ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವ್ಯಕ್ತಿ ಸ್ವಾತಂತ್ರ್ಯ; ಪ್ರತಿದಿನವೂ ಮುಖ್ಯ: ಸುಪ್ರೀಂ ಕೋರ್ಟ್

Published 17 ಮೇ 2024, 15:15 IST
Last Updated 17 ಮೇ 2024, 15:15 IST
ಅಕ್ಷರ ಗಾತ್ರ

ನವದೆಹಲಿ: ‘ವ್ಯಕ್ತಿ ಸ್ವಾತಂತ್ರ್ಯಕ್ಕೆ ಸಂಬಂಧಿಸಿ ಪ್ರತಿಯೊಂದು ದಿನವೂ ಮಹತ್ವದ್ದಾಗಿದೆ’ ಎಂದು ಸುಪ್ರೀಂ ಕೋರ್ಟ್‌ ಶುಕ್ರವಾರ ಅಭಿಪ್ರಾಯಪಟ್ಟಿತು.

ಪ್ರಸ್ತುತ ರದ್ದಾಗಿರುವ ದೆಹಲಿ ಅಬಕಾರಿ ನೀತಿಯ ಭ್ರಷ್ಟಾಚಾರ ಪ್ರಕರಣಕ್ಕೆ ಕುರಿತು ಉದ್ಯಮಿಯೊಬ್ಬರು ಸಲ್ಲಿಸಿರುವ ಜಾಮೀನು ಅರ್ಜಿಯನ್ನು ಇತ್ಯರ್ಥಪಡಿಸಬೇಕು ಎಂದು ದೆಹಲಿ ಹೈಕೋರ್ಟ್‌ಗೆ ಸೂಚಿಸಿತು. 

‘ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ಹೈಕೋರ್ಟ್‌ನಲ್ಲಿ 40 ಬಾರಿ ವಿಚಾರಣೆಗೆ ಬಂದಿದೆ. ಈಗ, ಜುಲೈ 8ಕ್ಕೆ ವಿಚಾರಣೆ ಮುಂದೂಡಲಾಗಿದೆ’ ಎಂದು ಉದ್ಯಮಿ ಅಮನ್‌ದೀಪ್ ಸಿಂಗ್ ಧಾಲ್ ಅವರನ್ನು ಪ್ರತಿನಿಧಿಸಿದ್ದ ವಕೀಲ ಕಪಿಲ್‌ ಸಿಬಲ್ ಅವರು, ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ, ಸಂದೀಪ್‌ ಮೆಹ್ತಾ ಅವರಿದ್ದ ಪೀಠದ ಗಮನಕ್ಕೆ ತಂದರು.

‘40 ಬಾರಿ ವಿಚಾರಣೆಯ ನಂತರವೂ ಜಾಮೀನು ಕುರಿತು ತೀರ್ಮಾನ ಪ್ರಕಟಿಸಿಲ್ಲ’ ಎಂದು ಸಿಬಲ್‌ ತಿಳಿಸಿದರು. ಇದಕ್ಕೆ, ಕಳೆದ ಜುಲೈನಲ್ಲೇ ಜಾಮೀನು ಅರ್ಜಿ ಸಲ್ಲಿಸಲಾಗಿದೆ ಎಂಬುದನ್ನು ಗಮನಿಸಲಾಗಿದೆ ಎಂದು ಪೀಠ ಪ್ರತಿಕ್ರಿಯಿಸಿತು.

‘ಈ ಹಂತದಲ್ಲಿ, ಜನರ ಸ್ವಾತಂತ್ರ್ಯದ ವಿಚಾರದಲ್ಲಿ ಪ್ರತಿ ದಿನವೂ ಮಹತ್ವದ್ದಾಗಿದೆ. ಜಾಮೀನು ಅರ್ಜಿ 11 ತಿಂಗಳಿನಿಂದ ಬಾಕಿ ಉಳಿದಿದೆ ಎಂಬುದನ್ನು ಗಮನಿಸಿದಾಗ, ಅರ್ಜಿದಾರರ ಸ್ವಾತಂತ್ರ್ಯ ಕಸಿಯಲಾಗಿದೆ ಎಂಬುದು ತಿಳಿಯುತ್ತದೆ’ ಎಂದು ಪೀಠ ಹೇಳಿತು.

ಬೇಸಿಗೆ ರಜೆ ಅವಧಿ ಆರಂಭವಾಗುವುದರ ಮೊದಲು ಜಾಮೀನು ಅರ್ಜಿ ಕುರಿತು ತೀರ್ಮಾನ ಪ್ರಕಟಿಸಲು ಹೈಕೋರ್ಟ್‌ಗೆ ನಾವು ಮನವಿ ಮಾಡುತ್ತೇವೆ ಎಂದು ಪೀಠ ಹೇಳಿತು. ಹೈಕೋರ್ಟ್‌ನ ಬೇಸಿಗೆ ರಜೆ ಅವಧಿಯು ಜೂನ್‌ 3ರಂದು ಆರಂಭವಾಗಲಿದೆ. ಮೇ 31 ಸಾಮಾನ್ಯ ಕೆಲಸದ ಕೊನೆಯ ದಿನವಾಗಿದೆ.

ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿ ಸಿಬಿಐ ಮತ್ತು ಇ.ಡಿ ದಾಖಲಿಸಿರುವ ಪ್ರತ್ಯೇಕ ಪ್ರಕರಣಗಳಲ್ಲಿ ಧಾಲ್‌ ಆರೋಪಿಯಾಗಿದ್ದಾರೆ. ಸಿಬಿಐ ದಾಖಲಿಸಿದ್ದ ಪ್ರಕರಣದಲ್ಲಿ ಕೆಳಹಂತದ ಕೋರ್ಟ್‌ ಈ ಹಿಂದೆ ಜಾಮೀನು ನಿರಾಕರಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT