣವಾಗಿರುವ ಹಿನ್ನೆಲೆಯಲ್ಲಿ ಬಿಗಿ ಬಂದೋಬಸ್ತ್‌ ಏರ್ಪಡಿಸಲಾಗಿದೆ. 9 ಕೆಎಸ್‌ಆರ್‌ಪಿ, 7 ಸಿಆರ್‌ಪಿಎಫ್‌ ತುಕಡಿಯನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ.

ಸಿಂಗಪುರಕ್ಕೆ ಸುಮಲತಾ: ಟಿಕೆಟ್‌ ಚಿತ್ರ ವೈರಲ್‌

ಮತದಾನ ನಡೆದ ಮಾರನೇ ದಿನ ಏ.19ರಂದು  ಎ.ಸುಮಲತಾ ಹಾಗೂ ಪುತ್ರ ಅಭಿಷೇಕ್‌ ಗೌಡ ಸಿಂಗಪುರ ಪ್ರವಾಸಕ್ಕೆ ತೆರಳಲಿದ್ದಾರೆ. ಅದಕ್ಕೆ ಅವರು ವಿಮಾನ ಟಿಕೆಟ್‌ ಕಾಯ್ದಿರಿಸಿರುವ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆದರೆ ಅದನ್ನು ಸುಮಲತಾ ತಿರಸ್ಕರಿಸಿದ್ದಾರೆ.

‘ಮುಖ್ಯಮಂತ್ರಿ ಆದಿಯಾಗಿ ಜೆಡಿಎಸ್‌ ಮುಖಂಡರು ಮೊದಲಿನಿಂದಲೂ ಅಪಪ್ರಚಾರವನ್ನೇ ಮಾಡಿಕೊಂಡು ಬಂದರು. ಈಗಲೂ ಅದನ್ನೇ ಮುಂದುವರಿಸಿದ್ದಾರೆ. ನಾನು ಸಿಂಗಪುರವನ್ನು ನೋಡಿಯೇ ಇಲ್ಲವೇ? ಚುನಾವಣೆ ಮುಗಿದ ನಂತರವೇ ಅಲ್ಲಿಗೆ ಹೋಗಬೇಕಾದ ಅಗತ್ಯವಿಲ್ಲ’ ಎಂದು ಸುಮಲತಾ ಹೇಳಿದರು.

ಬರಹ ಇಷ್ಟವಾಯಿತೆ?

 • 8

  Happy
 • 4

  Amused
 • 2

  Sad
 • 2

  Frustrated
 • 16

  Angry

Comments:

0 comments

Write the first review for this !