ಬಿಸಿ ಮುಟ್ಟಿಸಿರುವ ಬಿಬಿಸಿ ವರದಿ!

7

ಬಿಸಿ ಮುಟ್ಟಿಸಿರುವ ಬಿಬಿಸಿ ವರದಿ!

Published:
Updated:
ಬಿಸಿ ಮುಟ್ಟಿಸಿರುವ ಬಿಬಿಸಿ ವರದಿ!

ಕುಡಿಯುವ ನೀರಿನ ಕೊರತೆ ಉಂಟಾಗುವ ಜಗತ್ತಿನ 11 ನಗರಗಳ ಪಟ್ಟಿಯಲ್ಲಿ ಬೆಂಗಳೂರಿಗೆ ಎರಡನೇ ಸ್ಥಾನ ನೀಡಿರುವುದು ಆತಂಕವನ್ನೂ ಹೆಚ್ಚಿಸಿದೆ. ಬೆಂಗಳೂರು ಮಹಾನಗರಕ್ಕೆ ಕುಡಿಯುವ ನೀರು ಪೂರೈಸುವ ಹೊಣೆ ಹೊತ್ತುಕೊಂಡಿರುವ ಬೆಂಗಳೂರು ಜಲಮಂಡಳಿ ಮೂಲಗಳು ಈ ಸುದ್ದಿಯನ್ನು ನಿರಾಕರಿಸುತ್ತಿವೆ. ‘ಪ್ರಸ್ತುತ ಬೆಂಗಳೂರಿಗೆ ಕುಡಿಯುವ ನೀರಿನ ಸಮಸ್ಯೆ ಇಲ್ಲ. ವರದಿಯಲ್ಲಿನ ಅಂಶಗಳು ಸತ್ಯಕ್ಕೆ ದೂರವಾದುದು’ ಎನ್ನುತ್ತಿವೆ!

ಆದರೆ ವಾಸ್ತವ ಏನು? ಅಂದಾಜು 500 ವರ್ಷಗಳ ಹಿಂದೆ ಕೆಂಪೇಗೌಡ ಕಟ್ಟಿದ ಬೆಂಗಳೂರಿಗೆ ವರ್ಷದುದ್ದಕ್ಕೂ ಹರಿಯುವ ನದಿ ನಾಲೆಗಳ ನೆರವಿರಲಿಲ್ಲ. ಆದರೂ ಬೆಂಗಳೂರಿಗೆ ನೀರಿನ ಸಮಸ್ಯೆ ಎಂದೂ ಕಾಡಿರಲಿಲ್ಲ.

ಹಿಂದಿನ 100 ವರ್ಷಗಳ ಮಳೆ ಪ್ರಮಾಣದ ದಾಖಲೆಗಳ ಪ್ರಕಾರ ಸರಾಸರಿ 929 ಮಿಲಿಮೀಟರ್‌ ಮಳೆ ಬೆಂಗಳೂರಿನಲ್ಲಿ ಬಿದ್ದಿದೆ. ವರ್ಷಕ್ಕೆ ಕನಿಷ್ಠ 57 ದಿನ ಇಲ್ಲಿ ಮಳೆಯಾಗಿದೆ. ಬಹುಶಃ ಅದಕ್ಕೂ ಹಿಂದೆ ಇನ್ನೂ ಹೆಚ್ಚಿನ ಮಳೆ ಬಿದ್ದಿರಬಹುದು. ಹೀಗಾಗಿಯೇ ಬೆಂಗಳೂರಿನ ಆಸುಪಾಸಿನಲ್ಲಿ ಮಳೆ ನೀರು ಹಿಡಿದಿಡಲು ನೂರಾರು ಕೆರೆಗಳು ನಿರ್ಮಾಣಗೊಂಡಿದ್ದವು.

ಬಾವಿಗಳೂ–ಕಲ್ಯಾಣಿಗಳೂ ಇದ್ದವು. ಕುಡಿಯುವ ನೀರಿಗೆ ಬೇಸಾಯಕ್ಕೂ ಆಗ ನೀರಿನ ಕೊರತೆ ಇರಲಿಲ್ಲ. ನಂದಿ ಬೆಟ್ಟದಿಂದ ಬರುವ ಅರ್ಕಾವತಿ ಬೆಂಗಳೂರು ಸುತ್ತ ಅನೇಕ ಕೆರೆಗಳಿಗೆ ನೀರುಣಿಸುತ್ತಿತ್ತು. ಅರ್ಕಾವತಿ ಕಣಿವೆ ಜಲ ಸಂಪನ್ಮೂಲವೇ ಬೆಂಗಳೂರಿಗೆ ಬಹುಮುಖ್ಯ ಆಸರೆ.

ಬೆಂಗಳೂರು ಸುತ್ತ ಕೃಷಿ ಪ್ರದೇಶ, ಪೇಟೆಯೊಳಗೆ ವ್ಯಾಪಾರ ವಹಿವಾಟು– ನೆಮ್ಮದಿಯ ಬದುಕು ಇದ್ದ ಬೆಂಗಳೂರಿನ ಮೇಲೆ ಎಲ್ಲರ ಕಣ್ಣುಬಿತ್ತು. ಬೆಂಗಳೂರಿನಲ್ಲಿಯೇ ಸೈನಿಕ ಶಿಬಿರ ಹೂಡಲು ‘ದಂಡು’ ಸ್ಥಾಪನೆಯಾಯಿತು. ಬಿಳಿಯರಿಗೆ ಅವರ ಕುಟುಂಬಗಳಿಗೆ ನೀರು ಪೂರೈಸಲು ಅರ್ಕಾವತಿ ನೀರು ತುಂಬುವ ಹೆಸರಘಟ್ಟದಲ್ಲಿ ಸಂಸ್ಕರಣಾ ಕೇಂದ್ರ ಸ್ಥಾಪನೆಗೊಂಡಿತು. ನಲ್ಲಿಗಳ ಮೂಲಕ ನೀರು ಸರಬರಾಜು ಶುರುವಾಯಿತು.

ಇದೆಲ್ಲಾ ಆಗಿದ್ದು 19ನೇ ಶತಮಾನದ ಕೊನೆ ಭಾಗದಲ್ಲಿ. ದಂಡು ಪ್ರದೇಶಕ್ಕೆ ಬಂದ ನಲ್ಲಿ ನೀರು ಹಳೇ ಬೆಂಗಳೂರಿಗೆ ಬರಲು ಸಾಧ್ಯವಾಗಿದ್ದು ತಿಪ್ಪಗೊಂಡನಹಳ್ಳಿ ಜಲಾಶಯದಿಂದ ನೀರು ಸರಬರಾಜು ಆರಂಭಗೊಂಡ ಮೇಲೆ. ಅದು ಆಗಿದ್ದು 20ನೇ ಶತಮಾನದ ಆರಂಭದ ವರ್ಷಗಳಲ್ಲಿ. ಕೆರೆ ಕುಂಟೆಗಳಲ್ಲಿ ಸಂಗ್ರಹವಾಗುತ್ತಿದ್ದ ನೀರು, ಬಾವಿ ಪುಷ್ಕರಿಣಿಗಳಲ್ಲಿದ್ದ ಜಲ ಆಗಿನ ಬೆಂಗಳೂರಿಗೆ ಸಾಕಿತ್ತು. ಕೊಳಾಯಿ ವ್ಯವಸ್ಥೆಯಿಂದ ಅನುಕೂಲ ಹೆಚ್ಚಾಯಿತು.

ಸ್ವಾತಂತ್ರ್ಯಾ ನಂತರ ಬೆಂಗಳೂರಿನ ಬೆಳವಣಿಗೆ, ಜನಸಂಖ್ಯೆ ಹೆಚ್ಚಿತು. ನಗರದ ನೀರು ಸಂಗ್ರಹದ ಕೆರೆ ಕಟ್ಟೆಗಳೆಲ್ಲಾ ಜನ ವಸತಿಗಳಾದವು. ಕ್ರೀಡಾಂಗಣ, ಬಸ್‌ ನಿಲ್ದಾಣ, ಬಹು ಅಂತಸ್ತಿನ ಕಟ್ಟಡಗಳೆಲ್ಲಾ ಕೆರೆಗಳ ಅಂಗಳಗಳಲ್ಲಿ ತಲೆ ಎತ್ತಿದ್ದವು. ಎರಡು ನಗರಸಭೆಗಳು ಸೇರಿ ನಗರಪಾಲಿಕೆ ಅಸ್ತಿತ್ವಕ್ಕೆ ಬಂತು. ಮಹಾ ನಗರಪಾಲಿಕೆ ಆಯಿತು ಈಗ. ಬೃಹತ್‌ ಬೆಂಗಳೂರು ಮಹಾ ನಗರಪಾಲಿಕೆ ರೂಪುಗೊಂಡಿದೆ. ಒಟ್ಟಾರೆ 800 ಚದರ ಕಿಲೋಮೀಟರ್‌ ವ್ಯಾಪ್ತಿಯಲ್ಲಿ ಹರಡಿರುವ ಬೆಂಗಳೂರಿಗರ ಸಂಖ್ಯೆ ಈಗ ಒಂದು ಕೋಟಿಗೂ ಅಧಿಕ. ಇಲ್ಲಿ ಈಗ 20 ಲಕ್ಷ ಕಟ್ಟಡಗಳಿವೆ.

ಇಪ್ಪತ್ತನೇ ಶತಮಾನದ ಕೊನೆಗೆ ಬೆಂಗಳೂರಿಗೆ ಕಾವೇರಿಯನ್ನು ಬರ ಮಾಡಿಕೊಳ್ಳುವುದು ಅನಿವಾರ್ಯವಾಗಿತ್ತು. 1974ರ ಸುಮಾರಿಗೆ ಬೆಂಗಳೂರಿಗೆ ಹರಿದುಬಂದಳು. ನೂರು ಕಿಲೋಮೀಟರ್‌ ದೂರದಿಂದ 500 ಮೀಟರ್‌ ಮೇಲ್ಮುಖವಾಗಿ ಕಾವೇರಿಯನ್ನು ಕರೆತರುತ್ತಿರುವುದು ದೊಡ್ಡ ಸಾಹಸದ ಕೆಲಸ ಎಂಬುದರಲ್ಲಿ ಎರಡು ಮಾತಿಲ್ಲ. ಜನವಸತಿಗಳು. ಜನಬಾಹುಳ್ಯ, ಕೈಗಾರಿಕೆಗಳು. ಕಚೇರಿಗಳು ಬೆಂಗಳೂರಿನ ಚಹರೆಯನ್ನೇ ಬದಲಿಸಿಬಿಟ್ಟವು. ಮಾಹಿತಿ ತಂತ್ರಜ್ಞಾನದ ಬೆಳವಣಿಗೆಯಿಂದ ಬೆಂಗಳೂರು ನಾಗಾಲೋಟದಿಂದ ಮುಂದೋಡಿತು.

ಕಾವೇರಿ ನದಿನೀರನ್ನು ಶಿಂಷಾ ಸಮೀಪದ ನಟ್ಕಲ್‌ನಲ್ಲಿ ನಿಲ್ಲಿಸಿ, ತೊರೆಕಾಡನಹಳ್ಳಿಯಲ್ಲಿ ಸಂಸ್ಕರಿಸಿ ಐದು ಪಂಪಿಂಗ್ ಕೇಂದ್ರಗಳ ಮೂಲಕ ವರ್ಷದ ಎಲ್ಲಾ ದಿನಗಳೂ ಬೆಂಗಳೂರಿಗೆ ಮೇಲ್ಮುಖವಾಗಿ ನೀರನ್ನು ತರಲಾಗುತ್ತಿದೆ. ಆ ನೀರು ಜಲಸಂಗ್ರಹಾಗಾರಗಳಲ್ಲದೆ ನಗರದ ಎಲ್ಲೆಡೆ ಪೂರೈಕೆಯಾಗುತ್ತಿದೆ.

ಐದು ಹಂತಗಳಲ್ಲಿ ಕಾವೇರಿ ನದಿನೀರನ್ನು ನಗರಕ್ಕೆ ತರಲಾಗುತ್ತಿದೆ. ಪ್ರತಿದಿನ 1375 ದಶಲಕ್ಷ ಲೀಟರುಗಳಷ್ಟು ಶುದ್ಧ ನೀರನ್ನು ಬೆಂಗಳೂರಿನ ನಾಗರಿಕರಿಗೆ ಒದಗಿಸುತ್ತಿರುವ ಬೆಂಗಳೂರು ಜಲಮಂಡಲಿ ಈಗ ಕಾರ್ಯಾಚರಣೆ ಮಾಡುತ್ತಿರುವುದು ನಗರದ 575 ಚ.ಕಿ.ಮೀ. ವ್ಯಾಪ್ತಿಯಲ್ಲಿ ಮಾತ್ರ. ಬಿಬಿಎಂಪಿಗೆ ಸೇರ್ಪಡೆಗೊಂಡಿರುವ ಇನ್ನೂ 22 ಚ.ಕಿ.ಮೀ. ವಿಸ್ತೀರ್ಣದ 110 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸಲು 725 ದಶಲಕ್ಷ ಲೀಟರು ನೀರು ಬೆಂಗಳೂರಿಗೆ ತರಲು ಈಗಷ್ಟೇ ಶಂಕುಸ್ಥಾಪನೆಯಾಗಿದೆ.

ರಾಷ್ಟ್ರೀಯ ಮಾನದಂಡದಂತೆ ಪ್ರತಿದಿನ ತಲಾ ಒಬ್ಬರಿಗೆ 150 ಲೀಟರ್ ನೀರು ಕೊಡಬೇಕು. ಬೆಂಗಳೂರಿನಲ್ಲಿ ಈಗ ಪ್ರತಿಯೊಬ್ಬರಿಗೆ 100 ಲೀಟರ್ ನೀರು ಒದಗಿಸಲಾಗುತ್ತಿದ್ದು ಸದ್ಯ ಬೇಡಿಕೆ– ಪೂರೈಕೆ ಸರಿಸಮವಾಗಿದೆ ಎನ್ನುತ್ತಿದೆ ಜಲಮಂಡಲಿ. ಆದರೆ ನೀರಿನ ಹಾಹಾಕಾರ ನಿಂತಿಲ್ಲ ಎಂಬುದು ವಾಸ್ತವ.

ದೇಶ ವಿದೇಶಗಳ ಹಣಕಾಸು ಸಂಸ್ಥೆಗಳಿಂದ ಕೋಟ್ಯಂತರ ರೂಪಾಯಿಗಳ ಸಾಲ ತಂದು ಬೆಂಗಳೂರು ಕುಡಿಯುವ ನೀರು ಯೋಜನೆಗಳ ಅನುಷ್ಠಾನಕ್ಕೆ ಖರ್ಚು ಮಾಡಿದೆ. ಅತಿ ವೇಗದಿಂದ ಬೆಂಗಳೂರಿನ ನೀರಿನ ಅಗತ್ಯಗಳನ್ನು ಪೂರೈಸಲು ಸಾಧ್ಯವಾಗುವಂತೆ ಸುಪ್ರೀಂ ಕೋರ್ಟ್ ಕಾವೇರಿ ಜಲ ವಿವಾದದ ತೀರ್ಪಿನಲ್ಲಿ 4.5 ಟಿ.ಎಂ.ಸಿ. ನೀರನ್ನು ಹೆಚ್ಚಿಗೆ ನೀಡಿ ಆದೇಶ ಮಾಡಿದೆ.

ಬಿ.ಬಿ.ಸಿ. ವರದಿಯಲ್ಲಿನ ಅಂಶಗಳೇನೆ ಆಗಿರಲಿ ಬೆಂಗಳೂರಿನಲ್ಲಿ ಕುಡಿಯುವ ನೀರಿನ ಕೊರತೆ ಇರುವುದು ಸತ್ಯಕ್ಕೆ ಹತ್ತಿರವಾಗಿರುವ ವಿಚಾರ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry