ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಹಜಹಾನ್‌ ಶೇಖ್‌ ಬಂಧಿಸಿ: ಕಲ್ಕತ್ತ ಹೈಕೋರ್ಟ್

ಸಂದೇಶ್‌ಖಾಲಿಯಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ
Published 26 ಫೆಬ್ರುವರಿ 2024, 15:47 IST
Last Updated 26 ಫೆಬ್ರುವರಿ 2024, 15:47 IST
ಅಕ್ಷರ ಗಾತ್ರ

ಕೋಲ್ಕತ್ತ: ಪಶ್ಚಿಮ ಬಂಗಾಳದ ಸಂದೇಶ್‌ಖಾಲಿಯಲ್ಲಿ ಗ್ರಾಮಸ್ಥರ ಭೂಮಿ ಕಬಳಿಸಿರುವ ಮತ್ತು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಹೊತ್ತಿರುವ ಟಿಎಂಸಿ ಮುಖಂಡ  ಶಹಜಹಾನ್‌ ಶೇಖ್‌ ಅವರನ್ನು ಬಂಧಿಸುವಂತೆ ಕಲ್ಕತ್ತ ಹೈಕೋರ್ಟ್‌ ಸೋಮವಾರ ಪೊಲೀಸರಿಗೆ ನಿರ್ದೇಶನ ನೀಡಿದೆ.

ಶಹಜಹಾನ್‌ ಅವರನ್ನು ಬಂಧಿಸುವುದಕ್ಕೆ ಯಾವುದೇ ತಡೆಯಾಜ್ಞೆ ನೀಡಿಲ್ಲ ಎಂದೂ ನ್ಯಾಯಾಲಯವು ಸ್ಪಷ್ಟಪಡಿಸಿದೆ.

ಶಹಜಹಾನ್‌ ಬಂಧನಕ್ಕೆ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ ಎಂಬ ಮಾಹಿತಿಯನ್ನು ಹರಡಲಾಗಿದೆ ಎಂದು ವಕೀಲರು ತಿಳಿಸಿರುವುದಕ್ಕೆ ನ್ಯಾಯಪೀಠವು ಈ ಸ್ಪಷ್ಟನೆ ನೀಡಿದೆ.

ಸಂದೇಶ್‌ಖಾಲಿಯಲ್ಲಿ ದೌರ್ಜನ್ಯ ನಡೆಯುತ್ತಿರುವ ಬಗ್ಗೆ ನಾಲ್ಕು ವರ್ಷಗಳ ಹಿಂದೆಯೇ ಪೊಲೀಸರಿಗೆ ದೂರುಗಳು ಲಭಿಸಿತ್ತು ಎಂಬ ಮಾಹಿತಿ ಅರಿತು ಅಚ್ಚರಿಯಾಯಿತು ಎಂದು ಮುಖ್ಯ ನ್ಯಾಯಮೂರ್ತಿ ಟಿ.ಎಸ್‌. ಶಿವಜ್ಞಾನಂ ನೇತೃತ್ವದ ವಿಭಾಗೀಯ ನ್ಯಾಯಪೀಠವು ಹೇಳಿದೆ.

42 ಪ್ರಕರಣಗಳು ಆರೋಪಪಟ್ಟಿಗೆ ಪಕ್ವವಾಗಲು ನಾಲ್ಕು ವರ್ಷ ತೆಗೆದುಕೊಂಡಿರುವುದು ಇನ್ನಷ್ಟು ಆಶ್ಚರ್ಯ ಉಂಟುಮಾಡಿದೆ ಎಂದು ತಿಳಿಸಿದೆ.

ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ಭೂಮಿ ಕಬಳಿಸಿರುವ ಆರೋಪಕ್ಕೆ ಸಂಬಂಧಿಸಿ ಸ್ವಯಂ ಪ್ರೇರಿತವಾಗಿ ದಾಖಲಾಗಿರುವ ಪ್ರಕರಣಗಳಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ‌), ಸಿಬಿಐ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮತ್ತು ಸರ್ಕಾರದ ಗೃಹ ಕಾರ್ಯದರ್ಶಿಯನ್ನು ಕಕ್ಷಿದಾರರನ್ನಾಗಿ ಮಾಡುವಂತೆ ನ್ಯಾಯಾಲಯವು ನಿರ್ದೇಶಿಸಿದೆ.

ಜನವರಿ 5ರಂದು ಇ.ಡಿ. ಅಧಿಕಾರಿಗಳ ಮೇಲೆ ದಾಳಿ ನಡೆದ ಬಳಿಕ ಶೇಖ್‌ ಅವರು ತಲೆಮರೆಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT