ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದ್ವೇಷ ಭಾಷಣ: ಆಡಳಿತಾತ್ಮಕ ಕಾರ್ಯವಿಧಾನ ಸ್ಥಾಪನೆ–ಸುಪ್ರೀಂ ಕೋರ್ಟ್

Published 29 ನವೆಂಬರ್ 2023, 16:29 IST
Last Updated 29 ನವೆಂಬರ್ 2023, 16:29 IST
ಅಕ್ಷರ ಗಾತ್ರ

ನವದೆಹಲಿ: ದೇಶದಾದ್ಯಂತ ದ್ವೇಷ ಭಾಷಣಗಳ ಕುರಿತು ಕ್ರಮ ಕೈಗೊಳ್ಳುವುದಕ್ಕಾಗಿ ಆಡಳಿತಾತ್ಮಕ ಕಾರ್ಯವಿಧಾನ ಸ್ಥಾಪಿಸುವ ಆಲೋಚನೆ ಇದೆ ಎಂದು ಸುಪ್ರೀಂ ಕೋರ್ಟ್‌ ಬುಧವಾರ ಹೇಳಿದೆ.

ದ್ವೇಷ ಭಾಷಣಕ್ಕೆ ಸಂಬಂಧಿಸಿ ಒಂದೊಂದೇ ಪ್ರಕರಣ ಕುರಿತು ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಹೀಗಾಗಿ, ಈ ಸಂಬಂಧ ಒಂದು ಆಡಳಿತಾತ್ಮಕ ಕಾರ್ಯವಿಧಾನ ರೂಪಿಸುವ ಚಿಂತನೆ ಇದೆ ಎಂದು ಸ್ಪಷ್ಟಪಡಿಸಿದೆ.

ನ್ಯಾಯಮೂರ್ತಿಗಳಾದ ಸಂಜೀವ್‌ ಖನ್ನಾ ಹಾಗೂ ಎಸ್‌ವಿಎನ್‌ ಭಟ್ಟಿ ಅವರಿದ್ದ ನ್ಯಾಯಪೀಠ ಅರ್ಜಿ ವಿಚಾರಣೆ ವೇಳೆ ಈ ಮಾತು ಹೇಳಿದೆ.

‘ಯಾವುದು ದ್ವೇಷ ಭಾಷಣ ಎಂಬುದನ್ನು ಈಗಾಗಲೇ ನ್ಯಾಯಾಲಯ ವ್ಯಾಖ್ಯಾನಿಸಿದೆ. ಈಗ, ಅದರ ಅನುಷ್ಟಾನ ಮತ್ತು ಹೇಗೆ ಅನ್ವಯಿಸಬೇಕು ಎಂಬುದನ್ನು ಅರಿಯುವುದೇ ನಮ್ಮ ಮುಂದಿರುವ ಪ್ರಶ್ನೆ’ ಎಂದು ನ್ಯಾಯಪೀಠ ಹೇಳಿದೆ.

‘ಒಂದರ ನಂತರ ಒಂದು ಪ್ರಕರಣಗಳ ವಿಚಾರಣೆ ಸಾಧ್ಯವಿಲ್ಲ. ಈ ರೀತಿ ಮಾಡಿದಲ್ಲಿ ಪ್ರಕರಣಗಳ ರಾಶಿಯೇ ನಮ್ಮ ಮುಂದೆ ಬೀಳುತ್ತದೆ. ಹೀಗಾಗಿ, ಈ ವಿಷಯಕ್ಕೆ ಸಂಬಂಧಿಸಿ ಸೂಕ್ತ ಮೂಲಸೌಕರ್ಯ ಇಲ್ಲವೇ ಆಡಳಿತಾತ್ಮಕ ಕಾರ್ಯವಿಧಾನ ಜಾರಿಯಾಗಬೇಕು ಎಂಬುದು ನಮ್ಮ ಬಯಕೆ. ಇಂತಹ ಕಾರ್ಯವಿಧಾನದಲ್ಲಿಯೂ ನ್ಯೂನತೆ ಕಂಡುಬಂದಲ್ಲಿ ಸಂಬಂಧಿಸಿದ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಬಹುದು’ ಎಂದು ನ್ಯಾಯಪೀಠ ಹೇಳಿತು.

ಅಲ್ಲದೇ, ಈ ವಿಷಯವಾಗಿ ನೋಡಲ್‌ ಅಧಿಕಾರಿಗಳನ್ನು ನೇಮಕ ಮಾಡದಿರುವುದಕ್ಕಾಗಿ ತಮಿಳುನಾಡು, ಕೇರಳ, ನಾಗಾಲ್ಯಾಂಡ್‌ ಹಾಗೂ ಗುಜರಾತ್‌ ಸರ್ಕಾರಗಳಿಗೆ ನ್ಯಾಯಪೀಠ ನೋಟಿಸ್‌ ಜಾರಿ ಮಾಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT