ಶುಕ್ರವಾರ, ಡಿಸೆಂಬರ್ 6, 2019
25 °C

ದಾಖಲೆ ಸರಣಿ ಜಯದ ತವಕದಲ್ಲಿ ಭಾರತ: ಡಿವಿಲಿಯರ್ಸ್, ರೋಹಿತ್ ಶರ್ಮಾ ಮೇಲೆ ಕಣ್ಣು

Published:
Updated:
ದಾಖಲೆ ಸರಣಿ ಜಯದ ತವಕದಲ್ಲಿ ಭಾರತ: ಡಿವಿಲಿಯರ್ಸ್, ರೋಹಿತ್ ಶರ್ಮಾ ಮೇಲೆ ಕಣ್ಣು

ಜೊಹಾನ್ಸ್‌ಬರ್ಗ್‌: ಹ್ಯಾಟ್ರಿಕ್‌ ಜಯದ ಮೂಲಕ ದಾಖಲೆ ಬರೆದ ಭಾರತ ತಂಡ ದಕ್ಷಿಣ ಆಫ್ರಿಕಾದಲ್ಲಿ ಮೊದಲ ಸರಣಿ ಜಯದ ದಾಖಲೆ ತನ್ನದಾಗಿಸಿಕೊಳ್ಳಲು ಸಜ್ಜಾಗಿದೆ. ಆತಿಥೇಯರ ಎದುರಿನ ಆರು ಪಂದ್ಯಗಳ ಏಕದಿನ ಸರಣಿಯ ನಿರ್ಣಾಯಕ ನಾಲ್ಕನೇ ಪಂದ್ಯ ಇಲ್ಲಿನ ನ್ಯೂ ವಾಂಡರರ್ಸ್‌ನಲ್ಲಿ ಶನಿವಾರ ನಡೆಯಲಿದೆ.

ಟೆಸ್ಟ್ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ವೇಗಿಗಳಿಗೆ ಶರಣಾದ ಭಾರತದ ಬ್ಯಾಟ್ಸ್‌ಮನ್‌ಗಳು ಏಕದಿನ ಸರಣಿಯಲ್ಲಿ ತಿರುಗೇಟು ನೀಡಿದ್ದಾರೆ.

ನಾಯಕ ವಿರಾಟ್ ಕೊಹ್ಲಿ ಮೊದಲ ಮತ್ತು ಮೂರನೇ ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿದ್ದಾರೆ. ನಾಯಕ ಫಾಫ್ ಡುಪ್ಲೆಸಿ ಸೇರಿದಂತೆ ಮೂವರು ಬ್ಯಾಟ್ಸ್‌ಮನ್‌ಗಳ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ಆತಿಥೇಯರಿಗೆ ಡಿವಿಲಿಯರ್ಸ್ ತಂಡಕ್ಕೆ ಮರಳಿರುವುದು ಸಮಾಧಾನ ತಂದಿದ್ದು ಶನಿವಾರ ಗೆದ್ದು ಸರಣಿಯನ್ನು ಜೀವಂತವಾಗಿರಿಸಿಕೊಳ್ಳಲು ಶ್ರಮಿಸಲಿದೆ.

ದಕ್ಷಿಣ ಆಫ್ರಿಕಾ ನೆಲದಲ್ಲಿ ಏಕದಿನ ಸರಣಿಗಳಲ್ಲಿ ಭಾರತದ ಸಾಧನೆ ಉತ್ತಮವಾಗಿಲ್ಲ. ಮಹೇಂದ್ರ ಸಿಂಗ್ ದೋನಿ ನೇತೃತ್ವದ ತಂಡ 2011ರಲ್ಲಿ ಸರಣಿ ಜಯದ ಸನಿಹದಲ್ಲಿ ಎಡವಿತ್ತು. ಐದು ಪಂದ್ಯಗಳ ಸರಣಿಯ ಆರಂಭದಲ್ಲಿ 2–1ರ ಮುನ್ನಡೆ ಸಾಧಿಸಿದ ತಂಡ ನಂತರ 3–2ರಿಂದ ಸರಣಿಯನ್ನು ಕಳೆದುಕೊಂಡಿತ್ತು. ಈ ಬಾರಿ ಮೊದಲ ಮೂರು ಪಂದ್ಯಗಳನ್ನು ಗೆದ್ದು ಭರವಸೆಯಿಂದ ಬೀಗುತ್ತಿರುವ ತಂಡ ನಾಲ್ಕನೇ ಪಂದ್ಯದಲ್ಲಿ ಗೆದ್ದರೆ ಸರಣಿ ಬಗಲಿಗೆ ಹಾಕಿಕೊಳ್ಳುವುದರ ಜೊತೆಯಲ್ಲಿ ಐಸಿಸಿ ರ‍್ಯಾಂಕಿಂಗ್‌ನಲ್ಲಿ ತಂಡದ ಒಂದನೇ ಸ್ಥಾನ ಇನ್ನಷ್ಟು ಭದ್ರವಾಗಲಿದೆ.

ಕುಲದೀಪ್‌–ಯಜುವೇಂದ್ರ ಭಯದಲ್ಲಿ ಆತಿಥೇಯರು

ಭಾರತ ತಂಡವನ್ನು ಟೆಸ್ಟ್‌ ಸರಣಿಯಲ್ಲಿ ವೇಗದ ಬೌಲಿಂಗ್ ಮೂಲಕ ನಿಯಂತ್ರಿಸಿದ ದಕ್ಷಿಣ ಆಫ್ರಿಕಾಗೆ ಈಗ ಮಣಿಕಟ್ಟಿನ ಸ್ಪಿನ್ ಮೂಲಕ ಕೊಹ್ಲಿ ಪಡೆ ತಿರುಗೇಟು ನೀಡುತ್ತಿದೆ. ಲೆಗ್ ಸ್ಪಿನ್ನರ್‌ ಯಜುವೇಂದ್ರ ಚಾಹಲ್ ಮತ್ತು ಚೈನಾಮನ್ ಬೌಲಿಂಗ್ ಶೈಲಿಯ ಕುಲದೀಪ್ ಯಾದವ್ ಮೂರು ಪಂದ್ಯಗಳಲ್ಲಿ ಉರುಳಿದ ಒಟ್ಟು 30 ವಿಕೆಟ್‌ಗಳ ಪೈಕಿ 21 ವಿಕೆಟ್‌ಗಳನ್ನು ಹಂಚಿಕೊಂಡಿದ್ದಾರೆ.

ಏಡನ್ ಮರ್ಕರಮ್ ನೇತೃತ್ವದ ತಂಡ ನಾಲ್ಕನೇ ಪಂದ್ಯದಲ್ಲೂ ಈ ಇಬ್ಬರು ಸ್ಪಿನ್ನರ್‌ಗಳ ಭಯದಲ್ಲೇ ಕಣಕ್ಕೆ ಇಳಿಯಲಿದೆ.

ಸ್ಫೋಟಕ ಬ್ಯಾಟ್ಸ್‌ಮನ್‌ ಡಿವಿ ಲಿಯರ್ಸ್ ತಂಡಕ್ಕೆ ಮರಳಿದ್ದರೂ ಶನಿ ವಾರದ ಪಂದ್ಯದಲ್ಲಿ ಆಡುವುದರ ಬಗ್ಗೆ ತಂಡದ ಆಡಳಿತ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಅವರು ಆಡಲು ಸಮರ್ಥರಾದರೆ ಮೂರನೇ ಕ್ರಮಾಂಕದಲ್ಲಿ ಕಣಕ್ಕೆ ಇಳಿಯಲಿದ್ದು ಜೆಪಿ ಡುಮಿನಿ ಅವರನ್ನು ನಾಲ್ಕನೇ ಕ್ರಮಾಂಕದಲ್ಲಿ ಇಳಿಸಲು ತಂಡ ಮುಂದಾಗಲಿದೆ. ಡೇವಿಡ್ ಮಿಲ್ಲರ್‌ ಅಥವಾ ಖಯಾ ಜೊಂಡೊ ಅವರನ್ನು ಕೈಬಿಡಬೇಕಾಗುತ್ತದೆ.

ರೋಹಿತ್‌ ಶರ್ಮಾ ಫಾರ್ಮ್‌ನಲ್ಲಿಲ್ಲ. ಆದರೂ ನಾಲ್ಕನೇ ಪಂದ್ಯಕ್ಕೆ ತಂಡದಲ್ಲಿ ಬದಲಾವಣೆ ಮಾಡಲು ಕೊಹ್ಲಿ ಮುಂದಾಗದಿರುವ ಸಾಧ್ಯತೆ ಇದೆ. ಈ ಅಂಗಣದಲ್ಲಿ ಭಾರತ ಈ ವರೆಗೆ ಏಳು ಪಂದ್ಯಗಳನ್ನು ಆಡಿದ್ದು ನಾಲ್ಕರಲ್ಲಿ ಸೋತಿದೆ.

2003ರ ವಿಶ್ವಕಪ್‌ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಸೋತಿದ್ದು ಕೂಡ ಇದೇ ಅಂಗಣದಲ್ಲಿ.

ದಕ್ಷಿಣ ಆಫ್ರಿಕಾ ವಿರುದ್ಧ ಇಲ್ಲಿ ಆಡಿದ ನಾಲ್ಕು ಪಂದ್ಯಗಳ ಪೈಕಿ ಮೂರರಲ್ಲಿ ಭಾರತ ತಂಡ ಸೋತಿದೆ. 2011ರಲ್ಲಿ ರೋಚಕ ಅಂತ್ಯ ಕಂಡ ಪಂದ್ಯದಲ್ಲಿ ಭಾರತ ಒಂದು ರನ್‌ ಅಂತರದಲ್ಲಿ ಗೆದ್ದಿತ್ತು.

**

‘ಪಿಂಕ್‌ ಡೇ’ ಪಂದ್ಯ

ಸ್ತನ ಕ್ಯಾನ್ಸರ್‌ ಬಗ್ಗೆ ಅರಿವು ಮೂಡಿಸಲು ಮತ್ತು ರೋಗಿಗಳಿಗೆ ನೆರವಾಗಲು ದಕ್ಷಿಣ ಆಫ್ರಿಕಾ ನಾಲ್ಕನೇ ಪಂದ್ಯವನ್ನು ಪಿಂಕ್ ಡೇ ಪಂದ್ಯ ಎಂದು ಘೋಷಿಸಿದೆ. 2011ರಿಂದ ದಕ್ಷಿಣ ಆಫ್ರಿಕಾ ಈ ಸಂಪ್ರದಾಯ ಬೆಳೆಸಿಕೊಂಡು ಬಂದಿದೆ. ‘ಪಿಂಕ್‌ ಡೇ’ಯಲ್ಲಿ ಯಾವ ದೇಶದ ವಿರುದ್ಧವೂ ಸೋತಿಲ್ಲ. ಆದ್ದರಿಂದ ಶನಿವಾರದ ಪಂದ್ಯದಲ್ಲೂ ಗೆಲ್ಲುವ ಭರವಸೆಯಲ್ಲಿದೆ.

ಪಿಂಕ್ ಡೇ ಪಂದ್ಯಗಳಲ್ಲಿ ಡಿವಿಲಿಯರ್ಸ್‌ ಅತ್ಯುತ್ತಮ ಸಾಧನೆ ಮಾಡಿದ್ದಾರೆ. 2015ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಅವರು ಕೇವಲ 44 ಎಸೆತಗಳಲ್ಲಿ 149 ರನ್ ಗಳಿಸಿ ಮಿಂಚಿದ್ದರು. ಭಾರತ 2013ರಲ್ಲಿ ಪಿಂಕ್ ಪಂದ್ಯದಲ್ಲಿ ಭಾಗಿಯಾಗಿತ್ತು. ಆ ಪಂದ್ಯದಲ್ಲಿ ಡಿವಿಲಿಯರ್ಸ್‌ 44 ಎಸೆತಗಳಲ್ಲಿ 77 ರನ್ ಸಿಡಿಸಿದ್ದರು.

ಪ್ರತಿಕ್ರಿಯಿಸಿ (+)