ನಗರವಾಸಿಗಳ ವರ್ತುಲ ರಸ್ತೆಯ ಕನಸಿಗೆ ಜೀವ

7

ನಗರವಾಸಿಗಳ ವರ್ತುಲ ರಸ್ತೆಯ ಕನಸಿಗೆ ಜೀವ

Published:
Updated:
ನಗರವಾಸಿಗಳ ವರ್ತುಲ ರಸ್ತೆಯ ಕನಸಿಗೆ ಜೀವ

ಕೋಲಾರ: ನಗರವಾಸಿಗಳ ದಶಕಗಳ ಬೇಡಿಕೆಯಾದ ವರ್ತುಲ ರಸ್ತೆ ನಿರ್ಮಾಣದ ಕನಸಿಗೆ ಜೀವ ಬಂದಿದೆ. ನಗರದೊಳಗಿನ ವಾಹನ ದಟ್ಟಣೆ ತಪ್ಪಿಸಿ ಸಂಚಾರ ಸಮಸ್ಯೆಗೆ ಮುಕ್ತಿ ನೀಡಲು ಮುಂದಾಗಿರುವ ನಗರಾಭಿವೃದ್ಧಿ ಪ್ರಾಧಿಕಾರವು (ಕುಡಾ) ವರ್ತುಲ ರಸ್ತೆ ನಿರ್ಮಾಣಕ್ಕಾಗಿ ಭೂಮಿಕೆ ಸಿದ್ಧಪಡಿಸಿದೆ.

ಸುಮಾರು 30 ಚದರ ಕಿ.ಮೀ ವಿಸ್ತಾರವಾಗಿರುವ ನಗರದಲ್ಲಿ 35 ವಾರ್ಡ್‌ಗಳಿದ್ದು, ಜನಸಂಖ್ಯೆ 2 ಲಕ್ಷದ ಗಡಿ ದಾಟಿದೆ. ನಗರ ವಿಸ್ತಾರವಾದಂತೆ ಜನಸಂಖ್ಯೆ ವೃದ್ಧಿಸುತ್ತಿದೆ. ಇದಕ್ಕೆ ಅನುಗುಣವಾಗಿ ವಾಹನಗಳ ಸಂಖ್ಯೆ ಹೆಚ್ಚುತ್ತಿದೆ.

ನಗರದಲ್ಲಿನ 159 ಕಿ.ಮೀ ರಸ್ತೆಯನ್ನು ನಗರಸಭೆ ಹಾಗೂ 10 ಕಿ.ಮೀ ರಸ್ತೆಯನ್ನು ಲೋಕೋಪಯೋಗಿ ಇಲಾಖೆ ನಿರ್ವಹಣೆ ಮಾಡುತ್ತಿದೆ. ನಗರದಲ್ಲಿ ಸದ್ಯ ಸುಮಾರು 1 ಲಕ್ಷ ವಾಹನಗಳಿದ್ದು, ಪ್ರತಿನಿತ್ಯ ಹೊಸ ವಾಹನಗಳು ರಸ್ತೆಗಿಳಿಯುತ್ತಿವೆ. ಜತೆಗೆ ಹೊರ ಭಾಗದಿಂದ ಬರುವ ಸಾವಿರಾರು ವಾಹನಗಳು ನಗರದ ಮೂಲಕ ಹಾದು ಹೋಗುತ್ತಿವೆ.

ನಗರದ ಸುತ್ತಮುತ್ತ ವೇಮಗಲ್‌, ನರಸಾಪುರ, ಟಮಕ ಕೈಗಾರಿಕಾ ಪ್ರದೇಶಗಳು ತಲೆಎತ್ತಿದ್ದು, ಸರಕು ಸಾಗಣೆ ವಾಹನಗಳ ಓಡಾಟ ಹೆಚ್ಚಿದೆ. ನಗರಕ್ಕೆ ಹೊಂದಿಕೊಂಡಂತಿರುವ ಕೃಷಿ ಉತ್ಪನ್ನ ಮಾರುಕಟ್ಟೆಯಿಂದ (ಎಪಿಎಂಸಿಗೆ) ರಾಜ್ಯದ ಬೇರೆ ಜಿಲ್ಲೆಗಳಿಗೆ ಹಾಗೂ ಹೊರ ರಾಜ್ಯಗಳಿಗೆ ಭಾರಿ ವಾಹನಗಳ ಮೂಲಕ ಪ್ರತಿನಿತ್ಯ ನೂರಾರು ಲೋಡ್‌ ತರಕಾರಿ ರಫ್ತಾಗುತ್ತದೆ.

ಹೀಗಾಗಿ ನಗರದೊಳಗಿನ ರಸ್ತೆಗಳಲ್ಲಿ ವಾಹನ ದಟ್ಟಣೆ ಹಾಗೂ ವಾಯುಮಾಲಿನ್ಯ ಹೆಚ್ಚಿದೆ. ವಾಹನ ಸಂಚಾರದಿಂದ ರಸ್ತೆಗಳು ಹಾಳಾಗುತ್ತಿವೆ. ಮತ್ತೊಂದೆಡೆ ನಗರವಾಸಿಗಳು ದಿನನಿತ್ಯ ಕಿರಿ ಕಿರಿ ಅನುಭವಿಸುವಂತಾಗಿದೆ.

2004ರಲ್ಲೇ ಅಸ್ತು: ನಗರದೊಳಗಿನ ಸಂಚಾರ ದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು 2004ರಲ್ಲೇ ವರ್ತುಲ ರಸ್ತೆ ನಿರ್ಮಾಣಕ್ಕೆ ಅಸ್ತು ಎಂದಿತ್ತು. ಆದರೆ, ಕಾರಣಾಂತರದಿಂದ ರಸ್ತೆ ಕಾಮಗಾರಿ ಆರಂಭವಾಗಲೇ ಇಲ್ಲ. ದಶಕದಿಂದ ನನೆಗುದಿಗೆ ಬಿದ್ದಿದ್ದ ವರ್ತುಲ ರಸ್ತೆ ಯೋಜನೆಗೆ ಕುಡಾ ಈಗ ಮರು ಜೀವ ನೀಡಿದೆ.

ಪ್ರಾಧಿಕಾರವು ಒಟ್ಟಾರೆ 21 ಕಿ.ಮೀ ವರ್ತುಲ ರಸ್ತೆ ನಿರ್ಮಾಣಕ್ಕೆ ಯೋಜನೆ ರೂಪಿಸಿದೆ. ತಾಲ್ಲೂಕಿನ ಕಸಬಾ ಹೋಬಳಿ ವ್ಯಾಪ್ತಿಯ ಅಮ್ಮೇರಹಳ್ಳಿ, ಕೊಂಡರಾಜನಹಳ್ಳಿ, ಸುಲ್ತಾನ್‌ ತಿಪ್ಪಸಂದ್ರ, ಕೀಲುಕೋಟೆ, ವಿಭೂತಿಪುರ, ಖಾದ್ರಿಪುರ, ಸಂಗೊಂಡಹಳ್ಳಿ, ಅರಹಳ್ಳಿ ಹಾಗೂ ಕೋಡಿಕಣ್ಣೂರು ಗ್ರಾಮಗಳಲ್ಲಿ ರಸ್ತೆಗೆ 48 ಎಕರೆ 19 ಗುಂಟೆ ಜಮೀನು ಗುರುತಿ ಸಲಾಗಿದೆ. ಇದರಲ್ಲಿ ಸರ್ಕಾರಿ ಹಾಗೂ ಖಾಸಗಿಯವರ ಜಮೀನುಗಳು ಸೇರಿವೆ.

ಭೂಸ್ವಾಧೀನಕ್ಕೆ ಅಧಿಸೂಚನೆ: ಮೊದಲ ಹಂತದಲ್ಲಿ ಮಾಲೂರು ರಸ್ತೆಯಿಂದ ಬೆಂಗಳೂರು ರಸ್ತೆ, ಅಂತರಂಗೆ ರಸ್ತೆ, ಖಾದ್ರಿಪುರ, ಚಿಕ್ಕಬಳ್ಳಾಪುರ ರಸ್ತೆ, ಚಿಂತಾಮಣಿ ರಸ್ತೆ, ಶ್ರೀನಿವಾಸಪುರ ರಸ್ತೆಯನ್ನು ಸಂಪರ್ಕಿಸುವಂತೆ (ನಗರದ ಹೊರವಲಯದ ಅಮ್ಮೇರಹಳ್ಳಿಯಿಂದ ಸಂಗೊಂಡಹಳ್ಳಿವರೆಗೆ) 6 ಕಿ.ಮೀ ವರ್ತುಲ ರಸ್ತೆ ನಿರ್ಮಿಸಲು ಉದ್ದೇಶಿಸಲಾಗಿದ್ದು, ಇದಕ್ಕೆ ಭೂಮಿ ಸ್ವಾಧೀನ ಮಾಡಲು ಪ್ರಾಧಿಕಾರವು ಅಧಿಸೂಚನೆ ಹೊರಡಿಸಿದೆ.

ರಸ್ತೆಗೆ ಗುರುತಿಸಲಾಗಿರುವ ಜಮೀನುಗಳ ಸ್ವಾಧೀನದ ಸಂಬಂಧ ಆಕ್ಷೇಪಣೆ ಸಲ್ಲಿಸಲು ಸಾರ್ವಜನಿಕರಿಗೆ 15 ದಿನಗಳ ಕಾಲಾವಕಾಶ ನೀಡಲಾಗಿದೆ. ಇದರ ಬೆನ್ನಲ್ಲೇ ಜಮೀನು ಮಾಲೀಕರಿಂದ ವಿರೋಧ ವ್ಯಕ್ತವಾಗಿದ್ದು, ಯೋಜನೆಗೆ ಆರಂಭದಲ್ಲೇ ವಿಘ್ನ ಎದುರಾಗಿದೆ.

* * 

ರಸ್ತೆ ಕಾಮಗಾರಿ ಸಂಬಂಧ ಸಿಎಂ ಸಿದ್ದರಾಮಯ್ಯ ಜತೆ ಚರ್ಚಿಸಿದ್ದು, ಪ್ರಸಕ್ತ ಬಜೆಟ್‌ನಲ್ಲಿ ಅನುದಾನ ಮಂಜೂರಾತಿ ನೀಡಲು ಅವರು ಒಪ್ಪಿಗೆ ಸೂಚಿಸಿದ್ದಾರೆ

ಅತಾವುಲ್ಲಾ ಖಾನ್‌, ಕುಡಾ ಅಧ್ಯಕ್ಷರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry