ಮೈತ್ರಿಯನ್ನು ಹೇಗೆ ನಿಭಾಯಿಸಿಯಾರು ಮೋದಿ?

7

ಮೈತ್ರಿಯನ್ನು ಹೇಗೆ ನಿಭಾಯಿಸಿಯಾರು ಮೋದಿ?

Published:
Updated:

ದೇಶದ ವಿವಿಧೆಡೆ ಈಚೆಗೆ ನಡೆದ ಉಪ ಚುನಾವಣೆಗಳಲ್ಲಿ ಭಾರತೀಯ ಜನತಾ ಪಕ್ಷ ಸೋಲು ಕಂಡಿರುವುದು 2019ರ ಲೋಕಸಭಾ ಚುನಾವಣೆಯಲ್ಲಿ ಏನಾಗಬಹುದು ಎಂಬ ಬಗ್ಗೆ ಊಹಾಪೋಹಗಳನ್ನು ಹುಟ್ಟುಹಾಕಿದೆ.

ಚುನಾವಣಾ ವಿಚಾರವಾಗಿ ಏನಾಗಬಹುದು ಎಂಬುದನ್ನು ರಾಜ್ಯಗಳ ಮಟ್ಟದಲ್ಲಿ ನಾವು ಪರಿಶೀಲಿಸಿದ್ದೇವೆ. ಹಾಗಾಗಿ ನಾನು ಮತ್ತೆ ಅದೇ ಕೆಲಸಕ್ಕೆ ಮುಂದಾಗುವುದಿಲ್ಲ. ವಿರೋಧ ಪಕ್ಷಗಳ ಪೈಕಿ ಬಹುತೇಕ ಪಕ್ಷಗಳು ಒಗ್ಗಟ್ಟಾಗಿಯೇ ಉಳಿದರೆ, ಲೋಕಸಭೆಯಲ್ಲಿ ಬಿಜೆಪಿಗೆ 210ಕ್ಕಿಂತ ಹೆಚ್ಚಿನ ಸ್ಥಾನಗಳನ್ನು ಉಳಿಸಿಕೊಳ್ಳುವುದು ಕಷ್ಟವಾಗುತ್ತದೆ ಎಂದು ಅಂದಾಜಿಸುವುದು ಅತಾರ್ಕಿಕ ಆಗುವುದಿಲ್ಲ.

ಆಗ, ಕೊನೆಯ ಯುಪಿಎ ಸರ್ಕಾರದ ಅವಧಿಯಲ್ಲಿ ಲೋಕಸಭೆಯಲ್ಲಿ ಕಾಂಗ್ರೆಸ್ ಹೊಂದಿದ್ದಷ್ಟು ಸೀಟುಗಳನ್ನು ಬಿಜೆಪಿ ಪಡೆದಂತೆ ಆಗುತ್ತದೆ. ಈ ಹೊತ್ತಿನಲ್ಲಿ ನಿಂತು ನೋಡಿದಾಗ, ಏಕೈಕ ದೊಡ್ಡ ಪಕ್ಷದ ಸ್ಥಾನವನ್ನು ಬಿಜೆಪಿ ಬಿಟ್ಟುಕೊಡುವ ಸಾಧ್ಯತೆ ಕಾಣುವುದಿಲ್ಲ. ಆ ಸ್ಥಾನವನ್ನು ಪಕ್ಷ ಉಳಿಸಿಕೊಳ್ಳುತ್ತದೆ, ಒಂದು ರೀತಿಯಲ್ಲಿ ಹೊಸ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟವನ್ನು (ಎನ್‌ಡಿಎ) ಕಟ್ಟುವ ಆಯ್ಕೆಯನ್ನು ತನ್ನ ನಾಯಕರಿಗೆ ಕೊಡುತ್ತದೆ. ಈಗ ಎನ್‌ಡಿಎ ಭಾಗ ಆಗಿರದ ಪಕ್ಷಗಳು, ಹಿಂದೆ ಎನ್‌ಡಿಎ ಭಾಗ ಆಗಿದ್ದ ಪಕ್ಷಗಳು ಈ ಮೈತ್ರಿಕೂಟ ಸೇರಬಹುದು (ಉದಾಹರಣೆಗೆ ತಮಿಳುನಾಡಿನ ಕೆಲವು ಪಕ್ಷಗಳು).

ಈ ಹಿಂದೆ ಎನ್‌ಡಿಎ ಭಾಗವಾಗಿದ್ದು, ಈಗ ವಿರೋಧಿ ಪಾಳೆಯದಲ್ಲಿ ಗುರುತಿಸಿಕೊಂಡಿರುವ ಪಕ್ಷಗಳು ಕೂಡ ಎನ್‌ಡಿಎ ಸೇರಿಕೊಳ್ಳಬಹುದು ಅಥವಾ ತಟಸ್ಥವಾಗಿಯೂ ಉಳಿಯಬಹುದು. ಚಂದ್ರಬಾಬು ನಾಯ್ಡು ಅವರ ತೆಲುಗುದೇಶಂ ಪಕ್ಷ (ಟಿಡಿಪಿ) ಮತ್ತು ನವೀನ್ ಪಟ್ನಾಯಕ್ ಅವರ ಬಿಜು ಜನತಾದಳ ಅಂತಹ ಪಕ್ಷಗಳು. ಈ ಸಾಲಿನಲ್ಲಿ ಇನ್ನೂ ಕೆಲವು ಪಕ್ಷಗಳು ಇವೆ. ಹಾಗಾಗಿ, ಈಗಿರುವ ಸ್ಥಾನಗಳಿಗಿಂತ 70ರಿಂದ 80ರಷ್ಟು ಕಡಿಮೆ ಸ್ಥಾನ ಪಡೆದರೂ ಅಧಿಕಾರದಲ್ಲಿ ಉಳಿದುಕೊಳ್ಳಲು ಬಿಜೆಪಿಗೆ ಬಹುಶಃ ಸಾಧ್ಯವಾಗುತ್ತದೆ, ಅಧಿಕಾರಕ್ಕೆ ಮರಳುವುದು ಸುಲಭವೂ ಆಗಿರುತ್ತದೆ.

ಆದರೆ, ಆಸಕ್ತಿಕರ ಆಗಿರುವುದು ಎರಡು ವಿಷಯಗಳು. ಲೋಕಸಭೆಯಲ್ಲಿ ಸ್ಥಾನಗಳನ್ನು ಕಳೆದುಕೊಳ್ಳುವುದಕ್ಕೆ ಮತ್ತು ಬಹುಮತವನ್ನು ಕಳೆದುಕೊಳ್ಳುವುದಕ್ಕೆ ಪಕ್ಷ ಆಂತರಿಕವಾಗಿ ಹೇಗೆ ಪ್ರತಿಕ್ರಿಯಿಸುತ್ತದೆ ಎನ್ನುವುದು ಒಂದು. ಪರಮಾಧಿಕಾರ ಹೊಂದಿರುವ ಮೈತ್ರಿಪಕ್ಷಗಳನ್ನು ಬಿಜೆಪಿಯ ನಾಯಕತ್ವ ಹೇಗೆ ನಿಭಾಯಿಸುತ್ತದೆ ಎಂಬುದು ಇನ್ನೊಂದು. ಮೊದಲನೆಯ ಸನ್ನಿವೇಶವು ನರೇಂದ್ರ ಮೋದಿ ಅವರ ಪಾಲಿಗೆ ಸಂಪೂರ್ಣ ಹೊಸದಾಗಿರುತ್ತದೆ. ಒಂದೂ ಚುನಾವಣೆ ಎದುರಿಸದೆ ಮೋದಿ ಅವರು ಗುಜರಾತಿನ ಮುಖ್ಯಮಂತ್ರಿ ಆದರು ಎಂಬುದು ಓದುಗರಿಗೆ ನೆನಪಿರಬಹುದು. ಮೋದಿ ಅವರು ಎಲ್ಲ ಸಂದರ್ಭಗಳಲ್ಲಿಯೂ ಬಹುಮತದ ಸರ್ಕಾರವನ್ನು ಮಾತ್ರ ಮುನ್ನಡೆಸಿದ್ದಾರೆ.

ಗುಜರಾತ್ ಬಿಜೆಪಿಯಲ್ಲಿನ ಗುಂಪುಗಾರಿಕೆಯಿಂದ ಉಂಟಾದ ವಿಭಜನೆಯನ್ನು ಸರಿಪಡಿಸಬೇಕು ಎಂದು ತೀರ್ಮಾನಿಸಿದ ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಾಯಕರು ಮೋದಿ ಅವರನ್ನು ಅಲ್ಲಿಗೆ ಕಳುಹಿಸಿದರು. ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಕೆಲವೇ ತಿಂಗಳುಗಳಲ್ಲಿ ಗುಜರಾತ್ ಹೊತ್ತಿ ಉರಿಯಿತು. ಅದಾದ ನಂತರದ ವರ್ಷಗಳಲ್ಲಿ ಮೋದಿ ಅವರು ಒಂದಾದ ನಂತರ ಒಂದರಂತೆ ತಮ್ಮ ಸರ್ಕಾರಕ್ಕೆ ಚುನಾವಣಾ ಜಯ ತಂದುಕೊಟ್ಟರು. ಸರ್ಕಾರವನ್ನು ಮುನ್ನಡೆಸುವ ವಿಚಾರದಲ್ಲಿ ಮೋದಿ ಅವರು ಹೊಂದಿರುವುದು ಸಂಪೂರ್ಣ ಬಹುಮತ ಇದ್ದಾಗಿನ ಸ್ಥಿತಿಯ ಅನುಭವ ಮಾತ್ರ. ಕೆಲವು ಸಂದರ್ಭಗಳಲ್ಲಿ ಅವರು ಮೂರನೆಯ ಎರಡರಷ್ಟು ಬಹುಮತ ಹೊಂದಿದ್ದೂ ಇದೆ.

ಚುನಾವಣಾ ವಿಜಯದ ಮೂಲಕ ಪಡೆದ ಅಧಿಕಾರವನ್ನು ಅವರು ಗುಜರಾತ್ ಬಿಜೆಪಿ ಘಟಕವನ್ನು ಸಂಪೂರ್ಣವಾಗಿ ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಬಳಸಿಕೊಂಡರು. ಕೇಶುಭಾಯಿ ಪಟೇಲ್, ಆರು ಬಾರಿ ಲೋಕಸಭಾ ಚುನಾವಣೆ ಗೆದ್ದಿದ್ದ ಕಾಶಿರಾಮ್ ರಾಣಾ ಅವರಂತಹ ಪಕ್ಷ ಕಟ್ಟಿದ ನಾಯಕರನ್ನು, ಹಿರಿಯರನ್ನು ಮೂಲೆಗೆ ತಳ್ಳಲಾಯಿತು. ಮೋದಿ ಅವರಿಗೆ ನಿಷ್ಠರಾದ ಹೊಸ ಮುಖಗಳನ್ನು ಪಕ್ಷಕ್ಕೆ ತರಲಾಯಿತು. ಮೋದಿ ಅವರು ತಮ್ಮ ಸಂಪುಟದಲ್ಲಿ ಯಾರಿರಬೇಕು ಎಂಬುದನ್ನು ತಾವೇ ತೀರ್ಮಾನಿಸಿದರು, ಅಲ್ಲಿ ಕೂಡ ತಮ್ಮ ಪರಮಾಧಿಕಾರ ಚಲಾಯಿಸಿದರು. ಸಂಪುಟದಲ್ಲಿ ಎಲ್ಲ ಪ್ರಮುಖ ಖಾತೆಗಳನ್ನೂ ತಮ್ಮ ಬಳಿಯೇ ಇರಿಸಿಕೊಂಡಿದ್ದರು.

ಅಮಿತ್ ಶಾ ಅವರನ್ನು ಇಂದು ದೇಶದ ಎರಡನೆಯ ಅತ್ಯಂತ ಬಲಿಷ್ಠ ನಾಯಕ ಎಂದು ಗುರುತಿಸಲಾಗುತ್ತದೆ, ಅವರು ಹಾಗಿರುವುದೂ ಹೌದು. ಆದರೆ, ಶಾ ಅವರು ಮೋದಿ ನೇತೃತ್ವದ ಗುಜರಾತ್ ಸರ್ಕಾರದಲ್ಲಿ ಕೆಲಸ ಮಾಡಿದ ಒಂದು ದಶಕದ ಅವಧಿಯಲ್ಲಿ ಸಂಪುಟ ದರ್ಜೆಯನ್ನು ಹೊಂದಿರಲಿಲ್ಲ, ಅವರಿಗೆ ರಾಜ್ಯ ಸಚಿವ ಸ್ಥಾನ ಮಾತ್ರ ನೀಡಲಾಗಿತ್ತು ಎಂಬುದನ್ನು ನೆನಪಿನಲ್ಲಿ ಇರಿಸಿಕೊಳ್ಳಬೇಕು.

ಮೋದಿ ಅವರ ಪರಮಾಧಿಕಾರ ಅಂದರೆ ಪಕ್ಷದಲ್ಲಿನ ಇತರರಿಗೆ ಬೇರೆ ಆಯ್ಕೆಗಳು ಇಲ್ಲ ಎಂದೇ ಅರ್ಥ. ಮೋದಿ ಅವರು ಚುನಾವಣೆಗಳಲ್ಲಿ ಜಯ ತಂದುಕೊಡುತ್ತಿದ್ದ ಕಾರಣ, ಪಕ್ಷದಲ್ಲಿ ಮೂಲೆಗುಂಪಾದವರಿಗೆ ಮಾತನಾಡಲು ಅವಕಾಶ ಕೂಡ ಇರುತ್ತಿರಲಿಲ್ಲ. ಅಧಿಕಾರವು ಮೋದಿ ಅವರಲ್ಲಿಯೇ ಕೇಂದ್ರೀಕೃತವಾಗಿರುವ ವಿಚಾರವಾಗಿ ಆರ್‌ಎಸ್‌ಎಸ್‌ ಅತೃಪ್ತಿ ಹೊಂದಿದೆ ಎಂಬ ಸುದ್ದಿಗಳು ಇದ್ದವು. ಆದರೆ ಅವುಗಳಿಂದ ಏನೂ ಆಗಲಿಲ್ಲ. ಹಾಗೆ ನೋಡಿದರೆ, ಮೋದಿ ಅವರು ಗುಜರಾತಿನ ಕೆಲವು ಆರ್‌ಎಸ್‌ಎಸ್‌ ನಾಯಕರಿಗೆ ಪಾಠ ಕಲಿಸಿದರು.

2014ರಲ್ಲಿ ಮೋದಿ ಅವರು ನಡೆಸಿದ ಅತ್ಯದ್ಭುತವಾದ ಪ್ರಚಾರವು ದೆಹಲಿಯಲ್ಲಿ ಕೂಡ ಗುಜರಾತಿನಂಥದ್ದೇ ಸ್ಥಿತಿ ನಿರ್ಮಾಣ ಮಾಡಿತು. ಅವರು ಪಕ್ಷದ ಪ್ರಶ್ನಾತೀತ ನಾಯಕರಾದರು. ಈ ಪಕ್ಷದಲ್ಲಿ ಹಿಂದೆ ಕೆಲವು ಗುಂಪುಗಾರಿಕೆಗಳು ಇದ್ದವಾದರೂ ಪಕ್ಷವು ಕಾಂಗ್ರೆಸ್ಸಿಗಿಂತ ಹೆಚ್ಚು ಶಿಸ್ತು ಹೊಂದಿತ್ತು. ಹಿರಿಯ ನಾಯಕರಾದ ಅಡ್ವಾಣಿ ಹಾಗೂ ಜೋಷಿ ಮೂಲೆಗುಂಪಾದರು. ಸುಷ್ಮಾ ಸ್ವರಾಜ್ ಅವರಂತಹ ನಾಯಕರು ಸೋಲೊಪ್ಪಿಕೊಳ್ಳಬೇಕಾಯಿತು. ಇವತ್ತು ಬಿಜೆಪಿಯನ್ನು 'ಎಲ್ಲರೂ ಸಂತೋಷದಿಂದ ಇರುವ ದೊಡ್ಡ ಕುಟುಂಬ' ಎಂಬಂತೆ ಕಾಣಲಾಗುತ್ತಿದೆ. ಆದರೆ ಪರಿಸ್ಥಿತಿ ಹಾಗಿಲ್ಲ. 'ನಮ್ಮಿಂದ ಇನ್ನಷ್ಟು ಮಾಡಲು ಸಾಧ್ಯವಿದ್ದರೂ ನಮಗೆ ಉದ್ದೇಶಪೂರ್ವಕವಾಗಿ ಅವಕಾಶ ಕೊಡುತ್ತಿಲ್ಲ' ಎಂದು ಭಾವಿಸಿರುವವರ ಸಂಖ್ಯೆ ಬೇರೆ ಪಕ್ಷಗಳಲ್ಲಿ ಇರುವಂತೆಯೇ ಬಿಜೆಪಿಯಲ್ಲೂ ದೊಡ್ಡದಾಗಿಯೇ ಇದೆ.

ಬಿಜೆಪಿಯು 210 ಸ್ಥಾನಗಳನ್ನು ಮಾತ್ರ ಗೆದ್ದುಕೊಳ್ಳುವ ಸಂದರ್ಭದಲ್ಲಿ ಇಂತಹ ವ್ಯಕ್ತಿಗಳು ಗಟ್ಟಿಯಾಗಿ ಮಾತನಾಡುತ್ತಾರೆ, ತಮ್ಮ ಅನಿಸಿಕೆಗಳನ್ನು ಹೇಳಿಕೊಳ್ಳುತ್ತಾರೆ. ವಿವಿಧ ಪ್ರದೇಶಗಳಲ್ಲಿನ ನಾಯಕರು, ರಾಷ್ಟ್ರ ಮಟ್ಟದ ನಾಯಕರು ಮತ್ತು ಕೆಲವು ಗುಂಪುಗಳ ನಾಯಕರು ಒಟ್ಟಾಗಿ ಲಾಬಿ ಆರಂಭಿಸುತ್ತಾರೆ. ಅವರೆಲ್ಲರ ಮಹತ್ವಾಕಾಂಕ್ಷೆಗಳನ್ನು, ಸಂಘರ್ಷಗಳನ್ನು ಮೋದಿ ಅವರು ಹೇಗೆ ನಿಭಾಯಿಸುತ್ತಾರೆ ಎಂಬುದು ಕುತೂಹಲಕರ. ಮೋದಿ ಅವರು ಇಂತಹ ಸ್ಥಿತಿಯನ್ನು ತಮ್ಮ ರಾಜಕೀಯ ಜೀವನದಲ್ಲಿ ಎಂದೂ ಕಂಡವರಲ್ಲ.

ಮೈತ್ರಿಕೂಟದ ಪಕ್ಷಗಳನ್ನು ನಿಭಾಯಿಸುವುದು ಕೂಡ ಪ್ರಮುಖ ವಿಚಾರ ಆಗುತ್ತದೆ. 210 ಸ್ಥಾನಗಳನ್ನು ಬಿಜೆಪಿ ಪಡೆದಾಗ ಪ್ರಧಾನಿಯ ಸ್ಥಿತಿ, ಹಿಂದೆ ಮನಮೋಹನ್ ಸಿಂಗ್ ಅವರು ಕಂಡಿದ್ದ ಸ್ಥಿತಿಯಂತೆಯೇ ಆಗುತ್ತದೆ. ಸಿಂಗ್ ಅವರನ್ನು ದುರ್ಬಲ ಪ್ರಧಾನಿ ಎಂದು ತಪ್ಪಾಗಿ ಗ್ರಹಿಸಲಾಯಿತು. ಅಲ್ಲದೆ, ಆ ದೌರ್ಬಲ್ಯವು ಸಿಂಗ್ ಅವರ ವೈಯಕ್ತಿಕ ಸೋಲು ಎಂದು ಕಾಣಲಾಯಿತೇ ವಿನಾ, ಪರಮಾಧಿಕಾರ ಚಲಾಯಿಸುವ ಪಕ್ಷಗಳು ಇದ್ದ ಮೈತ್ರಿಕೂಟದ ನಾಯಕನ ಸ್ಥಿತಿ ಹಾಗಿರುತ್ತದೆ ಎಂದು ಗ್ರಹಿಸಲಿಲ್ಲ.

ಹುತಾತ್ಮ ಆಗುವುದನ್ನು ಹೊರತುಪಡಿಸಿದರೆ ಇಂತಹ ಮೈತ್ರಿಪಕ್ಷಗಳಿಂದ ರಕ್ಷಣೆ ಪಡೆಯಲು ಬೇರೆ ಮಾರ್ಗಗಳು ಇಲ್ಲ. ನಾಯಕನ ಸ್ಥಾನದಲ್ಲಿ ಇರುವವ ತನ್ನ ಸ್ಥಾನವನ್ನು ಅಥವಾ ತನ್ನ ಸರ್ಕಾರವನ್ನು ಬಲಿಕೊಟ್ಟು ಮುನ್ನಡೆಯಬೇಕಾಗುತ್ತದೆ. ಪಕ್ಷಕ್ಕೆ ಬಹುಮತ ಇಲ್ಲದಿದ್ದಾಗ, ಮೈತ್ರಿಕೂಟ ಮುನ್ನಡೆಸುವಾಗ ಇತರ ಪಕ್ಷಗಳ ಮಾತು ಕೇಳಲೇಬೇಕಾಗುತ್ತದೆ.

ಮೋದಿ ಅವರಿಗೆ ಇಂತಹ ಸ್ಥಿತಿ ಎಂದೂ ಎದುರಾಗಿಲ್ಲ. ಪಕ್ಷಕ್ಕೆ ಬಹುಮತ ಇಲ್ಲದಿದ್ದಾಗ, ಮೈತ್ರಿಕೂಟದ ಸರ್ಕಾರ ಮುನ್ನಡೆಸುವಾಗ ಹೊಂದಾಣಿಕೆಯ ಮನೋಭಾವ ಬೇಕಾಗುತ್ತದೆ, ಅವಮಾನಗಳನ್ನು ನುಂಗಿಕೊಳ್ಳಬೇಕಾಗುತ್ತದೆ. ಮೈತ್ರಿಕೂಟದಲ್ಲಿ ತಾವು ಹೊಂದಿರುವ ಹಿಡಿತ ಬಹಿರಂಗವಾಗಿ ತಿಳಿಯುವಂತೆ ಮೈತ್ರಿಪಕ್ಷಗಳು ನೋಡಿಕೊಳ್ಳುತ್ತವೆ. ಹಲವು ಸಂದರ್ಭಗಳಲ್ಲಿ ಸರ್ಕಾರ ಬೆನ್ನು ಬಗ್ಗಿಸಬೇಕಾಗುತ್ತದೆ.

ಮೋದಿ ಅವರ ರಾಜಕೀಯ ಬೆಳವಣಿಗೆಯನ್ನು ಗಮನಿಸಿರುವ ನಮಗೆ ಇಂತಹ ಸ್ಥಿತಿಯನ್ನು ಅವರು ಹೇಗೆ ನಿಭಾಯಿಸುತ್ತಾರೆ ಎಂಬುದನ್ನು ಕಾಣುವ ಕುತೂಹಲ ಇರುತ್ತದೆ. ಬಹುಮತ ಇಲ್ಲದ ಸರ್ಕಾರ ಮತ್ತು ಖಿಚಡಿ ಸರ್ಕಾರಗಳು ಇದ್ದಮಾತ್ರಕ್ಕೆ ದೇಶದ ಆರ್ಥಿಕ ಹಾಗೂ ಸಾಮಾಜಿಕ ಬೆಳವಣಿಗೆ ಕುಗ್ಗುವುದಿಲ್ಲ ಎಂದು ನಾನು ಈ ಹಿಂದೆಯೇ ಬರೆದಿದ್ದೇನೆ. ಬಹುಮತ ಇಲ್ಲದ ಸರ್ಕಾರ ಬಂದುಬಿಟ್ಟರೆ ಅಥವಾ ಬಿಜೆಪಿ ದುರ್ಬಲಗೊಂಡರೆ ಏನಾಗಬಹುದು ಎಂಬ ಭಯದಿಂದ ನಿರಾಶರಾಗಬೇಕಿಲ್ಲ. ಮೈತ್ರಿಕೂಟದ ಸರ್ಕಾರ ಬಂದಮಾತ್ರಕ್ಕೆ ಕೇಡುಗಾಲ ಬರುವುದಿಲ್ಲ. ಆದರೆ ಅಂಥದ್ದೊಂದು ಸ್ಥಿತಿಯನ್ನು ಮೋದಿ ಅವರು ಹೇಗೆ ನಿಭಾಯಿಸುತ್ತಾರೆ ಎನ್ನುವುದೇ ಕುತೂಹಲಕಾರಿ.

(ಲೇಖಕ: ಅಂಕಣಕಾರ ಹಾಗೂ ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry