ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಿಗೌರಾ’ ಹೆಸರು ಬಳಸದಂತೆ ಹೊಮಿಯೋಪಥಿ ಔಷಧ ಕಂಪನಿಗೆ ನಿರ್ದೇಶನ

‘ವಯಾಗ್ರ’ ತಯಾರಕ ಫೈಜರ್‌ ಕಂಪನಿಯಿಂದ ಹೈಕೋರ್ಟ್‌ಗೆ ಅರ್ಜಿ
Published 2 ಮೇ 2024, 19:17 IST
Last Updated 2 ಮೇ 2024, 19:17 IST
ಅಕ್ಷರ ಗಾತ್ರ

ನವದೆಹಲಿ: ಲೈಂಗಿಕ ಸಮಸ್ಯೆಗಳಿಗೆ ನೀಡುವ ಚಿಕಿತ್ಸೆಯಲ್ಲಿ ಬಳಸುವ ಔಷಧವನ್ನು ‘ವಿಗೌರಾ’ ಎಂಬ ಹೆಸರಿನಡಿ ಇನ್ನು ಮುಂದೆ ಮಾರಾಟ ಮಾಡದಂತೆ ಹೊಮಿಯೋಪಥಿ ಔಷಧ ತಯಾರಕ ಕಂಪನಿ ರಿನೊವಿಷನ್ ಎಕ್ಸ್‌ಪೋರ್ಟ್ಸ್ ಪ್ರೈವೇಟ್‌ ಲಿಮಿಟೆಡ್‌ಗೆ ದೆಹಲಿ ಹೈಕೋರ್ಟ್‌ ಆದೇಶಿಸಿದೆ.

ಅಲೋಪಥಿ ಔಷಧಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಫೈಜರ್ ಪ್ರಾಡಕ್ಟ್ಸ್‌ ಕಂಪನಿಯು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಂಜೀವ್ ನರೂಲಾ,  ಬುಧವಾರ ಈ ಆದೇಶ ಹೊರಡಿಸಿದ್ದಾರೆ.

ನಿಮಿರುವಿಕೆ ಸಮಸ್ಯೆ ಚಿಕಿತ್ಸೆಯಲ್ಲಿ ಬಳಸುವ ‘ವಯಾಗ್ರ’ ಔಷಧವನ್ನು ಫೈಜರ್‌ ಕಂಪನಿ ಉತ್ಪಾದಿಸಿ, ಮಾರಾಟ ಮಾಡುತ್ತಿದೆ.

‘ವಯಾಗ್ರ ಎಂಬುದು ಕಂಪನಿಯ ಉತ್ಪನ್ನದ ಟ್ರೇಡ್‌ಮಾರ್ಕ್‌ ಆಗಿದ್ದು, ಈ ಹೆಸರನ್ನೇ ಧ್ವನಿಸುವಂತಹ ‘ವಿಗೌರಾ’ ಎಂಬ ಹೊಮಿಯೋಪಥಿ ಔಷಧವನ್ನು ಮಾರಾಟ ಮಾಡುತ್ತಿರುವುದು ಕಾನೂನಿನ ಉಲ್ಲಂಘನೆ’ ಎಂದು ಫೈಜರ್‌ ಕಂಪನಿ ಅರ್ಜಿ ಸಲ್ಲಿಸಿತ್ತು.

‘ಈ ಎರಡೂ ಔಷಧಗಳ ಉಚ್ಚಾರಣೆಯಲ್ಲಿ ಬಹಳಷ್ಟು ಸಾಮ್ಯತೆ ಇದ್ದು, ಗ್ರಾಹಕರಲ್ಲಿ ಗೊಂದಲವನ್ನು ಸೃಷ್ಟಿಸುವ ಸಾಧ್ಯತೆಯೂ ಇದೆ. ಹಾಗಾಗಿ, ವಿಗೌರಾ ಅಥವಾ ಫೈಜರ್‌ನ ಟ್ರೇಡ್‌ಮಾರ್ಕ್‌ ‘ವಯಾಗ್ರ’ ಹೋಲುವಂತಹ ಹೆಸರನ್ನು ಬಳಸಬಾರದು’ ಎಂದು ರಿನೊವಿಷನ್ ಎಕ್ಸ್‌ಪೋರ್ಟ್ಸ್‌ ಕಂಪನಿಗೆ ನ್ಯಾಯಮೂರ್ತಿ ನರೂಲಾ ನಿರ್ದೇಶನ ನೀಡಿದ್ದಾರೆ.

‘ತನಗೆ ಉಂಟಾಗಿರುವ ಹಾನಿಗೆ ಸಂಬಂಧಿಸಿ ಫೈಜರ್‌ ಕಂಪನಿಯು ಪ್ರತಿವಾದಿಯಿಂದ ₹3 ಲಕ್ಷ ಪರಿಹಾರ ವಸೂಲಿ ಮಾಡಲು ಅರ್ಹವಾಗಿದೆ’ ಎಂದೂ ಆದೇಶದಲ್ಲಿ ತಿಳಿಸಿದ್ಧಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT