ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಕಾವ್ಯದೊಳಗಿನ ಸಂವಾದದ ನೆಲೆಗಳು

ಬೊಗಸೆಯಲ್ಲಿ ಹೊಳೆ ನೀರು
Last Updated 5 ಜನವರಿ 2013, 19:59 IST
ಅಕ್ಷರ ಗಾತ್ರ

ಆಧುನಿಕ ಕನ್ನಡ ಮಹಿಳಾ ಕಾವ್ಯದಲ್ಲಿ ಇದುವರೆಗೆ ತನ್ನ ಒಳಗೇ ಅದುಮಿಟ್ಟ ಅನುಭವದ ಅಭಿವ್ಯಕ್ತಿಗೆ  ಕವಿಗಳು
`ಸ್ವಗತ'ದ ರಂಗತಂತ್ರವನ್ನು ಹೆಚ್ಚಾಗಿ ಬಳಸಿಕೊಳ್ಳುತ್ತಿರುವುದು ಕಾಣುತ್ತದೆ. `ಸ್ವಗತ' (ಶೈಲಜಾ ಉಡಚಣ), `ದ್ರೌಪದಿಯ ಸ್ವಗತ' (ಸರಸ್ವತಿ ಗೌಡ), `ಅಮೃತಮತಿ ಸ್ವಗತ' (ಎಚ್.ಎಲ್.  ಪುಷ್ಪ)... ಇತ್ಯಾದಿ ಹೆಸರಿನಡಿ ಕವನ ಸಂಕಲನಗಳೇ ಬಂದಿರುತ್ತವೆ.

ನಾಟಕಗಳಲ್ಲಿ ಪಾತ್ರವೊಂದು ತನ್ನಷ್ಟಕ್ಕೇ ಆಡುವ ಮಾತು, ತನ್ನ ವಿಚಾರಗಳನ್ನು ಗಟ್ಟಿಯಾಗಿ ಅಭಿವ್ಯಕ್ತಿಸಲು ಅಥವಾ ಮತ್ತೊಂದು ಪಾತ್ರಕ್ಕೆ ಇಲ್ಲವೇ ಪ್ರೇಕ್ಷಕರಿಗೆ ನೇರವಾಗಿ ಹೇಳಲು ಉದ್ದೇಶಿಸಿದ ಮಾತುಗಳೂ ಆಗಿರಬಹುದು. ಮಹಿಳೆಯರು ಕಾವ್ಯದೊಳಗೆ ಒಂದು ಸಂವಾದವನ್ನು ಬೆಳೆಸಲು ಹೀಗೆ ಸ್ವಗತದ ವಿಧಾನವನ್ನು ದೊಡ್ಡ ಪ್ರಮಾಣದಲ್ಲಿ ಏಕೆ ಆರಿಸಿಕೊಳ್ಳುತ್ತಾರೆ? ಹೀಗೆ `ಸ್ವಗತ' ತಂತ್ರವನ್ನು ಮತ್ತೆ ಮತ್ತೆ ಆರಿಸಿಕೊಳ್ಳುತ್ತಿದ್ದರೆ ಅದಕ್ಕೆ  ಕಾವ್ಯದ ಹೊರಗೂ ಸಾಂಸ್ಕೃತಿಕ ಬೇರುಗಳಲ್ಲಿ ಕಾರಣಗಳಿರಬೇಕು.

ನನಗೆ ಹೀಗೆ ಅನ್ನಿಸುತ್ತದೆ: ಮೌನದಿಂದ ಈಗಷ್ಟೆ ಹೊರಬಂದು  ತಾನೇ ಮಾತಾಡಲು ಹೊರಟವಳಿಗೆ ಹಿಂದಿನಿಂದಲೂ `ಬಾಯಿ ಮುಚ್ಚು'  ಎನ್ನುತ್ತಲೇ ಬಂದ ವ್ಯವಸ್ಥೆಯು ತನ್ನ ಮಾತನ್ನು ಆಲಿಸಬಲ್ಲುದೇ ಎನ್ನುವ ಅಳುಕು, ಅನುಮಾನ ಸಹಜ. ತನ್ನ ಮಾತನ್ನು ಆಲಿಸುವ ಪ್ರತಿಕ್ರಿಯಿಸುವ ಕೇಳುಗರು ಯಾರು ಎನ್ನುವುದು ಇಲ್ಲಿ ಅಸ್ಪಷ್ಟವಾದದ್ದು. ವ್ಯಕ್ತಿ-ವ್ಯಕ್ತಿಯ ನೇರವಾದ ಮುಖಾಮುಖಿ ಸಂವಾದದ ಜಾಗ ಇನ್ನೂ ಅವಳಿಗೆ ಸಿಕಿಲ್ಲ. ಈ ಸ್ಥಿತಿಯಲ್ಲಿ ಹುಟ್ಟುವ  ಅನಾಥತೆ, ಅಸ್ಥಿರತೆಯ ಭಾವನೆಗಳನ್ನು ಹೇಗಾದರೂ ಮೀರಲೇಬೇಕಿದೆ. ಆದ್ದರಿಂದ ತನ್ನಷ್ಟಕ್ಕೆ ತಾನೇ ಆದರೂ ತನ್ನೊಳಗೆ ಕಟ್ಟಿಟ್ಟುಕೊಂಡಿದ್ದ ತನ್ನ ನಿಜಗಳನ್ನು ಹೊರಹಾಕಲು `ಸ್ವಗತ'ದ ದಾರಿಯನ್ನು ಹೆಣ್ಣು ಆಯ್ದುಕೊಳ್ಳುತ್ತಾಳೆ ಎನ್ನಬಹುದು.

ಬಿಡಿ ಕವನಗಳಲ್ಲಿ ಈಗಲೂ ಈ ತಂತ್ರವನ್ನು ಕವಿಗಳು ಬಳಸುತ್ತಿರುವುದಕ್ಕೆ ದೀಪ್ತಿ ಭದ್ರಾವತಿ ಅವರ `ಅಹಲ್ಯೆಯ ಸ್ವಗತ' ಎಂಬ ಕವನವನ್ನು ನೋಡಬಹುದು:

` ನೀನು ಶಂಕಿಸಿ ಪ್ರಶ್ನಿಸಿದ್ದು
ಬರೀ ನಿನ್ನ ಸತಿಯನ್ನಲ್ಲ.
ಇಡೀ ಸ್ತ್ರೀ ಕುಲವನ್ನು.
ದಹಿಸಿದ್ದು ನಂಬಿಕೆ ನಿರೀಕ್ಷೆಗಳನ್ನು
ಆಸೆ ಆಕಾಂಕ್ಷೆಗಳ ಧರೆಯನ್ನು

ಛೇ... ನೀನು ನನ್ನ
ಸ್ಪರ್ಶಿಸಲೇಬಾರದಿತ್ತು
ನಿನ್ನ ಅನುಮಾನದ ಮುಖದರ್ಶನ
ನನಗೆ ಬೇಡವಾಗಿತ್ತು'
(`ಅಹಲ್ಯೆಯ ಸ್ವಗತ'/ಕಾಗದದ ಕುದುರೆ/ದೀಪ್ತಿ ಭದ್ರಾವತಿ/2011.)

ಮೌನದ ಬಿಗಿತದ ಕಟ್ಟುಗಳನ್ನು ಮೀರುವ ಈ ಯತ್ನ ಕಾವ್ಯರೂಪ ಪಡೆದಾಗ ಅದು ಅಂತಿಮವಾಗಿ ತಲುಪಬೇಕಾದದ್ದು ಓದುಗರ ಸಮುದಾಯವನ್ನು. ಈ ಸಮುದಾಯವು ತಾನು ಬದುಕಬೇಕಾಗಿರುವ ಸಮಾಜದ್ದೇ. ಅದೇ ಸಮಾಜಕ್ಕೆ ಅದರ ಹುಳುಕುಗಳನ್ನು ಅಥವಾ ಅದರ ಕ್ರೂರಮುಖಗಳನ್ನು, ತನ್ನ ಒಳ ಕುದಿತ, ಅಸಹನೆ, ಸಂಕಟಗಳನ್ನು, ಇದಾವುದೂ ಅಲ್ಲದಿದ್ದಲ್ಲಿ ಬದುಕನ್ನು ತಾನು ಹೇಗೆ ಭಾವಿಸುತ್ತೇನೆ  ಎನ್ನುವುದನ್ನೇ ಇರಲಿ, ಹೇಳಬೇಕಾಗಿರುವಾಗ ತನ್ನ ಸುತ್ತಲೂ ಕಾವಲು ಕೂತ ವ್ಯವಸ್ಥೆಯ ಕಣ್ಣುಗಳ ಕುಹಕ ಮತ್ತು ನಾಲಿಗೆಗಳ ಚಾವಟಿಯಿಂದ ತನ್ನನ್ನು ಕಾಯ್ದುಕೊಳ್ಳಲಿಕ್ಕೆ `ಸ್ವಗತ' ದ ಹಾದಿ ಒಂದು ರಕ್ಷಣಾತಂತ್ರ ಕೂಡ ಆಗಿರಬಹುದು.

ಕಾವ್ಯವೇ ಅತ್ಯಂತ ಏಕಾಂತಿಕ ಸೃಷ್ಟಿ. ಹಾಗಿರುವಾಗ ಅದಕ್ಕೂ 'ಸ್ವಗತ'ವು ಅನಿವಾರ್ಯ ಅನ್ನಿಸಿದ್ದರೆ ಒಬ್ಬರೂ ಕೇಳುಗರಿಲ್ಲ ಎನ್ನುವುದನ್ನೂ ಅದು ಹೇಳುತ್ತದೆಯಲ್ಲವೆ?. `ಊರ್ಧ್ವಬಾಹುರ್ವಿರೌಮ್ಯೇಷ ನ ಚ ಕಶ್ಚಿಛ್ಛೃಣೋತಿ  ಮೇ' (ಎರಡೂ ಕೈಯೆತ್ತಿ ಕೂಗಿಕೊಳ್ಳುತ್ತಿದ್ದೇನೆ/ಯಾವೊಬ್ಬನೂ ನನ್ನ ಮಾತನ್ನು ಕೇಳುತ್ತಿಲ್ಲ!) ಎನ್ನುವಾಗ ವ್ಯಾಸನೂ ಇಂಥದೇ ಸ್ಥಿತಿಯನ್ನು ಅನುಭವಿಸಿರಬೇಕಲ್ಲವೆ? ಒಂದು ಅರ್ಥದಲ್ಲಿ ಈಕೆಗೆ ಮೌನದ ಲೋಕದ ಗಡಿ ದಾಟುವಿಕೆಯೆಲ್ಲವೂ ಮೊದಲು ಸ್ವಗತವೇ ಆಗಿ ಆಮೇಲೆ ಮತ್ತೊಬ್ಬ ವ್ಯಕ್ತಿಯನ್ನು ಸಂಬೋಧಿಸುವ ಸಂವಾದವಾಗಿ ಬೆಳೆಯತ್ತದೆ.

ಇಡೀ ಸಮುದಾಯದ ಗಮನ ಸೆಳೆಯುವಂಥ ಸ್ವಗತವೆಂಬ ನಾಟ್ಯಕ್ರಮದ ಬಳಕೆಗೆ ಮಹಿಳಾಕಾವ್ಯದೊಳಗೆ ಬೇರೊಂದು ಸಾಂಸ್ಕೃತಿಕ ಕಾರಣವೂ ಇರುತ್ತದೆ. ಪಿತೃ ಸಂಸ್ಕೃತಿ ನಿಂತಿರುವುದೇ ಹೆಣ್ಣಿನ ಲೈಂಗಿಕನಿಷ್ಠೆಯ ತಳಪಾಯದಮೇಲೆ. ಗತಕಾಲದಲ್ಲಿ ಯಾರೆಲ್ಲ ಮಹಿಳೆಯರು ಇಂಥ ನಿಷ್ಠೆಯ ಮಾದರಿಯನ್ನು ಛೇದಿಸಿದ್ದಾರೋ ಅವರನ್ನು ಪಿತೃಸಂಸ್ಕೃತಿಯ ಪರಂಪರೆ ಕೀಳಾಗಿಸಿ, ನಿಕೃಷ್ಟವಾಗಿಯೇ ಚಿತ್ರಿಸಿರುತ್ತದೆ. ಹಾಗೆಯೇ ಈ ನಿಷ್ಠೆಯನ್ನು ಪಾಲಿಸಿ ಮೆರೆದವರನ್ನು ಉಜ್ವಲ ಸ್ತ್ರೀಮಾದರಿಗಳೆಂದು ಕೊಂಡಾಡಿಯೂ ಇರುತ್ತದೆ. ಇಂಥ ದ್ವಿಮುಖ ಚಿತ್ರಣದ ಹಿಂದಿರುವ ಲಿಂಗರಾಜಕಾರಣವನ್ನು ಬಯಲಿಗೆಳೆಯಲು ಆ ಪುರಾಣ ಪ್ರತೀಕಗಳನ್ನು ವರ್ತಮಾನಕ್ಕೆ ತಂದು ಅವರೊಳಗೆ ಒಬ್ಬ ಇಂದಿನ ಹೆಣ್ಣನ್ನು ಇರಿಸಿ ಮಾತನಾಡಿಸುವುದು ಕಾವ್ಯದೊಳಗೆ ಪುರಾಣ ಭಂಜನೆಯ ಒಂದು ವಿಧಾನವೂ ಆಗುತ್ತದೆ. ವಾಸ್ತವದಲ್ಲಿ ಇಲ್ಲಿ ಹೀಗೆ ತನ್ನಷ್ಟಕ್ಕೇ ಮಾತನಾಡುವ ಕಾವ್ಯದ ಕೇಂದ್ರವ್ಯಕ್ತಿ ಕವಿಯದೇ ವಿಚಾರಗಳಿಗೆ ಮುಖವಾಣಿ ಆಗಿರುತ್ತಾಳೆ.

ಮಹಿಳಾ ಕವಿಗಳು ನಾಟಕದ ಸ್ವಗತ ತಂತ್ರವನ್ನು ಕಾವ್ಯಕ್ಕೆ ಈ ವಿಶಿಷ್ಟ ಉದ್ದೇಶಕ್ಕಾಗಿ ತಂದಿರುವಂತೆಯೇ ವ್ಯವಸ್ಥೆಯೊಳಗಿನ, ಸ್ಥಾಪಿತ ಲಿಂಗಮಾದರಿಗಳನ್ನು `ಅವನು' ಮತ್ತು `ಅವಳು' ಎಂಬ ಎರಡು ಪಾತ್ರಗಳಂತೆ ಚರ್ಚಿಸುತ್ತಾರೆ ಎನ್ನುವುದು  ಕುತೂಹಲಕರ ಅಂಶ. ಈ ಪಾತ್ರಗಳು ಹೆಣ್ಣಿನದೇ ಬದುಕಿನ ನಿಕಟ ಸಂಬಂಧಗಳಿಂದ ಹುಟ್ಟುವುದಷ್ಟೇ ಅಲ್ಲ, ಆ ಬದುಕಿಗೆ ತಳಪಾಯ ಒದಗಿಸಿರುವ ಪಿತೃಸಂಸ್ಕೃತಿಯ ಮುಖವಾಗಿಯೂ ಬಂದು ಕಾವ್ಯದೊಳಗೆ ಕಾಣಿಸಿಕೊಳ್ಳುತ್ತವೆ. ಮೊದಲಿಗೆ 'ಅವನು' ಎಂಬ ಪಾತ್ರವನ್ನು ನೋಡಬಹುದು.

`ಅವನು' ಎನ್ನುವುದು ಒಬ್ಬ ತಂದೆ, ಮಗ ಕೂಡ ಆಗಿದ್ದರೂ ಹೆಚ್ಚಾಗಿ ಕಾಣಿಸಿಕೊಂಡಿರುವುದು ಒಬ್ಬ ಗಂಡ, ಪ್ರಿಯತಮ  ಅಥವಾ ಬಾಳ ಸಂಗಾತಿಯಾಗಿ. ಈ ವ್ಯಕ್ತಿಯು ಮೂರ್ತರೂಪದಲ್ಲಿ ತನ್ನೊಂದಿಗೆ ಬದುಕುವವನಾಗಿರಲಿ, ಅಥವಾ ಸಮಷ್ಟಿಯೊಳಗಿನ ಗಂಡಿನ ಅಮೂರ್ತ ಗ್ರಹಿಕೆಯೆ ಆಗಿರಲಿ, `ಅವನು' ಯಜಮಾನನಾಗಿ ಉಳಿಯದೆ ಗೆಳೆಯ ಅಥವಾ ಸಖನೇ ಆಗಲಿ ಎನ್ನುವ ಒಂದು ಗಾಢವಾದ  ಹಂಬಲ, ನಿರೀಕ್ಷೆ ಮತ್ತು ಹಾಗೆ ಆಗದಂಥ ವಾಸ್ತವದ ಇರುವಿಕೆಗಳೂ ಸಾಮಾನ್ಯವಾಗಿ ಈ ಎಲ್ಲ ಕವಿಗಳ ಅಭಿವ್ಯಕ್ತಿಯಲ್ಲೂ ಕಾಣಲು ಸಿಗಬಲ್ಲದು. ಹೀಗಾಗಿ ಕಾವ್ಯದೊಳಗಿನ `ಅವನು' ಎನ್ನುವ ಪಾತ್ರ ಒಂದೋ ಯಜಮಾನ/ಪತಿದೇವರು ಇಲ್ಲವೇ  ಪ್ರೇಮದ ಸಖನ ಬಗೆಗಿನ ರಮ್ಯಹಂಬಲದ ಮೂರ್ತರೂಪ ಅಥವಾ ಇಡೀ ಸಮುದಾಯದೊಳಗಿನ `ಅವನ'ನ್ನು ಪ್ರತಿನಿಧಿಸುವಂಥ `ಗೆಳೆಯ' ಆಗಿ ಕಾಣಿಸಿಕೊಳ್ಳುತ್ತಾನೆ.

ಎಂ. ಉಷಾ ಅವರು ಒಂದು ಚರ್ಚೆಯಲ್ಲಿ ಪ್ರಸ್ತಾಪಿಸಿದ ಪ್ರಕಾರ,  `ಈ `ಅವನು' ಯಾವುದೇ ಸಂಬಂಧದ ಒಳಗೆ ಇಲ್ಲದಿರುವಾಗ ಲೇಖಕಿಯರ ಕಾವ್ಯದೊಳಗೆ ಒಬ್ಬ ಅಪೇಕ್ಷಣೀಯ, ಸಹನೀಯ ಅಥವಾ ಮಧುರತೆಯನ್ನು ಹುಟ್ಟಿಸುವ ಮನುಷ್ಯನಾಗಿ ತೋರಬಲ್ಲ. ಆದರೆ ಅದೇ `ಅವನು' ತಂದೆ, ಮಗ, ಪತಿ ಇತ್ಯಾದಿ ಸ್ಥಾಪಿತ ಸಂಬಂಧಗಳಲ್ಲಿ ಸಿಕ್ಕರೆ ಹಲವು ತಳಮಳ  ಸಂಕಟ, ನೋವು, ಅಸಹನೆಗಳ ಕಾರಣವಾಗುತ್ತಾನೆ'. ಅಂದರೆ ಮಹಿಳಾ ಕಾವ್ಯದೊಳಗೆ ಎರಡು ಗಂಡಿನ ಮಾದರಿಗಳನ್ನು ಉಷಾ ಗುರುತಿಸುತ್ತಾರೆ.  

ಆದರೆ  `ಅವನು' ಎನ್ನುವಾತ ಒಬ್ಬ ಆಪ್ತಮಿತ್ರ ಇಲ್ಲವೇ ಲೈಂಗಿಕೇತರವಾದ ನಿರ್ವ್ಯಾಜನೆಲೆಯ ಸ್ನೇಹಿತನೂ ಆಗಿರುವುದು ಸಾಧ್ಯ ಎನ್ನುವುದನ್ನು ಕವಿಗಳು ಚಿಂತಿಸಿದ್ದೇ ಇಲ್ಲ ಎನ್ನುವಷ್ಟು ಮಟ್ಟಿಗೆ ಆ ಪರಿಗ್ರಹಿಕೆ ಗೈರು ಹಾಜರಾಗಿದೆ. ಇದು ಕುತೂಹಲಕಾರಿ. ಸದಾ ಲೈಂಗಿಕ ಭೋಗದ ವಸ್ತುವೇ ಆಗಿ ಗೃಹೀತವಾಗುವ ಪರಿಸರದಲ್ಲಿ ಹೆಣ್ಣು ತನ್ನ ದೇಹ. ಮನಸ್ಸುಗಳ ಎಲ್ಲಾ ಮುಟ್ಟು-ತಟ್ಟುಗಳೂ ಕಾಮದ ಭಾವದಿಂದಲೇ ಹುಟ್ಟುತ್ತಿರುತ್ತವೆಯೆಂದು ಮುಜುಗರ ಹಿಂಸೆ ಪಟ್ಟುಕೊಳ್ಳುವುದು ನಮ್ಮ ಸಾಮಾನ್ಯ ಅನುಭವ. ಲಿಂಗದ ಭಾವವಿರದ ಗಾಢ ಸ್ನೇಹಗಳು ಈ ಲೋಕದಲ್ಲಿ ಹುಟ್ಟಲಾರವು ಎನ್ನುವುದು ಈ ಪರಿಸರದಲ್ಲಿ ಮಹಿಳೆಯರ ಅನುಭವವೆ?

ಇಂಥದೊಂದು ಲಿಂಗಾತೀತವಾದ ಹೆಣ್ಣು-ಗಂಡಿನ ಸಂಬಂಧದ  ಸಾಧ್ಯತೆಯೇ  ಅತ್ಯಂತ ಸೂಕ್ಷ್ಮ ಭಾವಗಳನ್ನೂ ಅಭಿವ್ಯಕ್ತಿಸಬಲ್ಲ ಪ್ರಕಾರವಾದ ಕಾವ್ಯದಲ್ಲಿ ಸ್ತ್ರೀಯರಿಗೆ ದಕ್ಕಿಲ್ಲ ಎನ್ನಬೇಕೆ? ಸಮವಯಸ್ಕರಾದ ಗಂಡಸರು, ಹೆಂಗಸರೂ ತಮ್ಮಳಗೆ ಬೆಳೆಸಿಕೊಳ್ಳುವ ರೀತಿಯ ಸಹಜ, ಮುಕ್ತ ಸ್ನೇಹದ ರೀತಿಯ ಸ್ನೇಹವನ್ನು ಅವರು ಅನ್ಯಲಿಂಗದವರೊಂದಿಗೆ ಹೊಂದುವುದು ಅಸಾಧ್ಯ ಎನ್ನುವುದೇ ನಮ್ಮ ಸಾಂಸ್ಕೃತಿಕ ನಿಜವೆ? ಅಥವಾ ಹಾಗೊಮ್ಮೆ ಅಂಥ ನಿರ್ಮಲ ಭಾವನೆಯೊಂದು ಹುಟ್ಟಿದರೂ ಅದು ಕೇವಲ ಸಂಚಾರೀ ಭಾವವಾಗಿದ್ದು ಬಹುಬೇಗ ಸಿದ್ಧ ಪಾತಳಿಯೊಂದಕ್ಕೇ ಹರಿದು ಬಿಡುತ್ತದೆಯೆ?

ಇಲ್ಲಿ ಈ ಸಂದರ್ಭಕ್ಕೆ ಎರಡು ನಿದರ್ಶನಗಳನ್ನು ನೀಡಬಯಸುತ್ತೇನೆ;  ಮೊದಲನೆಯದು ಲಲಿತಾ ಸಿದ್ಧಬಸವಯ್ಯ ಅವರ `ಲೇಪಾಕ್ಷಿ' ಕವಿತೆ. ಲೇಪಾಕ್ಷಿಯ ಗುಡಿಯಲ್ಲಿ ಕಂಡ ಅಪರೂಪದ ಪುರುಷಮೂರ್ತಿಯೊಂದರ ವರ್ಣನೆ ಕವಿತೆಯ ಆರಂಭದಲ್ಲಿ ಬರುತ್ತದೆ:

`ಹೆಮ್ಮರ'
ದಿಂದಿಳಿದ ಶಾಖೆಗಳಿವು ನೀಳದೋಳು
ಹಾಸುಬಂಡೆಯ ಗಡಸು ಎದೆ ಬೆನ್ನು ಹರಹು
ತೆಗೆದೊಗೆದೆನೆನ್ನುವ ನಡುವಿಗೆ ಬಿಗಿದ
ವಸ್ತ್ರನಿರಿಗೆಯಲೆ ಅಲೆಯಲ್ಲಿ ಮಸೆವ ತೊಡೆತಟ್ಟು
ಗಂಡುಪಾದಕ್ಕೊಲಿದ ಮೇಖಲೆಯೆ ಮುತ್ತುಸರ
ಚೆದುರಿ ಚೆಲ್ಲಾಪಿಲ್ಲಿ; ದಿಟ್ಟ ಹೆಜ್ಜೆಮೆಟ್ಟು.
ಇಲ್ಲಿರದ ಅಂದ
ಜಗತ್ತಿನಲ್ಲಿನ್ನ್ಯಾವ ಗಂಡುಗೊಂಬೆಗೂ ಇಲ್ಲ
.....................
ಕವನ ಮುಂದುವರೆದಂತೆ ಅಂಥದೇ ವ್ಯಕ್ತಿಯನ್ನು ಎದುರಿಗೇ ಕಂಡು ನಿರೂಪಕಿ
`ಲೇಪಾಕ್ಷಿ ಶಿಲ್ಪ/ಚಲನೆಯೊಂದಿಗೆ ಜೀವವೂ ಬೆಸೆದು ಎದ್ದುಬಂದಂಥ ರೂಪ'ವನ್ನು ತಿರುತಿರುಗಿ ನೋದಿದಾಗ ಮುದುರಿದಂತಾದ ಆ ತರುಣ
`ನಿಂತಲ್ಲೆ ಮಿಸುಗಾಡಿದ; ದೃಷ್ಟಿ ತಪ್ಪಿಸಲು ತೊನೆದಾಡಿದ
ವನ ಮೆಲ್ಲಗೆ ಕರೆದು ಅವನ ಬಿಲ್ಲನ್ನೂ ನಾನೇ ಪಡೆದು
ಕಣ್ಣಲ್ಲೇ ತೆಗೆದು ನಿಟಿಗೆ
ಹೇಳಿದೆ
ನಾಚಬೇಡವೋ ಮರಿ
ನನಗೆ ನಿನ್ನಂಥ ಮೊಮ್ಮಗನಾಗಲಿ (ಲೇಪಾಕ್ಷಿ/ಇಹದ ಸ್ವರ/ಲಲಿತಾ ಸಿದ್ದಬಸವಯ್ಯ/2002)
ತುಂಬ ಚದುರೆ-ತನದಿಂದ ಕವಿ ಆ ಸನ್ನಿವೇಶವನ್ನು ಕವಿತೆಯಲ್ಲಿ ನಿರ್ವಹಿಸುವ ಬಗೆಯಿದು.

ನಾನು ನೀಡಬಯಸುವ ಇನ್ನೊಂದು ಉದಾಹರಣೆ ಕಾವ್ಯದ್ದಲ್ಲ. ಇದು ತ್ರಿವೇಣಿಯವರ ಒಂದು ಸಣ್ಣ ಕಥೆಯದು. ಆ ಕಥೆಯಲ್ಲಿ ಗಂಡನ ಗೆಳೆಯನೊಬ್ಬನ ಹಣೆಯ ಮೇಲಿನ ಬೆವರನ್ನು ಗಂಡನ ಎದುರಿನಲ್ಲೇ ತನ್ನ ಸೆರಗಿನಿಂದ ಒರೆಸಿದ್ದ ಅವಳ ವರ್ತನೆಯಿಂದಾಗಿ ಕಥಾ ನಾಯಕಿಯೊಳಗೆ ಗೊಂದಲ ಶುರುವಾಗುತ್ತದೆ. ತನ್ನ ಈ ಆತ್ಮೀಯತೆ, ಸ್ನೇಹಭಾವವನ್ನು ಹೇಗೆ ತೆಗೆದುಕೊಳ್ಳಬೇಕು ಎನ್ನುವುದು ಅರ್ಥವಾಗದೆ ಅವಳ ಮನಸ್ಸು ಒ್ದ್ದದಾಡುತ್ತದೆ. ಗೆಳೆಯ ಮತ್ತು ಗಂಡನ ಜೊತೆಗಿನ ವರ್ತನೆಗಳಲ್ಲಿ ತಾನೇ ಅಸಹಜವಾಗುತ್ತಿದ್ದೇನೆಂದು ಆಕೆ ತಳಮಳಿಸುತ್ತಾಳೆ.

ಕಥೆಯ ಕೊನೆಗೆ  ಚಿಕ್ಕ ಬಾಲಕನೊಬ್ಬನ ಹಣೆಯ ಬೆವರನ್ನು ಇದೇ ರೀತಿ ಅವಳು ತನ್ನ ಸೆರಗಿನಿಂದಲೇ ಒರೆಸಿದಾಗ ಎಲ್ಲಾ ಸಂದೇಹ ತಳಮಳ ಕೊನೆಗೊಳ್ಳುತ್ತದೆ. ಗೆಳೆಯನ ಬಗೆಗಿದ್ದ ತನ್ನ ಭಾವನೆ ವಾತ್ಸಲ್ಯದ್ದು ಎನ್ನುವುದೇ ಇಲ್ಲಿಯ ಸಮಸ್ಯೆಯ ಪರಿಹಾರವೂ ಆಗುತ್ತದೆ. ಈ ಎರಡೂ ಮಾದರಿಗಳಲ್ಲಿ ನಾನು ಮೊದಲು ಪ್ರಸ್ತಾಪಿಸಿದಂತೆ ಗೆಳೆತನದ ಅನಿಶ್ಚಿತ ಭಾವಕ್ಕೆ ಲೇಖಕಿಯರು ನಮ್ಮ ಪರಿಸರವೇ ಹೆಣ್ಣಿಗೆ ಕೊಟ್ಟಿರುವ `ಸಾಧ್ಯ ಸಂಬಂಧಗಳಲ್ಲಿಯೇ' ಅರ್ಥವನ್ನು ಕಂಡುಕೊಳ್ಳುವ ಬಗೆಯನ್ನು ಗ್ರಹಿಸಬಹುದು. ಅಂದರೆ ಎಮ್.ಉಷಾ ಅವರ ವಿಚಾರಕ್ಕೆ ತದ್ವಿರುದ್ಧ ಜಾಗದಲ್ಲಿ ನಾವೀಗ ಇದ್ದೇವೆ.

ಇದನ್ನು `ಅವನು' ಎಂಬ ಮಗ್ಗುಲಿನಿಂದಲೂ ನೋಡಬಹುದು. 'ಗೆಳೆಯನಿಗೆ' ಎಂದು ಮುಕ್ತವಾಗಿ ಗಾಢಸ್ನೇಹವನ್ನು ಕಾವ್ಯದಲ್ಲಿ ಕಟ್ಟಬಲ್ಲ ಕವಿಯೊಬ್ಬನು ಹೆಣ್ಣಿನ ಸಂದರ್ಭಕ್ಕೆ ಬಂದ ಕೂಡಲೇ `ತಂಗಿ ಗೌರಮ್ಮನಿಗೆ', `ತಂಗಿ ಜಾನಕಿಗೆ' ಎಂದೋ ಪ್ರೀತಿಯನ್ನು ಹರಿಸುತ್ತಾನೆ. ಅಥವಾ `ಹಿರಿಯಕ್ಕ ವೈದೇಹಿಗೆ', 'ಹಿರಿಯ- ಕಿರಿಯ ಸಹೋದರಿಗೆ' ಮುಂತಾಗಿ ಕೌಟುಂಬಿಕವಾಗಿ, ಅದೂ ರಕ್ತ ಸಂಬಂಧದಿಂದಲೇ ಮಾನ್ಯವಾಗುವ ಮತ್ತು ನೈತಿಕವಾಗಿ ಅಗಮ್ಯಗಮನದ್ದು ಆಗಿರದಂಥ ಸಂಬಂಧದಲ್ಲಿ ತನ್ನ ಮತ್ತು ಆಕೆಯ ಜಾಗಗಳನ್ನು ಇರಿಸಿ ಕ್ಷೇಮವಾಗಿ ಉಸಿರಾಡುತ್ತಾನಲ್ಲವೆ?

`ಅಮ್ಮ', `ಅಕ್ಕ' `ತಂಗಿ' 'ತಾಯಿ' `ಅಜ್ಜಿ'ಎನ್ನುವುದೇ  ಸಭ್ಯತೆಯ ಗೌರವದ ಲಕ್ಷಣ ಅನ್ನಿಸಿಕೊಳ್ಳುವ ಈ ಪರಿಸರದಲ್ಲಿ ಇದ್ಯಾವುದೂ ಅಲ್ಲದ ಹೆಂಗಸು ಎಂದರೆ ಹೆದರಬೇಕಾದ ಲೈಂಗಿಕಲೇಖ್ಯವನ್ನು ಧರಿಸಿಕೊಂಡೇ ಇರುವ  ವಸ್ತುವೆಂದೇ ಅರ್ಥೈಸಲ್ಪಡುತ್ತಾಳೆ. ಸುಮ್ಮನೆ ಸ್ನೇಹಿತಳಂತೆ ಏಕೆ ಗಂಡಸಿಗೆ ಸ್ತ್ರೀಯನ್ನು ಕಾಣಲು ಆಗುವುದಿಲ್ಲ ಎಂದರೆ ಅಂಥ `ಸಾಂಸ್ಕೃತಿಕ ಸ್ಪೇಸ್' ಒಂದು ನಮ್ಮ ಸಂಸ್ಕೃತಿಯಲ್ಲಿ ಇರುವುದಿಲ್ಲ ಎಂಬುದೂ ಕಾರಣ. ಕಾಮದ ಪ್ರಾಕೃತಿಕ ವಿಜೃಂಭಣೆಯನ್ನು ನೈತಿಕವಾಗಿ ಹಿಡಿತದಲ್ಲಿಟ್ಟುಕೊಳ್ಳುವುದು ಉತ್ತಮ ಹಾಗೂ ಆರೋಗ್ಯಕರ ಸುಸಂಸ್ಕೃತಿಯ ಲಕ್ಷಣ ಎಂಬುದು ತಾತ್ವಿಕವಾಗಿ ಸರಿಯಿರಬಹುದು. ಆದರೆ ಬದುಕಿನ ವಿಧಾನಗಳಲ್ಲಿ ಈ ತತ್ವ ಆಚರಣೆಯಲ್ಲಿ ಎಷ್ಟರ ಮಟ್ಟಿಗೆ ಎಟುಕುತ್ತದೆ?

ವೀರ ಕಾವ್ಯಗಳ ನಾಯಕರನ್ನು `ಪರನಾರೀ ಸಹೋದರ'ರೆಂದು ಕೊಂಡಾಡಿರುವುದೂ ಇದೇ ಸಂನೈತಿಕ ಮೌಲ್ಯದ್ದೇ ಒಂದು ವಿಧಾನ. ಆದರೆ ಪರನಾರಿ ಎಂದರೆ ಮತ್ತೊಬ್ಬನಿಗೆ ಸೇರಿರುವವಳು. ಅಷ್ಟೆ. ಯಾರೊಬ್ಬನ ವಶದಲ್ಲೂ ಇರದವಳನ್ನೂ ಹೇಗೆ ಕಾಣಬೇಕು ಎನ್ನುವುದನ್ನು  ಧರ್ಮ ಹೇಳುತ್ತದೆಯೆ? ಧರ್ಮಕ್ಕೆ ಹೊಂದುವ ರೀತಿಯಲ್ಲಿ ಅವಳನ್ನು ತನ್ನ ಆಶ್ರಯಕ್ಕೆ ತರಲು,  ಬಯಸಲು, ಕೂಡಲು ಯಾವ ಅಡ್ಡಿಯೂ ಇಲ್ಲ. ಹೀಗಾಗಿ ನೂರಾರು, ಸಾವಿರಾರು ಹೆಣ್ಣುಗಳಿಗೆ ಒಬ್ಬನೇ ಯಜಮಾನನೂ ಆಗಿ ಆಳುವ ಕೃಷ್ಣರ ಭರತೇಶರ ವೈಭವಗಳ ಕಲ್ಪನೆಯನ್ನು ಕವಿಗಳು ಬೃಹತ್ತಾಗಿ ಬೆಳೆಸಿರುವುದು. ಅಷ್ಟರ ಮಟ್ಟಿಗೆ ನಾಡಿನ  ಗಂಡಸರು ದುರ್ಬಲರೆಂದೂ ಅದೇ ಕಾವ್ಯಗಳು ಹೇಳುತ್ತಿಲ್ಲವೆ?

ಕೆಲವು ಕಾಲದ ಹಿಂದೆ ರಸ್ತೆಯಲ್ಲೋ ಸಿಟಿಬಸ್ಸುಗಳಲ್ಲೋ ಸಾರ್ವಜನಿಕ ಇಲ್ಲವೇ ದುಡಿಮೆಯ ಜಾಗಗಳಲ್ಲೋ ಗಂಡಸರು ತೋರುವ ಲೈಂಗಿಕ ದೌರ್ಜನ್ಯಗಳನ್ನು ಪ್ರತಿಭಟಿಸುವಾಗ ಸ್ತ್ರೀಯರು `ನಿನಗೇನು ತಾಯಿ, ಅಕ್ಕ,ತಂಗಿಯರು ಇಲ್ಲವೆ?' ಎನ್ನುವ ನೈತಿಕ ಪ್ರಶ್ನೆಯನ್ನು ಕೇಳುವುದು, ಪೋಲಿ ಹೀರೋತನದಿಂದ ಆ ಗಂಡುಗಳು `ಅವರೆಲ್ಲ ಇದ್ದಾರೆ, ನೀನೊಬ್ಬಳೇ ಇಲ್ಲ' ಎನ್ನುವ ಉದ್ಧಟತನ ತೋರುವುದನ್ನು ಚಲನಚಿತ್ರಗಳು ತೋರಿಸಿದರೆ ಜನ ನಗಾಡುತ್ತಾ ಇದ್ದರು. ತಮ್ಮದೇ ಸಾಂಸ್ಕೃತಿಕ ಟೊಳ್ಳುತನದ ಲಕ್ಷಣ ಕಂಡು ನಕ್ಕುಬಿಡುತ್ತಿದ್ದ ಆ ಸ್ಥಿತಿ ಇಂದು ಉಳಿದೇ ಇಲ್ಲ. ಭಯಂಕರ ಪಶುತ್ವದಿಂದ ನಿರ್ದಯವಾಗಿ ಹೆಣ್ಣನ್ನು ಅತ್ಯಾಚಾರದಿಂದ ಕೊಲ್ಲುತ್ತಿರುವ ವಿಕೃತಿಗೆ ಕಿಂಚಿತ್ತೂ ಅಪರಾಧೀ ಪ್ರಜ್ಞೆ ಇಲ್ಲ. ಧಾರ್ಮಿಕ  ನೈತಿಕ ಪಶ್ಚಾತ್ತಾಪದ ಭಾವನೆಯೂ ಕಾಡಿಸದ ಹಾಗೆ ನಮ್ಮಜನತೆಯನ್ನು ಇಂದಿನ ಮುಂಗಾಣದ ಸರಕು ಸಂಸ್ಕೃತಿ ಕೊಳೆಯಿಸುತ್ತಿದೆ. ಅದರ ಫಲವೆ ಇಂದು 61-23-10 ಎನ್ನುವ ಹೆಣ್ಣಿನ ವಯಸ್ಸು ಕೂಡ ಲೆಕ್ಕವಿಲ್ಲದೆ ಅದೊಂದು ಯೋನಿ ಅಂತ ಆದರೆ ಸಾಕು ಎನ್ನುವ ಪಶುತನಗಳ ನಿತ್ಯೋತ್ಸವಗಳು ಹೆಚ್ಚಿರುವುದು.  

ಮಹಿಳಾ ಕಾವ್ಯವು ಹೆಣ್ಣು ಗಂಡಿನ ನಡುವೆ ನಿಸ್ಪೃಹ ಸ್ನೇಹದ ಸಾಧ್ಯತೆಯ ಬಗ್ಗೆ ಮೌನ ವಹಿಸಿದ್ದಕ್ಕೆ ನಮ್ಮದು ವ್ಯಕ್ತಿವಾದಿಯಾದ ಸಂಸ್ಕೃತಿ ಆಗಿರದೆ ಸಾಮೂಹಿಕ ಸಾಪೇಕ್ಷತೆಯಲ್ಲಿ ನಂಬಿಕೆ ಇಟ್ಟ ಸಂಸ್ಕೃತಿಯಾಗಿರುವುದೂ ಒಂದು ಕಾರಣವಿದ್ದೀತು. ಬಿಡಿ ವ್ಯಕ್ತಿಗಳಾಗಿ ಹೆಣ್ಣು ಗಂಡಿನ ನಡುವೆ ಕಾಮವಾಗದ ಬೇರಾವ ಸಂಬಂಧದ ಅವಶ್ಯಕತೆಯಿಲ್ಲ ಎನ್ನುವಲ್ಲಿ ಮಹಿಳೆಯ ಸಾಂಸಾರಿಕ ಲೋಕ, ಕೊರತೆಯೇ ಇಲ್ಲದ ಬಹುರೂಪಿ ಸಂಬಂಧಗಳುಳ್ಳ ಸ್ವಯಂ ಪೂರ್ಣಲೋಕವಾಗಿರುತ್ತದೆ ಎನ್ನುವುದು ಸ್ತ್ರೀವಾದಿಗಳು ನೀಡುವ ಒಂದು ಉತ್ತರ.

ಎಂ.ಎಸ್. ಆಶಾದೇವಿ ಇದನ್ನು `ಮಗನ ಬಾಯಲ್ಲೇ ಜಗವನ್ನು ಕಾಣಬಲ್ಲ ಹೆಣ್ಣಿನ ನಿಜ' ಎನ್ನುತ್ತಾರೆ. ಇದು ಪಿತೃಸಂಸ್ಕೃತಿ ಒಳಗೆ ಹೆಣ್ಣು ಬಯಸಿ ಮೆಚ್ಚಿ ಪಾಲಿಸಿಕೊಳ್ಳುತ್ತಿರುವ ನಿಜವೂ ಹೌದೆ? ಇಂಥದೊಂದು ಲಿಂಗಾತೀತವಾದ ಹೆಣ್ಣು-ಗಂಡಿನ ಸಂಬಂಧದ ಸ್ನೇಹಕ್ಕೆ ಜಾಗ ಇಲ್ಲಿ ಹುಟ್ಟಿಲ್ಲ. ಆದ್ದರಿಂದಲೇ ತನ್ನ ಆನುಭಾವಿಕ ಸ್ಥಿತಿಯನ್ನೂ ಜನರೆದುರು ಇಡಲು ಅಕ್ಕನು 'ಗಂಡ'ನ ಹೆಸರನ್ನೇ ಹೇಳಿಕೊಂಡಳು. ಆದರೆ ನರನ ಮೃಗಶರೀರದ ಈ ಶಕ್ತಿಗೆ ಪರ್ಯಾಯವಾಗಿ ಮಹಿಳಾ ಕಾವ್ಯವು ಪೌರುಷದ ಅಹಮಿಕೆ ತೊರೆದು ಸ್ತ್ರೀತ್ವದ ಅಕ್ಕರೆಯ ಸತ್ವವನ್ನು ಬೆಳೆಸಿಕೊಳ್ಳಲು ಈ ಸಂಸ್ಕೃತಿಗೆ ಒತ್ತಾಯಿಸುತ್ತಿದೆ. ಎಲ್ಲರೊಳಗಿನ ಅಮ್ಮನನ್ನು ಹೊರಬರುವಂತೆ ಕರೆಯುತ್ತದೆ. ಈ ಜಾಗದಲ್ಲಿ ಕಾವ್ಯದೊಳಗಿರುವ `ಅವಳು' ಎನ್ನುವ ಪಾತ್ರವಿರುತ್ತದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT