7

ಸಿದ್ಧಗಂಗೆಯಲ್ಲಿ ಅರಳುತ್ತಿರುವ ಶಿಲ್ಪ ಕಲಾಕೃತಿ

Published:
Updated:
ಸಿದ್ಧಗಂಗೆಯಲ್ಲಿ ಅರಳುತ್ತಿರುವ ಶಿಲ್ಪ ಕಲಾಕೃತಿ

ದಾವಣಗೆರೆ: ಸ್ನಿಗ್ಧ ಸೌಂದರ್ಯದ ವೀಣಾಪಾಣಿ, ತಪೋ ನಿರತ ಶಿವ, ಧ್ಯಾನಸ್ಥ ಬುದ್ಧ, ಇವರೆದುರು ಮುಗುಳ್ನಗೆ ಸೂಸುತ್ತಾ ಕುಳಿತ ಸಿದ್ಧಗಂಗಾ ಸ್ವಾಮೀಜಿ ವಿದ್ಯಾರ್ಥಿಗಳನ್ನು ಮಂತ್ರಮುಗ್ಧರನ್ನಾಗಿಸುತ್ತಿದ್ದಾರೆ. ನಗರದ ಸಿದ್ಧಗಂಗಾ ಶಾಲೆಯ ಆವರಣ ಪ್ರವೇಶಿಸಿದರೆ ಸದ್ಯ ಕಾಣಸಿಗುತ್ತಿರುವ ದೃಶ್ಯಗಳಿವು.

ಕರ್ನಾಟಕ ಶಿಲ್ಪಕಲಾ ಅಕಾಡೆಮಿಯು ಸಿದ್ಧಗಂಗಾ ವಿದ್ಯಾಸಂಸ್ಥೆಯ ಸಹಯೋಗದಲ್ಲಿ ಶಿಲ್ಪ ಕಲಾಕೃತಿಗಳ ತಯಾರಿಕೆ ಶಿಬಿರ ಆಯೋಜಿಸಿದ್ದು, ಕಲಾವಿದರ ಕೈಯಲ್ಲಿ ಕಲಾಕೃತಿಗಳು ಅರಳುತ್ತಿವೆ. ಹತ್ತಕ್ಕೂ ಅಧಿಕ ಶಿಲ್ಪ ಹಾಗೂ ಸಿಮೆಂಟ್‌ ಕಲಾಕೃತಿಗಳ ತಯಾರಿಕೆ ಕೆಲಸ ಭರದಿಂದ ಸಾಗುತ್ತಿದೆ.

ಇಪ್ಪತ್ತೈದು ಪರಿಣತ ಶಿಲ್ಪ ಕಲಾವಿದರು ಆಕರ್ಷಕ ಶಿಲ್ಪ ಕಲಾಕೃತಿಗಳ ತಯಾರಿಕೆಗಾಗಿ ಹಗಲಿರುಳೂ ಶ್ರಮಿಸುತ್ತಿದ್ದಾರೆ. ಕೆಲ ಕಲಾವಿದರು ಬಳಪದ ಕಲ್ಲಿನಲ್ಲಿ ಹೊಯ್ಸಳ ಮತ್ತು ಚಾಲುಕ್ಯ ಶೈಲಿಯ ಮದನಿಕೆ, ಗಣಪತಿ, ಡೋಲು ಬಾರಿಸುತ್ತಿರುವ ವ್ಯಕ್ತಿಯ ಕಲಾಕೃತಿಯಂತಹ ಸುಂದರ ವಿಗ್ರಹಗಳನ್ನು ನಿರ್ಮಿಸುತ್ತಿದ್ದಾರೆ. ಇನ್ನು ಕೆಲ ಕಲಾವಿದರು ಸಿಮೆಂಟ್‌ ಬಳಸಿ ಈಶ್ವರ, ಧ್ಯಾನಸ್ಥ ಬುದ್ಧ ಹಾಗೂ ವೀಣೆ ನುಡಿಸುತ್ತಿರುವ ಸರಸ್ವತಿ ಕಲಾಕೃತಿಗಳ ತಯಾರಿಕೆಯಲ್ಲಿ ತಲ್ಲೀನರಾಗಿದ್ದಾರೆ.

‘ಸರಸ್ವತಿ, ಶಿವ, ಬುದ್ಧ, ಸಿದ್ಧಗಂಗಾಶ್ರೀ ಹಾಗೂ ಸಿದ್ಧಗಂಗಾ ಹೆಸರಿನ ನೆನಪಿನ ಕಾಣಿಕೆ (ಶಾಲೆಯ ಸ್ಮರಣಿಕೆ)... ಈ ಕಲಾಕೃತಿಗಳನ್ನು ಸಿಮೆಂಟ್‌ನಿಂದ ತಯಾರಿಸಲಾಗುತ್ತಿದೆ. ಜತೆಗೆ ಅನ್ನಪೂರ್ಣೇಶ್ವರಿ, ಹೊಯ್ಸಳ ಮತ್ತು ಚಾಲುಕ್ಯ ಶೈಲಿಯ ಮದನಿಕೆ ಕಲಾಕೃತಿ, ಗಣಪತಿ ಕಲಾಕೃತಿಗಳನ್ನು ಬಳಪದ ಕಲ್ಲಿನಿಂದ ನಿರ್ಮಿಸಲಾಗುತ್ತಿದೆ’ ಎಂದು ಮಾಹಿತಿ ನೀಡುತ್ತಾರೆ ಶಿಬಿರದಲ್ಲಿ ಭಾಗವಹಿಸಿದ್ದ ಶಿಲ್ಪಕಲಾ ಅಕಾಡೆಮಿಯ ಸದಸ್ಯ ಸಂಚಾಲಕ ಭರತ್‌ರಾಜ್‌.

ಜಿಲ್ಲೆಯಲ್ಲಿ 2ನೇ ಶಿಬಿರ: ‘ಇದು ಜಿಲ್ಲೆಯಲ್ಲಿ 2ನೇ ಶಿಬಿರವಾಗಿದ್ದು, ಮೊದಲನೆಯದ್ದನ್ನು ದೃಶ್ಯಕಲಾ ಮಹಾವಿದ್ಯಾಲಯದ ಆವರಣದಲ್ಲಿ ಆಯೋಜಿಸಲಾಗಿತ್ತು. ಶಾಲಾ ಆವರಣದಲ್ಲಿ ಶಿಲ್ಪಕಲಾ ಕೃತಿಗಳ ನಿರ್ಮಾಣ ಮಾಡುವುದರಿಂದ ವಿದ್ಯಾರ್ಥಿಗಳು, ಶಿಲ್ಪಿಗಳ ಕೈಚಳಕ ಕಣ್ತುಂಬಿಕೊಳ್ಳುತ್ತಿದ್ದಾರೆ. ಈ ಮೂಲಕ ವಿಶೇಷ ಕಲಿಕಾ ಅನುಭವ ಪಡೆಯುತ್ತಾರೆ’ ಎನ್ನುತ್ತಾರೆ ಶಿಬಿರದ ನಿರ್ದೇಶಕ ವೈ.ಕುಮಾರ್‌.

ನ. 28ರವರೆಗೆ ಶಿಬಿರ ನಡೆಯಲಿದ್ದು, ಕಲಾವಿದರಿಗೆ ಊಟ, ವಸತಿ ಹಾಗೂ ಕಲಾಕೃತಿಗಳ ನಿರ್ಮಾಣಕ್ಕೆ ಅಗತ್ಯ ಕಚ್ಚಾ ಸಾಮಗ್ರಿಗಳನ್ನು ಸಿದ್ಧಗಂಗಾ ಶಾಲೆಯ ಆಡಳಿತ ಮಂಡಳಿ ನೀಡುತ್ತಿದೆ. ಶಿಲ್ಪಕಲಾ ಅಕಾಡೆಮಿಯು ಕಲಾವಿದರಿಗೆ ಗೌರವಧನ ನೀಡುತ್ತಿದೆ. ಕಲಾವಿದರನ್ನು ಪ್ರೋತ್ಸಾಹಿಸಲು ಶಿಲ್ಪಕಲಾ ಅಕಾಡೆಮಿಯು ಇನ್ನೂ ಹೆಚ್ಚಿನ ಅನುದಾನವನ್ನು ಮೀಸಲಿಡಬೇಕು ಎಂದು ಅವರು ಮನವಿ ಮಾಡಿದರು.

ಶಿಬಿರದ ಕಲಾವಿದರು

ಶಿಬಿರದಲ್ಲಿ ಚಿತ್ರದುರ್ಗ ಜಿಲ್ಲೆಯ ಆರ್‌.ಕೆ.ಪ್ರವೀಣ ಆಚಾರಿ, ಎಂ.ಮಾರುತಿ, ಕೊಪ್ಪಳ ಜಿಲ್ಲೆಯ ಗಣೇಶ್‌, ರಾಮನಗರದ ಎ.ವಿ.ಮುತ್ತು, ಬಳ್ಳಾರಿಯ ಬ್ರಹ್ಮಚಾರಿ, ಬೆಂಗಳೂರಿನ ಶ್ರೀಕಾಂತ್‌ ಮೇಹರನ್‌ ವಿಶ್ವಕರ್ಮ, ದಾವಣಗೆರೆ ಜಿಲ್ಲೆಯ ರಹಮತ್‌ವುಲ್ಲಾ, ವೈ.ಮಲ್ಲೇಶ್‌, ಪ್ರಕಾಶ ಆಚಾರ್, ಗಣೇಶ ಆಚಾರ್‌, ವೈ.ಹನುಮಂತಪ್ಪ, ಪ್ರವೀಣ್‌, ಶಿವರಾಜ್‌, ಚಂದ್ರಶೇಖರ್, ಬಿ.ಅನು, ಉಮೇಶ್‌ ಆಚಾರ್, ಎಸ್‌.ಮಂಜುನಾಥ, ಪ್ರಮೋದ್‌ ಆಚಾರ್, ಬಳ್ಳಾರಿಯ ಜಕಣಾಚಾರಿ ಕೆ. ಸೋಗಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ರವಿಮಹಾದೇವ ನಾಯ್ಕ ಶಿಲ್ಪಿಗಳು ಶಿಬಿರದಲ್ಲಿ ಭಾಗವಹಿಸಿದ್ದಾರೆ.

ಶಾಲಾ ಆವರಣದಲ್ಲಿಯೇ ಶಿಲ್ಪಕಲಾ ಕೃತಿಗಳ ತಯಾರಿಕೆ ಶಿಬಿರ ಆಯೋಜಿಸುವುದು ವೆಚ್ಚದ ಕೆಲಸ. ಆದರೂ ವಿದ್ಯಾರ್ಥಿಗಳಲ್ಲಿ ಕಲೆಯ ಅರಿವು ಮೂಡಿಸುವ ಉದ್ದೇಶದಿಂದ ಶಿಬಿರ ಆಯೋಜಿಸಲಾಯಿತು ಎನ್ನುತ್ತಾರೆ ಸಿದ್ಧಗಂಗಾ ಶಾಲೆಯ ಪ್ರಾಂಶುಪಾಲರಾದ ಜಸ್ಟಿನ್‌ ಡಿಸೋಜ.

ಮೈಸೂರಿನ ಎಚ್.ಡಿ.ಕೋಟೆಯಿಂದ ಬಳಪದ ಕಲ್ಲುಗಳನ್ನು ತರಿಸಿ, ಕಲಾಕೃತಿಗಳನ್ನು ನಿರ್ಮಿಸಲಾಗುತ್ತಿದೆ. 5 ಸಿಮೆಂಟ್‌ ಹಾಗೂ 4 ಕಲ್ಲಿನ ಕಲಾಕೃತಿಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ. ಎಲ್ಲಾ ಕಲಾಕೃತಿಗಳನ್ನು ಶಾಲೆ ಆವರಣದಲ್ಲಿ ಅನಾವರಣ ಮಾಡಲಾಗುವುದು. ಕಲಾವಿದರ ಊಟ, ವಸತಿ ಹಾಗೂ ಕಲಾಕೃತಿಗಳ ತಯಾರಿಕೆಗೆ ಬೇಕಾದ ಕಚ್ಚಾ ಸಾಮಗ್ರಿಗಳನ್ನು ಶಾಲೆಯ ಆಡಳಿತ ಮಂಡಳಿಯೇ ನೋಡಿಕೊಳ್ಳುತ್ತಿದೆ. ಇದಕ್ಕಾಗಿ ₹ 6 ಲಕ್ಷದವರೆಗೆ ಖರ್ಚಾಗುತ್ತದೆ ಎನ್ನುತ್ತಾರೆ ಅವರು.

* * 

ಅಧ್ಯಯನ ಮಾಡುತ್ತಿರುವಾಗಲೇ ಶಿಲ್ಪಕಲಾಕೃತಿಗಳ ತಯಾರಿಕೆ ಶಿಬಿರದಲ್ಲಿ ಭಾಗಹಿಸಲು ಅವಕಾಶ ಸಿಕ್ಕಿರುವುದು ತುಂಬಾ ಖುಷಿ ತಂದಿದೆ. ವೃತ್ತಿ ಜ್ಞಾನದ ಹೆಚ್ಚಳಕ್ಕೆ ಅನುಕೂಲವಾಗಲಿದೆ.

ಬಿ.ಅನು, ವಿದ್ಯಾರ್ಥಿನಿ, ದೃಶ್ಯಕಲಾ ಮಹಾವಿದ್ಯಾಲಯ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry