ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಭಾರತ ರತ್ನ' ಪ್ರಶಸ್ತಿ ಪುರಸ್ಕೃತರಿಗೆ ಪ್ರಧಾನಿ ಮೋದಿ ಅಭಿನಂದನೆ

Published 30 ಮಾರ್ಚ್ 2024, 10:25 IST
Last Updated 30 ಮಾರ್ಚ್ 2024, 10:25 IST
ಅಕ್ಷರ ಗಾತ್ರ

ನವದೆಹಲಿ: ಮಾಜಿ ಪ್ರಧಾನಿಗಳಾದ ಚೌಧರಿ ಚರಣ್ ಸಿಂಗ್ ಹಾಗೂ ಪಿ.ವಿ.ನರಸಿಂಹ ರಾವ್, ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್, ಕೃಷಿ ವಿಜ್ಞಾನಿ ಡಾ. ಎಂ.ಎಸ್.ಸ್ವಾಮಿನಾಥನ್ ಅವರಿಗೆ ಮರಣೋತ್ತರವಾಗಿ ಹಾಗೂ ಬಿಜೆಪಿಯ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಅವರಿಗೆ ಶನಿವಾರ ಭಾರತ ರತ್ನ ಪ್ರದಾನ ಮಾಡಲಾಯಿತು. ಭಾರತ ರತ್ನ ಪ್ರಶಸ್ತಿ ಪುರಸ್ಕೃತರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದನೆ ಹೇಳಿದ್ದಾರೆ.

‘ ದೇಶಕ್ಕಾಗಿ ಪಿ.ವಿ. ನರಸಿಂಹ ರಾವ್ ಅವರು ನೀಡಿದ ಕೊಡುಗೆಯನ್ನು ಪ್ರತಿಯೊಬ್ಬ ಭಾರತೀಯನೂ ಗೌರವಿಸುತ್ತಾನೆ. ಮತ್ತು ಅವರಿಗೆ ಭಾರತ ರತ್ನ ನೀಡಿದ್ದಕ್ಕಾಗಿ ಹೆಮ್ಮೆ ಪಡುತ್ತಾರೆ. ವಿದ್ವಾಂಸರಾಗಿ, ಚಿಂತಕರಾಗಿ ದೇಶದ ಪ್ರಗತಿ ಮತ್ತು ಆಧುನೀಕರಣಕ್ಕೆ ಹಗಲಿರುಳು ಶ್ರಮಿಸಿದರು. ಅವರ ಆರ್ದಶಗಳನ್ನು ಎಂದೆಂದಿಗೂ ಪಾಲಿಸಲಾಗುತ್ತದೆ' ಎಂದು ಪ್ರಧಾನಿ ಮೋದಿ ಎಕ್ಸ್‌ನಲ್ಲಿ ಹೇಳಿದ್ದಾರೆ.

'ಭಾರತದ ಅಭಿವೃದ್ಧಿಗೆ, ವಿಶೇಷವಾಗಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿಗೆ ಚರಣ್ ಸಿಂಗ್ ಅಪಾರ ಕೊಡುಗೆ ನೀಡಿದ್ದಾರೆ. ಈ ಗೌರವವು ಅವರು ಪ್ರತಿಪಾದಿಸಿದ ಕಠಿಣ ಪರಿಶ್ರಮ, ಸಮರ್ಪಣೆ ಮತ್ತು ಸಾರ್ವಜನಿಕ ಸೇವೆಯ ಮೌಲ್ಯಗಳನ್ನು ಎತ್ತಿ ಹಿಡಿಯಲು ಭವಿಷ್ಯದ ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ' ಎಂದು ಪ್ರಧಾನಿ ಹೇಳಿದ್ದಾರೆ.

'ಸಾಮಾಜಿಕ ನ್ಯಾಯ ಮತ್ತು ಸಮಾನತೆಗಾಗಿ ತಮ್ಮ ಇಡೀ ಜೀವನವನ್ನು ಮುಡಿಪಾಗಿಟ್ಟ ಕರ್ಪೂರಿ ಠಾಕೂರ್ ಅವರಿಗೆ 'ಭಾರತ ರತ್ನ'ವು ಸೂಕ್ತ ಗೌರವವಾಗಿದೆ. ದೀನದಲಿತರ ಹೋರಾಟಗಾರ ಎಂದೇ ಖ್ಯಾತರಾಗಿರುವ ಠಾಕೂರ್‌ ಅವರು ಹಿಂದುಳಿದವರ ಉನ್ನತಿಗೆ ನೀಡಿದ ಕೊಡುಗೆಗಳು ಭಾರತೀಯ ಸಮಾಜದಲ್ಲಿ ಅಳಿಸಲಾಗದ ಛಾಪು ಮೂಡಿಸಿವೆ' ಎಂದು ಪ್ರಧಾನಿ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಕೃಷಿ ವಿಜ್ಞಾನಿ ಎಂ.ಎಸ್ ಸ್ವಾಮಿನಾಥನ್ ಅವರನ್ನು ಉಲ್ಲೇಖಿಸಿದ ಮೋದಿ, 'ಕೃಷಿ ಜಗತ್ತಿನಲ್ಲಿ ಸ್ವಾಮಿನಾಥನ್ ಪೂಜ್ಯ ವ್ಯಕ್ತಿ' ಎಂದು ಬಣ್ಣಿಸಿದ್ದಾರೆ. ಅವರ ಪ್ರಯತ್ನದ ಫಲವಾಗಿ ಆಹಾರ ಉತ್ಪಾದನೆಯಲ್ಲಿ ಭಾರತ ಸ್ವಾವಲಂಬನೆಯತ್ತ ಸಾಗಿದೆ. ಅವರಿಗೆ ನೀಡಲಾದ 'ಭಾರತ ರತ್ನ'ವು ಕೃಷಿ ಮತ್ತು ಆಹಾರ ಭದ್ರತೆಯಲ್ಲಿ ಸಂಶೋಧನೆ ಮಾಡಲು ಹೆಚ್ಚಿನ ಜನರನ್ನು ಪ್ರೇರೇಪಿಸಲಿ ಎಂದು ಪ್ರಧಾನಿ ಆಶಿಸಿದ್ದಾರೆ.

ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌ‍ಪದಿ ಮುರ್ಮು ಅವರು ಐವರಿಗೆ ‘ಭಾರತ ರತ್ನ’ ಪ್ರಶಸ್ತಿ ಪ್ರದಾನ ಮಾಡಿದ್ದಾರೆ.

ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್ ಅವರ ಪರವಾಗಿ ಪುತ್ರ, ಜೆಡಿಯು ನಾಯಕ ರಾಮನಾಥ ಠಾಕೂರ್ ಪ್ರಶಸ್ತಿ ಸ್ವೀಕರಿಸಿದ್ದಾರೆ. ಕೃಷಿ ವಿಜ್ಞಾನಿ ಡಾ. ಎಂ.ಎಸ್.ಸ್ವಾಮಿನಾಥನ್ ಪರವಾಗಿ ಪುತ್ರಿ ನಿತ್ಯಾ ರಾವ್ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ.

ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ಪರವಾಗಿ ಮೊಮ್ಮಗ, ಆರ್‌ಎಲ್‌ಡಿ ಮುಖ್ಯಸ್ಥ ಜಯಂತ್ ಸಿಂಗ್ ಪ್ರಶಸ್ತಿಯನ್ನು ಸ್ವೀಕರಿಸಿದರೆ, ಪಿ.ವಿ.ನರಸಿಂಹರಾವ್ ಅವರ ಪುತ್ರ ಪಿ.ವಿ.ಪ್ರಭಾಕರ ರಾವ್ ಪ್ರಶಸ್ತಿ ಸ್ವೀಕರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT