ಭಾನುವಾರ, ಡಿಸೆಂಬರ್ 15, 2019
25 °C

ಮೊದಲ ಚಿನ್ನಕ್ಕೆ ಇನ್ನೊಂದೇ ಹೆಜ್ಜೆ

ಪಿಟಿಐ Updated:

ಅಕ್ಷರ ಗಾತ್ರ : | |

ಮೊದಲ ಚಿನ್ನಕ್ಕೆ ಇನ್ನೊಂದೇ ಹೆಜ್ಜೆ

ಗೋಲ್ಡ್‌ ಕೋಸ್ಟ್‌: ಇದೇ ಮೊದಲ ಬಾರಿಗೆ ಕಾಮನ್‌ವೆಲ್ತ್‌ ಕ್ರೀಡಾ ಕೂಟದಲ್ಲಿ ಸ್ಪರ್ಧಿಸಿರುವ ಅನುಭವಿ ಬಾಕ್ಸರ್ ಎಂ.ಸಿ. ಮೇರಿ ಕೋಮ್ ಅವರು ಚಿನ್ನದ ಪದಕ ಜಯಿಸುವ ಕನಸಿನಲ್ಲಿದ್ದಾರೆ. ಈ ಹಾದಿಯಲ್ಲಿ ಅವರು ಇನ್ನೊಂದೇ ಹೆಜ್ಜೆ ಇಡಬೇಕಿದೆ.

ಮಹಿಳೆಯರ 48 ಕೆ.ಜಿ. ವಿಭಾಗದಲ್ಲಿ ಕಣದಲ್ಲಿರುವ ಭಾರತದ ಮೇರಿ, ಬುಧವಾರ ಫೈನಲ್‌ ಪ್ರವೇಶಿಸಿದ್ದಾರೆ.

ಆಕ್ಸೆನ್‌ಫೊರ್ಡ್‌ ಸ್ಟುಡಿಯೋಸ್‌ನ ‘ರಿಂಗ್‌’ನಲ್ಲಿ ನಡೆದ ಸೆಮಿಫೈನಲ್‌ ನಲ್ಲಿ ಮೇರಿ 5–0ಯಿಂದ ಶ್ರೀಲಂಕಾದ ಅನುಷಾ ದಿಲ್ರುಕ್ಷಿ ಕೊಡಿತುವಾಕ್ಕು ಅವರನ್ನು ಸೋಲಿಸಿದರು.

ಈ ಬೌಟ್‌ನ ಮೊದಲ ಸುತ್ತಿನಲ್ಲಿ ಮೇರಿ, ಎದುರಾಳಿಯ ಮೇಲೆ ನಿರಂತರವಾಗಿ ಪ್ರಹಾರ ನಡೆಸಿದರು. ಹೀಗಾಗಿ ಭಾರತದ ಬಾಕ್ಸರ್‌ಗೆ ‍ಪಂದ್ಯದ ಐದು ಮಂದಿ ನಿರ್ಣಾಯಕರು ತಲಾ 10 ಪಾಯಿಂಟ್ಸ್‌ ನೀಡಿದರು.

ಎರಡನೆ ಸುತ್ತಿನಲ್ಲೂ ಮೇರಿ ಆಕ್ರಮಣಕಾರಿ ಹೋರಾಟ ನಡೆಸಿದರು. ಎದುರಾಳಿಯ ಮುಖ ಮತ್ತು ದವಡೆಗೆ ಶಕ್ತಿಯುತ ಪಂಚ್‌ಗಳನ್ನು ಮಾಡಿ ಪಾಯಿಂಟ್ಸ್‌ ಕಲೆಹಾಕಿದರು. ಮೂರನೆ ಸುತ್ತಿನಲ್ಲೂ ಪ್ರಾಬಲ್ಯ ಮೆರೆದ ಭಾರತದ ಬಾಕ್ಸರ್‌, ಏಕಪಕ್ಷೀಯವಾಗಿ ಪಂದ್ಯ ಗೆದ್ದು ಸಂಭ್ರಮಿಸಿದರು.

ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಐದು ಚಿನ್ನ ಗೆದ್ದಿರುವ ಮೇರಿ‌, ಫೈನಲ್‌ನಲ್ಲಿ ನಾರ್ಥರ್ನ್‌ ಐರ್ಲೆಂಡ್‌ನ ಕ್ರಿಸ್ಟಿನಾ ಒ ಹರಾ ವಿರುದ್ಧ ಸೆಣಸಲಿದ್ದಾರೆ.

ಈ ವಿಭಾಗದ ಇನ್ನೊಂದು ಸೆಮಿಫೈನಲ್‌ನಲ್ಲಿ ಕ್ರಿಸ್ಟಿನಾ 5–0ರಿಂದ ನ್ಯೂಜಿಲೆಂಡ್‌ನ ತಾಸ್ಮಿನ್‌ ಬೆನ್ನಿ ಅವರನ್ನು ಮಣಿಸಿದರು.

ಸರಿತಾಗೆ ನಿರಾಸೆ: ಮಹಿಳೆಯರ 60 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಿದ್ದ ಎಲ್‌. ಸರಿತಾ ದೇವಿ, ಕ್ವಾರ್ಟರ್‌ ಫೈನಲ್‌ನಲ್ಲಿ ಸೋತರು. ಆಸ್ಟ್ರೇಲಿಯಾದ ಆಂಜಾ ಸ್ಟ್ರಿಡ್ಸ್‌ಮನ್‌ 5–0ರಿಂದ ಸರಿತಾ ವಿರುದ್ಧ ಗೆದ್ದರು.

51 ಕೆ.ಜಿ. ವಿಭಾಗದ ಬೌಟ್‌ನಲ್ಲಿ ಪಿಂಕಿ ರಾಣಿ ಸೋತರು. ಕ್ವಾರ್ಟರ್‌ ಫೈನಲ್‌ನಲ್ಲಿ ಪಿಂಕಿ 2–3ರಿಂದ ಇಂಗ್ಲೆಂಡ್‌ನ ಲೀಸಾ ವೈಟ್‌ಸೈಡ್‌ಗೆ ಶರಣಾದರು.

ಪುರುಷರ ವಿಭಾಗದಲ್ಲಿ ಗೌರವ್‌ ಸೋಳಂಕಿ ಸೆಮಿಫೈನಲ್‌ ಪ್ರವೇಶಿಸಿದರು.

52 ಕೆ.ಜಿ. ವಿಭಾಗದ ಎಂಟರ ಘಟ್ಟದ ಹಣಾಹಣಿಯಲ್ಲಿ ಗೌರವ್‌ 5–0ಯಿಂದ ಪಪುವಾ ನ್ಯೂ ಗಿನಿ ದೇಶದ ಚಾರ್ಲ್ಸ್‌ ಕೆಮಾ ಅವರನ್ನು ಪರಾಭವಗೊಳಿಸಿದರು. 75 ಕೆ.ಜಿ. ವಿಭಾಗದ ಕ್ವಾರ್ಟರ್‌ ಫೈನಲ್‌ನಲ್ಲಿ ವಿಕಾಸ್‌ ಕೃಷ್ಣನ್‌ ಗೆದ್ದರು. ವಿಕಾಸ್‌ 5–0ಯಿಂದ ಜಾಂಬಿಯಾದ ಬೆನ್ನಿ ಮುಜಿಯೊ ಅವರ ಸವಾಲು ಮೀರಿದರು.

60 ಕೆ.ಜಿ. ವಿಭಾಗದ ಕ್ವಾರ್ಟರ್‌ ಫೈನಲ್‌ನಲ್ಲಿ ಮನೀಷ್‌ ಕೌಶಿಕ್‌ 5–0ಯಿಂದ ಇಂಗ್ಲೆಂಡ್‌ನ ಕಾಲಮ್‌ ಫ್ರೆಂಚ್‌ ಅವರನ್ನು ಸೋಲಿಸಿದರು.

ಫೈನಲ್‌ನಲ್ಲಿ ಮೇರಿ ಕೋಮ್‌ ಮತ್ತು ಕ್ರಿಸ್ಟಿನಾ ಪೈಪೋಟಿ ನಡೆಸಲಿದ್ದಾರೆ

60 ಕೆ.ಜಿ. ವಿಭಾಗದ ಕ್ವಾರ್ಟರ್‌ ಫೈನಲ್‌ನಲ್ಲಿ ಸರಿತಾ ದೇವಿಗೆ ಸೋಲು

ಪ್ರತಿಕ್ರಿಯಿಸಿ (+)