ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಡಿಸೆಂಬರ್‌ನಲ್ಲಿ ಎಚ್‌–1ಬಿ ವೀಸಾ ನವೀಕರಣ: ಅಮೆರಿಕ

ಭಾರತೀಯ ಐ.ಟಿ ವೃತ್ತಿಪರರಿಗೆ ಅನುಕೂಲ: ಅಮೆರಿಕ ಹೇಳಿಕೆ
Published 29 ನವೆಂಬರ್ 2023, 14:42 IST
Last Updated 29 ನವೆಂಬರ್ 2023, 14:42 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಎಚ್‌–1ಬಿ ವೀಸಾ ನವೀಕರಣಕ್ಕೆ ಸಂಬಂಧಿಸಿ ಅಮೆರಿಕವು ಡಿಸೆಂಬರ್‌ನಲ್ಲಿ ಹಮ್ಮಿಕೊಂಡಿರುವ ಪ್ರಾಯೋಗಿಕ ಕಾರ್ಯಕ್ರಮದಿಂದ ಭಾರತದ ಐ.ಟಿ ವೃತ್ತಿಪರರಿಗೆ ಹೆಚ್ಚಿನ ಪ್ರಯೋಜನ ಲಭಿಸುವ ನಿರೀಕ್ಷೆಯಿದೆ. 

‘ಭಾರತೀಯ ಉದ್ಯೋಗಿಗಳನ್ನೇ ಕೇಂದ್ರೀಕರಿಸಿ ತ್ವರಿತಗತಿಯಲ್ಲಿ ಅವರಿಗೆ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಈ ಪ್ರಾಯೋಗಿಕ ಕಾರ್ಯಕ್ರಮ ರೂಪಿಸಲಾಗಿದೆ’ ಎಂದು ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಅಮೆರಿಕದ ವೀಸಾ ಸೇವೆಗಳ ಉಪ ಕಾರ್ಯದರ್ಶಿ ಜೂಲಿ ಸ್ಟಫ್ಟ್ ಹೇಳಿದ್ದಾರೆ.

ಎಚ್‌–1ಬಿ ವಲಸೆಯೇತರ ವೀಸಾ ಆಗಿದ್ದು, ಅಮೆರಿಕದ ಸಂಸ್ಥೆಗಳು ವಿದೇಶಿ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಅವಕಾಶ ಮಾಡಿಕೊಡುತ್ತದೆ. ತಾಂತ್ರಿಕ ನೈಪುಣ್ಯಕ್ಕೆ ಅನುಗುಣವಾಗಿ ಉದ್ಯೋಗಿಗಳ ನೇಮಕಾತಿ ನಡೆಯಲಿದೆ. 

ಅಮೆರಿಕದ ಕಂಪನಿಗಳು ಪ್ರತಿವರ್ಷ ಭಾರತ ಹಾಗೂ ಚೀನಾದಿಂದ ಸಾವಿರಾರು ಉದ್ಯೋಗಿಗಳನ್ನು ಈ ವೀಸಾ ಅಡಿಯಲ್ಲಿ ನೇಮಕ ಮಾಡಿಕೊಳ್ಳುತ್ತವೆ.

ಪ್ರಧಾನಿ ನರೇಂದ್ರ ಮೋದಿ ಅವರು ಜೂನ್‌ನಲ್ಲಿ ಕೈಗೊಂಡಿದ್ದ ಅಮೆರಿಕ ಪ್ರವಾಸದ ವೇಳೆ ಈ ಪ್ರಾಯೋಗಿಕ ಕಾರ್ಯಕ್ರಮ ಹಮ್ಮಿಕೊಳ್ಳುವ ಬಗ್ಗೆ ವೈಟ್‌ಹೌಸ್‌ನಿಂದ ಅಧಿಕೃತ ಘೋಷಣೆ ಹೊರಬಿದ್ದಿತ್ತು. ಇದರಡಿ 20 ಸಾವಿರ ಉದ್ಯೋಗಿಗಳಿಗಷ್ಟೇ ವೀಸಾ ಸೌಲಭ್ಯ ದೊರೆಯಲಿದೆ. 

ಪ್ರಸಕ್ತ ವರ್ಷವೂ ಭಾರತೀಯ ವಿದ್ಯಾರ್ಥಿಗಳ ವೀಸಾ ಬೇಡಿಕೆಗೆ ಅನುಗುಣವಾಗಿ ಕೆಲಸ ನಿರ್ವಹಿಸಲು ಅಮೆರಿಕ ಬದ್ಧವಾಗಿದೆ.
– ಜೂಲಿ ಸ್ಟಫ್ಟ್ ಉಪ ಕಾರ್ಯದರ್ಶಿ ಅಮೆರಿಕದ ವೀಸಾ ಸೇವಾ ವಿಭಾಗ

1.40 ಲಕ್ಷ ವಿದ್ಯಾರ್ಥಿಗಳಿಗೆ ವೀಸಾ 

  ಜನರ ಸಹಭಾಗಿತ್ವಕ್ಕೆ ಉತ್ತೇಜನ ನೀಡುವ ಭಾಗವಾಗಿ ಅಧ್ಯಕ್ಷ ಜೋ ಬೈಡನ್‌ ನೇತೃತ್ವದ ಅಮೆರಿಕ ಸರ್ಕಾರವು ಕಳೆದ ಸಾಲಿನಡಿ 1.40 ಲಕ್ಷ ಭಾರತೀಯ ವಿದ್ಯಾರ್ಥಿಗಳಿಗೆ ವೀಸಾ ನೀಡಿದೆ. ಅಲ್ಲದೇ ವೀಸಾ ಕಾಯುವಿಕೆ ಅವಧಿ ಕಡಿಮೆ ಮಾಡಲು ಹಲವು ಕ್ರಮಗಳನ್ನು ಕೈಗೊಂಡಿದೆ ಎಂದು ಜೂಲಿ ಸ್ಟಫ್ಟ್ ತಿಳಿಸಿದ್ದಾರೆ. ‘ಭಾರತೀಯ ವಿದ್ಯಾರ್ಥಿಗಳು ಅಮೆರಿಕದಲ್ಲಿ ವ್ಯಾಸಂಗಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಸಿದ್ದಾರೆ. ತರಗತಿಗಳು ಆರಂಭವಾಗುವುದಕ್ಕೂ ಮೊದಲು ಅರ್ಹರ ಸಂದರ್ಶನ ನಡೆಸಿ ವೀಸಾ ನೀಡಲಾಗುತ್ತಿದೆ. ಭಾರತದಲ್ಲಿ ವಾರದ ಏಳು ದಿನವೂ ವೀಸಾ ಕಚೇರಿ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ’ ಎಂದು ಹೇಳಿದ್ದಾರೆ. ‘ಪ್ರಸಕ್ತ ವರ್ಷ ಭಾರತದ ಐ.ಟಿ ಉದ್ಯೋಗಿಗಳು ಹಡಗು ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ದಾಖಲೆ ಪ್ರಮಾಣದಲ್ಲಿ ವೀಸಾಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಭಾರತಕ್ಕೆ 10 ಲಕ್ಷ ವೀಸಾ ವಿತರಿಸಿದ್ದೇವೆ. ಇದು ಚಾರಿತ್ರಿಕ ದಾಖಲೆಯೂ ಆಗಿದೆ. ಹಲವು ತಿಂಗಳಿಗೂ ಮುಂಚೆಯೇ ಈ ಗುರಿ ಸಾಧನೆ ಮಾಡಿದ್ದೇವೆ. ಈ ಕೆಲಸದ ಬಗ್ಗೆ ನಮಗೆ ಹೆಮ್ಮೆ ಇದೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT