ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಡಿ ಬೆಳಗು: ಹಾರುವ ಸಿಖ್ ನ ಪ್ರೇರಣೆಯ ಕಥೆ

ನುಡಿ ಬೆಳಗು
Published 14 ಏಪ್ರಿಲ್ 2024, 18:51 IST
Last Updated 14 ಏಪ್ರಿಲ್ 2024, 18:51 IST
ಅಕ್ಷರ ಗಾತ್ರ

ನಮ್ಮ ದೇಶದ ಕ್ರೀಡಾ ಲೋಕದ ದಂತಕಥೆ, ಸುಪ್ರಸಿದ್ಧ ಓಟಗಾರ ಮಿಲ್ಖಾ ಸಿಂಗ್‌ರವರ ಜೀವನದ ಕಥೆ ನಿಜಕ್ಕೂ ರೋಚಕವಾದುದು. ಈಗಿನ ಪಾಕಿಸ್ತಾನದ ಪಂಜಾಬ್‌ನಲ್ಲಿರುವ ಗೋವಿಂದಪುರ ಎಂಬಲ್ಲಿ ಹುಟ್ಟಿದ ಮಿಲ್ಖಾ ಸಿಂಗ್, ದೇಶ ವಿಭಜನೆಯ ಸಂದರ್ಭದಲ್ಲಿ ನಡೆದ ಘನ ಘೋರ ಹತ್ಯಾಕಾಂಡಕ್ಕೆ ಸಾಕ್ಷಿಯಾಗುತ್ತಾರೆ. ಇವರ ಕಣ್ಣೆದುರಲ್ಲೇ ಇವರ ಇಡೀ ಕುಟುಂಬದ ಹತ್ಯೆಯಾಗುತ್ತದೆ. ಆಕಸ್ಮಿಕವಾಗಿ ಬದುಕುಳಿದ ಮಿಲ್ಖಾ ಸಿಂಗ್ ತನ್ನ ಅಕ್ಕನ ಜೊತೆಗೆ ನಿರಾಶ್ರಿತರಾಗಿ ಭಾರತಕ್ಕೆ ಓಡಿ ಬರುತ್ತಾರೆ ಹಾಗೂ ಅತ್ಯಂತ ಕಷ್ಟಕರವಾದ ಬಾಲ್ಯವನ್ನು ಕಳೆಯುತ್ತಾರೆ. ನಂತರ ಅತ್ಯಂತ ಕಡಿಮೆ ಸಂಬಳಕ್ಕೆ ಸೇನೆಯಲ್ಲಿ ಜವಾನನಾಗಿ ಸೇರಿಕೊಳ್ಳುತ್ತಾರೆ. ಇವರಿದ್ದ ರೆಜಿಮೆಂಟಿನ ಯೋಧರಿಗಾಗಿ ಒಂದು ಗುಡ್ಡಗಾಡು ಓಟದ ಸ್ಪರ್ಧೆ ಆಯೋಜಿತವಾಗಿರುತ್ತದೆ. ಅದರಲ್ಲಿ ವಿಜೇತರಾಗುವವರಿಗೆ ಸಂಬಳದ ಜೊತೆಗೆ ಪ್ರತಿನಿತ್ಯ ಒಂದು ಲೋಟ ಹಾಲು ಹಾಗೂ ಒಂದು ಮೊಟ್ಟೆ ಉಚಿತ ಎಂಬ ಘೋಷಣೆ, ಕ್ಷೀರಪ್ರಿಯರಾದ ಮಿಲ್ಖಾರ ಮನ ಸೆಳೆಯುತ್ತದೆ.

ಈ ಆಕರ್ಷಕ ಬಹುಮಾನವನ್ನು ಗೆಲ್ಲಲೇಬೇಕೆಂದು ಅತ್ಯಂತ ತನ್ಮಯತೆಯಿಂದ ಓಡಿದ, ಮಿಲ್ಖಾ ಸಿಂಗ್‌ರ ಅದ್ಭುತ ಪ್ರತಿಭೆಯನ್ನು ಸೇನೆಯ ಕ್ರೀಡಾ ಕೋಚ್ ಗುರುತಿಸಿ, ಇವರಿಗೆ ವಿಶೇಷವಾದ ತರಬೇತಿಗಳನ್ನು ನೀಡುತ್ತಾರೆ. ರಾಷ್ಟ್ರೀಯ ಅಥ್ಲೆಟಿಕ್ಸ್ ಟ್ರಯಲ್ಸ್ ಸಂದರ್ಭದಲ್ಲಿ ಸಂಪೂರ್ಣ ಸನ್ನದ್ಧರಾಗಿದ್ದ ಮಿಲ್ಖಾ ಸಿಂಗ್‌ರ ಮೇಲೆ ಹೊಟ್ಟೆಕಿಚ್ಚಿನ ವೈರಸ್ಸು ತುಂಬಿದ್ದ ಕೆಲವು ಸಹೋದ್ಯೋಗಿಗಳು, ಏಕಾಏಕಿ ದೈಹಿಕ ದಾಳಿ ಮಾಡುತ್ತಾರೆ ಹಾಗೂ ತಮ್ಮ ಸ್ಪೈಕ್ ಶೂಗಳಿಂದ ಇವರ ಪಾದಗಳಿಗೆ ತೀವ್ರ ಸ್ವರೂಪದ ಗಾಯ ಮಾಡುತ್ತಾರೆ.

ಆದರೆ ಆಯ್ಕೆಯ ದಿನದಂದು ಮಿಲ್ಖಾ ತಾನು ಓಡಲೇಬೇಕೆಂದು ಕ್ರೀಡಾಂಗಣಕ್ಕೆ ಬರುತ್ತಾರೆ. ಮಿಲ್ಖಾರ ಕೋಚ್ ಎಷ್ಟೇ ಬೇಡವೆಂದರೂ ಕೇಳದೆ ಬ್ಯಾಂಡೇಜ್ ಹಾಕಿದ್ದ ಬರಿಗಾಲಲ್ಲಿಯೇ ಓಡಿ ರಾಷ್ಟ್ರೀಯ ದಾಖಲೆ ಸ್ಥಾಪಿಸುತ್ತಾರೆ. ನಂತರ 400 ಹಾಗೂ 200 ಮೀಟರ್ ಓಟದ ಸ್ಪರ್ಧೆಗಳಲ್ಲಿ ದೇಶವನ್ನು ಒಲಿಂಪಿಕ್ಸ್, ಏಷ್ಯಾಡ್, ಕಾಮನ್ವೆಲ್ತ್ ಮುಂತಾದ ಪ್ರತಿಷ್ಠಿತ ಕ್ರೀಡಾಕೂಟಗಳಲ್ಲಿ ಪ್ರತಿನಿಧಿಸಿ, ಹಲವಾರು ಪದಕಗಳನ್ನು ದೇಶಕ್ಕೆ ತಂದುಕೊಡುತ್ತಾರೆ. ಆಗ ಪ್ರಧಾನಿಯಾಗಿದ್ದ ನೆಹರೂರವರು ನೆರೆಯ ಪಾಕಿಸ್ತಾನದ ಜೊತೆಗೆ ಕ್ರೀಡಾ ಬಾಂಧವ್ಯವನ್ನು ವೃದ್ಧಿಸುವ ಸಲುವಾಗಿ ಅಲ್ಲಿಗೆ ಒಂದು ಕ್ರೀಡಾ ನಿಯೋಗವನ್ನು ಸ್ಪರ್ಧೆಗಾಗಿ ಕಳಿಸುವ ಆಲೋಚನೆ ಮಾಡುತ್ತಾರೆ. ಆ ನಿಯೋಗದ ನೇತೃತ್ವವನ್ನು ಮಿಲ್ಖಾಸಿಂಗ್ ಅವರೇ ವಹಿಸಬೇಕು ಎಂದು ಆಶಿಸುತ್ತಾರೆ.

ಆದರೆ ತನ್ನ ಇಡೀ ಕುಟುಂಬದ ಹತ್ಯೆ ತನ್ನ ಕಣ್ಣೆದುರಿಗೇ ಆದ ಸ್ಥಳಕ್ಕೆ ತಾನು ಹೋಗಲಾರೆ ಎಂದು ನಿರಾಕರಿಸುತ್ತಾರೆ ಮಿಲ್ಖಾ ಸಿಂಗ್. ಆಗ ನೆಹರೂರವರು ‘ನೀನೊಬ್ಬ ಯೋಧ ನೀನು ದೇಶದ ಈ ಅವಶ್ಯಕತೆಗೆ ಇಲ್ಲ ಎನ್ನಬಾರದು’ ಎಂದು ನುಡಿದಾಗ ತಂಡದ ನೇತೃತ್ವ ವಹಿಸಿ ಪಾಕಿಸ್ತಾನಕ್ಕೆ ಹೋದ ಮಿಲ್ಖಾ ಸಿಂಗ್ ಅಲ್ಲಿ ಏಷ್ಯಾದ ತೂಫಾನ್ ಎಂದೇ ಪ್ರಖ್ಯಾತರಾಗಿದ್ದ ಪಾಕಿಸ್ತಾನದ ವೇಗದ ಓಟಗಾರ ಅಬ್ದುಲ್ ಖಾಲಿಕ್ ಅವರನ್ನು ಬಹಳ ದೊಡ್ಡ ಅಂತರದಿಂದ ಸೋಲಿಸಿ ಪಾಕಿಸ್ತಾನದ ಅಧ್ಯಕ್ಷರಿಂದ ಚಿನ್ನದ ಪದಕದ ಜೊತೆಗೆ ‘ಹಾರುವ ಸಿಖ್’ ಎಂಬ ಬಿರುದನ್ನೂ ಪಡೆಯುತ್ತಾರೆ.

ಮಿಲ್ಖಾ ಸಿಂಗ್ ತಮ್ಮ ಪುಸ್ತಕ ‘ದಿ ರೇಸ್ ಆಫ್ ಮೈ ಲೈಫ್’ನಲ್ಲಿ ನಿಮ್ಮದು ಯಾವುದೇ ಕ್ಷೇತ್ರವಿರಲಿ ಅದರಲ್ಲಿ ಯಶಸ್ಸು ಗಳಿಸಲು ಮೂರು ಅಂಶಗಳು ನಿಮಗೆ ಅತಿ ಮುಖ್ಯ ಎಂಬುದಾಗಿ ಹೇಳುತ್ತಾರೆ. ಅವುಗಳೆಂದರೆ ಕಠಿಣ ಪರಿಶ್ರಮ, ದೃಢ ಇಚ್ಛಾಶಕ್ತಿ ಹಾಗೂ ಸಮರ್ಪಣಾ ಮನೋಭಾವ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT