ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಎ ಜಾರಿ: ಅಮೆರಿಕದ ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗ ಆಕ್ಷೇಪ

Published 26 ಮಾರ್ಚ್ 2024, 14:34 IST
Last Updated 26 ಮಾರ್ಚ್ 2024, 14:34 IST
ಅಕ್ಷರ ಗಾತ್ರ

ನ್ಯೂಯಾರ್ಕ್: ಭಾರತ ಸರ್ಕಾರವು ಪೌರತ್ವ (ತಿದ್ದುಪಡಿ) ಕಾಯ್ಡೆ (ಸಿಎಎ) ಜಾರಿಗೆ ತಂದಿರುವುದಕ್ಕೆ ಪ್ರತಿಕ್ರಿಯಿಸಿರುವ ಅಮೆರಿಕದ ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗ (ಯುಎಸ್‌ಸಿಐಆರ್‌ಎಫ್‌), ಧರ್ಮದ ಹೆಸರಿನಲ್ಲಿ ಯಾರಿಗೂ ಪೌರತ್ವ ನಿರಾಕರಿಸುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದೆ.

‘ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಅಫ್ಗಾನಿಸ್ತಾನದಿಂದ ವಲಸೆ ಬಂದಿರುವ, ಸ್ಥಳೀಯವಾಗಿ ವಾಸಿಸುತ್ತಿರುವ ಕುರಿತು ದಾಖಲೆಗಳು ಇಲ್ಲದ ಮುಸ್ಲಿಮೇತರರಿಗೆ ಪೌರತ್ವ ನೀಡಬಹುದಾದ ಸಿಎಎ ಜಾರಿಗೆ ಭಾರತ ಸರ್ಕಾರವು ಈ ತಿಂಗಳ ಪ್ರಾರಂಭದಲ್ಲಿ ಅಧಿಸೂಚನೆ ಪ್ರಕಟಿಸಿತು. ನೆರೆಯ ರಾಷ್ಟ್ರಗಳಿಂದ ವಲಸೆ ಬಂದವರು ನಿರ್ದಿಷ್ಟ ದೇಶದಲ್ಲಿ ಆಶ್ರಯ ಕೇಳಿದರೆ, ಧರ್ಮವನ್ನು ಆಧಾರವಾಗಿ ಇಟ್ಟುಕೊಂಡು ಪೌರತ್ವ ನೀಡುವ ಪರಿಪಾಟಕ್ಕೆ ಸಿಎಎ ಕಾರಣವಾಗುತ್ತದೆ. ಇದು ಸಮಸ್ಯಾತ್ಮಕವಾಗಿದೆ’ ಎಂದು ಯುಎಸ್‌ಸಿಐಆರ್‌ಎಫ್‌ ಆಯುಕ್ತ ಸ್ಟೀಫನ್ ಶ್ನೆಕ್‌ ಸೋಮವಾರ ಪ್ರಕಟಣೆಯಲ್ಲಿ ಅಭಿಪ್ರಾಯಪಟ್ಟಿದ್ದಾರೆ. 

ಹಿಂದೂಗಳು, ಪಾರಸಿಗಳು, ಸಿಖ್ಖರು, ಬೌದ್ಧ ಧರ್ಮದವರು, ಜೈನರು ಹಾಗೂ ಕ್ರಿಶ್ಚಿಯನ್ನರಿಗೆ ಬೇಗ ಪೌರತ್ವ ದೊರಕುವಂತೆ ಸಿಎಎ ಮಾಡುತ್ತದೆ. ಆದರೆ, ಹೊಸ ಕಾನೂನು ಈ ಚುರುಕಾದ ಪ್ರಕ್ರಿಯೆಯಿಂದ ಮುಸ್ಲಿಮರನ್ನು ಹೊರಗಿಡುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. 

‘ಸಿಎಎ ಪೌರತ್ವ ನೀಡುವ ಕಾನೂನಾಗಿದೆ; ಕಿತ್ತುಕೊಳ್ಳುವ ಕಾನೂನಲ್ಲ. ಮನುಷ್ಯ ಘನತೆಯನ್ನು ಎತ್ತಿಹಿಡಿದು, ನೆಲೆ ಇಲ್ಲದವರನ್ನು ನಿರ್ದಿಷ್ಟ ದೇಶದ ಪ್ರಜೆಗಳನ್ನಾಗಿಸುವ ಮಾನವ ಹಕ್ಕುಗಳ ಕಾನೂನು ಇದು’ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಸಿಎಎ ಅನ್ನು ಸಮರ್ಥಿಸಿಕೊಂಡಿದ್ದರು. 

‘ಹಿಂಸೆಗೆ ಒಳಗಾದ ಧಾರ್ಮಿಕ ಅಲ್ಪಸಂಖ್ಯಾತರಿಗೆ ನಿಜಕ್ಕೂ ಅನುಕೂಲ ಮಾಡಿಕೊಡಬೇಕು ಎಂದಿದ್ದರೆ, ಬರ್ಮಾದ ರೋಹಿಂಗ್ಯಾ ಮುಸ್ಲಿಮರು, ಪಾಕಿಸ್ತಾನದ ಅಹಮದೀಯ ಮುಸ್ಲಿಮರು, ಅಫ್ಗಾನಿಸ್ತಾನದ ಹಜಾರಾ ಶಿಯಾಗಳು– ಇವರಿಗೂ ಸಿಎಎ ಮೂಲಕ ಪೌರತ್ವ ದೊರಕುವಂತೆ ಮಾಡಬೇಕಿತ್ತು’ ಎಂದೂ ಸ್ಟೀಫನ್ ಶ್ನೆಕ್‌ ಪ್ರತಿಪಾದಿಸಿದ್ದಾರೆ. 

ಹೊಸ ಕಾನೂನಿನ ಪ್ರಕಾರ ಪೌರತ್ವಕ್ಕಾಗಿ ಈ ಮುಸ್ಲಿಮರೂ ಅರ್ಜಿ ಸಲ್ಲಿಸಬಹುದು ಎಂದು ಭಾರತ ಸರ್ಕಾರ ಸ್ಪಷ್ಟಪಡಿಸಿದೆ. ಹೀಗಿದ್ದೂ ಅಧಿಸೂಚನೆಯ ಅಂಶಗಳನ್ನು ಆಧಾರವಾಗಿ ಇಟ್ಟುಕೊಂಡು ಸಿಎಎ ಧರ್ಮಾಧಾರಿತವಾದದ್ದಾಗಿದೆ ಎಂದೇ ಯುಎಸ್‌ಸಿಐಆರ್‌ಎಫ್‌ ಹೇಳುತ್ತಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT