ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವರದಿ ಪ್ರಕಟಣೆಗೆ ತಡೆ: ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ- ಸುಪ್ರೀಂ ಕೋರ್ಟ್

ಬ್ಲೂಮ್‌ಬರ್ಗ್‌ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಅಭಿಮತ
Published 26 ಮಾರ್ಚ್ 2024, 12:19 IST
Last Updated 26 ಮಾರ್ಚ್ 2024, 12:19 IST
ಅಕ್ಷರ ಗಾತ್ರ

ನವದೆಹಲಿ: ಅಸಾಮಾನ್ಯ ಸಂದರ್ಭಗಳನ್ನು ಹೊರತುಪಡಿಸಿ, ಸಂಬಂಧಪಟ್ಟ ಎಲ್ಲರ ವಾದ ಆಲಿಸದೆ ಸುದ್ದಿ, ಲೇಖನದ ಪ್ರಕಟಣೆಗೆ ನ್ಯಾಯಾಲಯಗಳು ತಡೆ ನೀಡಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಆ ರೀತಿ ಮಾಡುವುದು ಲೇಖಕನ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಹಾಗೂ ಮಾಹಿತಿ ಪಡೆಯುವ ಸಾರ್ವಜನಿಕರ ಹಕ್ಕಿನ ಮೇಲೆ ಪರಿಣಾಮ ಉಂಟುಮಾಡುತ್ತದೆ ಎಂದು ಕೋರ್ಟ್ ವಿವರಿಸಿದೆ.

ಜೀ ಎಂಟರ್‌ಟೇನ್ಮೆಂಟ್‌ ಸಂಸ್ಥೆಯ ವಿರುದ್ಧ ಅಂತರರಾಷ್ಟ್ರೀಯ ಮಾಧ್ಯಮ ಸಂಸ್ಥೆ ಬ್ಲೂಮ್‌ಬರ್ಗ್‌ ಮಾನಹಾನಿಕರ ಎನ್ನಲಾದ ರೀತಿಯಲ್ಲಿ ಪ್ರಕಟಿಸಿದ್ದ ವರದಿಯನ್ನು ತೆಗೆದುಹಾಕುವಂತೆ ವಿಚಾರಣಾ ನ್ಯಾಯಾಲಯವೊಂದು ಆದೇಶಿಸಿತ್ತು. ಈ ಆದೇಶವನ್ನು ರದ್ದುಪಡಿಸಿರುವ ಸುಪ್ರೀಂ ಕೋರ್ಟ್, ವರದಿಗಳ ಪ್ರಕಟಣೆಗೆ ತಡೆ ನೀಡುವ ಮೊದಲು ಪೂರ್ಣ ಪ್ರಮಾಣದಲ್ಲಿ ವಿಚಾರಣೆ ನಡೆಸಬೇಕು ಎಂದು ಸೂಚಿಸಿದೆ.

‘ಲೇಖನವೊಂದರ ಪ್ರಕಟಣೆಗೆ ವಿಚಾರಣೆಗೆ ಮೊದಲೇ ತಡೆ ನೀಡುವುದರಿಂದ ಲೇಖಕನ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಹಾಗೂ ಸಾರ್ವಜನಿಕರಿಗೆ ಇರುವ ಮಾಹಿತಿ ಪಡೆಯುವ ಹಕ್ಕಿನ ಮೇಲೆ ಪರಿಣಾಮ ಉಂಟಾಗುತ್ತದೆ’ ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ. ಚಂದ್ರಚೂಡ್ ನೇತೃತ್ವದ ತ್ರಿಸದಸ್ಯ ಪೀಠವು ಹೇಳಿದೆ.

ತಡೆ ನೀಡಲು ಕೊರಲಾಗಿರುವ ಬರಹದಲ್ಲಿ ಇರುವ ವಿಷಯವು ‘ದುರುದ್ದೇಶದಿಂದ ಕೂಡಿದೆ’, ಅದು ‘ಸ್ಪಷ್ಟವಾಗಿ ತಪ್ಪು’ ಎಂಬುದು ಸಾಬೀತಾಗದ ಹೊರತು ತಡೆಯಾಜ್ಞೆ ನೀಡಬಾರದು, ಅದರಲ್ಲೂ ಮುಖ್ಯವಾಗಿ, ಎಲ್ಲರ ವಾದ ಆಲಿಸದೆ ತಡೆ ನೀಡಬಾರದು ಎಂದು ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದೀವಾಲಾ ಮತ್ತು ಮನೋಜ್ ಮಿಶ್ರಾ ಅವರು ಕೂಡ ಇದ್ದ ಪೀಠವು ನಿರ್ದೇಶನ ನೀಡಿದೆ.

‘ವಿಚಾರಣೆ ಆರಂಭವಾಗುವ ಮೊದಲೇ ಮಧ್ಯಂತರ ತಡೆಯಾಜ್ಞೆಯನ್ನು ವಿವೇಚನೆ ಬಳಸದೆ ನೀಡುವುದರಿಂದ ಸಾರ್ವಜನಿಕ ಚರ್ಚೆಗಳನ್ನು ಹತ್ತಿಕ್ಕಿದಂತಾಗುತ್ತದೆ’ ಎಂದು ಪೀಠವು ಎಚ್ಚರಿಸಿದೆ.

ವಿಚಾರಣಾ ನ್ಯಾಯಾಲಯ ನೀಡಿದ್ದ ತಡೆಯಾಜ್ಞೆಯನ್ನು ಪ್ರಶ್ನಿಸಿ ಬ್ಲೂಮ್‌ಬರ್ಗ್‌ ಸಂಸ್ಥೆಯು ದೆಹಲಿ ಹೈಕೋರ್ಟ್ ಮೊರೆ ಹೋಗಿತ್ತು. ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿತ್ತು. ಹೈಕೋರ್ಟ್‌ ಕ್ರಮವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT