ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಧಾನಿ ಕಾರ್ಯಾಲಯದಿಂದ ಕೆಲ ಸಂಸದರಿಗೆ ಕರೆ: ಯಾರಾಗ್ತಾರೆ ಹೊಸ ಸಚಿವರು?

Published 9 ಜೂನ್ 2024, 5:13 IST
Last Updated 9 ಜೂನ್ 2024, 5:13 IST
ಅಕ್ಷರ ಗಾತ್ರ

ನವದೆಹಲಿ: ನರೇಂದ್ರ ಮೋದಿ ಅವರು ಇಂದು ಸಂಜೆ ರಾಷ್ಟ್ರಪತಿ ಭವನದಲ್ಲಿ ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲು ವೇದಿಕೆ ಸಿದ್ಧವಾಗಿದೆ.

ಮೋದಿ ಅವರ ಜೊತೆ 30 ಜನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎನ್ನಲಾಗಿದ್ದು ಆದರೆ, ಅವರ ವಿವರ ಬಹಿರಂಗ ಆಗಿಲ್ಲ.

ಏತನ್ಮಧ್ಯೆ ಪ್ರಧಾನಿ ಕಾರ್ಯಾಲಯದಿಂದ ಕೆಲ ಸಂಸದರಿಗೆ ಕರೆ ಹೋಗಿದ್ದು ಅವರು ಇಂದು ಮಧ್ಯಾಹ್ನ ಮೋದಿ ಅವರು ನಡೆಸಲಿರುವ ಸಭೆಗೆ ಹಾಜರಾಗಬೇಕು ಎಂದು ತಿಳಿದು ಬಂದಿದೆ. ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವ ಸಂಸದರಿಗೆ ಕರೆ ಹೋಗಿದೆ ಎನ್ನಲಾಗಿದೆ. ಈ ಸಂಸದರ ಜೊತೆ ಮೋದಿ ಸಭೆ ನಡೆಸಲಿದ್ದಾರೆ. ಸಭೆಯ ಅಜೆಂಡಾ ಸಹ ಬಹಿರಂಗವಾಗಿಲ್ಲ ಎಂದು ಮೂಲಗಳು ಖಚಿತಪಡಿಸಿವೆ.

ರಾಷ್ಟ್ರಪತಿ ಭವನದಲ್ಲಿ ಭಾನುವಾರ ರಾತ್ರಿ 7.15ಕ್ಕೆ ನಡೆಯುವ ಸಮಾರಂಭದಲ್ಲಿ ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಎನ್‌ಡಿಎ ಮೈತ್ರಿ ಸರ್ಕಾರದ ಸಂಪುಟಕ್ಕೆ ಸುಮಾರು 30 ಮಂದಿ ಸೇರ್ಪಡೆಯಾಗಲಿದ್ದಾರೆ. ಮೊದಲ ಹಂತದಲ್ಲಿ ಮಿತ್ರ ಪಕ್ಷಗಳ 12ರಿಂದ 15 ಸದಸ್ಯರು ಸಂಪುಟಕ್ಕೆ ಸೇರುವ ಸಂಭವ ಇದೆ.

ಸಂಪುಟಕ್ಕೆ ಸೇರುವವರ ಹೆಸರನ್ನು ಅಂತಿಮಗೊಳಿಸಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಪಕ್ಷದ ನಾಯಕ ಅಮಿತ್‌ ಶಾ ಅವರು ಶನಿವಾರ ಸರಣಿ ಸಭೆಗಳನ್ನು ನಡೆಸಿದರು. ಟಿಡಿಪಿ ಮುಖ್ಯಸ್ಥ ಎನ್‌.ಚಂದ್ರಬಾಬು ನಾಯ್ಡು, ಬಿಹಾರದ ಮುಖ್ಯಮಂತ್ರಿ ನಿತೀಶ್‌ ಕುಮಾರ್ ಹಾಗೂ ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ ಶಿಂದೆ ಅವರೊಂದಿಗೆ ಸಮಾಲೋಚನೆ ನಡೆಸಿ ಸಚಿವರ ಪಟ್ಟಿಗೆ ಅಂತಿಮ ರೂಪ ನೀಡುವ ಕಸರತ್ತು ನಡೆಸಿದರು. ಬಳಿಕ ಸಂಭಾವ್ಯ ಸಚಿವರ ಪಟ್ಟಿಯನ್ನು ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲಿಸಿದರು. ಮೋದಿ ಅವರು ಈ ಪಟ್ಟಿಯನ್ನು ಭಾನುವಾರ ಬೆಳಿಗ್ಗೆ ರಾಷ್ಟ್ರಪತಿ ಭವನಕ್ಕೆ ಕಳುಹಿಸಲಿದ್ದಾರೆ.

ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಅವಧಿ ಜೂನ್‌ ಅಂತ್ಯಕ್ಕೆ ಕೊನೆಗೊಳ್ಳಲಿದೆ. ಅವರು ಕೇಂದ್ರದ ಸಂಪುಟಕ್ಕೆ ಸೇರುವ ಸಾಧ್ಯತೆ ದಟ್ಟವಾಗಿದೆ. ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಶಿವರಾಜ್ ಸಿಂಗ್‌ ಚೌಹಾಣ್ ಹೆಸರು ಮುಂಚೂಣಿಯಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT