ಹಾಕಿ: ಭಾರತಕ್ಕೆ ಗೆಲುವು

7

ಹಾಕಿ: ಭಾರತಕ್ಕೆ ಗೆಲುವು

Published:
Updated:

ಮೆಲ್ಬರ್ನ್‌ : ಯುವ ಆಟಗಾರ ಅಫನ್‌ ಯೂಸುಫ್ ಅವರ ಎರಡು ಗೋಲುಗಳ ನೆರವಿನಿಂದ ಭಾರತ ಪುರುಷರ ಹಾಕಿ ತಂಡ ಮಂಗಳವಾರ ವಿಶ್ವ ಚಾಂಪಿಯನ್‌ ಆಸ್ಟ್ರೇಲಿಯಾ ತಂಡವನ್ನು ಮಣಿಸಿದೆ.

ಆಸ್ಟ್ರೇಲಿಯಾ ವಿರುದ್ಧದ ಎರಡು ಪಂದ್ಯಗಳ ಸರಣಿಯಲ್ಲಿ ಭಾರತ ತಂಡ ಮೊದಲ ಪಂದ್ಯವನ್ನು 3–2 ಗೋಲುಗಳಲ್ಲಿ ಗೆದ್ದುಕೊಂಡಿದೆ.

ಯೂಸುಫ್‌ 19ನೇ ನಿಮಿಷದಲ್ಲಿ ಮೊದಲ ಫೀಲ್ಡ್‌ ಗೋಲು ದಾಖಲಿಸಿದರು, ಕೆಲವೇ ನಿಮಿಷದಲ್ಲಿ ಇನ್ನೊಂದು ಫೀಲ್ಡ್‌ ಗೋಲು ಗಳಿಸುವ ಮೂಲಕ 2–0 ಗೋಲುಗಳ ಮುನ್ನಡೆ ತಂದುಕೊಟ್ಟರು. ವಿ.ಆರ್‌ ರಘುನಾಥ್‌ 44ನೇ ನಿಮಿಷದಲ್ಲಿ ಚೆಂಡನ್ನು ಗುರಿ ಸೇರಿಸಿದರು.

ಆಸ್ಟ್ರೇಲಿಯಾದ ಮ್ಯಾಥ್ಯೂ ವಿಲ್ಲಿಸ್‌ (36ನೇ ನಿ.) ಹಾಗೂ ಟ್ರೆಂಟ್‌ ಮಿಟನ್‌ (43ನೇ ನಿ.) ಗೋಲು ದಾಖಲಿಸಿದರು.

ಮೊದಲ ಕ್ವಾರ್ಟರ್‌ನಲ್ಲಿ ಎರಡೂ ತಂಡಗಳು ಗೋಲು ದಾಖಲಿಸಲು ವಿಫಲವಾದವು. ಆದರೆ ಎರಡನೇ ಕ್ವಾರ್ಟರ್‌ನಲ್ಲಿ ಯೂಸುಫ್‌ ಭಾರತ ತಂಡಕ್ಕೆ ಆರಂಭಿಕ ಮುನ್ನಡೆ ತಂದುಕೊಟ್ಟರು.

ವಿರಾಮದ ವೇಳೆಗೆ ಭಾರತ ಎರಡು ಗೋಲುಗಳ ಮುನ್ನಡೆ ಹೊಂದಿದ್ದರಿಂದ ಒತ್ತಡ ರಹಿತವಾಗಿ ಆಡಿತು.

ದ್ವಿತೀಯಾರ್ಧದಲ್ಲಿ ಭಾರತ ತಂಡ ಆಸ್ಟ್ರೇಲಿಯಾಕ್ಕೆ ಪ್ರಬಲ ಪೈಪೋಟಿ ನೀಡಿತು. ಆದರೆ ಒತ್ತಡವನ್ನು ಮೆಟ್ಟಿ ನಿಂತ ವಿಶ್ವ ಚಾಂಪಿಯನ್‌ ತಂಡದ ಆಟಗಾರರು  ಸಮಬಲ ಸಾಧಿಸಿದರು.

ಕೇವಲ ಒಂದು ನಿಮಿಷದ ಅಂತರದಲ್ಲೇ ಸಿಕ್ಕ ಪೆನಾಲ್ಟಿ ಕಾರ್ನರ್‌ ಅವಕಾಶದಲ್ಲಿ ಗೋಲು ಗಳಿಸಿದ ರಘುನಾಥ್‌ ಆಸ್ಟ್ರೇಲಿಯಾಕ್ಕೆ ತಿರುಗೇಟು ನೀಡುವಲ್ಲಿ ಯಶಸ್ವಿಯಾದರು.

ಅಂತಿಮ ಕ್ವಾರ್ಟರ್‌ನಲ್ಲಿ ಪಂದ್ಯದ ಮೇಲಿನ ಹಿಡಿತ ಬಿಗಿಗೊಳಿಸಿದ ಭಾರತ ತಂಡ ಆತಿಥೇಯ ತಂಡಕ್ಕೆ ಗೋಲು ಗಳಿಸುವ ಅವಕಾಶ ನೀಡಲಿಲ್ಲ. ಸರಣಿಯಲ್ಲಿ 1–0ರಲ್ಲಿ ಮುನ್ನಡೆ ಪಡೆದುಕೊಂಡಿದೆ.

ಬುಧವಾರ ಭಾರತ ತಂಡ ಎರಡನೇ ಪಂದ್ಯ ಆಡಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry