ಶುಕ್ರವಾರ, ಆಗಸ್ಟ್ 14, 2020
23 °C
ಇಂಗ್ಲೆಂಡ್‌ ವಿರುದ್ಧ 8 ವಿಕೆಟ್‌ಗಳ ಜಯ ಸಾಧಿಸಿದ ಮಿಥಾಲಿ ರಾಜ್‌ ಪಡೆ

ಮಹಿಳಾ ಕ್ರಿಕೆಟ್‌: ಭಾರತಕ್ಕೆ ಸರಣಿ ಜಯ

ಪಿಟಿಐ Updated:

ಅಕ್ಷರ ಗಾತ್ರ : | |

ಮಹಿಳಾ ಕ್ರಿಕೆಟ್‌: ಭಾರತಕ್ಕೆ ಸರಣಿ ಜಯ

ನಾಗಪುರ: ಮಿಥಾಲಿ ರಾಜ್‌ ನಾಯಕತ್ವದ ಭಾರತ ಮಹಿಳಾ ಕ್ರಿಕೆಟ್ ತಂಡವು ಇಂಗ್ಲೆಂಡ್‌ ಎದುರಿನ ಏಕದಿನ ಸರಣಿಯನ್ನು 3–1ರಿಂದ ಜಯಿಸಿತು.

ವಿದರ್ಭ ಕ್ರಿಕೆಟ್‌ ಸಂಸ್ಥೆಯ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಸರಣಿಯ ಕೊನೆಯ ಪಂದ್ಯದಲ್ಲಿ ನಾಯಕಿ ಮಿಥಾಲಿ ರಾಜ್‌ ಹಾಗೂ ಸ್ಮೃತಿ ಮಂದಾನಾ ಅವರ ನೆರವಿನಿಂದ ಭಾರತ ಮಹಿಳಾ ತಂಡವು ಇಂಗ್ಲೆಂಡ್‌ ವಿರುದ್ಧ 8 ವಿಕೆಟ್‌ಗಳಿಂದ ಜಯಿಸಿತು.

ಮೊದಲು ಬ್ಯಾಟಿಂಗ್‌ ಮಾಡಿದ ಇಂಗ್ಲೆಂಡ್‌ ತಂಡ 50 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 201 ರನ್‌ಗಳಿಸಿತು. 94 ರನ್‌ ದಾಖಲಿಸಿದ ಇಂಗ್ಲೆಂಡ್‌ನ ಆ್ಯಮಿ ಜೋನ್ಸ್‌ ತಂಡ ಇನ್ನೂರರ ಗಡಿ ದಾಟಲು ನೆರವಾದರು.

ಭಾರತದ ಸ್ಪಿನ್‌ ದಾಳಿಯು ಇಂಗ್ಲೆಂಡ್‌ ಬ್ಯಾಟ್ಸ್‌ವುಮನ್‌ಗಳನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕುವಲ್ಲಿ ಯಶಸ್ವಿಯಾಯಿತು. ಆಫ್‌ ಸ್ಪಿನ್ನರ್‌ ದೀಪ್ತಿ ಶರ್ಮಾ, ಲೆಗ್‌ ಸ್ಪಿನ್ನರ್‌ ಪೂನಂ ಯಾದವ್‌ ಹಾಗೂ ಎಡಗೈ ಸ್ಪಿನ್ನರ್‌ ರಾಜೇಶ್ವರಿ ಗಾಯಕವಾಡ್‌ ಅವರು ತಲಾ 2 ವಿಕೆಟ್‌ ಗಳಿಸಿದರು.

ಸಾಧಾರಣ ಮೊತ್ತವನ್ನು ಬೆನ್ನತ್ತಿದ ಭಾರತ ತಂಡಕ್ಕೆ ಆರಂಭಿಕ ಆಘಾತ ನೀಡುವಲ್ಲಿ ಇಂಗ್ಲೆಂಡ್‌ ಯಶಸ್ವಿಯಾಯಿತು. ಕೇವಲ 2 ರನ್‌ ಗಳಿಸಿ ಜೆಮಿಮಾ ರಾಡ್ರಿಗಸ್‌ ಔಟಾದರು. ನಂತರ ಬಂದ ವೇದಾ ಕೃಷ್ಣಮೂರ್ತಿಯವರು ಹೆಚ್ಚು ಹೊತ್ತು ನಿಲ್ಲಲಿಲ್ಲ. ನಂತರ ಅಂಗಳಕ್ಕಿಳಿದ ಮಿಥಾಲಿ ಅವರು ಸ್ಮೃತಿ ಮಂದಾನಾ ಅವರೊಂದಿಗೆ ಉತ್ತಮ ಜೊತೆಯಾಟ ಆಡಿದರು. 54 ರನ್‌ ಗಳಿಸಿದ ಮಂದಾನಾ ಗಾಯಗೊಂಡು ನಿವೃತ್ತರಾದರು.

ಈ ವೇಳೆ ದೀಪ್ತಿ ಶರ್ಮಾ ಅವರು ನಾಯಕಿಗೆ ಬೆಂಬಲ ನೀಡಿ ದರು. ಇದರಿಂದಾಗಿ ಆತಿಥೇಯ ತಂಡವು ಇನ್ನೂ 4.4 ಓವರ್‌ಗಳು ಬಾಕಿ ಇರುವಂತೆಯೇ ಜಯದ ದಡ ತಲುಪಿತು.

ಸಂಕ್ಷಿಪ್ತ ಸ್ಕೋರು

ಇಂಗ್ಲೆಂಡ್‌: 50 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 201 (ಆ್ಯಮಿ ಜೋನ್ಸ್‌ 94, ಹೀಥರ್‌ನೈಟ್‌ 36).

ಭಾರತ: 45.2 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 202 (ಮಿಥಾಲಿ ರಾಜ್‌ ಔಟಾಗದೆ 74, ದೀಪ್ತಿ ಶರ್ಮಾ ಔಟಾಗದೆ 54).

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.