ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಂಶಾಡಳಿತದ ಪ್ರಭಾವ ತಗ್ಗಿಸಿ: ಯುವ ಸಮೂಹಕ್ಕೆ ಪ್ರಧಾನಿ ಮೋದಿ ಕರೆ

Published 12 ಜನವರಿ 2024, 15:45 IST
Last Updated 12 ಜನವರಿ 2024, 15:45 IST
ಅಕ್ಷರ ಗಾತ್ರ

ನಾಸಿಕ್, ಮಹಾರಾಷ್ಟ್ರ: ದೇಶದಲ್ಲಿ ಕುಟುಂಬ ರಾಜಕಾರಣದ ಪ್ರಭಾವ ತಗ್ಗಿಸಲು ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಯುವ ಸಮೂಹಕ್ಕೆ ಕರೆ ನೀಡಿದರು.

ಶುಕ್ರವಾರ ಇಲ್ಲಿ 27ನೇ ರಾಷ್ಟ್ರೀಯ ಯುವ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು, ಭಾರತದ ಇಂದಿನ ಯುವ ಸಮೂಹವು 21ನೇ ಶತಮಾನದ ಅತ್ಯಂತ ಅದೃಷ್ಟಶಾಲಿ ಪೀಳಿಗೆ ಎಂದು ಬಣ್ಣಿಸಿದರು. 

‘ಭಾರತ ದೇಶವು ಪ್ರಜಾಪ್ರಭುತ್ವದ ತಾಯಿ ಇದ್ದಂತೆ. ಯುವಕರು ಮತದಾನ ಮೂಲಕ ತಮ್ಮ ರಾಜಕೀಯ ನಿಲುವನ್ನು ವ್ಯಕ್ತಪಡಿಸಿದರೆ ದೇಶದ ಭವಿಷ್ಯ ಉಜ್ವಲವಾಗಿರಲಿದೆ. ಪ್ರಜಾಸತ್ತಾತ್ಮಕ ಪ್ರಕ್ರಿಯೆಯಲ್ಲಿ ಯುವಕರು ಭಾಗವಹಿಸಬೇಕು’ ಎಂದು ಮನವಿ ಮಾಡಿದರು. 

‘ಹೊಸ ಮತದಾರರು ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಇನ್ನಷ್ಟು ಶಕ್ತಿ ತುಂಬಬಲ್ಲರು. ಯುವಕ–ಯುವತಿಯರು ಸಕ್ರಿಯ ರಾಜಕೀಯದಲ್ಲಿ (ಮತದಾನ ಪ್ರಕ್ರಿಯೆ) ಭಾಗವಹಿಸಿದರೆ, ನಿಮಗೆ ವಂಶಾಡಳಿತದ ಪ್ರಭಾವ ತಗ್ಗಿಸಲು ಸಾಧ್ಯವಾಗಲಿದೆ. ಕುಟುಂಬ ರಾಜಕಾರಣದಿಂದ ಈ ದೇಶಕ್ಕೆ ಹಾನಿ ಉಂಟಾಗಿದೆ ಎಂಬುದು ನಿಮಗೆ ಗೊತ್ತೇ ಇದೆ’ ಎಂದು ಕಾಂಗ್ರೆಸ್‌ ‍ಪ‍ಕ್ಷವನ್ನು ಪರೋಕ್ಷವಾಗಿ ಕುಟುಕಿದರು.

ಸ್ಥಳೀಯ ಉತ್ಪನ್ನಗಳಿಗೆ ಉತ್ತೇಜನ ನೀಡುವಂತೆ ಯುವಕರಿಗೆ ಕರೆ ನೀಡಿದ ಅವರು, ಮಾದಕ ವಸ್ತುಗಳ ಬಳಕೆಯಿಂದ ದೂರವಿರುವಂತೆ ಕಿವಿಮಾತು ಹೇಳಿದರು.

ಸ್ವಚ್ಛತಾ ಅಭಿಯಾನಕ್ಕೆ ಮನವಿ: ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮನ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ದೇಶದಾದ್ಯಂತವಿರುವ ದೇವಸ್ಥಾನಗಳು ಮತ್ತು ಯಾತ್ರಾ ಕೇಂದ್ರಗಳಲ್ಲಿ ಸ್ವಚ್ಛತಾ ಅಭಿಯಾನ ಕೈಗೊಳ್ಳುವಂತೆ ಪ್ರಧಾನಿ ಅವರು ಜನರಿಗೆ ಮನವಿ ಮಾಡಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT