ಮೌಳಂಗಿ ಇಕೋ ಪಾರ್ಕ್

ಶನಿವಾರ, ಮಾರ್ಚ್ 23, 2019
34 °C

ಮೌಳಂಗಿ ಇಕೋ ಪಾರ್ಕ್

Published:
Updated:
Prajavani

ಅದೊಂದು ಪಶ್ಚಿಮ ದಿಕ್ಕಿನಿಂದ ಪೂರ್ವಕ್ಕೆ ಹರಿಯುವ ನದಿ. ಅದರ ದಡದಲ್ಲೇ ಒಂದು ಪಾರ್ಕ್‌. ಅಲ್ಲಿ ಮಕ್ಕಳ ಮನರಂಜನೆಗೆ ಏನು ಕಡಿಮೆ ಇಲ್ಲ. ನದಿಯಲ್ಲಿ ಜಾರ್ವಿನ್, ಬೋಟಿಂಗ್, ಕಾಯ್ಕಿಂಗ್‌ನಲ್ಲಿ ಹೋಗುವುದೇ ಒಂದು ರೋಮಾಂಚನ. ಅಲ್ಲಿಗೆ ಬರುವ ಪಕ್ಷಿಗಳನ್ನು ನೋಡುವುದೆ ಒಂದು ಖುಷಿ.

ಇದು ಉತ್ತರ ಕನ್ನಡ ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಒಂದಾದ ಮೌಳಂಗಿ ಇಕೊ ಪಾರ್ಕ್‌. ದಾಂಡೇಲಿಯಿಂದ 7 ಕಿ.ಮೀ ದೂರದಲ್ಲಿದೆ. ಕಾಳಿ ನದಿಯ ದಂಡೆಯಲ್ಲಿದೆ. ಇಲ್ಲಿ ಮಕ್ಕಳಿಗೆ, ಯುವಕರಿಗೆ ಮನರಂಜನೆಯನ್ನು ಪಡೆದುಕೊಳ್ಳಬಹುದಾದಂತಹ- ಜಲ ಚಟುವಟಿಕೆಗಳಾದ ಬೋಟಿಂಗ್, ಕಾಯ್ಕಿಂಗ್, ಬೇಸಿಕ್ ರ‍್ಯಾಫ್ಟಿಂಗ್, ಶಾರ್ಟ್‌ ರ‍್ಯಾಫ್ಟಿಂಗ್ ಇವುಗಳಿಗೆ ಪ್ರತ್ಯೇಕವಾದ ಶುಲ್ಕ ಮಾಡಲಾಗಿದೆ.

ಥ್ರಿಲ್ಲಿಂಗ್ ರ‍್ಯಾಫ್ಟಿಂಗ್

ಕಾಳಿನದಿಯಲ್ಲಿ ರ‍್ಯಾಫ್ಟಿಂಗ್ ಮಾಡುವುದು ಇಲ್ಲಿನ ವಿಶೇಷ. ಪ್ರತಿ ಬೋಟ್‌ನಲ್ಲಿ ಒಂದೊಂದು ತಂಡಗಳನ್ನು ರ‍್ಯಾಫ್ಟಿಂಗ್‌ಗೆ ಕರೆದೊಯ್ಯುತ್ತಾರೆ. ಪ್ರತಿಯೊಬ್ಬ ಪ್ರವಾಸಿಗನಿಗೂ, ಜೀವರಕ್ಷಕ ಕವಚಗಳನ್ನು ತೊಡಿಸಿಯೇ ರ‍್ಯಾಫ್ಟಿಂಗ್‌ಗೆ ಅವಕಾಶ ಕಲ್ಪಿಸಲಾಗುತ್ತದೆ. ಗುಂಪಿನಲ್ಲಿ ಪ್ರವಾಸ ಮಾಡುವವರಿಗೆ ಇದು ಅತ್ಯಂತ ಖುಷಿಕೊಡುವ ಚಟುವಟಿಕೆ.

‌ಪ್ರತಿ ವರ್ಷ ಅಕ್ಟೋಬರ್‌ನಿಂದ ಮೇ ತಿಂಗಳವರೆ ಜಂಗಲ್ ಲಾಡ್ಜ್‌ನಿಂದ ರ‍್ಯಾಫ್ಟಿಂಗ್ ಆಯೋಜಿಸುತ್ತಾರೆ. ಗಣೇಶಗುಡಿಯ ಬಾಡಗುಂದದಿಂದ ಮೌಳಂಗಿವರೆಗೆ ಅಂದರೆ 9 ಕಿ.ಮೀ ವರೆಗೆ ರ‍್ಯಾಫ್ಟಿಂಗ್ ಮಾಡಬಹದು.

ಮಕ್ಕಳಿಗೆ ಮನರಂಜನೆ

ದೊಡ್ಡವರಿಗೆ ಕಾಯ್ಕಿಂಗ್, ರ‍್ಯಾಫ್ಟಿಂಗ್‌ನಂತಹ ಸಾಹಸ ಪ್ರಧಾನ ಚಟುವಟಿಕೆಗಳು ಮೀಸಲಾಗಿದ್ದರೆ, ಮಕ್ಕಳಿಗೆ ಮಲ್ಟಿಪ್ಲೇ, ಜಂಪಿಂಗ್, ಟ್ರ್ಯಾಪೋಲಿಂಗ್, ಹಾರ್ನಬಿಲ್ ಮುಖದ ಜಾರಗುಂಡಿ, ಜೋಕಾಲಿಯಂತಹ ಚಟುವಟಿಕೆಗಳಿವೆ. ಅದಕ್ಕಾಗಿ ಒಂದಷ್ಟು ಮಾದರಿಗಳನ್ನು ಇಟ್ಟಿದ್ದಾರೆ.

ಈ ಪಾರ್ಕ್‌ನಲ್ಲಿ ಬೇಸಿಗೆಯಲ್ಲೂ ದಿನವಿಡೀ ಆಟವಾಡಿದರೂ ದಣಿಯದಂತಹ ವಾತಾವರಣವಿರುತ್ತದೆ. ಹೀಗಾಗಿ ಕುಟುಂಬದವರು ಮಕ್ಕಳನ್ನು ಕರೆದೊಯ್ಯಬಹುದು.

ಪಕ್ಷಿಗಳ ವೀಕ್ಷಣೆ

ಆಟವಾಡುತ್ತಾ, ಸಾಹಸಮಯ ಚಟುವಟಿಕೆ ಕೈಗೊಳ್ಳುತ್ತ ಸುತ್ತಲಿನ ಪರಿಸರದಲ್ಲಿ ವೈವಿಧ್ಯಮಯ ಹಕ್ಕಿಗಳನ್ನು ನೋಡಬಹುದು. ವಿಶೇಷವಾಗಿ ಹಾರ್ನ್‌ಬಿಲ್‌, ಮರಕುಟಿಗ, ಗೂಗಿ, ಕಾಡು ಕೋಳಿಯಂತಹ ಪಕ್ಷಿಗಳನ್ನು ನೋಡಬಹುದು. ಒಂದೊಂದು ಕಾಲದಲ್ಲಿ ಒಂದೊಂದು ಪಕ್ಷಿಗಳು ಹೆಚ್ಚಾಗಿ ಕಾಣಿಸುತ್ತವೆ. ಹಕ್ಕಿಗಳಿಗಾಗಿಯೇ ಪಾರ್ಕ್‌ನಲ್ಲಿ ವೈವಿಧ್ಯಮಯ ಹಣ್ಣಿನ ಗಿಡಗಳನ್ನು ಬೆಳೆಸಲಾಗಿದೆ. 

ಪ್ರವಾಸಿಗರ ದಂಡು

ಇಕೊ ಪಾರ್ಕ್‌ನಲ್ಲಿ ಅಕ್ಟೋಬರ್‌– ಮೇ ತಿಂಗಳ ನಡುವೆ ಪ್ರವಾಸಿಗರ ಹೆಚ್ಚು. ಬೇಸಿಗೆ, ಸಂಕ್ರಾಂತಿ, ಹೋಳಿ ಹಬ್ಬಗಳ ಸಂದರ್ಭದಲ್ಲಿ ಬೇರೆ ಬೇರೆ ರಾಜ್ಯ, ಜಿಲ್ಲೆಗಳಿಂದ ಸುಮಾರು 6 ರಿಂದ 8 ಸಾವಿರ ಹಾಗೂ ರಜಾ ದಿನಗಳಲ್ಲಿ 1500 ರಿಂದ 2 ಸಾವಿರದವರೆಗೆ ಪ್ರವಾಸಿಗರು ಬರುತ್ತಾರೆ. ಈ ಇಕೊ ಪಾರ್ಕ್‌ನಲ್ಲಿ ಹೋಟೆಲ್ ವ್ಯವಸ್ಥೆ ಇಲ್ಲ. ಹಾಗಾದರೆ, ಪ್ರವಾಸಿಗರು ಬರುವಾಗ ಊಟದ ವ್ಯವಸ್ಥೆ ಮಾಡಿಕೊಂಡು ಬಂದರೆ ಸೂಕ್ತ.

ಆಟವಾಡಿ ದಣಿದರೆ ವಿಶ್ರಾಂತಿ ಪಡೆಯಲು ಆಸನ ವ್ಯವಸ್ಥೆಗಳಿವೆ. ಅಲ್ಲಲ್ಲೇ ಪ್ಯಾರಾಗೊಲ, ರ‍್ಯಾಫ್ಟಿಂಗ್, ಪ್ಲಿಂಟ್ ಸ್ಟೋನ್, ಸುಂದರ ಪರಿಸರ ಮತ್ತು ಅರಣ್ಯ ಸಂಪತ್ತು. ಒಟ್ಟಾರೆಯಾಗಿ ಹೇಳಬೇಕೆಂದರೆ ಈ ನಿಸರ್ಗ ರಮಣೀಯದಲ್ಲಿ, ನಿಸರ್ಗ ಸಹಿತವಾದ ಮೌಳಂಗಿ ಇಕೊ ಪಾರ್ಕ್‌ ನೋಡುವುದೆ ಒಂದು ಸೊಗಸು.

ಪ್ರವೇಶ ಶುಲ್ಕ

ಇಕೊ ಪಾರ್ಕ್‌ ಪ್ರವೇಶಕ್ಕೆ ಶುಲ್ಕವಿದೆ. ಪ್ರತಿ ಪ್ರವಾಸಿಗನಿಗೆ ₹10  ಪ್ರವೇಶ ಶುಲ್ಕ. ವಾಹನಗಳಿಗೆ-ಬಸ್‌ಗೆ ₹50, ಕಾರ್‌ಗೆ ₹20 ಬೈಕ್‌ಗೆ ₹10 ರೂ ಶುಲ್ಕವಿದೆ. ಮುಂಜಾನೆ 8 ರಿಂದ ಸಂಜೆ 6 ರವರೆಗೆ ಪಾರ್ಕ್‌ಗೆ ಪ್ರವೇಶವಿದೆ.

ಚಿತ್ರಗಳು: ಲೇಖಕರವು

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !