ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದೆಹಲಿ ಜಲ ಮಂಡಳಿ ಹಗರಣ: ದೋಷಾರೋಪ ಪಟ್ಟಿ ಸಲ್ಲಿಕೆ

Published 30 ಮಾರ್ಚ್ 2024, 14:32 IST
Last Updated 30 ಮಾರ್ಚ್ 2024, 14:32 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿ ಜಲ ಮಂಡಳಿಯಲ್ಲಿ (ಡಿಜೆಬಿ) ನಡೆದಿದೆ ಎನ್ನಲಾದ ಅವ್ಯವಹಾರಗಳಿಗೆ ಸಂಬಂಧಿಸಿದ ಹಣದ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಮೊದಲ ದೋಷಾರೋಪ ಪಟ್ಟಿಯನ್ನು ಜಾರಿ ನಿರ್ದೇಶನಾಲಯವು (ಇ.ಡಿ.) ಸಲ್ಲಿಸಿದೆ ಎಂದು ಮೂಲಗಳು ಶನಿವಾರ ತಿಳಿಸಿವೆ.

ದೋಷಾರೋಪ ಪಟ್ಟಿಯು ಒಟ್ಟು ಎಂಟು ಸಾವಿರ ಪುಟಗಳಷ್ಟು ಇದೆ, ಇದನ್ನು ಗುರುವಾರ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ ಎಂದು ಗೊತ್ತಾಗಿದೆ. ಇದನ್ನು ನ್ಯಾಯಾಲಯವು ಸೋಮವಾರ ವಿಚಾರಣೆಗೆ ಕೈಗೆತ್ತಿಕೊಳ್ಳುವ ನಿರೀಕ್ಷೆ ಇದೆ.

ಮಂಡಳಿಯ ಮಾಜಿ ಮುಖ್ಯ ಎಂಜಿನಿಯರ್ ಜಗದೀಶ್ ಕುಮಾರ್ ಅರೋರ, ಗುತ್ತಿಗೆದಾರ ಅನಿಲ್ ಕುಮಾರ್ ಅಗರ್ವಾಲ್, ಎನ್‌ಬಿಸಿಸಿ ಮಾಜಿ ವ್ಯವಸ್ಥಾಪಕ ನಿರ್ದೇಶಕ ಡಿ.ಕೆ. ಮಿತ್ತಲ್, ತೇಜಿಂದರ್ ಸಿಂಗ್, ಎನ್‌ಕೆಜಿ ಇನ್‌ಫ್ರಾಸ್ಟ್ರಕ್ಚರ್ ಕಂಪನಿಯನ್ನು ದೋಷಾರೋಪ ಪಟ್ಟಿಯಲ್ಲಿ ಹೆಸರಿಸಲಾಗಿದೆ.

ಹಣದ ಅಕ್ರಮ ವರ್ಗಾವಣೆ ತಡೆ ಕಾಯ್ದೆಯ ಅಡಿಯಲ್ಲಿ ಇವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಇ.ಡಿ ಕೋರಿದೆ. ಅಲ್ಲದೆ, ಮುಂದೆ ಪೂರಕ ದೋಷಾರೋಪ ಪಟ್ಟಿಯನ್ನು ತಾನು ಸಲ್ಲಿಸಬಹುದು ಎಂದು ಕೂಡ ತಿಳಿಸಿದೆ.

ಮಂಡಳಿ ನೀಡಿದ ಗುತ್ತಿಗೆಯಲ್ಲಿ ನಡೆದ ಭ್ರಷ್ಟಾಚಾರದಿಂದ ದೊರೆತ ಹಣವನ್ನು ದೆಹಲಿಯ ಆಡಳಿತಾರೂಢ ಎಎಪಿ ಪಕ್ಷಕ್ಕೆ ಚುನಾವಣಾ ವೆಚ್ಚಗಳಿಗೆ ನೀಡಲಾಗಿದೆ ಎಂದು ಇ.ಡಿ ಆರೋಪಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಗೆ ಬರುವಂತೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರಿಗೂ ಇ.ಡಿ. ಸೂಚಿಸಿತ್ತು. ಆದರೆ ಅವರು ವಿಚಾರಣೆಗೆ ಗೈರಾಗಿದ್ದರು.

ನಂತರ ಇ.ಡಿ ಅಧಿಕಾರಿಗಳು ಕೇಜ್ರಿವಾಲ್ ಅವರನ್ನು ದೆಹಲಿಯ ಅಬಕಾರಿ ನೀತಿಗೆ ಸಂಬಂಧಿಸಿದ ಹಣದ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಬಂಧಿಸಿದ್ದಾರೆ.

ತನಿಖೆಯ ಭಾಗವಾಗಿ ಇ.ಡಿ ಅಧಿಕಾರಿಗಳು ಕೇಜ್ರಿವಾಲ್ ಅವರ ಆಪ್ತ ಸಹಾಯಕ ವಿಭವ್ ಕುಮಾರ್, ಎಎಪಿಯ ರಾಜ್ಯಸಭಾ ಸದಸ್ಯ ಹಾಗೂ ಖಜಾಂಚಿ ಎನ್‌.ಡಿ. ಗುಪ್ತ, ಮಂಡಳಿಯ ಮಾಜಿ ಸದಸ್ಯ ಶಲಭ್ ಕುಮಾರ್, ಚಾರ್ಟರ್ಡ್‌ ಅಕೌಂಟೆಂಟ್ ಪಂಕಜ್ ಮಂಗಲ್ ಮತ್ತು ಇತರ ಕೆಲವರಿಗೆ ಸೇರಿದ ಸ್ಥಳಗಳ ಮೇಲೆ ಫೆಬ್ರುವರಿಯಲ್ಲಿ ದಾಳಿ ನಡೆಸಿದ್ದರು.

ಎನ್‌ಕೆಜಿ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ ಕಂಪನಿಯು ತಾಂತ್ರಿಕ ಅರ್ಹತೆಯನ್ನು ಹೊಂದಿಲ್ಲದಿದ್ದರೂ, ಮಂಡಳಿಯ ಗುತ್ತಿಗೆಯನ್ನು ಅರೋರ ಅವರು ಈ ಕಂಪನಿಗೆ ನೀಡಿದರು ಎಂದು ಸಿಬಿಐ ಎಫ್‌ಐಆರ್ ದಾಖಲಿಸಿಕೊಂಡಿದೆ. ಈ ಪ್ರಕರಣದ ಆಧಾರದಲ್ಲಿ ಇ.ಡಿ. ತಾನೊಂದು ಪ್ರಕರಣ ದಾಖಲಿಸಿಕೊಂಡಿದೆ.

ಅರೋರ ಅವರು ಗುತ್ತಿಗೆಯನ್ನು ಎನ್‌ಕೆಜಿ ಇನ್‌ಫ್ರಾಸ್ಟ್ರಕ್ಚರ್ ಕಂಪನಿಗೆ ನೀಡಿದ ನಂತರ ಲಂಚದ ಹಣವನ್ನು ನಗದು ರೂಪದಲ್ಲಿ ಹಾಗೂ ಬ್ಯಾಂಕ್‌ ಖಾತೆ ಮೂಲಕ ಪಡೆದುಕೊಂಡಿದ್ದಾರೆ. ಹಣವನ್ನು ಮಂಡಳಿಯಲ್ಲಿ ಹಲವರಿಗೆ ಹಾಗೂ ಎಎಪಿ ಜೊತೆ ನಂಟು ಹೊಂದಿರುವ ವ್ಯಕ್ತಿಗಳಿಗೆ ವರ್ಗಾಯಿಸಿದ್ದಾರೆ ಎಂದು ಇ.ಡಿ. ಆರೋಪಿಸಿದೆ.

ಎಎಪಿ ಲಂಪ ಪಡೆದಿದೆ ಎಂದು ಇ.ಡಿ. ಆರೋಪಿಸಿರುವ ಎರಡನೆಯ ಪ್ರಕರಣ ಇದು. ಈಗ ರದ್ದಾಗಿರುವ ದೆಹಲಿ ಅಬಕಾರಿ ನೀತಿಯಲ್ಲಿ ಎಎಪಿಗೆ ಲಂಚದ ಹಣ ಪಾವತಿಯಾಗಿದೆ ಎಂದು ಇ.ಡಿ. ಆರೋಪಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT