ಮಂಗಳವಾರ, ಮಾರ್ಚ್ 2, 2021
29 °C

‘ಕಾಲೇಜ್‌ಕುಮಾರ್’ನ ಲಾಸ್ಟ್‌ ಬೆಂಚ್‌ ಕಥೆ

ಕೆ.ಎಚ್. ಓಬಳೇಶ್ Updated:

ಅಕ್ಷರ ಗಾತ್ರ : | |

‘ಕಾಲೇಜ್‌ಕುಮಾರ್’ನ ಲಾಸ್ಟ್‌ ಬೆಂಚ್‌ ಕಥೆ

‘ಕಾಲೇಜ್‌ಕುಮಾರ್’ನ ವಿಶೇಷ ಏನು?

ರವಿಶಂಕರ್‌, ಶ್ರುತಿ, ವಿಕ್ಕಿ ಮತ್ತು ಸಂಯುಕ್ತಾ ಹೆಗಡೆ ಒಟ್ಟಾಗಿ ನಟಿಸಿರುವುದೇ ಚಿತ್ರದ ಧನಾತ್ಮಕ ಅಂಶ. ಎರಡು ವರ್ಷಗಳ ಹಿಂದೆ ಈ ಕಥೆ ಬರೆದಿದ್ದೆ. ಆ ನಂತರ ಹಲವು ಕಥೆಗಳನ್ನು ಬರೆದೆ. ಆದರೆ, ‘ಕಾಲೇಜ್‌ಕುಮಾರ್‌’ ಕಥೆಯು ಬಹಳವಾಗಿ ಕಾಡಿತು. ಇದನ್ನೇ ಮೊದಲಿಗೆ ತೆರೆಯ ಮೇಲೆ ತರಬೇಕೆಂದು ನಿರ್ಧರಿಸಿದೆ. ಸಂಗೀತ ನಿರ್ದೇಶಕ ಅರ್ಜುನ್‌ ಜನ್ಯ ಅವರಿಗೆ ಕಥೆ ಹೇಳಿದೆ. ಅವರು ನಿರ್ಮಾಪಕ ಎಲ್. ಪದ್ಮನಾಭ್‌ ಅವರನ್ನು ಪರಿಚಯಿಸಿದರು. ಯಾವುದೇ, ಅಡೆತಡೆ ಇಲ್ಲದೆ ಚಿತ್ರೀಕರಣ ಮುಗಿಸಿ ‘ಕಾಲೇಜ್‌ಕುಮಾರ್‌’ ಜನರ ಮುಂದೆ ಬರುತ್ತಿದ್ದಾನೆ.

ಈ ಚಿತ್ರದಲ್ಲಿ ನಟ ರವಿಶಂಕರ್‌ ಅವರ ಪಾತ್ರವೇನು?

ರವಿಶಂಕರ್‌ ಅವರಿಗೆ ಈ ಕಥೆ ಹೇಳಿದಾಗ ಮೊದಲಿಗೆ ಅಚ್ಚರಿಪಟ್ಟರು. ಜನರು ಈ ಪಾತ್ರದಲ್ಲಿ ನನ್ನನ್ನು ಒಪ್ಪುತ್ತಾರೆ ಎಂಬ ವಿಶ್ವಾಸ ನಿಮಗೆ ಇದೆಯೇ ಎಂದು ಪ್ರಶ್ನಿಸಿದರು. ಈ ಪಾತ್ರ ನಿಭಾಯಿಸಲು ಅವರೇ ಸೂಕ್ತ ವ್ಯಕ್ತಿಯೆಂದು ಮನವರಿಕೆ ಮಾಡಿಕೊಟ್ಟೆವು. ಅವರ ಹಿಂದಿನ ಎಲ್ಲ ಪಾತ್ರಗಳಿಗಿಂತಲೂ ಈ ಚಿತ್ರದಲ್ಲಿ ಅವರು ವಿಭಿನ್ನವಾಗಿ ನಟಿಸಿದ್ದಾರೆ. ಪ್ರತಿಯೊಬ್ಬ ಅಪ್ಪನಿಗೂ ಮಕ್ಕಳ ಮೇಲೆ ಅಪರಿಮಿತ ಆಸೆ ಇರುತ್ತದೆ.

ಜೀವನದಲ್ಲಿ ತಾನು ಕಂಡ ಕನಸುಗಳನ್ನು ಮಕ್ಕಳ ಮೂಲಕ ಈಡೇರಿಸಿಕೊಳ್ಳಲು ಬಯಸುವುದು ಸಹಜ. ಈ ಕಥೆಯಲ್ಲಿ ರವಿಶಂಕರ್‌ ಹಠವಾದಿ. ಮಗನನ್ನು ಅಧಿಕಾರಿಯನ್ನಾಗಿ ಮಾಡಬೇಕೆಂಬುದು ಅವರ ತುಡಿತ. ಅದಕ್ಕಾಗಿ ಇಪ್ಪತ್ತು ವರ್ಷ ದುಡಿಯುತ್ತಾರೆ. ಅಪ್ಪನಾಗಿ ಅವರು ಎಲ್ಲರಿಗೂ ಇಷ್ಟವಾಗುತ್ತಾರೆ.

ಕಾಲೇಜಿನ ಕೊನೆಯ ಬೆಂಚಿನ ಹುಡುಗರ ಸುತ್ತ ಕಥೆ ಹೆಣೆಯಲಾಗಿದೆಯೇ?

ಸಮಾಜದಲ್ಲಿ ಬಹುದೊಡ್ಡ ಸಾಧನೆ ಮಾಡಿದವರಲ್ಲಿ ಕೊನೆಯ ಬೆಂಚಿನ ಹುಡುಗರ ಪಟ್ಟಿ ದೊಡ್ಡದಿದೆ. ಲಾಸ್ಟ್‌ ಬೆಂಚ್‌ ಹುಡುಗರ ಬಗ್ಗೆ ಚಿತ್ರದಲ್ಲಿ ಹೇಳಿದ್ದೇನೆ. ನಾವು ಕಡಿಮೆ ಅಂಕ ಪಡೆದವರ ಬಗ್ಗೆ ತಿರಸ್ಕಾರದಿಂದ ನೋಡುತ್ತೇವೆ. ಆದರೆ, ಅವರಲ್ಲಿಯೂ ಪ್ರತಿಭೆ ಇರುತ್ತದೆ. ಯಾರ ಮೇಲೂ ಒತ್ತಡ ಹೇರಬಾರದು. ಪ್ರತಿಭೆಗಷ್ಟೇ ಪ್ರೋತ್ಸಾಹ ನೀಡಬೇಕು ಎಂಬುದೇ ಚಿತ್ರದ ಆಶಯ. 

ಯುವಜನರಿಗೆ ಸಂದೇಶ ಇದೆಯೇ?

ಅಪ್ಪನಿಗೆ ಮಗನನ್ನು ಡಾಕ್ಟರ್‌ ಮಾಡಬೇಕೆಂಬ ಕನಸು ಇರುತ್ತದೆ. ಬಾಲ್ಯದಲ್ಲಿ ಮಗು ಅಪ್ಪನ ಮಾತು ಕೇಳುತ್ತದೆ. ಹದಿಹರೆಯಕ್ಕೆ ಬಂದಾಗ ಅವನ ಮನಸ್ಸಿನಲ್ಲಿ ಬದಲಾವಣೆಗಳಾಗುತ್ತವೆ. ನಮ್ಮಆಸೆಗಳನ್ನು ನಾವೇ ಈಡೇರಿಸಿಕೊಳ್ಳಬೇಕು. ಬೇರೊಬ್ಬರ ಮೇಲೆ ಹೇರಬಾರದು. ಶಾಲಾ– ಕಾಲೇಜಿನಲ್ಲಿ ಅನುತ್ತೀರ್ಣನಾದ ತಕ್ಷಣ ಮಕ್ಕಳ ಬದುಕು ಬೀದಿಗೆ ಬೀಳುವುದಿಲ್ಲ. ಎಲ್ಲರಿಗೂ ಜೀವನದಲ್ಲಿ ಅವಕಾಶ ಸಿಗುತ್ತದೆ. ಪೋಷಕರಿಗೆ ಈ ಸತ್ಯದ ಅರಿವಾಗಬೇಕು. ಪೋಷಕರು ಮತ್ತು ಯುವಜನರಿಗೆ ಚಿತ್ರದಲ್ಲಿ ಒಳ್ಳೆಯ ಸಂದೇಶವಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.