ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಧಿಕಾರಿಗಳನ್ನು ಒಂದೇ ಕ್ಷೇತ್ರ ವ್ಯಾಪ್ತಿಯಲ್ಲಿ ನಿಯೋಜಿಸುವಂತಿಲ್ಲ: ಚುನಾವಣಾ ಆಯೋಗ

Published 24 ಫೆಬ್ರುವರಿ 2024, 16:19 IST
Last Updated 24 ಫೆಬ್ರುವರಿ 2024, 16:19 IST
ಅಕ್ಷರ ಗಾತ್ರ

ನವದೆಹಲಿ: ಚುನಾವಣೆಗೂ ಮುನ್ನ ಜಿಲ್ಲೆಯಿಂದ ವರ್ಗಾವಣೆಗೊಂಡ ಅಧಿಕಾರಿಗಳನ್ನು ಆ ಸಂಸದೀಯ ಕ್ಷೇತ್ರದ ಯಾವುದೇ ಜಿಲ್ಲೆಯಲ್ಲಿ ನಿಯೋಜಿಸದಂತೆ ನೋಡಿಕೊಳ್ಳಬೇಕು ಎಂದು ಚುನಾವಣಾ ಆಯೋಗ ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ.

ತನ್ನ ನೀತಿಯನ್ನು ತಿರುಚಿ ಅಧಿಕಾರಿಗಳನ್ನು ವರ್ಗಾವಣೆ ಮಾಡುವ ರಾಜ್ಯ ಸರ್ಕಾರಗಳ ಕ್ರಮಗಳನ್ನು ತಡೆಯಲು ಆಯೋಗ ಈ ಮೂಲಕ ಮುಂದಾಗಿದೆ. 

ಸಂಸದೀಯ ಕ್ಷೇತ್ರದ ವ್ಯಾಪ್ತಿಯಲ್ಲಿಯೇ ಬರುವ ಅಕ್ಕಪಕ್ಕದ ಜಿಲ್ಲೆಗಳಿಗೆ ಅಧಿಕಾರಿಗಳನ್ನು ನಿಯೋಜಿಸುವ ಪ್ರಕರಣಗಳನ್ನು ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಿ, ಈ ಕ್ರಮ ತೆಗೆದುಕೊಂಡಿದೆ.

ಚುನಾವಣಾ ಆಯೋಗದ ನೀತಿಯ ಪ್ರಕಾರ, ತವರು ಜಿಲ್ಲೆಯಲ್ಲಿ ನಿಯೋಜನೆಗೊಂಡಿರುವ ಅಥವಾ ಮೂರು ವರ್ಷಗಳನ್ನು ಒಂದೇ ಕಡೆ ಪೂರೈಸಿರುವ ಅಧಿಕಾರಿಗಳನ್ನು ಲೋಕಸಭಾ ಅಥವಾ ವಿಧಾನಸಭಾ ಚುನಾವಣೆಗೂ ಮುನ್ನ ವರ್ಗಾವಣೆ ಮಾಡಬೇಕು. ಕೆಲ ರಾಜ್ಯಗಳು ಇದನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದ ಕಾರಣ ಈ ನೀತಿಯನ್ನು ಬಲಪಡಿಸಲಾಗಿದೆ ಎಂದು ಆಯೋಗ ಹೇಳಿದೆ. 

ಎರಡು ಸಂಸದೀಯ ಕ್ಷೇತ್ರಗಳನ್ನು ಒಳಗೊಂಡಿರುವ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಹೊರತುಪಡಿಸಿ ಉಳಿದ ಎಲ್ಲ ರಾಜ್ಯಗಳು, ಜಿಲ್ಲೆಯಿಂದ ಹೊರಗೆ ವರ್ಗಾವಣೆಗೊಂಡ ಅಧಿಕಾರಿಗಳನ್ನು ಅದೇ ಸಂಸದೀಯ ಕ್ಷೇತ್ರದ ವ್ಯಾಪ್ತಿಯೊಳಗೆ ನಿಯೋಜಿಸದಂತೆ ನೋಡಿಕೊಳ್ಳಬೇಕು ಎಂದು ಆಯೋಗ ನಿರ್ದೇಶಿಸಿದೆ ಎಂದು ಪ್ರಕಟಣೆ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT