ಒಂದು ಪ್ರೀತಿಯ ಕತೆ

7

ಒಂದು ಪ್ರೀತಿಯ ಕತೆ

Published:
Updated:
ಒಂದು ಪ್ರೀತಿಯ ಕತೆ

ಸಲಿಂಗಿಗಳ ಬದುಕಿನ ತಲ್ಲಣಗಳ ಚಿತ್ರಣಗಳನ್ನು ರಂಗರೂಪಕ್ಕೆ ಇಳಿಸಲು ಸಜ್ಜಾಗಿದೆ ‘ಬೆಂಗಳೂರು ಥಿಯೇಟರ್ ಕಲೆಕ್ಟಿವ್’ ರಂಗತಂಡ. 1982ರಲ್ಲಿ ವಿಜಯ್ ತೆಂಡೂಲ್ಕರ್‌ ಅವರು ರಚಿಸಿದ ‘ಮಿತ್ರಾಚಿ ಗೋಸ್ಟ್‌’ ನಾಟಕವನ್ನು ವೆಂಕಟೇಶ್ ಪ್ರಸಾದ್‌ ‘ಒಂದು ಪ್ರೀತಿಯ ಕಥೆ’ ಎಂಬ ಹೆಸರಿನೊಂದಿಗೆ ಕನ್ನಡಕ್ಕೆ ರೂಪಾಂತರಿಸಿದ್ದಾರೆ. ಜ.25 ಮತ್ತು 26ರಂದು ಸಂಜೆ 7.30‌ಕ್ಕೆ ರಂಗಶಂಕರದಲ್ಲಿ ಮತ್ತು ಫೆ.4ರಂದು ಹನುಮಂತನಗರದ ಕೆ.ಎಚ್.ಕಲಾಸೌಧದಲ್ಲಿ ನಾಟಕ ಪ್ರದರ್ಶನ ನಡೆಯಲಿದೆ.

ಸಲಿಂಗಿಗಳ ವಿವಾಹ ವಿಷಯ ಕುರಿತು ರಂಗಪ್ರಯೋಗಗಳಾಗಿದ್ದು ವಿರಳ. ತೃತೀಯ ಲಿಂಗಿಗಳು, ಸಲಿಂಗಿಗಳು ಹಾಗೂ ಲೈಂಗಿಕ ಅಲ್ಪಸಂಖ್ಯಾತರನ್ನು ಮುಖ್ಯವಾಹಿನಿಯ ಕಲಾ ಪ್ರಕಾರಗಳಲ್ಲಿ ಹಾಸ್ಯದ ವಸ್ತುವಾಗಿ ಬಳಸಿಕೊಂಡಿದ್ದೇ ಹೆಚ್ಚು. ಇಲ್ಲವೇ ಅವರನ್ನು ವ್ಯವಸ್ಥೆಯ ಬಲಿಪಶುಗಳು ಎನ್ನುವಂತೆ ಬಿಂಬಿಸಲಾಗುತ್ತದೆ. ಆದರೆ, ಈ ಎರಡೂ ಸಿದ್ಧ ಮಾದರಿಯ ಸಾಧ್ಯತೆಗಳಾಚೆ ಸಲಿಂಗ ವಿವಾಹ ಹಾಗೂ ಸಲಿಂಗ ಪ್ರೀತಿ ಅತಿ ಸಹಜವಾದುದು ಎನ್ನುವುದನ್ನು ಗಟ್ಟಿಯಾದ ನಿಲುವಿನೊಂದಿಗೆ ಪ್ರತಿಪಾದಿಸಲು ‘ಬೆಂಗಳೂರು ಥಿಯೇಟರ್ ಕಲೆಕ್ಟಿವ್’ ರಂಗತಂಡ ಅಣಿಯಾಗಿದೆ.

ಈ ನಾಟಕ ರಚನೆಯಾದದ್ದು 1980ರ ದಶಕದಲ್ಲಿ. ಅಂದಿನ ದಿನಗಳಿಗೂ, ಇಂದಿನ ಪರಿಸ್ಥಿತಿಗೂ ಸಲಿಂಗಿಗಳ ಕುರಿತು ನಮ್ಮ ಸಮಾಜ ಹೊಂದಿರುವ ಮನಸ್ಥಿತಿಯಲ್ಲಿ ಬಹುದೊಡ್ಡ ಬದಲಾವಣೆಗಳಾಗಿಲ್ಲ. ಲೈಂಗಿಕ ಅಲ್ಪಸಂಖ್ಯಾತರ ಕುರಿತು ಜನರು ಹೊಂದಿರುವ ಪೂರ್ವಾಗ್ರಹಗಳು ಜನರಲ್ಲಿ ಗಟ್ಟಿಯಾಗಿ ಬೇರೂರಿವೆ. ಸಲಿಂಗ ವಿವಾಹವಾಗುವವರು ಅಸಾಮಾನ್ಯರು, ಅಸಹಜರು ಎನ್ನುವ ಧೋರಣೆಯನ್ನು ತೊಲಗಿಸುವ ನಿಟ್ಟಿನಲ್ಲಿ ರಂಗತಂಡ ಕಾರ್ಯಪ್ರವೃತ್ತವಾಗಿದೆ.

‘ಸಲಿಂಗ ಕಾಮವು ವೈಯಕ್ತಿಕ ಆಯ್ಕೆಯಲ್ಲ. ನೈಸರ್ಗಿಕವಾಗಿಯೇ ಈ ರೀತಿಯ ಆಸಕ್ತಿಗಳು ಮೂಡುತ್ತವೆ ಎಂದು ವೈದ್ಯಕೀಯ ವಿಜ್ಞಾನ ತಿಳಿಸುತ್ತದೆ. ಪ್ರಾಣಿಗಳಲ್ಲಿಯೂ ಈ ಬಗೆಯ ಸಂಬಂಧಗಳನ್ನು ಕಾಣಬಹುದು. ಸಲಿಂಗವು ಅಸಾಮಾನ್ಯ ‍ಪ್ರವೃತ್ತಿಯಲ್ಲ. ಗಂಡು ಹೆಣ್ಣಿನ ಪ್ರೀತಿ ಹೇಗೆ ಸಾಗುತ್ತದೆಯೋ ಹಾಗೆಯೇ ಇಬ್ಬರು ಹೆಣ್ಣು ಮಕ್ಕಳ ಪ್ರೇಮವನ್ನೂ ನಾಟಕದಲ್ಲಿ ಹೆಣೆಯಲಾಗಿದೆ. ಇದು ಅಸಹಜವಲ್ಲ ಎನ್ನುವುದನ್ನು ಪ್ರೇಕ್ಷಕರ ಮನಮುಟ್ಟುವಂತೆ ಸಾರುವುದೇ ನಾಟಕದ ಉದ್ದೇಶ. ಗಂಡು ಹೆಣ್ಣಿನ ಪ್ರೇಮಕ್ಕೆ ಎದುರಾಗುವ ಎಲ್ಲ ಅಡೆತಡೆಗಳು ಸಲಿಂಗಿಗಳ ಪ್ರೀತಿಗೂ ಎದುರಾಗುತ್ತವೆ. ಅದರ ಹೊರತಾಗಿ ಸಲಿಂಗಿಗಳು ಎಂಬ ಕಾರಣಕ್ಕೆ ಅವರ ಪ್ರೀತಿಯಲ್ಲಿ ವಿಶೇಷ ಸವಾಲುಗಳಿರುವುದಿಲ್ಲ’ ಎನ್ನುತ್ತಾರೆ ವೆಂಕಟೇಶ್.

‘ಲೈಂಗಿಕ ಅಲ್ಪಸಂಖ್ಯಾತರನ್ನು ಕಲೆಗಳಲ್ಲಿ ಹಾಸ್ಯಕ್ಕೆ ಬಳಸಿಕೊಳ್ಳುವುದು ಅಥವಾ ಅವರ ಸಮಸ್ಯೆಗಳನ್ನು ವೈಭವೀಕರಿಸುವುದು, ಅಲ್ಲದೆ ವೀಕ್ಷಕರಿಂದ ಕಣ್ಣೀರು ಹಾಕಿಸಿ, ಸಮಾಜದಲ್ಲಿ ಸಲಿಂಗಿಗಳು ಸಹಜವಾಗಿ ಬದುಕಲು ಸಾಕಷ್ಟು ಶ್ರಮಪಡಬೇಕಾಗುತ್ತದೆ ಎಂಬುದನ್ನು ತಿಳಿಸುವುದು ಸರಿಯಲ್ಲ. ಇದರಿಂದ ಸಲಿಂಗಿಗಳನ್ನು ನೋಡುವ ಸಮಾಜದ ದೃಷ್ಟಿಕೋನದಲ್ಲಿ ಯಾವುದೇ ಬದಲಾವಣೆಗಳಾಗುವುದಿಲ್ಲ. ಹಾಗಾಗಿ ಈ ನಾಟಕದ ನಿರೂಪಣೆಯನ್ನು ಸಹಜವಾಗಿ ಕಟ್ಟಲಾಗಿದೆ. ಇಲ್ಲಿ ವೈಭವೀಕರಣವಿಲ್ಲ. ನವಿರಾದ ‍ಪ್ರೀತಿಯ ನಿರೂಪಣೆ ಇದೆ’ ಎನ್ನುವುದು ಅವರ ವಿವರಣೆ.

‘ನಾಟಕವು ಪ್ರಮುಖವಾಗಿ ಐದು ಪಾತ್ರಗಳ ಸುತ್ತ ಸುತ್ತುತ್ತವೆ. ಎಚ್‌.ಕೆ.ದ್ವಾರಕನಾಥ್ ಅವರ ರಂಗಸಜ್ಜಿಕೆ, ಸುಮೆರೊ ಅವರ ಸಂಗೀತ ಹಾಗೂ ವಿನಯ್ ಚಂದ್ರ ಅವರ ಬೆಳಕಿನ ವಿನ್ಯಾಸ ನಾಟಕವನ್ನು ಮತ್ತಷ್ಟು ನೈಜ ಹಾಗೂ ಆಪ್ತವಾಗಿಸಲಿದೆ’ ಎನ್ನುತ್ತಾರೆ ಅವರು.

ಹದಿನೆಂಟು ವರ್ಷಗಳಿಂದ ರಂಗಭೂಮಿಯಲ್ಲಿ ಸಕ್ರಿಯರಾಗಿರುವ ವೆಂಕಟೇಶ್‌ ಅವರಿಗೆ ನಟ, ನಿರ್ದೇಶಕ ಹಾಗೂ ನಿರ್ಮಾಪಕರಾಗಿ ಕೆಲಸ ಮಾಡಿದ ಅನುಭವವಿದೆ. ಈ ಹಿಂದೆ ಅವರು ‘ಚೆರ್ರಿ ತೋಟ’ ನಾಟಕ ನಿರ್ದೇಶಿಸಿದ್ದರು. ಪ್ರಕಾಶ್ ಬೆಳವಾಡಿ ನಿರ್ದೇಶನದ ‘ಪಾಕೆಟ್‌’ ನಾಟಕಕ್ಕಾಗಿ ಶ್ರಮಿಸಿದ್ದರು. ‘ಒಂದು ಪ್ರೀತಿಯ ಕಥೆ’ ಅವರ ನಿರ್ದೇಶನದ ಎರಡನೇ ನಾಟಕ.ವೆಂಕಟೇಶ್‌ ಪ್ರಸಾದ್‌

***

ನಾಟಕ– ಒಂದು ಪ್ರೀತಿಯ ಕಥೆ

ನಿರ್ದೇಶನ– ವೆಂಕಟೇಶ್‌ ಪ್ರಸಾದ್‌

ಸ್ಥಳ– ರಂಗಶಂಕರ

ದಿನಾಂಕ, ಸಮಯ– ಜ.25 ಮತ್ತು 26, ರಾತ್ರಿ 7.30, ಟಿಕೆಟ್‌ ದರ– ₹150

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry