ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಲು ಕುಟುಂಬದವರು ದೊಡ್ಡ ಅಪರಾಧಿಗಳು: ಪ್ರಧಾನಿ ಮೋದಿ

ಬಿಹಾರದ ಜಂಗಲ್‌ ರಾಜ್‌ ನಾಂದಿಯಾಡಿದ್ದು ಅವರೇ– ಮೋದಿ ವಾಗ್ದಾಳಿ
Published 6 ಮಾರ್ಚ್ 2024, 15:30 IST
Last Updated 6 ಮಾರ್ಚ್ 2024, 15:30 IST
ಅಕ್ಷರ ಗಾತ್ರ

ಬೇತಿಯಾ (ಬಿಹಾರ): ‘ಆರ್‌ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಮತ್ತು ಅವರ ಕುಟುಂಬದವರು ಬಿಹಾರದ ಅತಿದೊಡ್ಡ ಅಪರಾಧಿಗಳಾಗಿದ್ದು, ದಶಕಕ್ಕೂ ಹೆಚ್ಚು ಕಾಲದ ಆಡಳಿತ ಅವಧಿಯಲ್ಲಿ ಬಿಹಾರವನ್ನು ಜಂಗಲ್‌ ರಾಜ್ ಮಾಡಲು ನಾಂದಿಯಾಡಿದರು’ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಆರೋಪಿಸಿದರು.

ಪಶ್ಚಿಮ ಚಂಪಾರಣ ಜಿಲ್ಲೆಯ ಬೇತಿಯಾದಲ್ಲಿ ನಡೆದ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಆರ್‌ಜೆಡಿ– ಕಾಂಗ್ರೆಸ್‌ ಮೈತ್ರಿಯ ದುರಾಡಳಿತದಿಂದ ಬಿಹಾರದ ಯುವ ಜನರು ಹೆಚ್ಚಿನ ಸಂಖ್ಯೆಯಲ್ಲಿ ವಲಸೆ ಹೋಗಬೇಕಾಯಿತು’ ಎಂದರು. ಎನ್‌ಡಿಎ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಸುಧಾರಣೆ ಕಾಣಲಾರಂಭಿಸಿದೆ ಎಂದು ಅವರು ಪ್ರತಿಪಾದಿಸಿದರು.

ತನಗೆ ಕುಟುಂಬ ಇಲ್ಲ ಎಂದು ಹೇಳಿದ ಲಾಲು ವಿರುದ್ಧ ಹರಿಹಾಯ್ದ ಪ್ರಧಾನಿ ಅವರು, ‘ಇಂಡಿಯಾ ಮೈತ್ರಿ ಕೂಟದವರಿಗೆ ನನಗೆ ಕುಟುಂಬ ಇಲ್ಲ ಎಂಬುದೇ ದೊಡ್ಡ ಸಮಸ್ಯೆಯಾಗಿದೆ. ಅವರು ತಮ್ಮ ಭ್ರಷ್ಟ ಕುಟುಂಬ ರಾಜಕಾರಣ ವ್ಯವಸ್ಥೆಯನ್ನು ರಕ್ಷಿಸಿಕೊಳ್ಳಲು ಬಯಸುತ್ತಿದ್ದಾರೆ. ಅವರಿಗೆ ಲೂಟಿ ಮಾಡಲು ಪರವಾನಗಿ ಬೇಕಾಗಿದೆ’ ಎಂದು ಆರೋಪಿಸಿದರು.

ಚಿಕ್ಕ ವಯಸ್ಸಿನಿಂದಲೇ ಆರ್‌ಎಸ್‌ಎಸ್‌ನ ಪ್ರಚಾರಕರಾಗಿ ಕಾರ್ಯ ನಿರ್ವಹಿಸಿರುವ ಮೋದಿ ಅವರು ಭಾವನಾತ್ಮಕವಾಗಿ ಮಾತನಾಡಿ, ‘ಉದ್ಯೋಗ ಅರಸಿ ದೂರದ ಊರುಗಳಿಗೆ ತೆರಳುವ ಬಿಹಾರದ ಯುವಜನರು ಛಾತ್‌ವೇಳೆಗೆ ಹಿಂತಿರುಗುತ್ತಾರೆ. ಆದರೆ ನನಗೆ ಅಂತಹ ವ್ಯವಸ್ಥೆ ಇರಲಿಲ್ಲ. ಹೀಗಾಗಿ ನಾನು ಇಡೀ ದೇಶವನ್ನು ನನ್ನ ಸ್ವಂತ ಕುಟುಂಬದಂತೆ ನೋಡಲಾರಂಭಿಸಿದೆ’ ಎಂದರು.

‘ನಾಯಕರಾದ ಮಹಾತ್ಮ ಗಾಂಧಿ, ಜಯಪ್ರಕಾಶ್‌ ನಾರಾಯಣ್‌, ರಾಮಮನೋಹರ ಲೋಹಿಯಾ, ಬಾಬಾಸಾಹೇಬ್ ಅಂಬೇಡ್ಕರ್‌, ಕರ್ಪೂರಿ ಠಾಕೂರ್ ಅವರು ತಮ್ಮ ಕುಟುಂಬವನ್ನು ಉತ್ತೇಜಿಸಲಿಲ್ಲ. ಈ ನಾಯಕರೇನಾದರೂ ಬದುಕಿದ್ದಿದ್ದರೆ, ಅವರ ವಿರುದ್ಧವೂ ಈ ಕುಟುಂಬ ರಾಜಕಾರಣ ಮಾಡುವವರು ದಾಳಿ ಮಾಡುತ್ತಿದ್ದರು’ ಎಂದು ಮೋದಿ ವಾಗ್ದಾಳಿ ನಡೆಸಿದರು. 

ಡಿಎಂಕೆ ನಾಯಕ ಎ. ರಾಜಾ ಅವರ ವಿವಾದಾತ್ಮಕ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ‘ಪಶ್ಚಿಮ ಚಂಪಾರಣವು ವಾಲ್ಮೀಕಿ ಋಷಿಗಳ ನಾಡು, ಅಲ್ಲಿ ಸೀತಾ ದೇವಿ ಆಶ್ರಮ ಪಡೆದಿದ್ದರು. ಲವ–ಕುಶರು ಜನಿಸಿದ್ದರು. ಇಲ್ಲಿನ ಜನರು ಭಗವಂತನ ಕುರಿತು ಮಾಡಿದ ಅವಮಾನಗಳನ್ನು ಕ್ಷಮಿಸುವುದಿಲ್ಲ. ಇಂಡಿಯಾ ಮೈತ್ರಿಕೂಟದ ನಾಯಕರಿಂದ ರಾಮ, ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯದ ಮೇಲೆ ನಡೆಯುತ್ತಿರುವ ದಾಳಿಗಳನ್ನು ಜನರು ಗಮನಿಸುತ್ತಿದ್ದಾರೆ’ ಎಂದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT