ಗುರುವಾರ, 29 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂಗಪುರ: ಚಿನ್ನ ಕಳ್ಳ ಸಾಗಣೆಗೆ ಭಾರತೀಯ ವಲಸೆ ಕಾರ್ಮಿಕರ ಬಳಕೆ

ಸಿಂಗಪುರದಿಂದ ಭಾರತಕ್ಕೆ ಸಾಗಿಸಲು ದಂಧೆಕೋರರಿಂದ ಹಣದ ಆಮಿಷ
Published 17 ಡಿಸೆಂಬರ್ 2023, 14:30 IST
Last Updated 17 ಡಿಸೆಂಬರ್ 2023, 14:30 IST
ಅಕ್ಷರ ಗಾತ್ರ

ಸಿಂಗಪುರ: ಚಿನ್ನ ಕಳ್ಳಸಾಗಣೆಗೆ ಭಾರತೀಯ ವಲಸೆ ಕಾರ್ಮಿಕರನ್ನು ಬಳಸಿಕೊಳ್ಳುವ ದಂಧೆ ಸಿಂಗಪುರದಲ್ಲಿ ಅವ್ಯಾಹತವಾಗಿ ನಡೆಯುತ್ತಿದೆ. 

ಚಾಂಗಿ ವಿಮಾನ ನಿಲ್ದಾಣದ ಮೂಲಕ ಭಾರತಕ್ಕೆ ತೆರಳುವ ಕಾರ್ಮಿಕರನ್ನು ಸಂಪರ್ಕಿಸುತ್ತಿರುವ ದಂಧೆಕೋರರು ಹಣದ ಆಮಿಷವೊಡ್ಡಿ ಚಿನ್ನ ಸಾಗಣೆಗೆ ಪುಸಲಾಯಿಸುತ್ತಿದ್ದಾರೆ. ಈ ಕುರಿತು ಸ್ಥಳೀಯ ಮಾಧ್ಯಮಗಳು ಭಾನುವಾರ ವರದಿ ಮಾಡಿವೆ.   

ಚಿನ್ನ ಸಾಗಣೆಗೆ ಒಪ್ಪುವ ಭಾರತೀಯರನ್ನು ವಿಮಾನ ನಿಲ್ದಾಣದ ನಿಗದಿತ ಜಾಗಕ್ಕೆ ಕರೆದೊಯ್ದು ವ್ಯವಹಾರ ಕುದುರಿಸಲಾಗುತ್ತದೆ. ಭಾರತಕ್ಕೆ ಕಾಲಿಡುತ್ತಲೇ ಚಿನ್ನವನ್ನು ತಮ್ಮ ಗುಂಪಿನ ಸದಸ್ಯರು ಪಡೆದುಕೊಳ್ಳುತ್ತಾರೆ ಎಂದು ಕಳ್ಳಸಾಗಣೆದಾರರು ಕಾರ್ಮಿಕರಿಗೆ ಮೊದಲೇ ತಿಳಿಸಿರುತ್ತಾರೆ ಎಂದು  ‘ದಿ ಸ್ಟ್ರೈಟ್ಸ್ ಟೈಮ್ಸ್’ ವರದಿ ಮಾಡಿದೆ. 

’ಪ್ರಯಾಣಿಕರು ಚಿನ್ನ ಸೇರಿದಂತೆ ಬೆಲೆಬಾಳುವ ಲೋಹಗಳನ್ನು ದೇಶದಿಂದ ಹೊರಗೆ ಕೊಂಡೊಯ್ಯುವುದು ಸಿಂಗಾಪುರದಲ್ಲಿ ಕಾನೂನುಬಾಹಿರವೇನಲ್ಲ. ಆದರೆ, ತಾವು ಹೊಂದಿರುವ ಚಿನ್ನವನ್ನು ಪ್ರಯಾಣಿಕರು ಮೊದಲೇ ಘೋಷಿಸದಿದ್ದರೆ ಭಾರತದಲ್ಲಿ ಕಾನೂನು ಉಲ್ಲಂಘನೆಯ ಅಪಾಯ ಎದುರಿಸಬೇಕಾಗುತ್ತದೆ‘ ಎಂದು ಸಿಂಗಾಪುರದ ‘ಜೆಮ್ ಟ್ರೇಡರ್ಸ್ ಅಸೋಸಿಯೇಷನ್ ​’ನ ಅಧ್ಯಕ್ಷ ಮೊಹಮದ್ ಬಿಲಾಲ್‌ ಎಂಬುವರ ಹೇಳಿಕೆಯನ್ನು ಉಲ್ಲೇಖಿಸಿ ವರದಿ ಪ್ರಕಟಿಸಲಾಗಿದೆ. 

ವಿದೇಶದಿಂದ ಮರಳುವ ಭಾರತೀಯರು ಇಂತಿಷ್ಟೇ ಚಿನ್ನವನ್ನು ತಮ್ಮೊಂದಿಗೆ ತರಬಹುದು ಎಂಬ ನಿಯಮವಿದೆ. ಪುರುಷರಾದರೆ 20 ಗ್ರಾಂ (₹50 ಸಾವಿರ ಮೌಲ್ಯದ) ವರೆಗಿ‌ನ ಚಿನ್ನವನ್ನು ಸುಂಕ ರಹಿತವಾಗಿ ತರಬಹುದು. ಮಹಿಳೆಯರಾದರೆ ಇದರ ಎರಡು ಪಟ್ಟು ಚಿನ್ನ ತರಬಹುದು. ಇದಕ್ಕಿಂತಲೂ ಮಿಗಿಲಾದ ಚಿನ್ನವನ್ನು ದೇಶದೊಳಗೆ ತಂದರೆ ಅದಕ್ಕೆ ಸುಂಕ ವಿಧಿಸಲಾಗುತ್ತದೆ.   

ಚಾಂಗಿ ವಿಮಾನ ನಿಲ್ದಾಣದ ಟರ್ಮಿನಲ್‌ 1ರಲ್ಲಿ ಭಾರತೀಯ ಕಾರ್ಮಿಕರಿಗಾಗಿ ಹೊಂಚು ಹಾಕಿ ಕಾಯುತ್ತಿರುವ ಕಳ್ಳಸಾಗಣೆದಾರರು ಅವರ ಮೂಲಕ 25 ರಿಂದ 30 ಗ್ರಾಂ ಚಿನ್ನವನ್ನು ಭಾರತಕ್ಕೆ ಸಾಗಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇದು ನಿಗದಿತ ಪ್ರಮಾಣಕ್ಕಿಂತಲೂ ಅಧಿಕ. 

ಚಿನ್ನದ ದರ ಕಡಿಮೆ ಇರುವ ದೇಶಗಳಿಂದ ಹೀಗೆ ಅಕ್ರಮವಾಗಿ ಚಿನ್ನ ಸಾಗಣೆ ಮಾಡುತ್ತಿರುವ ಬಗ್ಗೆ, ಜಾಲಗಳು ಸಕ್ರಿಯವಾಗಿರುವ ಬಗ್ಗೆ ವರದಿಗಳು ಬಂದಿದ್ದು, ಭಾರತೀಯ ಅಧಿಕಾರಿಗಳು ಇಂಥವಾರ ಮೇಲೆ ನಿಗಾ ವಹಿಸಿದ್ದಾರೆ. 

ಚಿನ್ನದ ಬೇಡಿಕೆಯಲ್ಲಿ ಭಾರತ ಜಾಗತಿಕವಾಗಿ ಎರಡನೇ ಸ್ಥಾನದಲ್ಲಿದ್ದು, 24 ಕ್ಯಾರೆಟ್‌ನ ಒಂದು ಗ್ರಾಂ ಚಿನ್ನದ ದರ ₹6177 ಇದೆ. ಸಿಂಗಪುರದಲ್ಲಿ ಒಂದು ಗ್ರಾಂ ಚಿನ್ನದ ಬೆಲೆ ₹5,765 ಇದೆ. 

ಭಾರತೀಯ ಕಾರ್ಮಿಕರ ಮೂಲಕ ಚಿನ್ನವನ್ನು ಅಕ್ರಮವಾಗಿ ಸಾಗಿಸುವ ದಂಧೆ ಸಿಂಗಪುರದಲ್ಲಿ ಹಲವು ದಶಕಗಳಿಂದಲೂ ನಡೆದುಕೊಂಡು ಬಂದಿದೆ ಎಂದು  ‘ದಿ ಸ್ಟ್ರೈಟ್ಸ್ ಟೈಮ್ಸ್’ ತನ್ನ ವಿಶೇಷ ವರದಿಯಲ್ಲಿ ಹೇಳಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT