ಶನಿವಾರ, ಜೂಲೈ 4, 2020
21 °C

ನಾಗಾವಿ ನಾಡಿನಲ್ಲಿ ‘ರಾಣಿಯರ’ ಆಡಳಿತ

ಮಲ್ಲಿಕಾರ್ಜುನ ಎಚ್. ಮುಡಬೂಳಕರ್ Updated:

ಅಕ್ಷರ ಗಾತ್ರ : | |

ನಾಗಾವಿ ನಾಡಿನಲ್ಲಿ ‘ರಾಣಿಯರ’ ಆಡಳಿತ

ಚಿತ್ತಾಪುರ: ಬಹು ವಿಸ್ತಾರದ ಸಾಮ್ರಾಜ್ಯಕ್ಕೆ ಏಕೈಕ ಸಾರ್ವಭೌಮ ದೊರೆ ಅಧಿಪತಿಯಾಗಿದ್ದರೂ ಆಡಳಿತದ ಅನುಕೂಲಕ್ಕಾಗಿ ವಿವಿಧ ಭಾಗಗಳಲ್ಲಿ ರಾಜರ ರಾಣಿಯರು, ಯುವರಾಜರು ರಾಜ್ಯಭಾರ ನಡೆಸುತ್ತಿದ್ದರು. ಇದಕ್ಕೆ ಇತಿಹಾಸದ ಪುಟಗಳೇ ಸಾಕ್ಷಿ.

ಅರಸರು ತಮ್ಮ ವಿಶ್ರಾಂತಿ ಇಲ್ಲವೆ ಮತ್ತಿತರ ಕಾರಣಗಳಿಂದ ರಾಜಧಾನಿಯಲ್ಲಿ ಇರದ ಸಂದರ್ಭಗಳಲ್ಲಿ ಅವರ ರಾಣಿಯರು, ಯುವ ರಾಜರು, ಸಾಮಂತರು, ಮಹಾದಂಡನಾಯಕರು, ದಂಡನಾಯಕರು ಇಡೀ ಸಾಮ್ರಾಜ್ಯ ನಿರ್ವಹಿಸುತ್ತಿದ್ದರು. ಇದರ ಬಗ್ಗೆ ನಾಗಾವಿಯ (ಕ್ರಿ.ಶ 1085) ಶಿಲಾ ಶಾಸನದಲ್ಲಿ ಮಾಹಿತಿಯಿದೆ.

ಕಲ್ಯಾಣ ಚಾಲುಕ್ಯ ಮನೆತನದ 6ನೇ ವಿಕ್ರಮಾಧಿತ್ಯನ ರಾಣಿಯರು ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ರಾಜ್ಯಾಡಳಿತ ನಡೆಸಿದ್ದಾರೆ ಎಂಬುವುದಕ್ಕೆ ಶಿಲಾಶಾಸನಗಳು ನಿದರ್ಶನವಾಗಿವೆ. ‘ವಿಕ್ರಮಾಂಕ ನೃಪಾಂಗನ ಪಟ್ಟ ಮಹಾದೇವಿ ಚಂದ್ರಿಕಾದೇವಿ’ (ಕಾಳಗಿ-ಕ್ರಿ.ಶ 1,103), ‘ಶ್ರೀ ಮದ್ರಾಯ ಸರ್ವಜ್ಞನರ್ಧಾಂಗಿ ಶ್ರೀ ಮದಗ್ರಹಾರ ದಿಗ್ವಿಗೆಯ’ (ದಿಗ್ಗಾಂವ್) ಮೇಲಾಳ್ಕೆಯ ‘ಶ್ರೀಮತ್ಪಿರಿಯರಸಿ ಪಟ್ಟಮಹಾದೇವಿ’ (ದಿಗ್ಗಾಂವ್-ಕ್ರಿ.ಶ 1,108), ಆರನೇ ವಿಕ್ರಮಾಧಿತ್ಯನ ರಾಣಿ ‘ಶ್ರೀ ಜಕ್ಕಲದೇವಿ (ಜಾಕಲದೇವಿ) ತ್ರಿಭೋಗಾಭ್ಯಂತರ ಸಿದ್ಧಿಯಿಂ ಆಳುತ್ತಿರೆ’ (ಇಂಗಳಗಿ-ಕ್ರಿ.ಶ 1,094), 3ನೇ ಸೋಮೇಶ್ವರನರ್ಧಾಂಗಿ ‘ಎಕ್ಕಲ ದೇವಿ’ (ತೆಂಗಳಿ-ಕ್ರಿ.ಶ 1,162), ‘ಸಿರಿಯಾ ದೇವಿ’ (ಇಂಗಳಗಿ-ಕ್ರಿ.ಶ 1,216) ಅವರು ರಾಜ್ಯಾಡಳಿತ ನಿರ್ವಹಿಸಿದ್ದಾರೆ ಎಂದು ತಿಳಿದು ಬರುತ್ತದೆ.

ಇಂಗಳಗಿ, ತೆಂಗಳಿ, ದಿಗ್ಗಾಂವ್ ಶಾಸನಗಳ ಪ್ರಕಾರ, ರಾಣಿಯರು ದೇವಾಲಯ, ಚೈತ್ಯಾಲಯ ನಿರ್ಮಿಸಿದ್ದಾರೆ. ‘ಅಚಲವ್ವೆ’ ಮತ್ತು ‘ಗುಡ್ಡವ್ವೆ’ ಎಂಬ ವೀರ ಸನ್ಯಾಸಿನಿಯರು ಇದ್ದರು. ಇದು ಇಂದಿನ ಮಹಿಳಾ ವರ್ಗಕ್ಕೆ ತುಂಬಾ ಸ್ಪೂರ್ತಿ ನೀಡುವ ವಿಷಯ

ಸಮಯ ಮಾಪನ ವ್ಯವಸ್ಥೆ: ನಾಗಾವಿಯ ಮಹಾಗ್ರಹಾರದಲ್ಲಿ ವಿದ್ಯಾರ್ಜನೆಗೆ, ಅಧ್ಯಯನ, ಅಧ್ಯಾಪ ನಗಳು ಸಮಯಾನುಸಾರ ನಡೆಯಲು ಸಮಯ ಮಾಪನ ಮಾಡುವ ವ್ಯವಸ್ಥೆಯಿತ್ತು. ಘಟಿಕಾ (ಘಳಿಗೆ) ಎಂದು ಸಮಯ ಸೂಚಿಸುವ ಯಂತ್ರದ ಮೂಲಕ ಸಮಯ ಮಾಪನ ಆಗುತಿತ್ತು. 24 ಗಂಟೆಯ ಒಂದು ದಿನದ ಅವಧಿ 60 ಘಳಿಗೆಗಳಿಗೆ ಅಳೆಯಲಾಗುತ್ತಿತ್ತು ಎಂದು ಇತಿಹಾಸ ತಜ್ಙರು ಸಂಶೋಧಿಸಿದ್ದಾರೆ.

ಈ ರೀತಿಯ ಘಳಿಗೆ ಮಾಪನ ವ್ಯವಸ್ಥೆ ಅಳವಡಿಕೆಯಿಂದ ನಾಗಾ ವಿಯು ‘ಘಟಿಕಾಸ್ಥಾನ’ದ ಹೆಗ್ಗಳಿಕೆ ಪಡೆದು ಕರ್ನಾಟಕದ ಪ್ರಾಚೀನ ಘಟಿಕಾಸ್ಥಾನಗಳಲ್ಲಿ ಅತ್ಯಂತ ಹಿರಿದಾದ ಒಂದು ‘ಘಟಿಕಾಸ್ಥಾನ’ ಎಂದು ಚರಿತ್ರೆಯ ಪುಟಗಳಲ್ಲಿ ದಾಖಲಾಗಿದೆ. ಕಲ್ಯಾಣ ಚಾಲುಕ್ಯರ ಒಂದನೇ ಸೋಮೇಶ್ವರನ ಕಾಲದಲ್ಲಿ (ಕ್ರಿ.ಶ 1058) ದಂಡನಾಯಕ ಮಧುವಪ್ಪರಸನು ಘಟಿಕಾಸ್ಥಾನ ಸ್ಥಾಪಿಸಿ ವಿಫುಲ ದಾನದತ್ತಿ ನೀಡಿದ್ದ ಎಂದು ಶಾಸನಗಳಲ್ಲಿ ಉಲ್ಲೇಖವಾಗಿದೆ.

ನಾಗಾವಿ ಘಟಿಕಾಸ್ಥಾನದಲ್ಲಿ ಘಟಿಕಾ ಸಾಹಸಿಗ (ವಿದ್ವಾಂಸರಾದ ಬೋಧಕರು), ಘಟಿಕಾ ಪ್ರಹಾರಿ (ಸಮಯದ ಮೇಲ್ವಿಚಾರಕ), ಕಾಫಿನ ಘಟಿಯಾರ (ಕಾವಲುಗಾರ) ಅಲ್ಲದೆ ಘಟಿಕಾಸ್ಥಾನದಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳನ್ನು 'ಘಟಿಕೆಯ ಮಾಣಿಗಳು' ಎಂದು ಕರೆಯಲಾಗುತ್ತಿತ್ತು ಎನ್ನುವುದು ಗಮನಾರ್ಹ.

ಭೂ ದತ್ತಿ:ನಾಗಾವಿ ಮಹಾಗ್ರಹಾರದಲ್ಲಿ ವಿವಿಧ ವೃತ್ತಿ ಕಲಾವಿದರಿಗೆ ರಾಜಾಶ್ರಯ ದೊರೆತು ವಿವಿಧ ವೃತ್ತಿಕಾರರಿಗೆ, ಕಲಾವಿದರಿಗೆ ಅವರ ಕುಟುಂಬ ಜೀವನ ನಿರ್ಹಣೆಗೆಂದು ಭೂಮಿಯನ್ನು ದಾನವಾಗಿ, ದತ್ತಿಯಾಗಿ ಉಂಬಳಿ ನೀಡುವ ವ್ಯವಸ್ಥೆ ಇತ್ತು.

ಕ್ರಿ.ಶ 1085ರ ಶಿಲಾಶಾಸನವು ಉಲ್ಲೇಖಿಸಿದಂತೆ ಲೋಕರಸನು ಅರಲು-300 (ಅಲ್ಲೂರ್ ಬಿ.) ಆಡಳಿತ ಘಟಕದಲ್ಲಿ ಬೀಳಾನುವೃತ್ತಿಯಿಂದ ಆಳ್ವಿಕೆ ನಡೆಸುತ್ತಾ ನಾಗಾವಿ ದೇವಸ್ಥಾನದ ಅನೇಕ ವೃತ್ತಿಕಾರರಿಗೆ ಹಾಗೂ ವೃತ್ತಿಗಳಿಗೆ ದತ್ತಿ ನೀಡಿ ರಾಜಾಶ್ರಯ ಒದಗಿಸಿದ ಎಂದು ಸ್ಪಷ್ಟವಾಗುತ್ತದೆ.

ಘಟಿಕಾಸ್ಥಾನದಲ್ಲಿ ಬೋಧನೆ ಮಾಡುವ 'ಭಟ್ಟ ದರ್ಶನ' ವ್ಯಾಖ್ಯಾತೃವಿಗೆ ಮತ್ತರು 35, 'ನ್ಯಾಸ' ವ್ಯಾಖ್ಯಾತೃವಿಗೆ ಮತ್ತರು 30, 'ಪ್ರಭಾಕರ' ವ್ಯಾಖ್ಯಾತೃವಿಗೆ ಮತ್ತರು 45, 'ಸರಸ್ವತಿ ಭಂಡಾರಿ'ಗೆ (ಗ್ರಂಥಾಲಯ ಮೇಲ್ವಿಚಾಕರು) ಮತ್ತರು 30, 'ಘಟಿಕಾ ಪ್ರಹಾರಿ'ಗೆ (ಸಮಯದ ಮೇಲ್ವಿಚಾರಕ) ಮತ್ತರು 30, 'ಪಂಚಿಕೇಶ್ವರ' (ಬಟ್ಟೆ ತೊಳೆಯುವ ಅಗಸ) ಮತ್ತರು 45, ಚೆಂಡೇಶ್ವರ ರೆಬ್ಬಂಗೆ (ಕ್ಷೌರಿಕ) ಮತ್ತರು 30, ಹೀಗೆ ವಿವಿಧ ವೃತ್ತಿ ಮಾಡುವವರಿಗೆ ಜೀವನ ಸಾಗಿಸಲು ಆಡಳಿತದಿಂದ ಭೂಮಿಯನ್ನು ದಾನ ದತ್ತಿಯಾಗಿ ಉಂಬಳಿ ನೀಡುವ ವ್ಯವಸ್ಥೆ ನಾಗಾವಿಯಲ್ಲಿ ಇತ್ತು.

* * 

ಸಾವಿರ ವರ್ಷಗಳ ಹಿಂದೆ ರಾಣಿಯರು ತಾಲ್ಲೂಕಿನ ವಿವಿಧೆಡೆ ಆಡಳಿತ ನಿರ್ವಹಿಸಿದ್ದು, ಮಹಿಳಾ ಸಮುದಾಯಕ್ಕೆ ಹೆಮ್ಮೆಯ ಸಂಗತಿ.

ಶಶಿಕಲಾ ವಿಶ್ವನಾಥ ತೆಂಗಳಿ

ಮಾಜಿ ಸದಸ್ಯೆ, ಜಿಲ್ಲಾ ಪಂಚಾಯಿತಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.