ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ | ತೆರೆದ ಗುಟ್ಟು, ದಾಖಲೆಯಿರದ ‘ಡೀಲ್‌’

ಕುಲಪತಿ ಆಯ್ಕೆ: ಕಾಂಚಾಣದ ಗಮ್ಮತ್ತು, ಮೆರಿಟ್‌ಗಿಲ್ಲ ಕಿಮ್ಮತ್ತು
Last Updated 27 ಡಿಸೆಂಬರ್ 2022, 23:30 IST
ಅಕ್ಷರ ಗಾತ್ರ

ವಿಶ್ವವಿದ್ಯಾಲಯಗಳ ಕುಲಪತಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ವಿಷಯ ಮತ್ತೊಮ್ಮೆ ಚರ್ಚೆಯ ಮುನ್ನೆಲೆಗೆ ಬಂದಿದೆ. ಆಶ್ಚರ್ಯವೆಂದರೆ, ಆಡಳಿತಾರೂಢ ಪಕ್ಷದವರೇ ಆದ ಸಂಸದ ಪ್ರತಾಪ ಸಿಂಹ ಅವರು ಇದನ್ನು ಪ್ರಸ್ತಾಪಿಸಿದ್ದಾರೆ. ಉನ್ನತ ಶಿಕ್ಷಣ ಸಚಿವರು ‘ಅದಕ್ಕೆ ದಾಖಲೆಯಿದ್ದರೆ ಬಹಿರಂಗಪಡಿಸಲಿ’ ಎಂಬ ಮಾಮೂಲು ಹೇಳಿಕೆಯನ್ನು ನೀಡಿ ಕೈತೊಳೆದುಕೊಂಡಿದ್ದಾರೆ. ಈ ರೀತಿ ದಾಖಲೆ ಕೇಳುವ ಪರಿಯೇ ಹಾಸ್ಯಾಸ್ಪದ. ಕುಲಪತಿಯ ಆಕಾಂಕ್ಷಿಯೊಬ್ಬರು ಸಂಬಂಧ ಪಟ್ಟವರಿಗೆ ಗುಟ್ಟಾಗಿ ರಖಂ ಸಂದಾಯ ಮಾಡಿದ್ದರೆ ಅದಕ್ಕೆ ದಾಖಲೆ ಏನಿರುತ್ತದೆ?!

ತಮ್ಮ ಸಂಕಟ ತೋಡಿಕೊಳ್ಳಲೋ ಅಥವಾ ಹೆಮ್ಮೆಯಿಂದಲೋ ಇಂತಿಷ್ಟು ಕೊಟ್ಟಿದ್ದಾಗಿ ಆಕಾಂಕ್ಷಿಯೊಬ್ಬರು ತಮ್ಮ ಆಪ್ತರಲ್ಲಿ ಹೇಳಿಕೊಳ್ಳುವುದು, ತದನಂತರದಲ್ಲಿ ಅದು ಎಲ್ಲರಿಗೂ ಗೊತ್ತಾಗುವುದು ಅಚ್ಚರಿಯ ಸಂಗತಿಯೇನಲ್ಲ. ಇನ್ನು ಹಣ ಪಡೆದವರಂತೂ ಸಂಪನ್ನರಂತೆ ವರ್ತಿಸುತ್ತಾರೆ. ಹೀಗಿರುವಾಗ ದಾಖಲೆ ಎಲ್ಲಿಂದ ಬರಬೇಕು? ಆದರೂ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಕುಲಪತಿ ಆಯ್ಕೆಯಲ್ಲಿ ನಡೆಯುವ ಅವ್ಯವಹಾರಗಳನ್ನು ಕೆದಕುತ್ತಾ ಹೋದರೆ, ಅದರ ದಾಖಲೆಗಳು ಬೇರೊಂದು ರೂಪ ಪಡೆದು, ಆಕಾಂಕ್ಷಿಗಳ ಅರ್ಜಿಗಳ ಮೂಲಕ ಉನ್ನತ ಶಿಕ್ಷಣ ಇಲಾಖೆಯ ಕಡತಗಳಲ್ಲಿ ತಣ್ಣಗೆ ಮಲಗಿರುವುದು ಗೋಚರಿಸುತ್ತದೆ. ನಿಯಮಾನುಸಾರ ಅರ್ಜಿಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ಯುಜಿಸಿ ನಿಯಮಾವಳಿಯಂತೆ ಅಭ್ಯರ್ಥಿಗಳ ಅರ್ಹತೆ, ಅಂದರೆ ಸಂಶೋಧನಾ ಲೇಖನಗಳು, ಸೇವಾ ಅವಧಿ, ಆಡಳಿತದ ಅನುಭವ, ಶಿಕ್ಷಣ ಕ್ಷೇತ್ರಕ್ಕೆ ಅವರ ಕೊಡುಗೆಯಂತಹ ಮಾನದಂಡಗಳ ಮೂಲಕ ಜೇಷ್ಠತಾ ಪಟ್ಟಿ ಸಿದ್ಧಪಡಿಸಿ, ಅದನ್ನು ಶೋಧನಾ ಸಮಿತಿ ಪರಾಮರ್ಶಿಸಿ, ಮೂವರು ಅಭ್ಯರ್ಥಿಗಳ ಕಿರುಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು.

ಆದರೆ ಹಾಲಿ ವ್ಯವಸ್ಥೆ ಹೇಗಿದೆಯೆಂದರೆ, ಮೆರಿಟ್‌ಗೆ ಯಾವ ಕಿಮ್ಮತ್ತನ್ನೂ ಕೊಡದೆ ತಮಗೆ ‘ಸೂಕ್ತ’ವೆನಿಸಿದ ಅಭ್ಯರ್ಥಿಯನ್ನು ‘ಶೋಧನಾ ಸಮಿತಿ’ಯ ಮೂಲಕ ಆಯ್ಕೆ ಮಾಡಿಸಿ ಕುಲಪತಿಯನ್ನಾಗಿಸುವುದು ಎಗ್ಗಿಲ್ಲದೆ ನಡೆಯುತ್ತಿದೆ. ಶೋಧನಾ ಸಮಿತಿಯ ಅಧ್ಯಕ್ಷ ಅಥವಾ ಸದಸ್ಯರಲ್ಲಿ ಅನೇಕರು ತಮ್ಮನ್ನು ಆ ಸ್ಥಾನಗಳಿಗೆ ನೇಮಿಸಿದ ಋಣಕ್ಕೆ, ಸರ್ಕಾರ ಹೇಳಿದ ಹೆಸರನ್ನು ಕಿರುಪಟ್ಟಿಗೆ ಸೇರಿಸಿ ಕೈತೊಳೆದುಕೊಳ್ಳುತ್ತಾರೆ. ಮೆರಿಟ್‌ ಇದ್ದರೂ ತಮ್ಮನ್ನು ಆಯ್ಕೆ ಮಾಡದ್ದನ್ನು ಹೆಚ್ಚಿನ ಆಕಾಂಕ್ಷಿಗಳು ಪ್ರಶ್ನಿಸುವುದೇ ಇಲ್ಲ. ಏಕೆಂದರೆ ಸರ್ಕಾರದ ವಿರುದ್ಧ ಹೋಗದೆ ಸುಮ್ಮನಿದ್ದರೆ, ಮತ್ತೊಂದು ಪ್ರಯತ್ನದಲ್ಲಾದರೂ ಯಶಸ್ವಿಯಾಗಬಹುದೆಂಬ ಆಸೆ!

ಕುಲಪತಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ ಎಂಬುದು ನಿನ್ನೆ ಮೊನ್ನೆಯ ಮಾತಲ್ಲ. ಪತ್ರಿಕೆಗಳಲ್ಲಿ ವಿಸ್ತೃತ ಲೇಖನಗಳು ಪ್ರಕಟವಾಗಿವೆ. ಅನೇಕ ಬಾರಿ ಸದನದಲ್ಲೂ ಚರ್ಚೆಗಳಾಗಿವೆ. ಆದರೆ ಇದ್ಯಾವುದಕ್ಕೂ ಪಕ್ಷಾತೀತವಾಗಿ ಸ್ವಲ್ಪವೂ ವಿಚಲಿತವಾಗದ ಅಧಿಕಾರಸ್ಥರು ತಮ್ಮ ಮಾಮೂಲಿ ‘ವ್ಯವಹಾರ’ವನ್ನು ಎಗ್ಗಿಲ್ಲದಂತೆ ಮುಂದುವರಿಸಿಕೊಂಡು ಬಂದಿದ್ದಾರೆ.

10–15 ವರ್ಷಗಳಿಂದ ಈಚೆಗಿನ ಕುಲಪತಿಗಳ ಆಯ್ಕೆ ಪ್ರಕ್ರಿಯೆಯನ್ನು ಅವಲೋಕಿಸಿದರೆ, ಅಪವಾದಕ್ಕೆನ್ನುವಂತೆ ಅಲ್ಲೊಬ್ಬರು ಇಲ್ಲೊಬ್ಬರು ತಮ್ಮ ಅರ್ಹತೆ ಯಿಂದ ಮಾತ್ರವೇ ಕುಲಪತಿಯಾಗಿರಬಹುದಾದದ್ದು ಕಂಡುಬರುತ್ತದೆ. ಅದನ್ನು ಬಿಟ್ಟರೆ, ಬಹುತೇಕರ ಆಯ್ಕೆಯ ಹಿಂದೆ ಕಾಂಚಾಣ ಕೆಲಸ ಮಾಡಿರುವುದು ಅಕಡೆಮಿಕ್‌ ವಲಯದಲ್ಲಿ ಗುಟ್ಟಾಗೇನೂ ಉಳಿದಿಲ್ಲ.

ಶೋಧನಾ ಸಮಿತಿಯ ಅಧ್ಯಕ್ಷರನ್ನಾಗಿ ನಿವೃತ್ತ ಕುಲಪತಿಯೊಬ್ಬರನ್ನು ನೇಮಿಸಬೇಕೆಂಬ ಪರಿಪಾಟ ಇದ್ದರೂ ಸರ್ಕಾರವು ಕೆಲವೊಮ್ಮೆ ಸೇವೆಯಲ್ಲಿರುವ ಕುಲಪತಿಯನ್ನೇ ಆ ಸ್ಥಾನಕ್ಕೆ ನೇಮಿಸುತ್ತದೆ. ಏಕೆಂದರೆ ಅವರು ಒಂದಲ್ಲ ಒಂದು ಕಾರಣಕ್ಕೆ ಸರ್ಕಾರದ ಮರ್ಜಿಯಲ್ಲಿ ಇರುವುದರಿಂದ, ಹೇಳಿದಂತೆ ಕೇಳುತ್ತಾರೆ ಎಂಬ ಮರ್ಮ ಇದರ ಹಿಂದಿದೆ. ಇನ್ನು ತಮಗೆ ಬೇಕಾದ ಸದಸ್ಯರನ್ನು ಶೋಧನಾ ಸಮಿತಿಯಲ್ಲಿ ಹಾಕಿಸಿಕೊಳ್ಳುವಷ್ಟರ ಮಟ್ಟಿಗೂ ಕೆಲವು ಆಕಾಂಕ್ಷಿಗಳು ಬಲಾಢ್ಯರಿದ್ದಾರೆ. ಇದೆಲ್ಲದರ ಒಟ್ಟಾರೆ ಅರ್ಥ, ಇಂದು ಕುಲಪತಿಯಾಗುವುದು ಆರ್ಥಿಕವಾಗಿ, ರಾಜಕೀಯವಾಗಿ, ಸಾಮಾಜಿಕವಾಗಿ ಬಲಾಢ್ಯರಾದ
ಪ್ರಾಧ್ಯಾಪಕರಿಗೆ ಮಾತ್ರ ಸಾಧ್ಯವಿದೆ.

20 ವರ್ಷಗಳ ಹಿಂದೆ ಕುಲಪತಿ ಆಯ್ಕೆಯ ಎಲ್ಲ ಪ್ರಕ್ರಿಯೆಗಳು ಬಹುತೇಕ ಪಾರದರ್ಶಕವಾಗಿ ಇರುತ್ತಿದ್ದವು. ಅರ್ಜಿ ಹಾಕುವ ಪ್ರಮೇಯ ಇರಲಿಲ್ಲ. ಶೈಕ್ಷಣಿಕ ಕ್ಷೇತ್ರಕ್ಕೆ ಕೊಡುಗೆ ನೀಡಿದ ವ್ಯಕ್ತಿಗಳನ್ನು ಶೋಧನಾ ಸಮಿತಿ ಶಿಫಾರಸು ಮಾಡುತ್ತಿತ್ತು. ಅದೊಂದು ಅತ್ಯಂತ ಉನ್ನತ ಹಾಗೂ ಗೌರವಾನ್ವಿತ ಹುದ್ದೆ ಎನಿಸಿಕೊಂಡಿತ್ತು. ಅದರಲ್ಲಿ ರಾಜಕೀಯ, ಹಣ, ಜಾತಿ, ಶಿಫಾರಸು ಹೆಚ್ಚಾಗಿ ಮೂಗು ತೂರಿಸುತ್ತಿರಲಿಲ್ಲ. ಆದರೆ ಬರಬರುತ್ತಾ ಅದರ ಸಮೀಕರಣ ಬದಲಾಗಿ, ‘ಓಹ್‌, ಇಲ್ಲಿಯೂ ದುಡ್ಡು ಮಾಡಬಹುದು’ ಎಂಬ ‘ಜ್ಞಾನೋದಯ’ ರಾಜಕೀಯ ಧುರೀಣರಿಗೆ ಉಂಟಾಗಿ, ಈ ಹಂತಕ್ಕೆ ತಂದು ನಿಲ್ಲಿಸಿದ್ದಾರೆ.

ಒಬ್ಬ ಕುಲಪತಿಯ ಸೇವೆ ಒಂದು ಅವಧಿಗೆ ಮಾತ್ರ ಎಂಬ ಕಾನೂನು ಇದ್ದರೂ ಎರಡನೆಯ ಬಾರಿಗೆ ಮತ್ತೊಂದು ವಿಶ್ವವಿದ್ಯಾಲಯಕ್ಕೆ ನೇಮಕ ಮಾಡುವ ಮೂಲಕ ತಮ್ಮ ವ್ಯವಹಾರ ಕುದುರಿಸಿಕೊಳ್ಳುವ ಹೊಸ ಮಾರ್ಗವನ್ನು ಅನ್ವೇಷಿಸಿದ್ದಾರೆ. ಈ ಎಲ್ಲ ಅನ್ಯಮಾರ್ಗಗಳ
ಕುಟಿಲತೆಯನ್ನು ಅನಾವರಣಗೊಳಿಸಬೇಕಾದರೆ, ಕರ್ನಾಟಕದಲ್ಲಿನ ಎಲ್ಲ ವಿಶ್ವವಿದ್ಯಾಲಯಗಳ ಕುಲಪತಿ ಆಕಾಂಕ್ಷಿಗಳ ಅರ್ಜಿಗಳನ್ನು ಮೆರಿಟ್‌ ಆಧಾರದಲ್ಲಿ ಪುನರ್‌ ಪರಿಶೀಲಿಸಿ ವೆಬ್‌ಸೈಟ್‌ನಲ್ಲಿ ಹಾಕಬೇಕು. ಆದರೆ ಅದನ್ನು ಸರ್ಕಾರ ಮಾಡೀತೆ?

ಕುಲಪತಿ ಆಯ್ಕೆ ಪ್ರಕ್ರಿಯೆಯ ಅವ್ಯವಹಾರದ ಕಮಟು ವಾಸನೆಯಿಂದ ರಾಜ್ಯಪಾಲರ ಕಚೇರಿಯೇನೂ ಮುಕ್ತವಾಗಿಲ್ಲ. ಏಕೆಂದರೆ ಸರ್ಕಾರ ಶಿಫಾರಸು ಮಾಡಿದ ಹೆಸರಿಗೆ ಅಂತಿಮ ಅಂಕಿತ ಹಾಕುವವರು ಅವರೇ ತಾನೆ! ಹಿಂದೆ ಈ ರಾಜ್ಯದ ರಾಜ್ಯಪಾಲರಾಗಿದ್ದವರೊಬ್ಬರು
ಉನ್ನತ ಶಿಕ್ಷಣದ ಬಗ್ಗೆ ಭಾಷಣಗಳಲ್ಲಿ ದೊಡ್ಡ ದೊಡ್ಡ ಮಾತುಗಳನ್ನಾಡುತ್ತಿದ್ದರು. ಆಕ್ಸ್‌ಫರ್ಡ್‌, ಕೇಂಬ್ರಿಜ್‌ನಂತಹ ವಿಶ್ವವಿದ್ಯಾಲಯಗಳ ಶ್ರೇಷ್ಠತೆಯನ್ನು ಇಂದಿನ ನಮ್ಮ ವಿಶ್ವವಿದ್ಯಾಲಯಗಳಿಗೆ ಹೋಲಿಸಿ ‘ನಮ್ಮ ಗುಣಮಟ್ಟ ಹೀಗೇಕಾಯಿತು’ ಎಂದು ‘ಮರುಗುತ್ತಿದ್ದರು’. ಆದರೆ ವಿಶ್ವವಿದ್ಯಾಲಯಗಳ ಗುಣಮಟ್ಟ ವೃದ್ಧಿಸುವ ಮೇಟಿಯಂತೆ ಇರಬೇಕಾದ ಕುಲಪತಿಯ ಆಯ್ಕೆ ವಿಚಾರ ಬಂದಾಗ ಅವರು ತಮ್ಮ ಪರಮಾಪ್ತರೊಬ್ಬರನ್ನು ಏಜೆಂಟರಂತೆ ನೇಮಿಸಿಕೊಂಡು, ಅವರ ಮೂಲಕ ಕುಲಪತಿಗಳ ಆಯ್ಕೆ ‘ಡೀಲ್‌’ ನಡೆಸುತ್ತಿ ದ್ದುದು ತೆರೆದ ಗುಟ್ಟಾಗಿತ್ತು. ತಮಗೆ ‘ಸೂಕ್ತ’ವಾದ ಅಭ್ಯರ್ಥಿಯನ್ನು ಶೋಧನಾ ಸಮಿತಿಯೇನಾದರೂ ಕೈಬಿಟ್ಟಿದ್ದರೆ ಆ ಪಟ್ಟಿಯನ್ನು ತಿರಸ್ಕರಿಸಿ ತಮಗೆ ಸೂಕ್ತವೆನಿಸಿದ ಅಭ್ಯರ್ಥಿಯನ್ನು ಸೇರಿಸಿ ಮತ್ತೊಂದು ಪಟ್ಟಿ ತಯಾರಿಸುವಂತೆ ಒತ್ತಡ ಹೇರುತ್ತಿದ್ದ ‘ಖ್ಯಾತಿ’ಯೂ ಈ ರಾಜ್ಯಪಾಲರಿಗಿತ್ತು.

ಕುಲಪತಿ ಆಯ್ಕೆಯಲ್ಲಿನ ಅವ್ಯವಹಾರಗಳ ಮಜಲಿಗೆ ಮತ್ತೊಂದು ಸೇರ್ಪಡೆ ಎಂದರೆ, ಖಾಸಗಿ ಕಾಲೇಜುಗಳ ಪ್ರಾಧ್ಯಾಪಕರ ಪರಿಗಣಿಸುವಿಕೆ. ಅವರಿಗೆ ಕುಲಪತಿಯಾಗಲು ಅರ್ಹತೆ ಇಲ್ಲವೆಂದಲ್ಲ. ಆದರೆ ಕೆಲವು ಖಾಸಗಿ ಕಾಲೇಜುಗಳ ಆಡಳಿತ ವರ್ಗ, ಯುಜಿಸಿ ನಿಗದಿಪಡಿಸಿರುವ ಮೆರಿಟ್‌ ಆಗಲಿ, ಸೇವಾವಧಿಯಾಗಲಿ ಇಲ್ಲದಿದ್ದರೂ ಯಾವ ಶಿಕ್ಷಕನಿಗೆ ಬೇಕಾದರೂ ತನ್ನ ಮರ್ಜಿಗೆ ಅನುಸಾರವಾಗಿ ‘ಪ್ರಾಧ್ಯಾಪಕ’ರ ಪದನಾಮ ದಯಪಾಲಿಸಬಲ್ಲದು. ಆದರೆ ಅದೇ ಸರ್ಕಾರಿ ಕಾಲೇಜು ಅಥವಾ ವಿಶ್ವವಿದ್ಯಾಲಯದಲ್ಲಿ ಅದು ಸಾಧ್ಯವಿಲ್ಲ. ಈ ಪ್ರಾಧ್ಯಾಪಕ ಪದನಾಮವನ್ನೇ ಆಧಾರವಾಗಿಟ್ಟು ಸರ್ಕಾರಗಳು ಕುಲಪತಿಗಳನ್ನು ಆಯ್ಕೆ ಮಾಡಿರುವುದೂ ಇದೆ.

ಈ ವಿಷಮ ಸನ್ನಿವೇಶದಲ್ಲಿ, ಕುಲಪತಿಯ ಆಯ್ಕೆ ಪಾರದರ್ಶಕವಾಗಿ ನಡೆಯಬೇಕಾದರೆ, ಯುಜಿಸಿ ನಿಗದಿ
ಪಡಿಸಿರುವ ಮಾನದಂಡಗಳನ್ನು ಕಡ್ಡಾಯವಾಗಿ ಪಾಲಿಸು ವುದು, ಆಕಾಂಕ್ಷಿಗಳ ಅರ್ಜಿಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಅರ್ಹತಾ ಪಟ್ಟಿಯನ್ನು ಮೆರಿಟ್‌ ಆಧಾರದಲ್ಲಿ ವೆಬ್‌ಸೈಟ್‌ನಲ್ಲಿ ಪ್ರಕಟಿಸುವುದು, ಅದನ್ನೇ ಆಧರಿಸಿ ಮೂವರನ್ನೊಳಗೊಂಡ ಕಿರುಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಸುವುದು ಮತ್ತು ವ್ಯಕ್ತಿತ್ವ ಸಂದರ್ಶನದ ಮೂಲಕ ಅವರಲ್ಲಿ ಒಬ್ಬರನ್ನು ಆರಿಸುವ ಕ್ರಮ ಜಾರಿಗೆ ಬರಬೇಕು. ಇವೆಲ್ಲಕ್ಕೂ ಮಿಗಿಲಾಗಿ, ಸಮಾಜ ಮತ್ತು ದೇಶದ ಏಳಿಗೆಯು ನಾವು ವಿದ್ಯಾರ್ಥಿಗಳಿಗೆ ಕೊಡುವ ಶಿಕ್ಷಣವನ್ನು ಅವಲಂಬಿಸಿರುವುದರಿಂದ, ಅಂತಹ ವಿದ್ಯಾಕ್ಷೇತ್ರಕ್ಕೆ ಅರ್ಹರನ್ನು ಆರಿಸುವ ಪ್ರಜ್ಞಾಸಂಸ್ಕೃತಿಯನ್ನು ನೇತಾರರು ಎನಿಸಿಕೊಂಡವರು ಬೆಳೆಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ.

ಲೇಖಕ: ನಿವೃತ್ತಪ್ರಾಧ್ಯಾಪಕ, ಬೆಂಗಳೂರು ವಿಶ್ವವಿದ್ಯಾಲಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT