ಜರ್ಮನಿಗೆ ಸಾಟಿಯಾಗದ ಗಿನಿ

ಮಂಗಳವಾರ, ಜೂನ್ 25, 2019
26 °C
ಫಿಫಾ 17 ವರ್ಷದೊಳಗಿನವರ ವಿಶ್ವಕಪ್‌ ಫುಟ್‌ಬಾಲ್‌

ಜರ್ಮನಿಗೆ ಸಾಟಿಯಾಗದ ಗಿನಿ

Published:
Updated:
ಜರ್ಮನಿಗೆ ಸಾಟಿಯಾಗದ ಗಿನಿ

ಕೊಚ್ಚಿ: ಯುರೋಪ್‌ನ ಫುಟ್‌ಬಾಲ್‌ ಶಕ್ತಿ ಕೇಂದ್ರ ಎನಿಸಿರುವ ಜರ್ಮನಿ ತಂಡದವರು ಶುಕ್ರವಾರ ಫಿಫಾ 17 ವರ್ಷದೊಳಗಿನವರ ವಿಶ್ವಕಪ್‌ ಫುಟ್‌ಬಾಲ್‌ನಲ್ಲಿ 16ರ ಘಟ್ಟಕ್ಕೆ ಲಗ್ಗೆ ಇಟ್ಟಿದ್ದಾರೆ.

ಜವಾಹರಲಾಲ್‌ ನೆಹರೂ ಕ್ರೀಡಾಂಗಣದಲ್ಲಿ ನಡೆದ ‘ಸಿ’ ಗುಂಪಿನ ತನ್ನ ಕೊನೆಯ ಪಂದ್ಯದಲ್ಲಿ ಜರ್ಮನಿ 3–1 ಗೋಲುಗಳಿಂದ ಗಿನಿ ತಂಡವನ್ನು ಪರಾಭವಗೊಳಿಸಿತು.

ಪ್ರೀ ಕ್ವಾರ್ಟರ್‌ ಫೈನಲ್‌ನಲ್ಲಿ ಜರ್ಮನಿ ತಂಡ ‘ಎ’ ಗುಂಪಿನಲ್ಲಿ ಎರಡನೇ ಸ್ಥಾನ ಗಳಿಸಿದ ಕೊಲಂಬಿಯಾ ವಿರುದ್ಧ ಸೆಣಸಲಿದೆ. ಈ ಹೋರಾಟ ಅಕ್ಟೋಬರ್‌ 16 ರಂದು ನವದೆಹಲಿಯಲ್ಲಿ ಆಯೋಜನೆಯಾಗಿದೆ.

ಹಿಂದಿನ ಪಂದ್ಯದಲ್ಲಿ 0–4ಗೋಲುಗಳಿಂದ ಇರಾನ್‌ ವಿರುದ್ಧ ಆಘಾತ ಅನುಭವಿಸಿದ್ದ ಜರ್ಮನಿ ತಂಡ ಈ ಪಂದ್ಯದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆಯೊಂದಿಗೆ ಕಣಕ್ಕಿಳಿದಿತ್ತು.

ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಅಣಿಯಾದ ತಂಡಕ್ಕೆ 8ನೇ ನಿಮಿಷದಲ್ಲಿ ಯಶಸ್ಸು ಸಿಕ್ಕಿತು. ಜಾನ್‌ ಫಿಯೆಟ್‌ ಆರ್ಪ್‌ ಗೋಲು ದಾಖಲಿಸಿ ತಂಡದ ಮುನ್ನಡೆಗೆ ಕಾರಣರಾದರು.

ಈ ಖುಷಿ ಎದುರಾಳಿ ಪಾಳಯದಲ್ಲಿ ಹೆಚ್ಚು ಕಾಲ ಉಳಿಯಲು ಗಿನಿ ತಂಡ ಅವಕಾಶ ನೀಡಲಿಲ್ಲ. ಈ ತಂಡದ ಇಬ್ರಾಹಿಂ ಸೌಮಾಹ್‌ 26ನೇ ನಿಮಿಷದಲ್ಲಿ ಚೆಂಡನ್ನು ಗುರಿ ಸೇರಿಸಿ 1–1ರ ಸಮಬಲಕ್ಕೆ ಕಾರಣರಾದರು. ಮೊದಲರ್ಧದ ಅಂತ್ಯದವರೆಗೂ ಎರಡೂ ತಂಡಗಳು ಜಿದ್ದಿಗೆ ಬಿದ್ದ ಹಾಗೆ ಸೆಣಸಿದವು. ಹೀಗಿದ್ದರೂ ಯಾವ ತಂಡಕ್ಕೂ ಮುನ್ನಡೆ ಗೋಲು ದಾಖಲಿಸಲು ಆಗಲಿಲ್ಲ.

ದ್ವಿತೀಯಾರ್ಧದಲ್ಲಿ ಜರ್ಮನಿ ತಂಡ ಭಿನ್ನ ರಣನೀತಿ ಹೆಣೆದು ಆಡಲಿಳಿಯಿತು. 62ನೇ ನಿಮಿಷದಲ್ಲಿ ಈ ತಂಡದ ನಿಕೊಲಸ್‌ ಕ್ಯುಹೆನ್‌ ಗೋಲು ದಾಖಲಿಸಿ 2–1ರ ಮುನ್ನಡೆಗೆ ಕಾರಣರಾದರು.

ಆ ನಂತರ ಗಿನಿ ತಂಡ ದಿಟ್ಟ ಹೋರಾಟ ನಡೆಸಿತು. ಆದರೂ ಈ ತಂಡದ ಆಟಗಾರರಿಗೆ ಎದುರಾಳಿಗಳ ರಕ್ಷಣಾಕೋಟೆ ಭೇದಿಸಲು ಆಗಲಿಲ್ಲ.

ಹೆಚ್ಚುವರಿ ಅವಧಿಯಲ್ಲಿ (90+2) ಸಹವೆರ್ಡಿ ಸೆಟಿನ್‌ ಗೋಲು ಬಾರಿಸುತ್ತಿದ್ದಂತೆ ಜರ್ಮನಿ ತಂಡದ ಆಟಗಾರರು ಸಂಭ್ರಮದ ಹೊಳೆಯಲ್ಲಿ ಮಿಂದೆದ್ದರು.

ಇರಾನ್‌ ಗೆಲುವಿನ ‘ಹ್ಯಾಟ್ರಿಕ್‌’: ಇರಾನ್‌ ತಂಡದವರು ಕೂಟದಲ್ಲಿ ಗೆಲುವಿನ ‘ಹ್ಯಾಟ್ರಿಕ್‌’ ಸಾಧನೆ ಮಾಡಿದರು. ಗೋವಾದಲ್ಲಿ ನಡೆದ ‘ಸಿ’ ಗುಂಪಿನ ಪಂದ್ಯದಲ್ಲಿ ಇರಾನ್‌ 3–0 ಗೋಲುಗಳಿಂದ ಕೋಸ್ಟರಿಕಾ ತಂಡವನ್ನು ಮಣಿಸಿತು.

ಈ ಮೂಲಕ ಒಟ್ಟು 9 ಪಾಯಿಂಟ್ಸ್‌ ಕಲೆಹಾಕಿ ಗುಂಪಿನ ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನ ತನ್ನದಾಗಿಸಿಕೊಂಡಿತು. ಆರಂಭಿಕ ಪಂದ್ಯದಲ್ಲಿ ಜರ್ಮನಿ ಮತ್ತು ಗಿನಿ ತಂಡಗಳನ್ನು ಮಣಿಸಿ ನಾಕೌಟ್‌ಗೆ ಅರ್ಹತೆ ಗಳಿಸಿದ್ದ ಇರಾನ್‌ ತಂಡದವರು ಈ ಪಂದ್ಯದಲ್ಲಿ ನಿರಾತಂಕವಾಗಿ ಆಡಿದರು.

ಈ ತಂಡದ ಮಹಮ್ಮದ್‌ ಗೊಬಿಶಾವಿ ಮತ್ತು ತಾಹ ಶರಿಯಾಟಿ ಕ್ರಮವಾಗಿ 25 ಮತ್ತು 29ನೇ ನಿಮಿಷಗಳಲ್ಲಿ ಗೋಲು ದಾಖಲಿಸಿದ್ದರಿಂದ ಪಂದ್ಯದ ಮೇಲಿನ ಹಿಡಿತ ಬಿಗಿ ಮಾಡಿಕೊಂಡಿತು. 89ನೇ ನಿಮಿಷದಲ್ಲಿ ಮಹಮ್ಮದ್‌ ಸರ್ದಾರಿ ಚೆಂಡನ್ನು ಗುರಿ ಮುಟ್ಟಿಸಿ ತಂಡ ಗೆಲುವಿನ ಅಂತರ ಹೆಚ್ಚಿಸಿದರು.

ದಿನದ ಇತರೆ ಪಂದ್ಯಗಳಲ್ಲಿ ಸ್ಪೇನ್‌ 2–0 ಗೋಲುಗಳಿಂದ ಉತ್ತರ ಕೊರಿಯಾ ಎದುರೂ, ಬ್ರೆಜಿಲ್‌ 2–0 ಗೋಲುಗಳಿಂದ ನೈಗರ್‌ ಮೇಲೂ ಗೆದ್ದವು.

ಮೆಕ್ಸಿಕೊಗೆ ಮೊದಲ ಜಯದ ಕನಸು

ಗುವಾಹಟಿ:
ಎರಡು ಬಾರಿಯ ಚಾಂಪಿಯನ್‌ ಮೆಕ್ಸಿಕೊ ತಂಡದವರು ಫಿಫಾ 17 ವರ್ಷದೊಳಗಿನವರ ವಿಶ್ವಕಪ್‌ ಫುಟ್‌ಬಾಲ್‌ನಲ್ಲಿ ಮೊದಲ ಗೆಲುವಿನ ಕನವರಿಕೆಯಲ್ಲಿದ್ದಾರೆ.

ಇಂದಿರಾಗಾಂಧಿ ಅಥ್ಲೆಟಿಕ್ಸ್‌ ಕ್ರೀಡಾಂಗಣದಲ್ಲಿ ಶನಿವಾರ ನಡೆಯುವ ‘ಎಫ್‌’ ಗುಂಪಿನ ತನ್ನ ಕೊನೆಯ ಲೀಗ್‌ ಪಂದ್ಯದಲ್ಲಿ ಈ ತಂಡ ಚಿಲಿ ವಿರುದ್ಧ ಸೆಣಸಲಿದೆ. ಇಂಗ್ಲೆಂಡ್‌ ವಿರುದ್ಧ ಸೋತು, ಇರಾಕ್‌ ವಿರುದ್ಧ ಡ್ರಾ ಮಾಡಿಕೊಂಡಿದ್ದ ಮೆಕ್ಸಿಕೊ ಖಾತೆಯಲ್ಲಿ ಒಂದು ಪಾಯಿಂಟ್‌ ಇದೆ.

ಈ ತಂಡದ ನಾಕೌಟ್‌ ಕನಸು ಕೈಗೂಡಬೇಕಾದರೆ ಶನಿವಾರದ ಪಂದ್ಯದಲ್ಲಿ ಗೆಲ್ಲಲೇಬೇಕು. ಹೀಗಾಗಿ ಉಭಯ ತಂಡಗಳ ನಡುವಣ ಹೋರಾಟ ಮಹತ್ವ ಪಡೆದುಕೊಂಡಿದೆ.

ಡಿಯಾಗೊ ಲಯನೆಜ್‌, ಮೆಕ್ಸಿಕೊ ತಂಡದ ಬೆನ್ನೆಲುಬಾಗಿದ್ದಾರೆ. ಅವರು ಇಂಗ್ಲೆಂಡ್‌ ವಿರುದ್ಧದ ಪಂದ್ಯದಲ್ಲಿ ಎರಡು ಗೋಲು ಗಳಿಸಿ ಮಿಂಚಿದ್ದರು. ಹೀಗಾಗಿ ಡಿಯಾಗೊ ಮೇಲೆ ಹೆಚ್ಚಿನ ನಿರೀಕ್ಷೆ ಇಡಲಾಗಿದೆ.

ವಿಕ್ಟರ್‌ ಡಿಯಾಜ್‌, ಸೀಸರ್‌ ಲೊಪೆಜ್‌, ಸೀಸರ್‌ ರಫೆಲ್ ರಾಮೊಸ್‌ ಮತ್ತು ಅಲನ್‌ ಮೀಡಾ ಅವರ ಮೇಲೂ ಭರವಸೆ ಇಡಬಹುದಾಗಿದೆ.

ಚಿಲಿ ಕೂಡ ಚೊಚ್ಚಲ ಜಯದ ತವಕದಲ್ಲಿದೆ. ಈ ತಂಡ ಮೊದಲ ಎರಡು ಪಂದ್ಯಗಳಲ್ಲಿ ಇಂಗ್ಲೆಂಡ್‌ (0–4) ಮತ್ತು ಇರಾಕ್‌ (0–3) ವಿರುದ್ಧ ಹೀನಾಯವಾಗಿ ಸೋತಿತ್ತು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry