ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚೀನಿ ಸರಕಿನಿಂದ ದೇಶೀ ಕುಶಲಿಗರಿಗೆ ಸಂಕಷ್ಟ: ರಾಹುಲ್‌ ಗಾಂಧಿ

Published 25 ಫೆಬ್ರುವರಿ 2024, 11:35 IST
Last Updated 25 ಫೆಬ್ರುವರಿ 2024, 11:35 IST
ಅಕ್ಷರ ಗಾತ್ರ

ಅಲಿಗಢ (ಉತ್ತರ ಪ್ರದೇಶ): ದೊಡ್ಡ ಕಾರ್ಪೊರೇಟ್‌ ಸಂಸ್ಥೆಗಳ ಜತೆ ನಂಟಿರುವ ವ್ಯಾಪಾರಿಗಳು ಚೀನಾದ ಸರಕುಗಳನ್ನು ಮಾರುಕಟ್ಟೆಗೆ ಪೂರೈಸುತ್ತಿರುವುದರಿಂದ ದೇಶದ ಸ್ಥಳೀಯ, ಸಣ್ಣ ಮತ್ತು ಗುಡಿ ಕೈಗಾರಿಕೆಗಳು ಹಾಗೂ ಕುಶಲಕರ್ಮಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಭಾನುವಾರ ಆರೋಪಿಸಿದರು.

ಅಲಿಗಢದಲ್ಲಿ ‘ಭಾರತ ಜೋಡೊ ನ್ಯಾಯ ಯಾತ್ರೆ’ಯ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಮೊರಾದಾಬಾದ್‌ನಿಂದ ಸಂಭಾಲ್‌ ಮೂಲಕ ಯಾತ್ರೆ ಇಲ್ಲಿಗೆ ಬಂದಿತು. ಕಾಂಗ್ರೆಸ್‌ ಕಾರ್ಯಕರ್ತರು ಮತ್ತು ಸಮಾಜವಾದಿ ಪಕ್ಷದ ಬೆಂಬಲಿಗರು ಸ್ವಾಗತಿಸಿದರು. ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರೂ ಯಾತ್ರೆಯಲ್ಲಿ ರಾಹುಲ್‌ಗೆ ಸಾಥ್‌ ನೀಡಿದರು.

‘ಯಾತ್ರೆಯು ಜನನಾಯಕ ಮತ್ತು ಲೋಕ ನಾಯಕಿಯೊಂದಿಗೆ ಏಕತೆ, ಸಹೋದರತೆ ಮತ್ತು ಸಾಮರಸ್ಯದ ಸಂದೇಶದೊಂದಿಗೆ ಮುನ್ನಡೆಯುತ್ತಿದೆ’ ಎಂದು ಉತ್ತರ ಪ್ರದೇಶ ಕಾಂಗ್ರೆಸ್‌ ಸಮಿತಿ ‘ಎಕ್ಸ್’ನಲ್ಲಿ ಪೋಸ್ಟ್‌ ಮಾಡಿದೆ. ಯಾತ್ರೆಯ ವಿಡಿಯೋವನ್ನು ‘ಎಕ್ಸ್‌’ನಲ್ಲಿ ಹಂಚಿಕೊಂಡಿದ್ದು, ‘ಸರ್ವಾಧಿಕಾರಿಯೊಬ್ಬರು ದೇಶದ ಸಮಗ್ರತೆ, ಸಾರ್ವಭೌಮತ್ವ ಮತ್ತು ಸಂವಿಧಾನವನ್ನು ನಾಶಮಾಡಲು ಹೊರಟಿರುವಾಗ, ಈ ಯಾತ್ರೆಯ ಮೂಲಕ ಜನಸಮೂಹವು ಮುಂದಿನ ಪೀಳಿಗೆಗೆ ಸಂದೇಶವನ್ನು ರವಾನಿಸುತ್ತದೆ’ ಎಂದು ಹೇಳಿದೆ.

ಈ ವೇಳೆ ಮಾತನಾಡಿದ ರಾಹುಲ್‌ ಅವರು, ‘ಅಲಿಗಢದ ಪ್ರಸಿದ್ಧ ಬೀಗ ಉದ್ಯಮಕ್ಕೆ ಮತ್ತು ಇಲ್ಲಿನ ಕುಶಲಕರ್ಮಿಗಳಿಗೆ ಚೀನಾದ ಅಗ್ಗದ ಉತ್ಪನ್ನಗಳು ಕಂಟಕವಾಗಿ ಪರಿಣಮಿಸಿವೆ. ಇದು ದೊಡ್ಡ ವ್ಯಾಪಾರಿ ಸಂಸ್ಥೆಗಳಿಗೆ ಲಾಭ ತಂದುಕೊಡುತ್ತಿದೆ’ ಎಂದು ದೂರಿದರು.  ‘ನಾನು ಮುಂದಿನ ಬಾರಿ ಈ ನಗರಕ್ಕೆ ಬಂದಾಗ, ಚೀನಾ ನಿರ್ಮಿತ ವಸ್ತುಗಳ ಬದಲಿಗೆ ‘ಮೇಡ್‌ ಇನ್‌ ಅಲಿಗಢ’ ಎಲೆಕ್ಟ್ರಾನಿಕ್‌ ವಸ್ತುಗಳನ್ನು ನೋಡಲು ಬಯಸುತ್ತೇನೆ’ ಎಂದರು.

‘ಅನ್ಯಾಯದ ವಿರುದ್ಧ ನ್ಯಾಯದ ಯಾತ್ರೆ’

ದೇಶದಲ್ಲಿ ಅನ್ಯಾಯ ಮತ್ತು ದ್ವೇಷ ಹೆಚ್ಚುತ್ತಿದೆ. ಬಡವರಿಗೆ, ರೈತರಿಗೆ, ಯುವಕರಿಗೆ ಮತ್ತು ಮಹಿಳೆಯರಿಗೆ ಅನ್ಯಾಯ ಆಗುತ್ತಿದೆ. ಇದರ ವಿರುದ್ಧ ನಾವು ‘ಭಾರತ ಜೋಡೊ ನ್ಯಾಯ ಯಾತ್ರೆ’ ಆಯೋಜಿಸಿದ್ದೇವೆ ಎಂದು ಹೇಳಿದರು.  

‘ದೇಶದಲ್ಲಿ ದ್ವೇಷ ಏಕೆ ಹರಡುತ್ತಿದೆ ಎಂದು ಸಾವಿರಾರು ಜನರನ್ನು ಕೇಳಿದ್ದೇನೆ’ ಎಂದು ರಾಹುಲ್‌ ಹೇಳಿದಾಗ, ಅಲ್ಲಿ ನೆರೆದಿದ್ದ ಜನರು ‘ವೋಟ್‌ ಬ್ಯಾಂಕಿ’ಗಾಗಿ ಎಂದು ಉತ್ತರಿಸಿದರು. ಆಗ ಮಾತು ಮುಂದುವರಿಸಿದ ರಾಹುಲ್‌, ‘ಸಹೋದರ, ಸಹೋದರಿಯರೇ ವೋಟ್‌ ಬ್ಯಾಂಕ್ ಅಲ್ಲ. ಈ ತಪ್ಪು ಕಲ್ಪನೆ ಬೇಡ. ಹಿಂಸೆ ಮತ್ತು ದ್ವೇಷಕ್ಕೆ ಅನ್ಯಾಯವೇ ಕಾರಣ ಎಂದು ದೇಶದ ಜನರು, ರೈತರು ಮತ್ತು ಕಾರ್ಮಿಕರು ನನಗೆ ಹೇಳಿದ್ದಾರೆ’ ಎಂದರು.

ಇಲ್ಲಿನ ಪೊಲೀಸ್‌ ಕಾನ್‌ಸ್ಟೆಬಲ್‌ ನೇಮಕಾತಿ ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಆಗಿರುವುದು ರಾಜ್ಯದ ಲಕ್ಷಾಂತರ ನಿರುದ್ಯೋಗಿ ಯುವಕರಿಗೆ ಮತ್ತೊಂದು ಅನ್ಯಾಯ ಎಸಗಿದಂತಾಗಿದೆ ಎಂದರು.

ಪ್ರಿಯಾಂಕಾ ಗಾಂಧಿ ಮಾತನಾಡಿ, ‘ಈ ಅನ್ಯಾಯ ಕಾಲದಲ್ಲಿ ನಿರುದ್ಯೋಗ ಅತಿದೊಡ್ಡ ಬಿಕ್ಕಟ್ಟಾಗಿದೆ. ಅಗ್ನಿವೀರ ನೇಮಕಾತಿ ಯೋಜನೆಯೂ ರಕ್ಷಣಾ ಪಡೆಗಳಿಗೆ ಸೇರಲು ತಯಾರಿ ನಡೆಸುತ್ತಿರುವ ಯುವಕರ ಕನಸುಗಳನ್ನು ಭಗ್ನಗೊಳಿಸಿದೆ’ ಎಂದು ದೂರಿದರು. ಇಲ್ಲಿಂದ ಯಾತ್ರೆಯು ಆಗ್ರಾದತ್ತ ಸಾಗಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT