ಅರಮನೆ ಮೈದಾನ ಮೋದಿಮಯ

ಶುಕ್ರವಾರ, ಏಪ್ರಿಲ್ 26, 2019
24 °C

ಅರಮನೆ ಮೈದಾನ ಮೋದಿಮಯ

Published:
Updated:
Prajavani

ಬೆಂಗಳೂರು: ಎಲ್ಲಿ ನೋಡಿದರೂ ಮೋದಿಯ ಮುಖ, ಕಿವಿಗೆ ರಾಚುತ್ತಿದ್ದ ‘ಮೋದಿ ಮೋದಿ’ ಎಂಬ ಘೋಷಣೆ... ಹೀಗೆ ಅರಮನೆ ಮೈದಾನ ಶನಿವಾರ ಸಂಪೂರ್ಣ ಮೋದಿಮಯವಾಗಿತ್ತು.

‘ಮೋದಿ ಮತ್ತೊಮ್ಮೆ’ ಎಂಬ ಸಾಲುಗಳಿರುವ ಟೀಶರ್ಟ್‌, ಅದರ ಮೇಲೆ ಮೋದಿ ಮತ್ತು ಕಮಲದ ಚಿತ್ರವಿರುವ ಬ್ಯಾಡ್ಜ್‌, ಮೋದಿ ಮುಖವಾಡ, ಕೇಸರಿ ಟೋಪಿ ಧರಿಸಿದ್ದ ಮೋದಿ ಅಭಿಮಾನಿಗಳು ಮಧ್ಯಾಹ್ನ 3 ಗಂಟೆಯಿಂದಲೇ ತಂಡೋಪ ತಂಡವಾಗಿ ಮೈದಾನಕ್ಕೆ ಬರಲಾರಂಭಿಸಿದರು. ಸಂಜೆಯ ಹೊತ್ತಿಗೆ ಸಾವಿರ ಸಾವಿರ ಸಂಖ್ಯೆಯಲ್ಲಿ ಜಮಾಯಿಸಿದರು.

ಮೈದಾನ ಪ್ರವೇಶಿದ ಕೂಡಲೇ ಬಿಜೆಪಿ ಸ್ವಯಂ ಸೇವಕರು ಉಚಿತವಾಗಿ ಕೇಸರಿ ಟೋಪಿ, ಕಮಲದ ಚಿಹ್ನೆ ಇರುವ ಕೀ ಬಂಚ್‌, ಬ್ಯಾಡ್ಜ್ ಮತ್ತು ‌ಪೆನ್‌ಗಳನ್ನು ವಿತರಿಸಿದರು.

ಬಿಸಿಲಿನ ಧಗೆಯ ನಡುವೆ ಬಂದ ಜನರಿಗಾಗಿ ಅಲ್ಲಲ್ಲಿ ನೀರಿನ ಪ್ಯಾಕೆಟ್‌ ಇರುವ ಚೀಲಗಳನ್ನು ಇಡಲಾಗಿತ್ತು. ಜನ ಮುಗಿಬಿದ್ದು ನೀರಿನ ಪ್ಯಾಕೆಟ್‌ಗಳನ್ನು ಎತ್ತಿಕೊಂಡು ಆಸನಗಳತ್ತ ಸಾಗಿದರು.

ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ಗ್ರಾಮಾಂತರ, ಕೋಲಾರ ಹಾಗೂ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ತಂಡೋಪತಂಡವಾಗಿ ಬಸ್‌ಗಳು, ಮಿನಿಬಸ್‌ಗಳಲ್ಲಿ ಜನರು ಬಂದು ಸೇರಿಕೊಂಡರು. ಸಂಜೆಯ ಹೊತ್ತಿಗೆ ಮೈದಾನ ಭರ್ತಿ ಆಯಿತು.

ಪ್ರಧಾನಿ ನರೇಂದ್ರ ಮೋದಿ ಅವರು ನಿಗದಿತ ಸಮಯಕ್ಕಿಂತ ಒಂದು ಗಂಟೆ ತಡವಾಗಿ 7.40ಕ್ಕೆ ವೇದಿಕೆಗೆ ಬಂದರು. ಮೋದಿ ಭಾಷಣ ಆರಂಭವಾಗುತ್ತಿ‌‌ದ್ದಂತೆಯೇ ಹಿಂದಿನ ಆಸನಗಳಲ್ಲಿ ಕುಳಿತವರಲ್ಲಿ ಹಲವರು ಹೊರಡಲು ಸಿದ್ಧವಾದರು. ಕಾರ್ಯಕ್ರಮ ಮುಗಿದ ಕೂಡಲೇ ರಸ್ತೆಯಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಲಿದೆ ಎಂಬ ಆತಂಕದಿಂದ ಜಾಗ ಖಾಲಿ ಮಾಡಲು ಆರಂಭಿಸಿದರು.

ಭಾಷಣ ಮುಗಿಯುವಷ್ಟರಲ್ಲಿ ಹಿಂದಿನ ನೂರಾರು ಕುರ್ಚಿಗಳು ಖಾಲಿ ಆದವು.

ಬಿಗಿ ಭದ್ರತೆ: ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಬಿಗಿ ಭದ್ರತೆ ಕಲ್ಪಿಸಲಾಗಿತ್ತು. ಗಣ್ಯರು, ಅತಿಗಣ್ಯರು ಮತ್ತು ಸಾಮಾನ್ಯ ಜನರಿಗೆ ಪ್ರತ್ಯೇಕ ಪ್ರವೇಶದ್ವಾರಗಳನ್ನು ವ್ಯವಸ್ಥೆ ಮಾಡಲಾಗಿತ್ತು. ಎಲ್ಲೆಡೆ ಲೋಹ ಶೋಧಕ ಉಪಕರಣ ಅಳವಡಿಸಲಾಗಿತ್ತು. ಎಲ್ಲರನ್ನೂ ತಪಾಸಣೆ ಮಾಡಿಯೇ ಒಳಬಿಡಲಾಯಿತು.

ದ್ವಿಚಕ್ರ ವಾಹನ ಮತ್ತು ಕಾರುಗಳ ನಿಲುಗಡೆಗೂ ಪ್ರತ್ಯೇಕ ಸ್ಥಳ ನಿಗದಿ ಮಾಡಲಾಗಿತ್ತು. ಎರಡೂ ಕಡೆ ಅಗ್ನಿಶಾಮಕ ವಾಹನಗಳನ್ನು ಸಜ್ಜಾಗಿನಿಲ್ಲಿಸಲಾಗಿತ್ತು.

ಟ್ರಾಫಿಕ್ ಜಾಮ್
ಅರಮನೆ ಮೈದಾನದ ಅಕ್ಕಪಕ್ಕದ ರಸ್ತೆಗಳಲ್ಲಿ ಸಂಜೆ 4ರಿಂದಲೇ ವಾಹನಗಳ ನಿಧಾನಗತಿ ಸಂಚಾರ ಇತ್ತು. ಕೆಂ‍ಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೋದಿ ಅವರು ವೇದಿಕೆಗೆ ಬರುವ ಮತ್ತು ಭಾಷಣ ಮುಗಿಸಿ ಹೋಗುವ ಸಂದರ್ಭದಲ್ಲಿ ಮೈದಾನದ ಸುತ್ತಮುತ್ತಲ ರಸ್ತೆಗಳಲ್ಲಿ ಸಂಚಾರ ತಡೆಯಲಾಗಿತ್ತು. ಕಿಲೋ ಮೀಟರ್‌ಗೂ ಹೆಚ್ಚು ದೂರದವರೆಗೆ ವಾಹನಗಳು ಸಾಲುಗಟ್ಟಿ ನಿಂತವು. ಕೆಲ ಹೊತ್ತಿನ ಬಳಿಕ ಸಹಜ ಸ್ಥಿತಿಗೆ ಮರಳಿತು.

ಮೊಬೈಲ್ ಟಾರ್ಚ್ ಹಿಡಿದು ಸ್ವಾಗತ
ನರೇಂದ್ರ ಮೋದಿ ಅವರು ವೇದಿಕೆಗೆ ಬಂದ ಕೂಡಲೇ ಹರ್ಷೋದ್ಘಾರ ಮುಗಿಲು ಮುಟ್ಟಿತು. ಎಲ್ಲರೂ ತಮ್ಮ ಮೊಬೈಲ್‌ನಲ್ಲಿ ಟಾರ್ಚ್ ಆನ್ ಮಾಡಿ ಹಿಡಿಯುವ ಮೂಲಕ ಸ್ವಾಗತ ಕೋರಿದರು.

ಭಾಷಣದ ನಡುವೆ ಆಗಾಗ ‘ಮೋದಿ ಮೋದಿ’ ಎಂಬ ಘೋಷಣೆಗಳು ಮೊಳಗಿದವು. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ತೇಜಸ್ವಿ ಸೂರ್ಯ ಭಾಷಣದ ವೇಳೆ ಮತ್ತು ನಾಯಕರು ಅವರ ಹೆಸರು ಪ್ರಸ್ತಾಪಿಸಿದಾಗ ‘ಸೂರ್ಯ ಸೂರ್ಯ’ ಎಂಬ ಘೋಷಣೆಗಳು ಹೆಚ್ಚಾಗುತ್ತಿದ್ದವು.

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 1

  Sad
 • 0

  Frustrated
 • 4

  Angry

Comments:

0 comments

Write the first review for this !