ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಸ್ತಾವಿತ ಅರಣ್ಯ ನೀತಿಗೆ ಪರಿಸರಾಸಕ್ತರ ಆಕ್ರೋಶ

140 ಎನ್‌ಜಿಒಗಳಿಂದ ಕೇಂದ್ರ ಸರ್ಕಾರಕ್ಕೆ ಪತ್ರ
Last Updated 15 ಏಪ್ರಿಲ್ 2018, 19:36 IST
ಅಕ್ಷರ ಗಾತ್ರ

ನವದೆಹಲಿ: ಪ್ರಸ್ತಾವಿತ ‘ರಾಷ್ಟ್ರೀಯ ಅರಣ್ಯ ನೀತಿ–2018’ ವಿರುದ್ಧ ಪರಿಸರವಾದಿಗಳು ಆಕ್ರೋಶಗೊಂಡಿದ್ದಾರೆ. ಶತಮಾನಗಳಿಂದ ಅರಣ್ಯದಲ್ಲಿ ವಾಸಿಸುತ್ತಿರುವ ಆದಿವಾಸಿ ಜನರ ಹಕ್ಕುಗಳನ್ನು ರಕ್ಷಿಸುವ ಬದಲಿಗೆ ಕಾಡನ್ನು ಹಣ ಗಳಿಕೆಗೆ ಬಳಸುವುದಕ್ಕೆ ಈ ನೀತಿ ಒತ್ತು ನೀಡುತ್ತದೆ ಎಂದು ಅವರು ಆರೋಪಿಸಿದ್ದಾರೆ.

ಕಾಡಿನ ನಿರ್ವಹಣೆಗೆ ಸಂಬಂಧಿಸಿ ಸರ್ಕಾರ ಮತ್ತು ಖಾಸಗಿ ಸಹಭಾಗಿತ್ವದ ಪ್ರಸ್ತಾವ ಕರಡು ನೀತಿಯಲ್ಲಿ ಇದೆ. ಇದು ಜಾರಿಗೆ ಬಂದರೆ ಸರ್ಕಾರವು ಅರಣ್ಯವನ್ನು ಖಾಸಗಿ ಕಂಪನಿಗಳಿಗೆ ಗುತ್ತಿಗೆ ನೀಡಲು ಸಾಧ್ಯವಾಗುತ್ತದೆ. ಈ ಕೈಗಾರಿಕೆಗಳು ತಮಗೆ ಬೇಕಾದ ಒಂದೇ ರೀತಿಯ ಮರಗಳನ್ನು ಇಲ್ಲಿ ಬೆಳೆಸಬಹುದು. ಪರಿಣಾಮವಾಗಿ ಆದಿವಾಸಿಗಳು ಪರಂಪರಾಗತವಾಗಿ ಬಳಸುತ್ತಿರುವ ಅರಣ್ಯ ಅವರ ಕೈಬಿಟ್ಟು ಹೋಗಬಹುದು ಎಂಬ ಆತಂಕವನ್ನು ಪರಿಸರವಾದಿಗಳು ವ್ಯಕ್ತಪಡಿಸಿದ್ದಾರೆ.

140 ಎನ್‌ಜಿಒಗಳು ಪರಿಸರ ಸಚಿವಾಲಯಕ್ಕೆ ಪತ್ರ ಬರೆದು ಕರಡು ನೀತಿಯನ್ನು ಕೈಬಿಡಬೇಕು ಎಂದು ಒತ್ತಾಯಿಸಿವೆ.

‘ನೆಡುತೋಪುಗಳು ಮಾತ್ರವಲ್ಲದೆ, ನೈಸರ್ಗಿಕ ಕಾಡುಗಳಲ್ಲಿಯೂ ಉತ್ಪಾದಕತೆಯನ್ನು ಹೆಚ್ಚಿಸಲು ಪ್ರಸ್ತಾವಿತ ನೀತಿಯು ಒತ್ತು ನೀಡುತ್ತದೆ. ಹಣಕಾಸಿನ ಲಾಭದ ಲೆಕ್ಕಾಚಾರದ ಚೌಕಟ್ಟೇ ಈ ನೀತಿಯ ಹಿಂದೆ ಇದೆ. ಕೈಗಾರಿಕಾ ಬಳಕೆಗೆ ಅರಣ್ಯವನ್ನು ನೀಡುವುದಕ್ಕೆ ಮಹತ್ವ ಕೊಡಲಾಗಿದೆ. ಮಾರುಕಟ್ಟೆ ಆಧರಿತವಾಗಿರುವ ಈ ನೀತಿಯನ್ನು ಯಾರ ಅನುಕೂಲಕ್ಕಾಗಿ ರೂಪಿಸಲಾಗಿದೆ’ ಎಂದು ಈ ಪತ್ರದಲ್ಲಿ ಪ್ರಶ್ನಿಸಲಾಗಿದೆ.

ಪರಿಸರವಾದಿಗಳ ಪ್ರತಿಭಟನೆಗೆ ಸಿಪಿಎಂ ಬೆಂಬಲ ಸೂಚಿಸಿದೆ. ಕರಡು ನೀತಿಯನ್ನು ಕೈಬಿಡಬೇಕು ಎಂದು ಒತ್ತಾಯಿಸಿ ಪಕ್ಷವು ಹೇಳಿಕೆ ಬಿಡುಗಡೆ ಮಾಡಿದೆ. ಆದಿವಾಸಿ ಸಮುದಾಯಗಳು ಮತ್ತು ಗ್ರಾಮಸಭಾಗಳಿಗೆ ಸ್ವಲ್ಪ ಮಟ್ಟಿನ ಅಧಿಕಾರ ನೀಡುವಲ್ಲಿ ಯುಪಿಎ ಸರ್ಕಾರ ಜಾರಿಗೆ ತಂದ ಕಾನೂನು ಯಶಸ್ವಿಯಾಗಿತ್ತು. ಪ್ರಸ್ತಾವಿತ ನೀತಿ ಜಾರಿಗೆ ಬಂದರೆ ಈ ಅಧಿಕಾರ ಕಳೆದು ಹೋಗಲಿದೆ ಎಂದು ಸಿಪಿಐ ಹೇಳಿದೆ.

ಕರಡು ನೀತಿಯನ್ನು ಫೆಬ್ರುವರಿ ತಿಂಗಳಲ್ಲಿ ಬಿಡುಗಡೆ ಮಾಡಲಾಗಿದೆ. ದೇಶದಲ್ಲಿ ಒಟ್ಟು ಭೂಭಾಗದ ಶೇ 25ರಷ್ಟು ಅರಣ್ಯವೂ ಇಲ್ಲ ಎಂದು ಇದರಲ್ಲಿ ಹೇಳಲಾಗಿದೆ. ಮೂರನೇ ಒಂದರಷ್ಟು ಭೂಭಾಗವು ಅರಣ್ಯದಿಂದ ಕೂಡಿರಬೇಕು ಎಂದು 1988ರಲ್ಲಿ ಜಾರಿಗೆ ತರಲಾದ ನೀತಿಯು ಹೇಳಿತ್ತು. 

ಕೈಗಾರಿಕೆಗಳ ಹಿತಾಸಕ್ತಿಯನ್ನು ಕಾಪಾಡುವುದಕ್ಕಾಗಿಯೇ ಈ ನೀತಿ ರೂಪಿಸಲಾಗಿದೆ. ಅರಣ್ಯವನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುವುದೇ ಈ ನೀತಿ ಮುಖ್ಯ ಗುರಿಯಾಗಿದೆ. ಸರ್ಕಾರ ಮತ್ತು ಖಾಸಗಿ ಸಹಭಾಗಿತ್ವ ಎಂಬ ಹೆಸರಿನಲ್ಲಿ ಕಾಡಿನ ನಿರ್ವಹಣೆಯನ್ನು ಸಂಪೂರ್ಣವಾಗಿ ಖಾಸಗಿ ಕಂಪನಿಗಳಿಗ ವಹಿಸುವುದು ಇಲ್ಲಿನ ಹುನ್ನಾರವಾಗಿದೆ ಎಂದು ಸಿಪಿಎಂ ಆರೋಪಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT