ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣ್ಣು ಹಾಯಿಸಿದಲ್ಲೆಲ್ಲ ಕಲ್ಲಂಗಡಿ ‘ಖದರ್‌’

ನಗರಕ್ಕೆ ಕಲ್ಲಂಗಡಿ ದಾಂಗುಡಿ: ವ್ಯಾಪಾರಿಗಳಿಗೆ ಬಿಡುವಿಲ್ಲದ ದುಡಿಮೆ
Last Updated 12 ಮಾರ್ಚ್ 2018, 7:14 IST
ಅಕ್ಷರ ಗಾತ್ರ

ಕೋಲಾರ: ಚಳಿಗಾಲ ಮುಗಿದು ಬೇಸಿಗೆ ಆರಂಭವಾಗಿದ್ದೆ ತಡ ನಗರದಲ್ಲಿ ಕಲ್ಲಂಗಡಿ ದಾಂಗುಡಿ ಇಟ್ಟಿದೆ. ರಸ್ತೆ ಬದಿಯ ಅಂಗಡಿಗಳಿಗೆ ರಾಶಿ ರಾಶಿಯಾಗಿ ಕಲ್ಲಂಗಡಿ ಹಣ್ಣುಗಳು ಬಂದಿಳಿದಿವೆ. ವ್ಯಾಪಾರವೂ ಭರ್ಜರಿಯಾಗಿ ನಡೆಯುತ್ತಿದೆ.

ದೇಹವನ್ನು ತಂಪಾಗಿಸುವ ಈ ಹಣ್ಣಿಗೆ ಈಗ ಎಲ್ಲಿಲ್ಲದ ಬೇಡಿಕೆ. ದಿನದಿಂದ ದಿನಕ್ಕೆ ಬಿಸಿಲ ಝಳ ಏರುತ್ತಿದ್ದು, ಜನರು ದಾಹ ನೀಗಿಸಿಕೊಳ್ಳಲು ಕಲ್ಲಂಗಡಿ ಹಣ್ಣಿನ ಮೊರೆ ಹೋಗುತ್ತಿದ್ದಾರೆ. ರಸ್ತೆ ಬದಿಯ ಕಲ್ಲಂಗಡಿ ಹಣ್ಣಿನ ಅಂಗಡಿಗಳು ಆಕರ್ಷಣೆಯ ಕೇಂದ್ರ ಬಿಂದುಗಳಾಗಿವೆ. ಹಾಪ್‌ಕಾಮ್ಸ್‌ ಮಳಿಗೆಗಳಲ್ಲೂ ಕಲ್ಲಂಗಡಿ ವಹಿವಾಟು ಜೋರಾಗಿದೆ.

ಟಿ.ಚನ್ನಯ್ಯ ರಂಗಮಂದಿರ ಮುಂಭಾಗದ ರಸ್ತೆ, ಇಟಿಸಿಎಂ ಆಸ್ಪತ್ರೆ, ಪ್ರಭಾ ಚಿತ್ರಮಂದಿರ ರಸ್ತೆ, ಕಾಲೇಜು ವೃತ್ತ, ಜಿಲ್ಲಾ ಪಂಚಾಯಿತಿ ರಸ್ತೆ, ಎಂ.ಬಿ.ರಸ್ತೆ, ಟೇಕಲ್‌ ರಸ್ತೆ, ಡೂಂಲೈಟ್‌ ವೃತ್ತ, ಕೋರ್ಟ್‌ ವೃತ್ತ, ಕ್ಲಾಕ್‌ ಟವರ್‌, ಮಾರುಕಟ್ಟೆಗಳು ಹೀಗೆ ಕಣ್ಣು ಹಾಯಿಸಿದಲ್ಲೆಲ್ಲಾ ಕಲ್ಲಂಗಡಿ ಖದರ್.

ಇದು ಕಟ್‌ಫ್ರೂಟ್ಸ್ ಮತ್ತು ಸಲಾಡ್ ರೂಪದ ಮಾರಾಟದಲ್ಲಿ ಹೆಚ್ಚಿನ ಬೇಡಿಕೆ ಹೊಂದಿದ್ದು, ನಗರದ ಗಲ್ಲಿ- ಗಲ್ಲಿಗಳಲ್ಲೂ ಈಗ ತಳ್ಳು ಗಾಡಿಗಳಲ್ಲಿ ಕಲ್ಲಂಗಡಿಯದೇ ಕಾರುಬಾರು. ಹಾಲು ಗಲ್ಲದ ಮಕ್ಕಳಿಂದ ವಯೋವೃದ್ಧವರೆಗೆ ಬಾಯಾರಿದ ತಕ್ಷಣ ನೀರು ಅರಸುವ ಮಂದಿ ಸೀದಾ ಕಲ್ಲಂಗಡಿಯತ್ತ ಮುಖ ಮಾಡುತ್ತಿದ್ದಾರೆ.

ಬಿಡುವಿಲ್ಲದ ದುಡಿಮೆ: ಮಹಾ ಶಿವರಾತ್ರಿ ಹಬ್ಬ ಮುಗಿದ ಕೂಡಲೇ ಚಳಿಗಾಲ ಅಂತ್ಯಗೊಳ್ಳುವುದು ಪ್ರತೀತಿ. ಹಬ್ಬದ ನಂತರ ಬಿಸಿಲ ತಾಪ ಹೆಚ್ಚುತ್ತದೆ. ಬೇಸಿಗೆಯಲ್ಲಿ ಜನರು ಸಾಮಾನ್ಯವಾಗಿ ಕಲ್ಲಂಗಡಿಯನ್ನು ಹೆಚ್ಚಾಗಿ ಇಷ್ಟಪಡುತ್ತಾರೆ. ಬಿಸಿಲ ಝಳ, ಸೆಕೆ ಕಾಲದಲ್ಲಿ ಈ ಹಣ್ಣಿನ ಅಂಗಡಿಗಳು ರಸ್ತೆ ಬದಿಯಲ್ಲಿ ತಲೆ ಎತ್ತುವುದು ರೂಢಿ. ಹೆದ್ದಾರಿ ಅಕ್ಕಪಕ್ಕ, ಸರ್ವಿಸ್‌ ರಸ್ತೆ, ಹೆಚ್ಚಿನ ಜನಸಂದಣಿ ಇರುವ ರಸ್ತೆಗಳು, ಸರ್ಕಾರಿ ಕಚೇರಿಗಳ ಅಕ್ಕಪಕ್ಕದ ರಸ್ತೆಗಳು ಕಲ್ಲಂಗಡಿ ಮಾರಾಟಕ್ಕೆ ಪ್ರಶಸ್ತ ಸ್ಥಳಗಳು.

ಜಿಲ್ಲೆಯಲ್ಲಿ ನೀರಿನ ಸಮಸ್ಯೆಯ ಕಾರಣಕ್ಕೆ ಕಲ್ಲಂಗಡಿ ಬೆಳೆಯುವ ರೈತರ ಸಂಖ್ಯೆ ತುಂಬಾ ಕಡಿಮೆ. ಹೀಗಾಗಿ ತಮಿಳುನಾಡು, ಆಂಧ್ರಪ್ರದೇಶದಿಂದ ಪ್ರತಿನಿತ್ಯ ಲಾರಿಗಳಲ್ಲಿ ಲೋಡ್‌ಗಟ್ಟಲೇ ಹಣ್ಣುಗಳನ್ನು ನಗರಕ್ಕೆ ತರಿಸಲಾಗುತ್ತಿದೆ. ಮಾರ್ಚ್‌ನಿಂದ ಮೇ ತಿಂಗಳ ಅಂತ್ಯ ದವರೆಗೆ ಮೂರು ತಿಂಗಳ ಕಾಲ ಕಲ್ಲಂಗಡಿ ವ್ಯಾಪಾರಿಗಳದು ಬಿಡುವಿಲ್ಲದ ದುಡಿಮೆ.

ಏರಿದ ಬೆಲೆ: ಕಲ್ಲಂಗಡಿಯಲ್ಲಿ ಕಿರಣ್‌, ನಾಮಧಾರಿ, ಮಧು, ಸುಪ್ರೀತ್‌ ತಳಿಯ ಹಣ್ಣುಗಳಿವೆ. ನಾಮಧಾರಿ ಹಣ್ಣುಗಳು ನೋಡಲು ಆಕರ್ಷಕ ಹಾಗೂ ತಿನ್ನಲು ರುಚಿಕರ. ಆದರೆ, ಬೆಲೆ ತುಸು ಹೆಚ್ಚು. ಕಿರಣ್‌ ತಳಿಯ ಹಣ್ಣುಗಳ ಬೆಲೆ ಕಡಿಮೆ ಇದ್ದರೂ ರುಚಿಯ ಕಾರಣಕ್ಕೆ ಜನ ನಾಮಧಾರಿ ಹಣ್ಣುಗಳನ್ನು ಹೆಚ್ಚು ಇಷ್ಟಪಡುತ್ತಾರೆ. ಕಿರಣ್‌ ತಳಿಯ ಹಣ್ಣುಗಳನ್ನು ಹೆಚ್ಚಾಗಿ ಜ್ಯೂಸ್‌ಗೆ ಬಳಸಲಾಗುತ್ತಿದೆ.

ನಗರದ ಮಾರುಕಟ್ಟೆಯಲ್ಲಿ ಫೆಬ್ರುವರಿಯಲ್ಲಿ ಕಲ್ಲಂಗಡಿ ಹಣ್ಣಿನ ಬೆಲೆ ಕೆ.ಜಿಗೆ ₹ 12 ಇತ್ತು. ಈಗ ಬೇಡಿಕೆ ಹೆಚ್ಚಿರುವುದರಿಂದ ಬೆಲೆ ₹ 20ಕ್ಕೆ ಏರಿದೆ. ಹಣ್ಣಿನ ಗುಣಮಟ್ಟ, ಗಾತ್ರ ಹಾಗೂ ತಳಿಯ ಮೇಲೆ ಬೆಲೆಯಲ್ಲಿ ವ್ಯತ್ಯಾಸವಾಗುತ್ತದೆ.

ಆರೋಗ್ಯಕರ ಹಣ್ಣು: ಶೇ 92ರಷ್ಟು ಭಾಗ ನೀರಿನ ಅಂಶದಿಂದಲೇ ಕೂಡಿರುವ ಕಲ್ಲಂಗಡಿಯು ಆರೋಗ್ಯಕರ ಹಣ್ಣು. ಬೇಸಿಗೆಯಲ್ಲಿ ಉಷ್ಣಾಂಶ ಅಧಿಕವಾಗಿ ರುವುದರಿಂದ ಕಲ್ಲಂಗಡಿ ದೇಹಕ್ಕೆ ತಂಪು ನೀಡುತ್ತದೆ. ಇದರ ಸೇವನೆಯು ಜೀರ್ಣ ಕ್ರಿಯೆಗೂ ಪೂರಕ. ಅಲ್ಲದೆ ದೇಹದಲ್ಲಿ ನೀರಿನ ಅಂಶ ವೃದ್ಧಿಸುತ್ತದೆ.

ಕಲ್ಲಂಗಡಿಯಲ್ಲಿ ವಿಟಮಿನ್ ಎ, ಬಿ ಮತ್ತು ಬಿ6 ಹೇರಳವಾಗಿದೆ. ಕೊಬ್ಬುರಹಿತ, ಅತಿ ಕಡಿಮೆ ಸೋಡಿಯಂ ಹೊಂದಿರುವ ಹಣ್ಣು ಇದಾಗಿರುವುದರಿಂದ ಒಂದು ಕಪ್ ಕಲ್ಲಂಗಡಿಯಲ್ಲಿ ಕೇವಲ 40 ಕ್ಯಾಲೊರಿ ಇರುತ್ತದೆ. ಇದರಲ್ಲಿನ ಲೈಕೊಪಿನ್ ಅಂಶವು ಹೃದಯ ಮತ್ತು ಮೂಳೆಗಳ ಆರೋಗ್ಯ ಕಾಪಾಡುತ್ತದೆ ಎಂದು ವೈದ್ಯರು ಹೇಳುತ್ತಾರೆ.

ಹೇರಳವಾದ ಖನಿಜ, ಅಲ್ಪ ಪ್ರಮಾ ಣದ ಕಬ್ಬಿಣಾಂಶವಿರುವ ಕಲ್ಲಂಗಡಿಯು ಮೂತ್ರ ಸಂಬಂಧಿ ರೋಗಗಳಿಗೆ ಅತ್ಯುತ್ತಮ ಮದ್ದು. ದಿನನಿತ್ಯದ ಬಳಕೆಯಿಂದ ಮೂತ್ರಪಿಂಡದಲ್ಲಿ ಕಲ್ಲು ಬರುವುದನ್ನು ತಡೆಯುವ ಸಾಮ ರ್ಥ್ಯವೂ ಈ ಹಣ್ಣಿಗಿದ್ದು, ಚರ್ಮ, ಕಣ್ಣು, ಕೂದಲು ಸೇರಿದಂತೆ ಆಂತರಿಕವಾಗಿ ದೇಹಕ್ಕೆ ನಾನಾ ರೀತಿಯಲ್ಲಿ ಪ್ರಯೋಜನಕಾರಿ.

*
ಬಿಸಿಲ ತಾಪ ಹೆಚ್ಚಿದರೆ ಹಣ್ಣಿನಲ್ಲಿ ನೀರಿನಂಶ ಕಡಿಮೆಯಾಗಿ ತೂಕ ಕುಸಿಯುವ ಸಾಧ್ಯತೆ ಹೆಚ್ಚು. ಹಣ್ಣುಗಳು ಗ್ರಾಹಕರ ಕೈಸೇರಿದರೆ ಅವರಿಗೂ ತೃಪ್ತಿ, ನಮಗೂ ಸಮಾಧಾನ.
–ಮಂಜುನಾಥ್‌ಗೌಡ, ಕಲ್ಲಂಗಡಿ ಸಗಟು ವ್ಯಾಪಾರಿ

*


-
ನಗರದರಸ್ತೆ ಬದಿಯ ಅಂಗಡಿಯೊಂದರಲ್ಲಿ ಗ್ರಾಹಕರು ಕಲ್ಲಂಗಡಿ ಹಣ್ಣು ಸವಿಯುತ್ತಿರುವುದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT