7
ನಗರದಲ್ಲಿ ಅಂತರ್ಜಲ ಬಳಕೆ ಹೆಚ್ಚಳ: ಪಾಲಿಕೆ ಅನುಮತಿ ಪಡೆಯದೆ ಅಕ್ರಮ

ಸಾವಿರ ಕೊಳವೆಬಾವಿ ಕೊರೆದರೂ ನೀಗದ ದಾಹ!

Published:
Updated:
ಸಾವಿರ ಕೊಳವೆಬಾವಿ ಕೊರೆದರೂ ನೀಗದ ದಾಹ!

ಕಲಬುರ್ಗಿ: ನಗರದಲ್ಲಿ ಕೊಳವೆಬಾವಿ ಕೊರೆದು ಅಂತರ್ಜಲವನ್ನು ಮನಬಂದಂತೆ ಬಳಕೆ ಮಾಡಲಾಗುತ್ತಿದೆ. ಪಾಲಿಕೆ ಅನುಮತಿ ಇಲ್ಲದೆ ಕೊಳವೆಬಾವಿಗಳನ್ನು ಕೊರೆಸಿರುವುದು ಬೆಳಕಿಗೆ ಬಂದಿದೆ.

ಕಲಬುರ್ಗಿ ದಕ್ಷಿಣ ಹಾಗೂ ಉತ್ತರ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ವಾರ್ಡ್‌ಗಳಲ್ಲಿ 1,038 ಕೊಳವೆಬಾವಿಗಳಿವೆ. ಈ ವರ್ಷವೂ ನೀರಿನ ದಾಹ ತಣಿಸಲು ಮತ್ತಷ್ಟು ಕೊಳವೆಬಾವಿಗಳನ್ನು ಕೊರೆಸಲು ಸಿದ್ಧತೆ ನಡೆಯುತ್ತಿದೆ.

ಮಾರ್ಚ್‌, ಏಪ್ರಿಲ್‌ ತಿಂಗಳಲ್ಲಿ ಜಿಲ್ಲೆಯ ಜಲಾಶಯಗಳಲ್ಲಿ ನೀರಿನ ಸಂಗ್ರಹ ಪ್ರಮಾಣ ಕುಸಿಯುತ್ತದೆ. ವಾರಕ್ಕೊಮ್ಮೆ, ಹದಿನೈದು ದಿನಕ್ಕೊಮ್ಮೆ ಕುಡಿಯುವ ನೀರು ಪೂರೈಕೆ ಆಗಲಿದೆ. ಆಗ ಅಂತರ್ಜಲದ ಬಳಕೆ ಅನಿವಾರ್ಯ. ಹೀಗಾಗಿ ಕೊಳವೆಬಾವಿಗಳನ್ನು ಕೊರೆಸುವುದು ಹೆಚ್ಚುತ್ತಿದೆ. ಖಾಸಗಿ ಬಡಾವಣೆಗಳಲ್ಲಿ ಅನುಮತಿ ಪಡೆಯದೇ ಕೊಳವೆಬಾವಿ ಕೊರೆಸಲಾಗುತ್ತಿದೆ.

‘2010–11ರಲ್ಲಿ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪಿನಂತೆ ಕೊಳವೆಬಾವಿ ಕೊರೆಸುವ ಮುನ್ನ ಪಾಲಿಕೆಯಿಂದ ಅನುಮತಿ ಪಡೆಯುವುದು ಕಡ್ಡಾಯ. ಆದರೆ, ನಗರದಲ್ಲಿ ಯಾರೊಬ್ಬರೂ ಈ ನಿಯಮ ಪಾಲನೆ ಮಾಡುತ್ತಿಲ್ಲ’ ಎನ್ನುತ್ತಾರೆ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಕಿರಿಯ ಎಂಜಿನಿಯರ್ ಕೆ.ಎಂ.ಜೋಶಿ.

10ಕ್ಕೂ ಹೆಚ್ಚು ವಾರ್ಡ್‌ಗಳಿಗೆ ನಿರಂತರ ನೀರು ಪೂರೈಕೆ ಇದೆ. ಉಳಿದ ಐದು ವಾರ್ಡ್‌ಗಳಲ್ಲಿ ಭಾಗಶಃ ಈ ಸೌಲಭ್ಯ ಕಲ್ಪಿಸಲಾಗಿದೆ. ನೀರಿನ ತೀವ್ರ ಅಭಾವ ಎದುರಾದ ದಿನಗಳಲ್ಲೂ ಈ ವಾರ್ಡ್‌ಗಳ ಜನರಿಗೆ ನೀರು ಕಡಿತ ಮಾಡುವಂತಿಲ್ಲ. ಎಲ್ಲ ವಾರ್ಡ್‌ಗಳಿಗೆ ನಿರಂತರ ನೀರು ಕೊಡುವ ಯೋಜನೆ ಟೆಂಡರ್‌ ಹಂತದಲ್ಲಿಯೇ ಇದೆ. ಹೀಗಾಗಿ ಕೊಳವೆಬಾವಿ ಮೂಲಕ ನೀರು ಪೂರೈಕೆ ಮಾಡುವುದು ನಗರ ನೀರು ಸರಬರಾಜು ಮಂಡಳಿಗೆ ಅನಿವಾರ್ಯ ಆಗಿದೆ.

ಇನ್ನೊಂದೆಡೆ ಹಾಳಾಗಿರುವ ಕೈಪಂಪ್‌, ಕೆಟ್ಟಿರುವ ಪಂಪ್‌ಸೆಟ್‌ಗಳ ದುರಸ್ತಿಗೆ ಅಧಿಕಾರಿಗಳು ಆಸಕ್ತಿ ವಹಿಸಿಲ್ಲ. ಜಲ ಮರುಪೂರಣ ಕಾರ್ಯವೂ ನಡೆಯುತ್ತಿಲ್ಲ. ನಾಗರಿಕರು ಪಾಲಿಕೆ ಸದಸ್ಯರ ಮೇಲೆ ಒತ್ತಡ ತಂದು ಹೊಸ ಕೊಳವೆಬಾವಿಗೆ ಬೇಡಿಕೆ ಇಡುತ್ತಿದ್ದಾರೆ.

ನೀರು ಪೋಲು:ಕೈಪಂಪ್, ಪೂರ್ಣಪ್ರಮಾಣದ ವಿದ್ಯುತ್‌ ಸಂಪರ್ಕ ಹಾಗೂ ಸಿಂಗಲ್‌ ಫೇಸ್‌ ಎಂಬ ಮೂರು ವಿಧದ ಕೊಳವೆಬಾವಿಗಳಿವೆ. ಬಹುತೇಕ ವಾರ್ಡ್‌ಗಳಲ್ಲಿನ ಕೊಳವೆಬಾವಿಗೆ ಪಂಪ್‌ಸೆಟ್‌ ಅಳವಡಿಸಲಾಗಿದೆ. ನೀರಿನ ಕೊಳವೆಗೆ ನಲ್ಲಿ ಅಳವಡಿಸಿಲ್ಲ. ಇಂಥ ಜಾಗಗಳಲ್ಲಿ ನೀರು ಪೋಲಾಗುತ್ತಿದೆ. ಮಕ್ಕಳು ಪಂಪ್‌ಸೆಟ್‌ ಚಾಲು ಮಾಡಿ ನೀರು ಹರಿಸುತ್ತಾರೆ. ಗೌಳಿಗರು ಎಮ್ಮೆಗಳ ಮೈ ತೊಳೆಯಲು ಇವುಗಳನ್ನೇ

ಆಶ್ರಯಿಸಿದ್ದಾರೆ.

‘ಈ ಪೋಲು ತಡೆಯಬೇಕು. ನಲ್ಲಿಗಳ ಜೋಡಣೆ ಮಾಡಬೇಕು. ಪಂಪ್‌ ಆಪರೇಟ್‌ಗಳನ್ನು ನಿಯೋಜಿಸಬೇಕು’ ಎನ್ನುವುದು ನಾಗರಿಕರ ಆಗ್ರಹ.

ಕೊಳವೆಬಾವಿ ಸುತ್ತಮುತ್ತ

ಸಂಖ್ಯೆ ಸುಸ್ಥಿತಿ ದುರಸ್ತಿ

ಕೈಪಂಪ್‌ 307 17

ವಿದ್ಯುತ್ ಪಂಪ್‌ 314 12

ಸಿಂಗಲ್‌ ಫೇಸ್‌ 362 19

ಒಟ್ಟು 1,038

**

ಕೊಳವೆಬಾವಿ ಕೊರೆಸಲು ಸರ್ಕಾರ ನಿಯಮಾವಳಿಗಳನ್ನು ರೂಪಿಸಿದೆ. ಅವುಗಳನ್ನು ಪಾಲಿಸುವುದು ಕಡ್ಡಾಯ. ಆದರೆ, ಪಾಲಿಕೆಗೆ ಅನುಮತಿ ಕೋರಿ ಯಾರೊಬ್ಬರೂ ಅರ್ಜಿ ಸಲ್ಲಿಸುತ್ತಿಲ್ಲ – ಆರ್‌.ಪಿ.ಜಾಧವ್‌, ಎಇಇ, ಪಾಲಿಕೆ. 

**

ನಗರದಲ್ಲಿ ಖಾಸಗಿ ವ್ಯಕ್ತಿಗಳು ಮನಬಂದಂತೆ ಕೊಳವೆಬಾವಿಗಳನ್ನು ಕೊರೆಸುತ್ತಿದ್ದಾರೆ. ಇದರಿಂದ ಅಂತರ್ಜಲ ಮಟ್ಟ ಕುಸಿದು ನೀರಿನ ಸಮಸ್ಯೆ ಉಲ್ಬಣಿಸಲಿದೆ. ಇದಕ್ಕೆ ಕಡಿವಾಣ ಅಗತ್ಯ – ಕೆ.ಎಂ.ಜೋಶಿ, ಕಿರಿಯ ಎಂಜಿನಿಯರ್, ಜಲಮಂಡಳಿ.

**

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry