ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳದ ಗೋಮಾಂಸ ಉದ್ಯಮಕ್ಕೆ ಹೊಡೆತ

ಜಾನುವಾರು ಸಾಗಣೆ ವಾಹನಗಳ ಮೇಲೆ ದಾಳಿ
Last Updated 9 ಆಗಸ್ಟ್ 2015, 19:46 IST
ಅಕ್ಷರ ಗಾತ್ರ

ತಿರುವನಂತಪುರ: ಎರಡು ವಾರಗಳ ಹಿಂದೆ ಕೇರಳ ಮತ್ತು ತಮಿಳುನಾಡಿನ ಗಡಿ ಜಿಲ್ಲೆಗಳಾದ ಪಾಲಕ್ಕಾಡ್‌ ಮತ್ತು ವೈನಾಡ್‌ಗಳಲ್ಲಿ ಜಾನುವಾರು ಸಾಗಣೆ ವಾಹನಗಳ ಮೇಲೆ ಬಲ ಪಂಥೀಯ ಸಂಘಟನೆ ಸದಸ್ಯರು ದಾಳಿ ನಡೆಸಿದಾಗಿನಿಂದ ಕೇರಳದ ಗೋಮಾಂಸ ಮಾರಾಟಗಾರರು ಪ್ರತಿಭಟನೆಯ ಹಾದಿ ಹಿಡಿದಿದ್ದಾರೆ.

ಮೊದಲಿಗೆ ಗೋಮಾಂಸ ಮಾರಾಟವನ್ನು ಅನಿರ್ದಿಷ್ಟ ಅವಧಿಗೆ ಸ್ಥಗಿತಗೊಳಿಸಲು ಮಾರಾಟಗಾರರು ನಿರ್ಧರಿಸಿದರು. ಆದರೆ, ಈ ಸಮಸ್ಯೆ ಬೃಹದಾಕಾರ ತಾಳಿ ಮಾರುಕಟ್ಟೆಯಲ್ಲಿ ಗೋಮಾಂಸ ದುರ್ಲಭವಾಯಿತು.ಕೇರಳದಲ್ಲಿ ಗೋಮಾಂಸವನ್ನು ಹೆಚ್ಚಾಗಿ ಸೇವಿಸುತ್ತಿದ್ದು, ಒಟ್ಟು ಮಾಂಸಾಹಾರ ಬಳಕೆಯಲ್ಲಿ ಗೋಮಾಂಸದ ಪ್ರಮಾಣ ಶೇ 50ಕ್ಕಿಂತ ಹೆಚ್ಚು.

ಗೋಮಾಂಸ ವಿರೋಧಿಸುವವರು ಕೇವಲ ಗೋಮಾಂಸವನ್ನು ವಿರೋಧಿಸುತ್ತಿಲ್ಲ. ವೈವಿಧ್ಯಮಯ ಆಹಾರ ಸಂಸ್ಕೃತಿಯನ್ನು ವಿರೋಧಿಸುತ್ತಿದ್ದಾರೆ. ಅನ್ಯ ಆಹಾರ ಸಂಸ್ಕೃತಿಯತ್ತ ಅಸಹನೆ ತೋರುತ್ತಿದ್ದಾರೆ ಎಂದು ಕೇರಳದ ವ್ಯಾಪಾರಸ್ಥರು ದೂರಿದ್ದಾರೆ.

ದಾಳಿ ಮಾಡಿದವರು ಟ್ರಕ್‌ ಚಾಲಕರ ಬಳಿ ಹಣ ಪಡೆದು ಜಾನುವಾರುಗಳನ್ನು ಕೇರಳದೊಳಕ್ಕೆ ಬಿಟ್ಟ ಸಂದರ್ಭಗಳೂ ಇವೆ  ಎಂದು ಅವರು ಹೇಳುತ್ತಾರೆ.
ಪಾಲಕ್ಕಾಡ್‌ ಹಾಗೂ ಕೊಯಿಮತ್ತೂರು ಬಳಿ ಗಡಿ ಪ್ರದೇಶಗಳಲ್ಲಿ ಜಾನುವಾರು ವಾಹನಗಳ ಮೇಲೆ ದಾಳಿ ನಡೆಯುತ್ತಿರುವುದಕ್ಕೆ ತಮಿಳುನಾಡು ಹಾಗೂ ಕೇರಳ ಗೋಮಾಂಸ ಮಾರಾಟಗಾರರ ಸಂಘದ ಪ್ರತಿನಿಧಿಗಳು ಈಗಾಗಲೇ ಸಭೆ ನಡೆಸಿದ್ದಾರೆ. ಆದರೆ, ಎರಡೂ ರಾಜ್ಯಗಳ ಸರ್ಕಾರಗಳು ಮಾತ್ರ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ.

ಜಾನುವಾರು ಸಾಗಣೆ ವಾಹನಗಳ ಮೇಲೆ  ನಡೆಯುವ ದಾಳಿಗಳು ಒಂದೇ ರೀತಿಯಾಗಿರುತ್ತವೆ. ತಮಿಳುನಾಡು ಮಾರುಕಟ್ಟೆಗಳಲ್ಲಿ ಜಾನುವಾರು ಖರೀದಿಸಿ ಸಾಗಿಸುವಾಗ ಸರಿಯಾದ ನಿಯಮಾವಳಿ ಅನುಸರಿಸಿಲ್ಲ ಎಂದು ಟ್ರಕ್‌ ಚಾಲಕರನ್ನು ತಡೆಯಲಾಗುತ್ತದೆ. ಹೀಗೆ ಮಾಡುವವರು ಪ್ರಾಣಿ ಹಕ್ಕುಗಳ ರಕ್ಷಕರೆಂದು ಹೇಳಿಕೊಳ್ಳುತ್ತಾರೆ.

ತಮಿಳುನಾಡಿನ ಹಿಂದೂ ಮಕ್ಕಳ ಕಚ್ಚಿ (ಎಚ್‌ಎಂಕೆ) ಹಾಗೂ ಪ್ರಾಣಿ ಹಕ್ಕುಗಳ ಸಂಘಟನೆಗಳು ವಾಹನಗಳ ಮೇಲೆ ದಾಳಿ ನಡೆಸುತ್ತಿದ್ದು, ಜಾನುವಾರು ಮಾರಾಟಗಾರರು ಹಾಗೂ ಗೋಮಾಂಸ ಮಾರಾಟಗಾರರಿಗೆ ಲಕ್ಷಾಂತರ ರೂಪಾಯಿ ನಷ್ಟವಾಗುತ್ತಿದೆ. ಕೇರಳದ ಗೋಮಾಂಸ ವ್ಯಾಪಾರಿಗಳು ಜಾನುವಾರುಗಳಿಗಾಗಿ  ನೆರೆಯ ರಾಜ್ಯಗಳನ್ನು ಅವಲಂಬಿಸಿದ್ದು, ಶೇ 80ರಷ್ಟು  ಜಾನುವಾರುಗಳು ಅಲ್ಲಿಂದ ಪೂರೈಕೆಯಾಗುತ್ತವೆ. ಅಕ್ಷರಶಃ ರಾಜ್ಯದಲ್ಲಿ ಗೋಮಾಂಸ ನಿಷೇಧ ಹೇರಿದಂತೆ ಆಗಿದೆ ಎಂದು ಕೇರಳ ರಾಜ್ಯ ಮಾಂಸ ಕೆಲಸಗಾರರ ಒಕ್ಕೂಟದ ಪಿ. ಸುಧಾಕರನ್‌ ಹೇಳುತ್ತಾರೆ.

ಹೋಟೆಲ್‌ ಉದ್ಯಮದ ಮೇಲೂ ಇದು ವ್ಯತಿರಿಕ್ತ ಪರಿಣಾಮ ಬೀರಿದೆ. ಉತ್ತರ ಕೇರಳದಲ್ಲಿ ಒಂದು ಕೆ.ಜಿ. ಗೋಮಾಂಸ ₹ 320 ಕ್ಕೆ ಮಾರಾಟವಾಗುತ್ತಿದೆ.
ಕೇರಳ ಹಾಗೂ ತಮಿಳುನಾಡು ಸರ್ಕಾರಗಳು ಈ ಗೂಂಡಾಗಳ ವಿರುದ್ಧ ಕ್ರಮ ಜರುಗಿಸದಿದ್ದಲ್ಲಿ ಗೋಮಾಂಸದ ಬೆಲೆ ಮತ್ತಷ್ಟು ಏರಲಿದೆ ಎಂದು ಕೇರಳ ಗೋಮಾಂಸ ಮಾರಾಟಗಾರರ ಸಂಘದ ಉಪಾಧ್ಯಕ್ಷ ಕೆ. ಎಂ. ಉಮ್ಮರ್‌ ಹೇಳುತ್ತಾರೆ.

ಉತ್ತರ ಕೇರಳದ ಗೋಮಾಂಸ ವ್ಯಾಪಾರಿಗಳು ಇದಕ್ಕೆ ಪ್ರತಿಯಾಗಿ ಕೋಳಿ ಹಾಗೂ ತರಕಾರಿ ಲಾರಿಗಳನ್ನು ತಡೆಯುವುದಾಗಿ ಬೆದರಿಕೆ ಹಾಕಿದ್ದಾರೆ.
ಹಿಂದೂ ಮಕ್ಕಳ್‌ ಕಚ್ಚಿ ಅಧ್ಯಕ್ಷ ಅರ್ಜುನ್‌ ಸಂಪತ್‌ ಬೇರೆಯದೇ ಅಭಿಪ್ರಾಯ ಮುಂದಿಡುತ್ತಾರೆ. ಕೇರಳಕ್ಕೆ ಜಾನುವಾರು ತೆಗೆದುಕೊಂಡು ಹೋಗುವ ವ್ಯಾಪಾರಸ್ಥರು ಎಲ್ಲ ನಿಯಮಗಳನ್ನು ಗಾಳಿಗೆ ತೂರುತ್ತಿದ್ದಾರೆ. 30 ಪ್ರಾಣಿಗಳನ್ನು ಸಾಗಿಸುವ ಜಾಗದಲ್ಲಿ 60 ಪ್ರಾಣಿಗಳನ್ನು ಸಾಗಿಸುತ್ತಾರೆ. ನಾವು ಇದನ್ನು ವಿರೋಧಿಸುತ್ತೇವೆ ಎನ್ನುತ್ತಾರೆ.

ಕೇರಳ ಸರ್ಕಾರ ಈ ವಿಚಾರದಲ್ಲಿ ತಣ್ಣಗಿರುವುದಕ್ಕೆ ಎರಡು ಕಾರಣ ನೀಡಲಾಗುತ್ತಿದೆ. ಪ್ರಾಣಿ ದಯಾ ಸಂಘಗಳ ಪರವಾಗಿ ಕ್ರಮ ಕೈಗೊಂಡಲ್ಲಿ    ಕೋಮು ಭಾವನೆ ಕೆರಳಿಸುವ ಸಾಧ್ಯತೆ ಇರುತ್ತದೆ. ಜಾನುವಾರು ಮಾರಾಟಗಾರರು– ಗೋಮಾಂಸ ವ್ಯಾಪಾರಿಗಳ ಪರವಾಗಿ ಕ್ರಮ ಕೈಗೊಂಡಲ್ಲಿ ಜಾನುವಾರು ಸಾಗಣೆಯಲ್ಲಿನ ಅಮಾನವೀಯ ನಡೆ ಹಾಗೂ ಪ್ರಾಣಿ ವಧೆ ಸಮಯದಲ್ಲಿ ಅನುಸರಿಸುವ ನಿಯಮಗಳ ಕುರಿತು  ಪ್ರಶ್ನೆಗಳು ಏಳುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT