ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ವಿರೋಧಿ ಮನಸ್ಥಿತಿಯ ‘ಇಂಡಿಯಾ’: ಪ್ರಧಾನಿ ಮೋದಿ

ಕಾಂಗ್ರೆಸ್‌ಗೆ ವಂಶಾಡಳಿತ ಮತ್ತು ಭ್ರಷ್ಟಾಚಾರಕ್ಕಿಂತ ಮುಖ್ಯವಾದದ್ದೇನೂ ಇಲ್ಲ– ಟೀಕೆ
Published 20 ನವೆಂಬರ್ 2023, 13:28 IST
Last Updated 20 ನವೆಂಬರ್ 2023, 13:28 IST
ಅಕ್ಷರ ಗಾತ್ರ

ಜೈಪುರ: ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಮಹಿಳಾ ವಿರೋಧಿ ಮನಸ್ಥಿತಿ ಹೊಂದಿವೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಆರೋಪಿಸಿದರು.

ಪಾಲಿ ಜಿಲ್ಲೆಯಲ್ಲಿ ಸೋಮವಾರ ನಡೆದ ರ್‍ಯಾಲಿಯಲ್ಲಿ ಮಾತನಾಡಿದ ಅವರು, ಮಹಿಳೆಯರಿಗೆ ಮೀಸಲಾತಿ ನೀಡುವ ಮಸೂದೆ ಅಂಗೀಕಾರವಾದಾಗಿನಿಂದ, ಅವರು ಮಹಿಳೆಯರ ವಿರುದ್ಧ ಅಭಿಯಾನ ಪ್ರಾರಂಭಿಸಿದ್ದಾರೆ. ದುರಹಂಕಾರಿ ಮೈತ್ರಿಕೂಟದ ನಾಯಕರು ನಮ್ಮ ತಾಯಂದಿರು ಮತ್ತು ಸಹೋದರಿಯರ ಬಗ್ಗೆ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.  

ಬಿಹಾರ ಮುಖ್ಯಮಂತ್ರಿ ವಿಧಾನಸಭೆಯಲ್ಲಿ ಮಹಿಳೆಯರ ವಿರುದ್ಧ ಅವಹೇಳನಕಾರಿ ಪದಗಳನ್ನು ಬಳಸಿದ್ದಾರೆ. ಆದರೆ ಯಾವುದೇ ಕಾಂಗ್ರೆಸ್ ನಾಯಕರು ಈ ಬಗ್ಗೆ ಏನನ್ನೂ ಹೇಳಲಿಲ್ಲ. ಇದು ಕಾಂಗ್ರೆಸ್‌ನ ನಿಜವಾದ ಮುಖ, ಇದನ್ನು ರಾಜಸ್ಥಾನದ ಜನರು ಗುರುತಿಸಿದ್ದಾರೆ ಎಂದು ಹೇಳಿದರು.

ಮಾಜಿ ಮುಖ್ಯಮಂತ್ರಿಯ ವಿರುದ್ಧ ಬಿಹಾರ ಮುಖ್ಯಮಂತ್ರಿ ಅವಹೇಳನಕಾರಿ ಭಾಷೆ ಬಳಸಿದ್ದಾರೆ. ಏಕೆಂದರೆ, ಮಾಜಿ ಮುಖ್ಯಮಂತ್ರಿ ತುಂಬಾ ಹಿಂದುಳಿದ ಕುಟುಂಬದಿಂದ ಬಂದವರು. ಅದು ತಪ್ಪು ಎಂದು ಹೇಳುವ ವಿವೇಕ ಕಾಂಗ್ರೆಸ್‌ಗೆ ಇಲ್ಲ ಎಂದರು.  

ಕಾಂಗ್ರೆಸ್‌ಗೆ ವಂಶಾಡಳಿತ ಮತ್ತು ಭ್ರಷ್ಟಾಚಾರಕ್ಕಿಂತ ಬೇರೆ ಯಾವ ವಿಷಯವೂ ಮುಖ್ಯವಲ್ಲ ಎಂದು ಆರೋಪಿಸಿದ ಅವರು, ದಲಿತರ ಮೇಲಿನ ದೌರ್ಜನ್ಯದ ಘಟನೆಗಳ ಬಗ್ಗೆ ಆ ಪಕ್ಷ ಕಣ್ಣುಮುಚ್ಚಿ ಕುಳಿತಿದೆ. ರಾಜಸ್ಥಾನ ಸರ್ಕಾರ ತುಷ್ಟೀಕರಣ ಹೊರತುಪಡಿಸಿ ಬೇರೇನೂ ಯೋಚಿಸುವುದಿಲ್ಲ. ಈ ನೀತಿಯಿಂದಾಗಿ, ಗಲಭೆ ಮತ್ತು ಭಯೋತ್ಪಾದನೆಯ ಮನಸ್ಥಿತಿ ಹೊಂದಿರುವವರು ಐದು ವರ್ಷಗಳಲ್ಲಿ ರಾಜ್ಯದಲ್ಲಿ ಪ್ರವರ್ಧಮಾನಕ್ಕೆ ಬಂದರು ಎಂದು ಹೇಳಿದರು.

ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಸನಾತನ ಧರ್ಮ ನಾಶಮಾಡಲು ಬಯಸುತ್ತವೆ. ಅಂದರೆ ರಾಜಸ್ಥಾನದ ಸಂಸ್ಕೃತಿ ನಾಶಪಡಿಸಲು ಬಯಸುತ್ತವೆ ಎಂದರು. 

ರಾಜ್ಯದಲ್ಲಿ ಪೆಟ್ರೋಲ್ ಬೆಲೆ ಏರಿಕೆಗೆ ಕಾಂಗ್ರೆಸ್ ಕಾರಣ ಎಂದು ಆರೋಪಿಸಿದ ಮೋದಿ, ಬಿಜೆಪಿ ಸರ್ಕಾರ ರಚನೆಯಾದ ನಂತರ ಪೆಟ್ರೋಲ್ ಬೆಲೆ ಪರಿಶೀಲನೆ ನಡೆಸಲಾಗುವುದು. ಬಿಜೆಪಿ ಆಡಳಿತದ ಹರಿಯಾಣ, ಉತ್ತರಪ್ರದೇಶ ಮತ್ತು ಗುಜರಾತ್ ಗಿಂತ ರಾಜಸ್ಥಾನವು ಹೆಚ್ಚಿನ ಬೆಲೆಗೆ ಪೆಟ್ರೋಲ್ ಮಾರಾಟ ಮಾಡುತ್ತಿದೆ ಎಂದು ತಿಳಿಸಿದರು.  

ಕಾಂಗ್ರೆಸ್ ಆಡಳಿತಾವಧಿಯಲ್ಲಿ ವಾರ್ಷಿಕ ₹2 ಲಕ್ಷ ವರೆಗಿನ ಆದಾಯಕ್ಕೆ ತೆರಿಗೆ ಸಂಗ್ರಹಿಸಲಾಗುತ್ತಿತ್ತು. ಆದರೆ, ಈಗ ₹7 ಲಕ್ಷ ವರೆಗಿನ ಆದಾಯಕ್ಕೆ ಯಾವುದೇ ತೆರಿಗೆ ಸಂಗ್ರಹಿಸಲಾಗುವುದಿಲ್ಲ. ನೇರ ತೆರಿಗೆ ಕಡಿತದಿಂದ ₹ 2.5 ಲಕ್ಷ ಕೋಟಿ ಉಳಿತಾಯವಾಗಿದೆ ಎಂದರು. 

ಮೊಬೈಲ್ ಡೇಟಾದ ಬೆಲೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿದ್ದಂತೆಯೇ ಇದ್ದಿದ್ದರೆ, ಇಂದು ಪ್ರತಿ ತಿಂಗಳು ಮೊಬೈಲ್ ಡೇಟಾಕ್ಕಾಗಿ ₹5,000 ಹೆಚ್ಚು ಖರ್ಚು ಮಾಡಬೇಕಾಗುತ್ತಿತ್ತು ಎಂದು ಮೋದಿ ಹೇಳಿದರು.

ರಾಜಸ್ಥಾನ ವಿಧಾನಸಭೆಗೆ ಇದೇ 25ರಂದು ಚುನಾವಣೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT