ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಕಾವ್ಯದೊಳಗಿನ ಸಂವಾದದ ನೆಲೆಗಳು:2

ಬೊಗಸೆಯಲ್ಲಿ ಹೊಳೆ ನೀರು
Last Updated 2 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ಹಿಂದಿನ ಸಂಚಿಕೆಯಲ್ಲಿ ಸಂವಾದಕ್ಕೆ `ಅವನು' ಎಂಬ ಪಾತ್ರವನ್ನು ಮಹಿಳಾ ಕವಿಗಳು ಸೃಷ್ಟಿಸಿಕೊಳ್ಳುವ ಬಗೆಯನ್ನು ಪ್ರಸ್ತಾಪಿಸಿದ್ದೆ. ಈಗ `ಅವಳು' ಎನ್ನುವ ಪಾತ್ರದತ್ತ ನೋಡೋಣ. “ತನ್ನ ತಾ ಮರೆಯುವುದು ಸರಿಯಲ್ಲ ಎಂದನಾ ವಿದುರ” ಎನ್ನುತ್ತದೆ `ವಿದುರನೀತಿ'. ಆದರೆ ಪುರುಷನ ರಾಜಕೀಯದ ಇದೇ ನೀತಿ ಸ್ತ್ರೀಗೆ ಅನ್ವಯಿಸಲು ಬರುವುದಿಲ್ಲ. ಕುಟುಂಬದ ಇತರರ ಹಿತಕ್ಕಾಗಿ ತನ್ನನ್ನು ತಾನು ಸಂಪೂರ್ಣವಾಗಿ ಮರೆತುಕೊಂಡು ಲೀನವಾಗಿರುವುದು ಸ್ತ್ರೀಯಿಂದ ಅಪೇಕ್ಷಿಸಲಾಗುವ ರೀತಿ. ಅಂದರೆ ಒಂದೇ ಸಂಸ್ಕೃತಿಯೊಳಗೆ ಎರಡು ಬಗೆಯ ಧೋರಣೆಗಳಲ್ಲಿ `ಅವನು' ಮತ್ತು `ಅವಳು' ಬದುಕುತ್ತಾರೆ.

ಹಾಗಿದ್ದಾಗ ಅವರ ಅನುಭವಗಳು ಸಾರ್ವತ್ರಿಕವಾಗಿ ಒಂದೇ ಆಗಿಲ್ಲದಿದ್ದರೂ ಅವರು ಕಟ್ಟುವ ಕಾವ್ಯಕಲೆಯನ್ನು ಅಳೆಯಲು ಮಾತ್ರ ಅಳತೆಗೋಲುಗಳು ಒಂದೇ ಆಗಿರುತ್ತವೆಯೆ? ವಸ್ತುನಿಷ್ಠತೆಯ ಹೆಸರಿನಲ್ಲಿ ಕಲೆ ಎನ್ನುವುದು ಇರುವುದೇ ಒಂದು. ಅದಕ್ಕೆ ಜಾತಿ,ವರ್ಗ,ಲಿಂಗ ಭೇದಗಳಿಲ್ಲ; ಇರುವುದೆಲ್ಲ ಒಳ್ಳೆಯದು ಇಲ್ಲವೇ ಕೆಟ್ಟದು ಮುಂತಾದ ತಾತ್ವಿಕ ಆದರ್ಶದ ಗ್ರಹಿಕೆಗಳು ಒಂದೆಡೆ. ಸಾಂಸ್ಕೃತಿಕವಾಗಿ ರಕ್ತಗತವಾಗೂ ಇರುವ ಅಪನಂಬಿಕೆ, ಸಂದೇಹ ಮತ್ತು ತಿರಸ್ಕಾರದ ರಕ್ತಕಣಗಳು ದೃಶ್ಯವಾಗಿ ಮತ್ತು ಅದೃಶ್ಯವಾಗಿಯೂ ಉಳಿದು ಕೆಲಸ ಮಾಡುವ ವಾಸ್ತವ ಇನ್ನೊಂದು ಕಡೆ. ಇವೆರಡರ ನಡುವೆಯೇ ಮಹಿಳಾ ಕಾವ್ಯದ `ಅವಳು' ಕಾಣಿಸಿಕೊಳ್ಳುತ್ತಾಳೆ.

ಚಾರಿತ್ರಿಕವಾಗಿ ಹೀಗೆ ತನ್ನನ್ನು ತಾನು ಮರೆತುಕೊಳ್ಳಲು ಒಪ್ಪದಂಥ ಅಪರೂಪದ ಮತ್ತು ಅಪವಾದದ ಸಂದರ್ಭಗಳು ಇರುವುದನ್ನು ವಚನ ಚಳವಳಿಯ ಅಥವಾ ಎಂಭತ್ತರ ದಶಕದ ಮಹಿಳಾ ಕಾವ್ಯವನ್ನು ಉದಾಹರಿಸಿ ನಾವು ಗ್ರಹಿಸುತ್ತೇವೆ. ತನ್ನ ತನ, ತನ್ನ ಅಸ್ಮಿತೆ, ತನ್ನ ಅಸ್ತಿತ್ವದ ಹಾಗೂ ತನ್ನ ಸ್ವರೂಪದ ಶೋಧನೆ ಕಳೆದ ಮೂರು ದಶಕಗಳಲ್ಲಿ ಒಂದು ಸ್ಯಾಚುರೇಶನ್ ಹಂತಕ್ಕೆ ಬಂದಮೇಲೆ ಇದೀಗ ಬೇರೆ ಪ್ರಶ್ನೆಗಳು ಏಳುತ್ತಿವೆ. ನಮ್ಮ ರಚನೆಗಳನ್ನು ಏಕೆ 'ಮಹಿಳೆಯರದು' ಎಂದೇ ಇನ್ನೂ ಬೇರೆಯದು ಎನ್ನುವಂತೆ ನೋಡುತ್ತೀರಿ? ನಾವು ಒಟ್ಟು ಸಂಸ್ಕೃತಿಯ ಒಳಗಿನಿಂದಲೇ ನಮ್ಮ ಅನನ್ಯ ರೀತಿಯ ಅನುಭವದ ಬಗ್ಗೆ ಹೇಳುತ್ತಿದ್ದೇವೆ. ಅದನ್ನು ಮಾನವರೆಲ್ಲರಿಗೂ ಅನ್ವಯವಾಗುವ ಕಲೆಯೆಂದು ಏಕೆ ನೋಡಬಾರದು? ಎನ್ನುವುದು ಈಗ ಲೇಖಕಿಯರ ಪ್ರಶ್ನೆಯಾಗಿದೆ.

ಪ್ರತಿಭಾ ನಂದಕುಮಾರ್ `ನಮ್ಮಲ್ಲಿ ಮಹಿಳೆಯರ ಬರಹವನ್ನು ಹೇಗೆ ಅರ್ಥಮಾಡಿಕೊಳ್ಳಬೇಕು ಎನ್ನುವುದೇ ವಿಮರ್ಶಕರಿಗೆ ಗೊತ್ತಿಲ್ಲ' ಎಂದು ಹೇಳುವುದು ಇದೇ ಅರ್ಥದಲ್ಲಿ ಎಂದು ನಾನು ತಿಳಿಯುತ್ತೇನೆ. ಮಹಿಳೆಯರ ಅನುಭವವು ಮಾನವರದೇ ಅನುಭವ. ಆದ್ದರಿಂದ ಅದನ್ನು ಪುರುಷರೂ ಭಾವಿಸಿ ಅನುಭವಿಸಬಹುದು. ಹಾಗೆಯೇ ಆ ಬಾಳಿನಿಂದ ಕಲಿಯಲೂಬಹುದು.

ಅದೂ ಮೌಲ್ಯವುಳ್ಳದ್ದು ಎಂದು ವಿಶ್ವಾಸದಿಂದ ನೋಡಬಹುದು. ಇಂಥ ಮಾತನ್ನು ಹೇಳಿದರೆ ಅಹುದು ಎನ್ನಬಲ್ಲ ಕೆಲವರಾದರೂ ಮಂದಿ ಇಂದು ಪುರುಷರಲ್ಲಿದ್ದಾರೆ. ಆದರೆ ಅವರಾದರೂ ನಿಜವಾಗಿ ಸ್ತ್ರೀಯರ ಘನತೆಯುಳ್ಳ ತಿಳಿವಳಿಕೆಗಳಿಂದ ಏನನ್ನಾದರೂ ಗ್ರಹಿಸಿ ಮತ್ತೆ ಎಲ್ಲಾ ಓದುಗರಿಗೆ ಅದನ್ನು ದಕ್ಕಿಸಿಕೊಡಲು ನೆರವಾಗುವಂತೆ ಬರೆಯಬಹುದೆ? ಎನ್ನುವುದಕ್ಕೆ ಇನ್ನೂ ನಾವೇ `ಪುರಾವೆಗಳನ್ನು' ಕೇಳಬೇಕಾದ ಸ್ಥಿತಿಯಿದೆ. ಹೀಗಾಗಿ ಬಹುಪಾಲು ಮಹಿಳಾ ಕಾವ್ಯದ ಒಳಗೆ ಕಾಣಿಸುವ `ಅವಳು' ಎಂಬ ಪಾತ್ರದ ಮನೋಬಿಂಬ ಎಂದರೆ ಎಂದೂ ಈಡೇರದ ಅಪೇಕ್ಷೆಗಳ ಮೊತ್ತದ ಹಾಗೆ ಇರಬಹುದು ಅಥವಾ ಒಬ್ಬ ಆದರ್ಶದ ಸಖನಿಗಾಗಿ ಯುಗ ಯುಗಗಳಿಂದಲೂ ಹುಡುಕುತ್ತಿರುವ, ಅಂಥವನ ಬರುವಿಕೆಗಾಗಿ ಕಾಯುತ್ತಲೇ ಇರುವ ವ್ಯಕ್ತಿಯಾಗಿರಬಹುದು.ಬದುಕಿನ ಸಂತಾಪಗಳಿಂದ ನೊಂದು, ಸಿಡಿಯಲು ಬಯಸಿದರೂ ಸಿಡಿಯಲಾರದ ಸಾಸಿವೆಕಾಳಿನ ಹಾಗೆ ಎಣ್ಣೆಯಲ್ಲೆ ಕುದಿಯುವುದೂ ಅಪರೂಪವಲ್ಲ. ನಿಜ ಜೀವನದಲ್ಲಿ ಸಿಡಿಯಲಾರದ್ದಕ್ಕಾಗಿ ಸಿಡುಗುಟ್ಟುವ, ಬಡಬಡಿಸುವ, ಬೈಯುವ ಆದ್ದರಿಂದಲೇ ಗಂಡಾಳ್ತನದ ದೃಷ್ಟಿಯಲ್ಲಿ ಗೈಯ್ಯೊಳಿಗಳೆನಿಸುವ ಹೆಣ್ಣುಗಳ ಚಿತ್ರ ಇಲ್ಲಿ ಪಲ್ಲಟಗೊಳ್ಳುತ್ತದೆ. ಬದಲಾದ ಜಾಗದಲ್ಲಿ ಆಯಾ ಹೆಣ್ಣಿನ ಒಳತೋಟಿ ಸಂಕಟ ಆಕ್ರೋಶಗಳು ಉಪಮೆಗಳಲ್ಲಿ, ರೂಪಕಗಳಲ್ಲಿ, ಮಾತಿನ ಬೆಡಗುಗಳಲ್ಲಿ ಕಾಣುವುದು ಸ್ವಲ್ಪವಾದರೆ ವಾಚ್ಯ ಹೇಳಿಕೆಗಳಾಗಿ ಭಾವಗಳಾಗಿ ಹೆಚ್ಚು ಪ್ರಮಾಣದಲ್ಲಿ'ಅವಳ' ಭಾವಗಳು ಬಿಡುಗಡೆಗೊಳ್ಳುತ್ತವೆ.

ಈ 'ಅವಳು' ಎನ್ನುವ ಮಾದರಿ ಸ್ವೀಕೃತಿ ಮತ್ತು ನಿರಾಕರಣೆ ಎರಡರಲ್ಲೂ ಒಟ್ಟು ವ್ಯವಸ್ಥೆಯ ಒಳಗೇ ಇರುವಂಥದೇ ಹೊರತು ಅದಕ್ಕಿಂತ ಭಿನ್ನವಾಗಿರುವುದಿಲ್ಲ ಎಂದು ನನ್ನ ವಾದ. ಉದಾಹರಣೆಗೆ ಬಹುವಾಗಿ ಚರ್ಚಿತವಾಗುವ ವಚನಕಾರ್ತಿಯರ ಅಭಿವ್ಯಕ್ತಿಯನ್ನೇ ನೋಡಬಹುದು. ವಚನಕಾರ್ತಿಯರ ಅಭಿವ್ಯಕ್ತಿ ಪಿತೃ ಸಂಸ್ಕೃತಿಯ ಯಾಜಮಾನ್ಯವನ್ನು ಜೋರಾಗಿಯೇ ಧಿಕ್ಕರಿಸುತ್ತದೆ ಎನ್ನುವುದೇ ಒಂದು ಸಾಪೇಕ್ಷ ನಿಜವಾಗಿರುತ್ತದೆ. ಶರಣ ಗೃಹಿಣಿಯ ಅತ್ಯುನ್ನತ ಮಾದರಿ ಸೀತೆ ಸಾವಿತ್ರಿಯರದಕ್ಕಿಂತ ಭಿನ್ನವಲ್ಲ. ಆದರೆ ಈ ಮಾದರಿಯನ್ನು ಆತ್ಯಂತಿಕ ಆದರ್ಶವಾಗಿ ಅವರೂ ಒಪ್ಪಿ ಪಾಲಿಸುವುದಲ್ಲದೆ ಅದನ್ನು ಅತ್ಯಚ್ಛ ಮೌಲ್ಯವೆಂದು ಪ್ರತಿಪಾದಿಸಲು ಮುಂದಾಗುತ್ತಾರೆ. ಶರಣ ತತ್ವ್ವಕ್ಕೆ ಬದ್ಧರಾಗಿ ಅಲೌಕಿಕ ಯಜಮಾನನ ಸರ್ವಾಧಿಕಾರಕ್ಕೆ ತಮ್ಮನ್ನು ಅರ್ಪಿಸಿಕೊಳ್ಳುತ್ತಾರೆ. ದೇವರ ಪರಮಾಧಿಕಾರದ ನೆರಳಲ್ಲಿ ಲೌಕಿಕ ದಬ್ಬಾಳಿಕೆಗಳಿಗೆ ತಾತ್ಕಾಲಿಕ ಪರಿಹಾರ ಸಿಕ್ಕಿದಂತೆ ಅವರ ಮಾತುಗಳ ಭಾವದಿಂದ ಬೇಕಾದರೆ ಗ್ರಹಿಸಲೂಬಹುದು. ಆದರೆ ಅಂತಿಮವಾಗಿ ಅವರು ಎತ್ತಿಹಿಡಿಯುವ ಒಡೆತನದ ಅಧಿಕಾರದ ಗ್ರಹಿಕೆಯ ಒಳಗೇ ಇಹದ ಗಂಡನ ಮರುಸ್ಥಾಪನೆಗೂ ಆ ಧಾರ್ಮಿಕ ಚಳವಳಿಯು ಆಸ್ಪದ ದೊರಕಿಸಿಕೊಂಡಿದ್ದರಿಂದ ಈ ಲೌಕಿಕ ಗಂಡ ಎಂದಿನಂತೆ ಪ್ರಶ್ನಾತೀತನೇ ಆಗಿ ಉಳಿಯುತ್ತಾನೆ! ಇಲ್ಲವೇ ಅವನು ಪ್ರಶ್ನಾರ್ಹ ಎನ್ನುವುದನ್ನು ಸುತ್ತಿ ಬಳಸಿ  ಆಯಾ ಪ್ರದೇಶಗಳಿಂದಲೇ ಅವರೂ ಹೇಳಿಕೊಳ್ಳುವುದು ಅನಿವಾರ್ಯವಾಗುತ್ತದೆ.

ಶಿವ ಶರಣೆಯರು ಮಾನಸಿಕವಾಗಿ ಕಂಡುಕೊಳ್ಳುವ `ಸಂಸಾರದಿಂದ ಬಿಡುಗಡೆ' ಎನ್ನುವುದು ವಾಸ್ತವದಲ್ಲಿ ಮಹಿಳಾ ಕಾವ್ಯ ಇಂದು ಹೊತ್ತುಕೊಳ್ಳುವ ಬದಲಾಗಬೇಕಾದ ಜೀವನದ ಸಾಧ್ಯತೆಯ `ಯುಟೋಪಿಯಾ'ಕ್ಕಿಂತ ಭಿನ್ನವೆ? ಭಿನ್ನವಾಗಿದ್ದರೆ ಅದು ತೀರ ವೈಯಕ್ತಿಕವಾದ ಏಕಾಂತ ಭಕ್ತಿಯ ಜಾಗದಿಂದ ಅರಿವಿಗೆ ಬರುವ ಶೂನ್ಯತ್ವವೇ  ಹೊರತು ವಾಸ್ತವದ ಜೀವನದಿಂದಲೇ ಸಿದ್ಧಿಸಿಕೊಳ್ಳುವ ಇಂದು ನಾವು ಕನಸಿಸುವ 'ಬಿಡುಗಡೆ' ಆಗಲಾರದು. ಬಹುಶಃ ಇದೇ ಕಾರಣದಿಂದ ಅಕ್ಕಮಹಾದೇವಿ ಅವಳ ಸಮಕಾಲೀನ ಶಿವಶರಣೆಯರಿಗೆ ಮಾದರಿಯಾಗದೆ ಮುಂದಿನ ಕಾಲದ ಶೂನ್ಯಸಂಪಾದನಾಕಾರರಿಗೆ ಮಾತ್ರ ಅವಳು ಅಸಾಧಾರಣ ಉನ್ನತ ಭಕ್ತೆಯಾಗಿರುವುದು. ಇಂಥ ಅಕ್ಕ ಕೂಡ ನಿರಂತರವಾಗಿ 'ಮಿಕ್ಕು ಮೀರಿಹೋಹನ ಬೆಂಬತ್ತಿ ಕೈವಿಡಿಯುವ' ಕನಸನ್ನೇ ತಳವೆಳಗಾದ ಬಗೆಯನ್ನು ಮಾತಿನಲ್ಲಿ ಕಟ್ಟಿರುತ್ತಾಳಲ್ಲವೆ?

ಮೇಲಿನ ಚರ್ಚೆಯ ಹಿನ್ನೆಲೆಯಲ್ಲಿ ನಾವು ಆರಂಭದಲ್ಲಿ ವಿವೇಚಿಸಿದ್ದ ಮಹಿಳಾ ಸಾಹಿತ್ಯದ ಓದುವಿಕೆಗೆ ಸಂಬಂಧಿಸಿದ ಪ್ರಶ್ನೆಗೆ ಮತ್ತೆ ಬರೋಣ. ನಮ್ಮ ಅಭಿವ್ಯಕ್ತಿಯನ್ನು ಒಟ್ಟು ಸಾಹಿತ್ಯ ವಾಹಿನಿಯ ಭಾಗವಾಗಿ ಏಕೆ ಸ್ವೀಕರಿಸುತ್ತಿಲ್ಲ? ಏಕೆ `ಮಹಿಳಾತನ'ವನ್ನು ಪಿತೃಸಂಸ್ಕೃತಿ ಎನ್ನುವ ವ್ಯವಸ್ಥೆಗೇ ಕೊಂಡಿಹಾಕಿ ನೋಡಲಾಗುತ್ತಿದೆ? ಅಂಥ ಅಂಕಿತವನ್ನು ಕಳಚಿಹಾಕಬಾರದೇ? ಎಂಬ ಪ್ರಶ್ನೆಯನ್ನು ಹೊಸ ತಲೆಮಾರಿನ ಲೇಖಕಿಯರು ಈಚೀಚೆಗೆ ವೇದಿಕೆಗಳಲ್ಲಿ ಎತ್ತುತ್ತಿದ್ದಾರೆ.

ಆದರೆ ಇಂಥ ಪ್ರಶ್ನೆಗಳು ಬಹಿರಂಗವಾಗಿ ಹೊಮ್ಮುವುದಕ್ಕೂ ಮೊದಲು ಮಹಿಳೆಯರ ಬರಹಗಳೇ ಒಳಗಿನಿಂದ ಹೊಮ್ಮಿಸುವ ಮೌಲಿಕ ಆಗ್ರಹ ಆಗಬೇಕಲ್ಲವೆ? ಅಂದರೆ ಲೇಖಕಿಯರಾಗಿ ತಮ್ಮ ಅಂತಃಸಾಕ್ಷಿಯಲ್ಲಿ ಅವರು ಇದಕ್ಕೆ ಮೊದಲು ಉತ್ತರ ಹುಡುಕಬೇಕಾಗಿದೆ. ಇಂದಿನವರಿಗೆ ಜೀವನದ ಬಹು ಕ್ಷೇತ್ರಗಳು ಲಭ್ಯವಾಗಿರುತ್ತವೆ. ಹೊಸ ಸ್ವಾತಂತ್ರ್ಯದ ಭಾವ ಅವರಲ್ಲಿ ಆತ್ಮವಿಶ್ವಾಸವನ್ನೂ ಹೆಚ್ಚಿಸಿರುತ್ತದೆ. ನಿಜ. ಆದರೆ ಈ ಆತ್ಮವಿಶ್ವಾಸ ಬರಹಗಾರಿಕೆಯಲ್ಲಿ ಹಿಂದಿನವರ ಭುಜಗಳ ಮೇಲೇರಿ ನಿಂತಿರುವುದರಿಂದಲೂ ಅವರಿಗೆ ದಕ್ಕಿರುತ್ತದೆ. ಇದು ತಮ್ಮ ಪರಂಪರೆಯಿಂದ ತಮಗೆ ದಕ್ಕಿರುವ ಸವಲತ್ತು ಎನ್ನುವ ವಿನಯಪೂರ್ವಕ ಅರಿವು ಅವರಿಗೆ ಇದ್ದಲ್ಲಿ ತಾವೇ ಮೊದಲಬಾರಿಗೆ ಹೊಸದೊಂದನ್ನು ನಿರ್ಮಿಸಿಕೊಳ್ಳುತ್ತಿದ್ದೇವೆ ಎನ್ನುವ ಅಚಾರಿತ್ರಿಕ ಗ್ರಹಿಕೆಗೆ ಅವರು ಬಲಿ ಆಗದೆ ಉಳಿಯಬಲ್ಲರು. ಆಗ ನಿಜದಲ್ಲಿ ತಮ್ಮ ಆಂತರ್ಯದಲ್ಲಿಯೇ ಭಿನ್ನ ಮೌಲ್ಯಗಳ ನಿರ್ಮಾಣದ ಜವಾಬ್ದಾರಿ ತಮಗೆ ಇದೆ ಎನ್ನುವುದೂ ಅವರಿಗೆ ಅರಿವಾಗಬಲ್ಲದು.

ಇಂಥ ಅರಿವಿನ ದಾರಿ ಹೇಗಿರಬಹುದು? ಉದಾಹರಣೆಗೆ ಒಂದು ಕಲ್ಪನೆ ಮಾಡೋಣ: ಗಂಡು ಮಕ್ಕಳಿಗಾಗಿ ಹಂಬಲಿಸುವುದು ಮತ್ತು ಹೆಣ್ಣುಮಕ್ಕಳು ಬೇಕಿಲ್ಲ ಎನ್ನುವುದು ಎಲ್ಲಿಯವರೆಗೆ ನಮ್ಮ ಸಮಾಜಕ್ಕೆ ನಾಚಿಕೆಗೇಡಿನ ವಿಷಯವಾಗಿಯೇ ಕಾಣಲಾರದೋ ಅಲ್ಲಿಯವರೆಗೂ ಹೆಣ್ಣು ಭ್ರೂಣಹತ್ಯೆಯೂ ಮುಂದುವರೆಯುತ್ತಲೇ ಇರುವುದು. ಈ ಪ್ರಕ್ರಿಯೆ ತಾನೇ ಒಂದು ಹುಣ್ಣಿನಹಾಗೆ. ಮತ್ತು ಅದು ಅದಕ್ಕಿಂತಲೂ ಆಳವಾಗಿರುವ ಸ್ತ್ರೀವಿನಾಶಕ್ಕಾಗಿಯೇ ಸಂಚು ಹೂಡಿರುವ ವ್ಯವಸ್ಥೆ ಎನ್ನುವ ಕ್ಯಾನ್ಸರ್ ರೋಗದ ಹೊರ ಚಿನ್ಹೆಯೂ ಹೌದು. ತನ್ನ ಅಸ್ತಿತ್ವಕ್ಕೆ ಅರ್ಥವಿಲ್ಲವೆಂದು ಅದಕ್ಕೆ ವ್ಯವಸ್ಥೆಯೇ ಕಾರಣವೆಂದೂ ಯೋಚಿಸುವ ಮಹಿಳಾ ಕವಿ ಸಮಸ್ತ ಹೆಣ್ಣುಜಾತಿಗೇ ಅಸ್ತಿತ್ವ ಇಲ್ಲವಾಗಿಬಿಡಬಹುದೆಂದು, ತನಗೆ `ಬೇರೇ' ಇಲ್ಲವಾಗುವುದೆಂದು ಅಥವಾ ತನ್ನ ಕುಡಿ ತನ್ನ ಬೀಜ ಅದೃಶ್ಯವೇ ಆಗಿಬಿಡಬಹುದು ಎನ್ನುವುದನ್ನು ಹೆರಿಗೆಯ ಯಾತನೆಯಷ್ಟೇ ತೀವ್ರ ನೋವಿನಿಂದ ಭಾವಿಸಿಕೋಳ್ಳಲು ಮತ್ತು ಅದನ್ನೇ ಕಾವ್ಯವಾಗಿಸಲು ಯತ್ನಿಸುವುದಾದರೆ ಅಂಥ ಕಾವ್ಯದ ಅರ್ಥವೂ ಅದರ ಬೋಧಕ ಶಕ್ತಿಯೂ ತನ್ನಷ್ಟಕ್ಕೇ ಬೇರೆ ಆಗಿಬಿಡಬಹುದಲ್ಲವೆ? ಹಾಗೆ ಮಾಡದೆ ನಮ್ಮನ್ನು ತಿರಸ್ಕಾರದಿಂದ ಕಾಣುವವರಿಗೆ ಎಷ್ಟೇ ಧಿಕ್ಕಾರವನ್ನು ಕೂಗಿದರೂ ಅಥವಾ ಹಾಗೆ ತಿರಸ್ಕರಿಸಬೇಕಿಲ್ಲ ಎಂದು ಜೋರುಮಾಡಿ ಹೇಳಿದರೂ ಬರೀ ಅಸಹಾಯಕ ಕೋಪದಿಂದ ಅಲವತ್ತುಕೊಂಡರೂ ಆ ಮಾತು ಪಿತೃಸಂಸ್ಕೃತಿಯ ಕಿವಿಗೆ ತಲುಪದೇ ಒಣ ವಾಗ್ವಾದವಾಗಿಯೇ ಉಳಿಯುವ ಸಾಧ್ಯತೆಯೇ ಹೆಚ್ಚು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT