ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾರೀನುಡಿಯ ಕಟ್ಟೋಣದತ್ತ-6

Last Updated 3 ನವೆಂಬರ್ 2012, 19:30 IST
ಅಕ್ಷರ ಗಾತ್ರ

ಬಂಡಾಯ ಕಾವ್ಯದ ಕಾಲಘಟ್ಟದಲ್ಲೇ ಮಹಿಳಾಕಾವ್ಯವೂ ಹೊಮ್ಮಿಬಂದಿದ್ದರೂ ಅದಕ್ಕೆ ಎದುರಾದ ಸಾಮಾಜಿಕ ಪ್ರಶ್ನೆಗಳು ಹೆಚ್ಚು ಸಂಕೀರ್ಣವಾಗಿದ್ದಂಥವು.

ಜಾತಿ. ವರ್ಗಗಳ ಜೊತೆಗೆ ಅವೆರಡರೊಳಗೂ ವ್ಯಾಪಿಸಿರುವ ಲಿಂಗತಾರತಮ್ಯದ ದೊಡ್ಡ ಪ್ರಶ್ನೆ ಅವರೆದುರು ಇತ್ತು/ಇದೆ. ಕೆಳಸ್ತರದಿಂದ ಬಂದ ಮಹಿಳಾ ಕವಿಗಳು ಈ ಪ್ರಶ್ನೆಗಳನ್ನು ನಿರ್ವಹಿಸಲು ಎಂಥ ತೊಡಕುಗಳನ್ನು ಅನುಭವಿಸಿದ್ದಾರೆ ಎನ್ನುವುದನ್ನು ಗಮನಿಸಬೇಕು.

ಅವರಿಗೆ  ಮೇಲು ಜಾತಿ ವರ್ಗಗಳು, ಮುಖ್ಯವಾಗಿ, ಪುರೋಹಿತಶಾಹಿ ಪ್ರಬಲ ಶೋಷಕ ಶಕ್ತಿಯಾಗಿ ಕಾಣಿಸುವಷ್ಟೇ ಪ್ರಬಲವಾಗಿ ಸ್ವಂತ ಸಮುದಾಯದ ಮತ್ತು ಕೌಟುಂಬಿಕ ಮತ್ತು ವೈಯಕ್ತಿಕ ನೆಲೆಗಳೊಳಗಿನ ಜೆಂಡರ್ ಮೂಲದ ದಮನಗಳು ಕಂಡಿದ್ದು ಇದೆಯೇ ಎನ್ನುವುದು ಶೋಧಿಸಲು ಅರ್ಹವಾಗಿರುತ್ತದೆ. ಬಾಹ್ಯ ಸಾಮಾಜಿಕ ಅರಿವು (ಒಂದು ದಶಕಕ್ಕೂ ಹೆಚ್ಚು ಕಾಲ) ಇಂಥ ಮಹಿಳಾ ಬಂಡಾಯ ಕಾವ್ಯಕ್ಕೆ  ವಿಷಯವಾಗಿತ್ತು.

ಆದರೆ ವೈಚಾರಿಕ ಆಯಾಮವನ್ನು ಮೀರಿಸಿದ ಅಂತರ್ಗತ ಅನುಭವವವು ಕಾವ್ಯವಾದದ್ದು ಕಡಿಮೆಯೇ. `ದಲಿತ ಮಹಿಳಾ ಸಂವೇದನೆ~ ಎನ್ನುವುದು ಮರಾಠೀ ಮಹಿಳಾಕಾವ್ಯದ ರೀತಿಯ ರಾಜಕೀಯ ಅಸ್ಮಿತೆಯ ರೂಪದಲ್ಲಿ ಕನ್ನಡದಲ್ಲಿ ಹೊಮ್ಮದೆ ಹೋಯಿತು. ಸಮಾಜವನ್ನು ನೇರವಾಗಿ `ನೀವು~ ಎನ್ನುವ ಜಾಗದಲ್ಲಿಟ್ಟು ಸಂಬೋಧಿಸುತ್ತಿದ್ದ ಆ ಸ್ಥಿತಿ ಮುಂದಿನ ದಶಕಗಳಲ್ಲಿ ಬದಲಾಗತೊಡಗಿದೆ. ಮಹಿಳಾ ಕವಿಗಳ ಒಲವು ಹೆಣ್ಣಿನದೇ ಆದ ಪರಂಪರೆಯ ಒಳಗಿನಿಂದ ತಮ್ಮತನವೊಂದನ್ನು ಗುರುತಿಸಿಕೊಂಡು ಪೋಷಿಸುವ ಕಡೆಗೆ  ಹರಿದದ್ದು ಎದ್ದು ತೋರುತ್ತದೆ. ಈ ಬಗೆಯ ಬೆಳವಣಿಗೆಯನ್ನು “ದೇಸೀ ಸ್ತ್ರೀ ಸಂಸ್ಕೃತಿಯ ಸ್ವಂತ ಪರಂಪರೆಯ ಹುಡುಕಾಟ” ಎಂದು ನಾನು ಕರೆಯುತ್ತೇನೆ.

ಈ ವಿದ್ಯಮಾನವು ಅತ್ಯಂತ ವ್ಯಾಪಕ ಹಾಗೂ ಬಹುಮುಖಿಯಾದದ್ದು. ದೊಡ್ಡ ಮಟ್ಟದ ಸಂಶೋಧನೆಯನ್ನು  ಬೇಡುವ ಅದರ ಕೆಲವು ಲಕ್ಷಣಗಳು ಹೀಗಿವೆ:  ಸಾಂಪ್ರದಾಯಿಕತೆಯ ಮಾದರಿಗಳೆಂದು ದೂರ ತಳ್ಳಲ್ಪಟ್ಟಿದ್ದ ತಾಯಿ, ಅಜ್ಜಿಯರು ಈಗ ತನ್ನದೇ ವ್ಯಕ್ತಿತ್ವದ ಭಾಗವೆನಿಸುತ್ತಾರೆ; ಪುರಾಣ ಸ್ತ್ರೀ ಮಾದರಿಗಳು ಬರೀ ಭಂಜನೆಗೊಳ್ಳಲು ಬರದೆ ಹೆಣ್ಣಿನ ಧೃತಿ, ಜೀವಪೋಷಕತೆ, ವಾತ್ಸಲ್ಯ, ಸ್ವಾಭಿಮಾನಗಳ ಸಂಕೇತವಾಗಿ ಅಂತಃಶಕ್ತಿಯ ಪ್ರೇರಕ ಪ್ರತೀಕಗಳಾಗುತ್ತಾರೆ.

ಅವರು ಸೀತೆ, ಸಾವಿತ್ರಿಯಂಥ ಶಿಷ್ಟ ಮಾದರಿಗಳೇ ಅಗಿರಬೇಕಿಲ್ಲ. ಜನಪದ ಮೂಲದಿಂದ ಆಯ್ದುಕೊಂಡ ಕಲ್ಲಮ್ಮ. ಮುಳ್ಳಮ್ಮ, ಮರದಮ್ಮ, ಮಾರಮ್ಮನೋ ಆಗಬಹುದು. ಹೆಣ್ಣನ್ನು ಪ್ರಕೃತಿಯೆಂದು ಕರೆದ ಗಂಡು ದೃಷ್ಟಿಯನ್ನು ಪ್ರತಿಭಟಿಸದೆ ಪ್ರಕೃತಿಯೊಳಗೇ ತನ್ನ ಬಾಂಧವ್ಯ ಜನ್ಮಜಾತ ಹಕ್ಕೆಂದು ಹೆಮ್ಮೆಯಿಂದ ಪ್ರತಿಪಾದಿಸಿಕೊಳ್ಳುತ್ತಾಳೆ ಮಹಿಳೆ.

ಹೆಣ್ತನವೀಗ ಗಟ್ಟಿಯಾದ ಅಸ್ಮಿತೆಯ ಜಾಗ. (ವೈಜ್ಞಾನಿಕ ವೈದ್ಯಕೀಯ ಪ್ರಗತಿಯ ಮೂಲಕ) ಸಂತಾನ ಎನ್ನುವುದು ಹೊರೆಯೋ, ಶೋಷಣೆಯ ಮೂಲವೋ ಆಗಿ ಉಳಿದಿಲ್ಲ. ಅದೊಂದು ಅಪೇಕ್ಷಣೀಯ ಅನುಭವವಾಗುತ್ತದೆ. ಅಮ್ಮ ಸಂಸ್ಕೃತಿಯ ವಕ್ತಾರಿಕೆ ಇಂದಿನ ಮಹಿಳಾ ಕವಿಗಳಿಗೆ ಸುಖದ ಹೊಸ ರಾಜ್ಯವೊಂದರ `ಉತೋಪಿಯ~ ಆಗಿರುತ್ತದೆ.

ಏಕೆಂದರೆ  ಜಾತಿ, ವರ್ಗ ಲಿಂಗಗಳ ಪಿತೃ ಸಂಸ್ಕೃತಿಯ ದಮನಕಾರಿ ಶಕ್ತಿಗಳ ಆಕ್ರಮಣದಿಂದ ಪಾರಾಗಲು ಅಪರೂಪದ ಸ್ಪೇಸ್ ಅದಾಗಿದೆ. ಗಂಡಾಳ್ತನದ ವ್ಯವಸ್ಥೆಯ ನೆರಳಿಲ್ಲದ ಆ ಜಾಗದಲ್ಲಿ ನಿಂತು, ಬಹುಮುಖ ದಮನದ ಒಳಗಿಂದ ಉತ್ಪತ್ತಿಯಾಗುವ ಅನುಭವವನ್ನು ವಸ್ತುವೆನ್ನುವಂತೆ ನೋಡಲು ಬೇಕಾದ ಮಾನಸಿಕ ಅಂತರವನ್ನು ಕವಿಗಳು ಗಳಿಸಿಕೊಳ್ಳುತ್ತಾರೆ. ಹೀಗೆ ಅನುಭವವು ಕಾವ್ಯವೂ ಆಗುವಂತೆ ಮಾಡುವುದಕ್ಕೆ ಒದಗಿಬಂದಿರುವ ಬಹುಮುಖ್ಯ ಸತ್ತ್ವದ ಜಾಗವೆಂದರೆ “ಅಮ್ಮ ಸಂಸ್ಕೃತಿ”ಯಾಗಿದೆ.

ಈ ಸಾಂಸ್ಕೃತಿಕ ಅರಿವು ನಿಧಾನವಾಗಿ ಮಹಿಳಾ ಕಾವ್ಯದೊಳಗೆ ವಿಕಾಸಗೊಂಡದ್ದಾಗಿದೆ. ಮಹಿಳೆಯರು ದೇಹ, ಲೈಂಗಿಕತೆ ಸಂತಾನೋತ್ಪಾದಕತೆಗಳ ತಮ್ಮ ಸಾಮರ್ಥ್ಯ ಮತ್ತು ಸಂಕಷ್ಟಗಳ ಬಗ್ಗೆ ತಳೆದಿರುವ ಪರಿಕಲ್ಪನೆಗಳು ಅವರವರ ಸಾಂಸ್ಕೃತಿಕ ಪರಿಸರಕ್ಕೆ ಆಳವಾಗಿ ಬೆಸೆದುಕೊಂಡಿರುತ್ತವೆ. ಬರಹಗಾರರಾಗಿ ವರ್ಗ, ಜಾತಿ, ಜನಾಂಗ, ರಾಷ್ಟ್ರೀಯತೆ, ಪ್ರಾದೇಶಿಕತೆ ಮತ್ತು ಚರಿತ್ರೆಗಳ ಮೂಲಕ ಅವರು ಬೇರೆ ಬೇರೆಯಾಗಿರುತ್ತಾರೆ.

ಈ ಎಲ್ಲಾ ವಿಭಜನೆಗಳೂ ಶ್ರೇಣೀಕರಣಗಳೂ `ಜೆಂಡರ್~ನಷ್ಟೇ ಅವರ ಸಾಹಿತ್ಯಗಳ ನಿರ್ಧಾರಕ ಶಕ್ತಿಗಳಾಗಿರುತ್ತವೆ. ಇಂಥ ಬಹುಮುಖ ಅನುಭವಗಳೇ ಅನುಭವಸಮೂಹವಾಗಿ ಏಕತ್ವದಲ್ಲಿ `ಪರಿಕಲ್ಪನೀಕರಣ~ಗೊಂಡಾಗ ಮಹಿಳಾ ಸಂಸ್ಕೃತಿಯೊಂದರ ಕಟ್ಟೋಣಕ್ಕೆ ಒದಗುತ್ತವೆ. ಕನ್ನಡ ಮಹಿಳಾ ಕಾವ್ಯಕ್ಕೆ ಇಂಥ ಏಕರೂಪತೆಯ ಬಹು ಮುಖ್ಯ ಜಾಗವೆಂದರೆ “ಅಮ್ಮಸಂಸ್ಕೃತಿ“.

 ಕಳೆದ ಮೂರು ದಶಕಗಳಲ್ಲಿ ಮಹತ್ವದ್ದು ಎನ್ನಿಸಿಕೊಂಡಿರುವ ಮಹಿಳಾ ಕಾವ್ಯದಲ್ಲಿ ಇಂಥ ಅಂಶ ಬಲವಾಗಿರುತ್ತದೆ. ಹೆಣ್ಣಿನ ವ್ಯಕ್ತಿವಾದಿ ಸ್ವತ್ವದ ಅಸ್ಮಿತೆಯ ಹುಡುಕಾಟದಲ್ಲಿ ತಾಯಿಯರು, ಅಜ್ಜಿಯರ ಜೀವನಕ್ರಮವನ್ನು ಸಾಂಪ್ರದಾಯಿಕ ಅಧೀನತೆಯ ಪ್ರತಿನಿಧಿಯೆಂದು ಬದಿಗೆ ಸರಿಸಿ ತಾನು ಬೇರೆ, ತನ್ನ ಹಾದಿ ಬೇರೆ ಎಂದು ಘೋಷಿಸಿಕೊಳ್ಳುತ್ತಿದ್ದ ಕವಿತೆಗಳ ಕಾಲ ಮೊದಲು ಇತ್ತು. “ಅಮ್ಮನಿಗೆ“ ಎನ್ನುವ ಶೀರ್ಷಿಕೆಯಡಿ ಇಂಥ ಬಹುತೇಕ ಕವನಗಳು ಹೊಮ್ಮಿರುತ್ತವೆ.

ಆದರೆ ತಾನು ತಾಯಿಯಾಗಿ ಅಥವಾ ತಾಯಿಯ ಭಾವದಲ್ಲಿ ನಿಂತು ಸಂತಾನದೊಂದಿಗಿನ ನಿಜದ ಸಂಬಂಧಗಳನ್ನು ಅರಿತುಕೊಳ್ಳುವುದು ಮತ್ತು ತನ್ನ ಹಿಂದಿನ ತಾಯಿ-ಪರಂಪರೆಯೊಂದಿಗೆ ಭಾವನಾತ್ಮಕ ತನ್ಮಯತೆ ಗಳಿಸಿಕೊಳ್ಳುವ ಯತ್ನ ಮುಂದುವರೆದಂತೆ ಆರಂಭದಲ್ಲಿದ್ದ ನಿರಾಕರಣೆಯ ಧೋರಣೆ ಬದಲಾಗುತ್ತ ಮಾಗುತ್ತಾ ಹೋಗಿದೆ.

ಇಲ್ಲಿ ಮಾತೃತ್ವದ ಜೊತೆಗೆ ಕಾವ್ಯವು ನಡೆಸುವ ಅನುಸಂಧಾನದ ಮೂರು ಮಾದರಿಗಳನ್ನು ನೋಡಬಹುದು. ಬೇರೆ ಬೇರೆ ಭಾಷೆ ಮತ್ತು ಅಭಿವ್ಯಕ್ತಿಯ ರೀತಿಗಳಿಗೆ ನಿದರ್ಶನವಾಗಿ ಇವನ್ನು ಇಲ್ಲಿ ನೀಡಿದೆ:

ಆವುಗಳಿಂದ `ಮಾತೃ ಸಂಸ್ಕೃತಿ~ ಕಡೆಗಿನ ಒಂದು ಚಿಕ್ಕ ಹೊರಳನ್ನು ಮಾತ್ರ ಗ್ರಹಿಸಬಹುದು. ವಾಸ್ತವದಲ್ಲಿ ಇದು ದೊಡ್ಡ ಮಟ್ಟದ ಸಂಶೋಧನೆಯನ್ನು ಬೇಡುವ ವಿಚಾರವಾಗಿರುತ್ತದೆ. ನುಡಿಯೂ ವಿಚಾರವೂ ಸ್ಪಷ್ಟವಾಗಿರುವ ಒಂದು ಮಾದರಿ:                                                                                      
          “ಯಾವ ಭ್ರಮೆಯಲಿ ಬಂದು        
          ಬೆನ್ನು ಬಡಿಯಿತೊ ಕಂದ
          ಎತ್ತಿಕೊಳ್ಳದೆಹೋದೆ ಆ ಒಂದು ಗಳಿಗೆ
          ಅಮ್ಮನದೆ ಚಹರೆ, ಅಮ್ಮನದೆ ಬೆನ್ನು
          ಅಮ್ಮನದೆ ಎತ್ತಿಕೊಳ್ಳುವ ತುಂಬು ಹೃದಯ
          ಬಡಿದೆ ಬಡಿಯಿತು ಬನ್ನ ಪುಟ್ಟ ಕಂದ
          ತಿರುಗಿ ನೋಡಿದ್ದೆ ಸಾಕು
          ಪಿಳಿ ಪಿಳಿ ಮಗುವು
          ~ನೀನಲ್ಲ~ವೆಂದು ದೂಡಿ
          ಬೆನ್ನನು ತಿರುಗ್ಗಿ ತಾನು ಹೊರತಿತ್ತು
          ಯಾವ ಭ್ರಮೆಯಲಿ ಬಂದು
          ಬೆನ್ನ ಬಡಿಯಿತೊ ಕಂದ“
         ( ಬೆನ್ನ ಬಡಿದ ಕಂದನಿಗೆ/ ಮುಗಿಲಹಕ್ಕಿ: ಮಹೇಶ್ವರಿ.ಯು-1996)
 
 ಕಂದನೊಂದಿಗಿನ ಸಂವಾದದಲ್ಲಿ ತೃತೀಯ ವ್ಯಕ್ತಿಯಾಗಿ ಮೊದಲು ಕಾಣುವಾಕೆ ಆಮೇಲೆ ತಾನೂ ಮಾತಾಡುವ ಬಗೆ ಎರಡನೆಯದರಲ್ಲಿದೆ. ಇಲ್ಲಿ ಕೆಳಸ್ತರದ ಅನುಭವವಿದ್ದರೂ ಭಾಷೆ ಶಿಷ್ಟವಾಗಿದೆ.    
        
          “ಮೊಲೆ ಕಚ್ಚಿದ ಮಗುವಿಗೆ
           ಹೊಟ್ಟೆ ತುಂಬಿಸುವ ನಿರೀಕ್ಷೆ
           ಕಾಯುತಿದೆ ಮುಖವೆತ್ತಿ
           ಸುರಿದೀತೆ ಹೊನಲು
           ಮೂಡೀತೆ ನಗು, ತಣಿದೀತೆ ಒಡಲು?
 
           ಮುಖ ಮುಚ್ಚಿ ಬಿಕ್ಕುತ್ತಿದ್ದಾಳೆ ಹೆಣ್ಣು
           ಹೇಗೆ ಹೂಡಲಿ ಹೇಳು ಮಗು
           ಬರಿ ಮೊಲೆಯ, ಹೇಗೆ ಹಚ್ಚಲಿ ಹೇಳು ಕಿಚ್ಚು
           ನಿನ್ನ ತವಗುಡುವ ತುಟಿಗೆ“

(~ಮುತ್ತಿಕ್ಕುವ ಕಣ್ಣುಗಳಲ್ಲಿ~/ಅಮೃತಮತಿ ಸ್ವಗತ/ಎಚ್.ಎಲ್.ಪುಷ್ಪ-1992)
 ಅಪ್ಪಟ ಪ್ರಾದೇಶಿಕ ಆಡುಮಾತಿನಲ್ಲಿ  ಬರೆಯುವ ಲಲಿತಾ ಸಿದ್ದಬಸವಯ್ಯ ಅವರ  ಈ ಕಾವ್ಯವೇ ಒಂದು ನಾಟ್ಕವಾಗಿದ್ದು ಇದನ್ನು ಬಸವಣ್ಣನವರ “ಕೂಸುಳ್ಳ ಸೂಳೆ~ಯ ಧನದಾಸೆ ಕುರಿತ ವಚನದ ಜೊತೆಗಿಟ್ಟು ನೋಡಿದರೆ ಮಹಿಳಾ ಕಾವ್ಯ ಕಾಣಿಸಲು ಹೊರಡುವ ಹೆಣ್ಣಿನ ಒಳಗಿನ ನಿಜದ ಅರಿವು ಅರ್ಥವಾದೀತು.       

         “ ಇತತ ಜರುಗಬ್ಯಾಡ, ಮಗು ಮಲಗೈತೆ
          ಅತ್ತೂ ಅತ್ತೂ ಈಗಿನ್ನ ಹಂಗೆ ಕಣ್ಣು ಮುಚ್ಚೈತೆ
          ತೋ, ಬಿಡು ಎದೆ, ನಂದಿನ್ನಾ ಕುಡಿಯೋ ಮಗು
          ಕಿರುಚಬ್ಯಾಡ, ಬೇಕಾದ್ರಿರು, ಬ್ಯ್ಡದಿದ್ರೆ ಎದ್ದೋಗು
          ಏನಂದೆ, ಉಪಾಸ ಬೀಳ್ತೀಯೇ ಬೋಸುಡಿ ಅಂದಾ
          ಹೊಸದಲ್ಲ,ಕಂಡಿದ್ದೀನಿ ಹೋಗು ಹುಟ್ಟಿದಾಗಿನಿಂದ
          ಜಂಬೂ ಸವಾರಿ ತೋರಿಸ್ತಾರ, ನಿನ್ನಿಪ್ಪತ್ತು ರೂಪಾಯ್ಗೆ
          ಹಾಲಿನ ಪುಡಿ ಅರ್ಧ ಡಬ್ಬ ಬರಲ್ಲ ನನ್ನ ಮಗೀಗೆ
          ಏನಂದೆ, ಒಂದಿನದ ಪೂರ್ತಿ ಕೂಲಿ ಇಷ್ಟೇ ಕಣೆ ಅಂದಾ  
          ತೊತ್ತರಿಕೆ, ಹೋಗ್ಲಿ ಬಿಡತ್ತ, ಇವತ್ತು ಕಾಸೇನು ಬ್ಯಾಡ
          ಅಂಗಂತ ನೋಡು, ಅಗಲಗಲ ಇಲ್ಲಿಗೇ ಬರಬ್ಯಾಡ
          ವೊಟ್ಟೆ ಪಾಡು, ನಂದೂ ಮಗಿಣ್ದೂ ನಡೀಬೇಕಲ್ಲವಾ
          ಯಾಕ್ ಸುಮ್ನೋದೆ, ಪುಗಸಟ್ಟೆಗೆ ಮನಸೊಪ್ಪುತಾ ಇಲ್ಲವಾ
          ನಿಯತ್ತುಗಾರ, ಓಗ್ಲಿ ಮುಂದಿನ್ಸಾರಿ ಮಗೀಗೊಂದು ಬೊಂಬೆ ತಗಂಬಾ“
          (ನಿಯತ್ತು/ “ಕೆಬ್ಬೆನೆಲ”ಲಲಿತಾ ಸಿದ್ದಬಸವಯ್ಯ-2004)
           
 ಈ ಅಮ್ಮನ ಜೊತೆಗಿನ ಸಂಬಂಧದ ಮರುಸ್ಥಾಪನೆಯಲ್ಲಿ  ಒಂದು ಬಗೆಯ ಬಿಡುಗಡೆಯೂ ಒದಗುತ್ತದೆ. ಏಕೆಂದರೆ ಅಮೂರ್ತವೂ ಆಧ್ಯಾತ್ಮಿಕವೂ ಆದ ಇಂಥ ಆವಾಹಿತ ಜಾಗವು ವರ್ಗ, ಜಾತಿಗಳ ಬಾಧೆಗಳಿಂದ ಭಾವನಾತ್ಮಕವಾಗಿ ಮುಕ್ತತೆಯನ್ನು ಅನುಭವಿಸಲೂ ಆಸ್ಪದ ನೀಡಬಲ್ಲದು.

ಕನ್ನಡದ ಮಹಿಳಾ ಕಾವ್ಯದಲ್ಲಿ ಸತ್ವಯುತತೆ ಮತ್ತು ಜೀವಾಂಶದ ಹೆಚ್ಚಳ ಕಾಣುವುದು ಹೀಗೆ ಅಮ್ಮ ಸಂಸ್ಕೃತಿಗೆ ಒಲಿದ ಕಾವ್ಯದಲ್ಲಿಯೇ .ಇದಕ್ಕೆ ಭಿನ್ನವಾಗಿ ಬಾಹ್ಯವಾದ ವೈಚಾರಿಕತೆ ತಾತ್ವಿಕತೆಯೇ ಕಾವ್ಯವಾಗಬಲ್ಲದು ಎಂದೇ ಇಂದಿಗೂ ಬರೆಯುವವರಲ್ಲಿ ಕಾವ್ಯಾಂಶವು ಬರಡಾಗುತ್ತಾ ಹೋದದ್ದು ಕಾಣುತ್ತದೆ. ಹೀಗೆಂದಾಗ ಎಲ್ಲರಿಗೂ ಅಮ್ಮನ ಸಂಸ್ಕೃತಿಯ ಸಂಹಿತೆಯೊಂದನ್ನು ಇಲ್ಲಿ ಉಪದೇಶಿಸುತ್ತಿಲ್ಲ. ಅದೇರೀತಿ ಹೊಸ ಕಾವ್ಯಸಾಧ್ಯತೆಗಳ ಬಗೆಗೆ ನಿರಾಶೆಯನ್ನೂ ಸೂಚಿಸುತ್ತಿಲ್ಲ. ಬದಲಾಗಿ ನಮ್ಮ ಕಾವ್ಯದ ಗೆಲುವು ಮತ್ತು ಸೋಲುಗಳ ಕಾರಣಗಳ ಬಗ್ಗೆ ಯೋಚಿಸಬೇಕಾದ ಈ ಸಂದರ್ಭಕ್ಕೆ ಒಂದು ವಿವೇಚನೆಗೆ ಇಲ್ಲಿ ಯತ್ನಿಸಿದೆ.
 


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT