ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮುಂಗಾರು ಪೂರ್ವ ಮಳೆ | ಮೇನಲ್ಲಿ ಶೇ 118ರಷ್ಟು ಅಧಿಕ ಮಳೆ

ರಾಜ್ಯದ ವಿವಿಧೆಡೆ ತಾಪಮಾನ ಕಡಿಮೆಗೊಳಿಸಿದ ಮುಂಗಾರು ಪೂರ್ವ ಮಳೆ
ಆದಿತ್ಯ ಕೆ.ಎ.
Published 24 ಮೇ 2024, 23:30 IST
Last Updated 24 ಮೇ 2024, 23:30 IST
ಅಕ್ಷರ ಗಾತ್ರ

ಬೆಂಗಳೂರು: ಮುಂಗಾರು ಪೂರ್ವ ಮಳೆಯ ಅಬ್ಬರದಿಂದ ರಾಜ್ಯವು ಉಷ್ಣ ಅಲೆಯ ಆಘಾತದಿಂದ ಹೊರಬಂದಿದ್ದು ಉತ್ತರ, ದಕ್ಷಿಣ ಹಾಗೂ ಮಲೆನಾಡು ಭಾಗಗಳಲ್ಲಿ ತಂಪಿನ ಹವೆ ಆವರಿಸುತ್ತಿದೆ.

ಮಾರ್ಚ್‌ ಹಾಗೂ ಏಪ್ರಿಲ್‌ ತಿಂಗಳಲ್ಲಿ ರಾಜ್ಯದಲ್ಲಿ ಮಳೆಯ ಕೊರತೆ ಎದುರಾಗಿತ್ತು. ಉಷ್ಣ ಅಲೆಯ ಪರಿಣಾಮ ಹಲವು ಜಿಲ್ಲೆಗಳಲ್ಲಿ ಶಾಖಾಘಾತ ಪ್ರಕರಣಗಳು ವರದಿಯಾಗಿದ್ದವು. ಮೇ ತಿಂಗಳ 24 ದಿನಗಳಲ್ಲೇ ವಾಡಿಕೆಗಿಂತ ಶೇ 118ರಷ್ಟು ಅಧಿಕ ಮಳೆ ಸುರಿದಿದ್ದು ಬಹುತೇಕ ಜಿಲ್ಲೆಗಳಲ್ಲಿ 3ರಿಂದ 4 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ಇಳಿಕೆಯಾಗಿದೆ.

ಮೇನಲ್ಲಿ ವಾಡಿಕೆ ಮಳೆ ಪ್ರಮಾಣ 5.1 ಸೆಂ.ಮೀ ಆಗಿತ್ತು. ಆದರೆ, 11 ಸೆಂ.ಮೀ ಮಳೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಮೇನಲ್ಲಿ ದುಪ್ಪಟ್ಟು ಮಳೆಯಾಗಿದ್ದು, ರಾಜ್ಯವು ಬರದ ಬೇಗೆಯಿಂದ ಹೊರಬರುತ್ತಿದೆ.

31 ಜಿಲ್ಲೆಗಳಲ್ಲೂ ಮೇ ತಿಂಗಳಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿದ್ದರ ಪರಿಣಾಮ ಕೃಷಿ ಚಟುವಟಿಕೆಗಳು ಗರಿಗೆದರಿವೆ. ಬೆಂಗಳೂರು, ತುಮಕೂರು, ಮೈಸೂರು, ಮಂಡ್ಯ, ರಾಯಚೂರು, ಹಾಸನ, ಚಿಕ್ಕಮಗಳೂರು, ಕೊಡಗು, ಉತ್ತರ ಕನ್ನಡ ಜಿಲ್ಲೆಯಲ್ಲಿ ವಾಡಿಕೆಗಿಂತ ಅಧಿಕ ಮಳೆ ಸುರಿದು ಭೂಮಿ ಹದಗೊಂಡಿದೆ. ರಾಜ್ಯದಲ್ಲಿ ಒಟ್ಟಾರೆ ಜನವರಿಯಿಂದ ಮೇ 24ರ ವರೆಗೆ ವಾಡಿಕೆ ಮಳೆ ಪ್ರಮಾಣವು ಶೇ 9.7 ಸೆಂ.ಮೀ ಆಗಿತ್ತು. 14.1 ಸೆಂ.ಮೀ ಮಳೆಯೊಂದಿಗೆ ಶೇ 46ರಷ್ಟು ಅಧಿಕ ಮಳೆ ಸುರಿದಂತಾಗಿದೆ. 

ಏಪ್ರಿಲ್‌ನಲ್ಲಿ ದಕ್ಷಿಣ ಒಳನಾಡು ಭಾಗದ 11 ಜಿಲ್ಲೆಗಳಲ್ಲಿ ಶೇ 86ರಷ್ಟು ಕೊರತೆಯಾಗಿತ್ತು. ಆ ಭಾಗದಲ್ಲಿ ಈಗ ಶೇ 29ರಷ್ಟು ಅಧಿಕ ಮಳೆ ಸುರಿದಿದೆ. ಉತ್ತರ ಒಳನಾಡು ಪ್ರದೇಶದ 13 ಜಿಲ್ಲೆಗಳಲ್ಲಿ ಏಪ್ರಿಲ್‌ನಲ್ಲಿ ಶೇ 124ರಷ್ಟು ಮಳೆ ಕೊರತೆಯಿತ್ತು. ಕುಡಿಯುವ ನೀರಿಗೂ ಸಮಸ್ಯೆ ಉಂಟಾಗಿತ್ತು. ಈಗ ಅಲ್ಲಿ ಶೇ 36ರಷ್ಟು ಹೆಚ್ಚು ಮಳೆಯಾಗಿದೆ. ಮಲೆನಾಡು ಭಾಗದಲ್ಲಿ ಮುಂಗಾರು ಪ್ರವೇಶಕ್ಕೂ ಮುನ್ನವೇ ಜೋರು ಮಳೆ ಆಗುತ್ತಿದ್ದು, ಶೇ 70ರಷ್ಟು ಹೆಚ್ಚು ಮಳೆಯಾದ ವರದಿಯಾಗಿದೆ. ಮಲೆನಾಡಿನಲ್ಲಿ ಕೆರೆ–ಕಟ್ಟೆಗಳು ತುಂಬುವ ಹಂತಕ್ಕೆ ಬಂದಿವೆ. ಹಸಿರು ವಾತಾವರಣ ಸೃಷ್ಟಿಯಾಗಿದೆ. ಕರಾವಳಿ ಪ್ರದೇಶದ ಮೂರು ಜಿಲ್ಲೆಗಳಲ್ಲೂ ಶೇ 70ರಷ್ಟು ಅಧಿಕ ಮಳೆಯಾಗಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ (ಕೆಎಸ್‌ಎನ್‌ಡಿಎಂಸಿ) ಅಧಿಕಾರಿಯೊಬ್ಬರು ಹೇಳಿದರು.

ಕಳೆದ ವರ್ಷ ಮುಂಗಾರು ಕೈಕೊಟ್ಟಿದ್ದರಿಂದ ರಾಜ್ಯದ ಹಲವು ತಾಲ್ಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರಿಸಲಾಗಿತ್ತು. ಈಗ 36 ತಾಲ್ಲೂಕಿನಲ್ಲಿ ಅತ್ಯಧಿಕ, 27 ತಾಲ್ಲೂಕಿನಲ್ಲಿ ಅಧಿಕ, 37 ತಾಲ್ಲೂಕುಗಳಲ್ಲಿ ವಾಡಿಕೆಯಷ್ಟು ಮಳೆ ಸುರಿದ ವರದಿಯಾಗಿದೆ.

ಜನವರಿ 1ರಿಂದ ಮೇ 24ರ ವರೆಗೆ ಪ್ರದೇಶವಾರು ಸುರಿದ ಮಳೆ (ಸೆಂ.ಮೀಗಳಲ್ಲಿ) ಪ್ರದೇಶ;ವಾಡಿಕೆ;ಸುರಿದ ಮಳೆ ದಕ್ಷಿಣ ಒಳನಾಡು;12.1;15.6 ಉತ್ತರ ಒಳನಾಡು;6.7;9.1 ಮಲೆನಾಡು;13.9;23.7 ಕರಾವಳಿ;9.7;14.1

ಅಲ್ಲಲ್ಲಿ ಗುಡುಗು ಸಹಿತ ಮಳೆ ಸಾಧ್ಯತೆ

ರಾಜ್ಯದ ಕೆಲವು ಭಾಗಗಳಲ್ಲಿ ಶನಿವಾರ ಹಾಗೂ ಭಾನುವಾರ ಸಹ ಗುಡುಗು ಸಹಿತ ಭಾರಿ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬಾಗಲಕೋಟೆ, ಬೆಳಗಾವಿ, ಬೀದರ್‌, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ ಜಿಲ್ಲೆಗಳಲ್ಲಿ ಶನಿವಾರ ಗುಡುಗು ಸಹಿತ ಮಳೆ ಆಗಲಿದೆ. ಈ ಜಿಲ್ಲೆಗಳಲ್ಲಿ ಗಾಳಿಯು ಪ್ರತಿಗಂಟೆಗೆ 40ರಿಂದ 50 ಕಿ.ಮೀ ವೇಗದಲ್ಲಿ ಬೀಸಲಿದೆ. ಉತ್ತರ ಕನ್ನಡ, ಹಾಸನ, ಮಂಡ್ಯ, ದಾವಣಗೆರೆ ಜಿಲ್ಲೆಯ ಕೆಲವು ಭಾಗದಲ್ಲಿ ಸಾಧಾರಣ ಮಳೆಯಾಗಲಿದೆ. ಬೆಂಗಳೂರು ನಗರ– ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರದಲ್ಲಿ ಸಾಧಾರಣಕ್ಕಿಂತ ಕಡಿಮೆ ಮಳೆಯಾಗಲಿದೆ ಎಂದು ಸೂಚನೆ
ನೀಡಿದೆ.

ಉಡುಪಿ, ಉತ್ತರ ಕನ್ನಡ, ಹಾವೇರಿ ಜಿಲ್ಲೆಗಳಲ್ಲಿ ಭಾನುವಾರ ಉತ್ತಮ ಮಳೆಯಾಗಲಿದೆ. ಗಾಳಿಯು ಪ್ರತಿ ಗಂಟೆಗೆ 40ರಿಂದ 50 ಕಿ.ಮೀ ವೇಗದಲ್ಲಿ ಬೀಸಲಿದೆ ಎಂದು ಸೂಚನೆ ನೀಡಿದೆ.

ಸಂಕೇಶ್ವರದಲ್ಲಿ 7 ಸೆಂ.ಮೀ ಮಳೆ:
ಶುಕ್ರವಾರ ಬೆಳಿಗ್ಗೆ 8.30ಕ್ಕೆ ಕೊನೆಯಾದಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಬೆಳಗಾವಿಯ ಸಂಕೇಶ್ವರ ಹಾಗೂ ಕೊಡಗಿನ ನಾಪೋಕ್ಲು ಹೋಬಳಿಯಲ್ಲಿ 7 ಸೆಂ.ಮೀ ಮಳೆಯಾಗಿದೆ. ಉತ್ತರ ಕನ್ನಡ ಜಿಲ್ಲೆಯ ಕಿರವತ್ತಿ, ಕೊಡಗಿನ ಮೂರ್ನಾಡು– ಭಾಗಮಂಡಲ 5 ಸೆಂ.ಮೀ, ಬೆಳಗಾವಿ ನಿಪ್ಪಾಣಿ–ಚಿಕ್ಕೋಡಿ, ಕೊಡಗಿನ ಹಾರಂಗಿಯಲ್ಲಿ 4 ಸೆಂ.ಮೀ, ವಿಜಯಪುರದ ಮುದ್ದೇಬಿಹಾಳ, ಬಾಗಲಕೋಟೆ ಮಹಾಲಿಂಗಪುರ, ಧಾರವಾಡದಲ್ಲಿ 3 ಸೆಂ.ಮೀ ಮಳೆಯಾಗಿದೆ.

ಜಲಾಶಯಗಳಿಗೆ ಒಳಹರಿವು

ರಾಜ್ಯದ ಕೆಲವು ಜಲಾಶಯಗಳಿಗೆ ನಿಧಾನವಾಗಿ ಒಳಹರಿವು ಆರಂಭವಾಗಿದ್ದು ರೈತರ ಮೊಗದಲ್ಲಿ ಮಂದಹಾಸ ತಂದಿದೆ. ಶುಕ್ರವಾರ ಸಂಜೆ ವೇಳೆಗೆ ರಾಜ್ಯದ ಎಲ್ಲ ಜಲಾಶಯಗಳಿಗೆ ಒಟ್ಟಾರೆ 10542 ಕ್ಯುಸೆಕ್ ನೀರು ಹರಿದು ಬರುತ್ತಿತ್ತು. ಕಳೆದ ವರ್ಷ ಇದೇ ಅವಧಿಯಲ್ಲಿ ಒಳ ಹರಿವು ಕ್ಷೀಣಿಸಿತ್ತು. ಕೆಆರ್‌ಎಸ್‌ಗೆ 2509 ಕ್ಯುಸೆಕ್‌ ಕಬಿನಿಗೆ 6473 ಕ್ಯುಸೆಕ್‌ ಹಾರಂಗಿಗೆ 460 ನಾರಾಯಣಪುರ ಜಲಾಶಯಕ್ಕೆ 2248 ವಾಣಿವಿಲಾಸ ಸಾಗರಕ್ಕೆ 780 ಕ್ಯುಸೆಕ್‌ ನೀರು ಹರಿದು ಬರುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಕಡಿಮೆ ಉಷ್ಣಾಂಶದ ಪ್ರದೇಶಗಳು

ಪ್ರದೇಶ;ಕನಿಷ್ಠ ಉಷ್ಣಾಂಶ (ಡಿಗ್ರಿ ಸೆಲ್ಸಿಯಸ್‌ನಲ್ಲಿ)ಚಿಕ್ಕಮಗಳೂರು;17.6ಧಾರವಾಡ;20ಮಡಿಕೇರಿ;20.7ಗದಗ;20ಬೆಳಗಾವಿಯ ವಿಮಾನ ನಿಲ್ದಾಣದ ಸುತ್ತಮುತ್ತ;21.6ಬೆಳಗಾವಿ ನಗರ;22.5ಬೆಂಗಳೂರು ನಗರ ವ್ಯಾಪ್ತಿ;24.4

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT